varthabharthi


ಸಂಪಾದಕೀಯ

ಹೀಗೊಂದು ಚುನಾವಣಾ ಲಸಿಕೆ!

ವಾರ್ತಾ ಭಾರತಿ : 23 Oct, 2020

ಇಡೀ ದೇಶ ಆರ್ಥಿಕವಾಗಿ ಕುಸಿದು ಕೂತಿರುವ ಹೊತ್ತಿನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಸದ್ದು ಮಾಡುತ್ತಿದೆ. ಬಿಹಾರ ರಾಜಕೀಯದೊಳಗಿನ ಮುಸುಕಿನ ಗುದ್ದಾಟ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ನಿಧನರಾಗಿರುವ ರಾಮ್‌ವಿಲಾಸ್ ಪಾಸ್ವಾನ್ ಅವರ ಸ್ಥಾನವನ್ನು ಅವರ ಪುತ್ರ ಚಿರಾಗ್ ಪಾಸ್ವಾನ್ ತುಂಬಲು ಶಕ್ತರಾಗುತ್ತಾರೆ ಎಂಬ ಬಗೆಗಿನ ನಿರೀಕ್ಷೆಗಳೂ ಠುಸ್ ಆಗಿವೆ. ಪ್ರಧಾನಿ ಮೋದಿಯವರ ಸೇವೆಯಲ್ಲಿ ತಾನು ಅಪ್ಪನಿಗಿಂತ ಹೆಚ್ಚು ನಿಷ್ಠಾವಂತ ಎನ್ನುವುದನ್ನು ಸಾಬೀತು ಮಾಡಲು ಯತ್ನಿಸುವ ಮೂಲಕ ಅವರು ವಿಧಾನಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದಾರೆ. ತಂದೆಯ ಸಾವಿನ ಅನುಕಂಪದ ಅಲೆಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಯತ್ನಿಸುತ್ತಿರುವ ಚಿರಾಗ್, ಬಿಹಾರದ ದಲಿತ ಸಮುದಾಯದ ಪ್ರತಿನಿಧಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸದೆ, ಮೋದಿಯ ಭಕ್ತನಾಗಿ ಮತದಾರರನ್ನು ಸೆಳೆಯಲು ಹೊರಟಿದ್ದಾರೆ. ಬಿಹಾರದಲ್ಲಿ ನಿತೀಶ್‌ಕುಮಾರ್ ನಾಯಕತ್ವದ ವಿರುದ್ಧ ಧ್ವನಿಯೆತ್ತುವುದಕ್ಕೂ ಚಿರಾಗ್ ಮೋದಿಯ ಹೆಸರನ್ನೇ ಬಳಸಿಕೊಳ್ಳುತ್ತಿದ್ದಾರೆ. ತನ್ನ ತಂದೆಯ ರಾಜಕೀಯ ವರ್ಚಸ್ಸಿನ ಕುರಿತಂತೆ ಸ್ವತಃ ಚಿರಾಗ್ ಅವರಿಗೂ ನಂಬಿಕೆಯಿದ್ದಂತಿಲ್ಲ. ಇತ್ತ ನಿತೀಶ್ ಕುಮಾರ್ ಸ್ಥಿತಿ ಇನ್ನಷ್ಟು ದೈನೇಸಿಯಾಗಿದೆ.

ಬಿಜೆಪಿ ಬಿಹಾರದೊಳಗೆ ಪ್ರವೇಶಿಸಿದ್ದು ನಿತೀಶ್ ಅವರ ಸಮಾಜವಾದಿ ಚಿಂತನೆಗಳು ಮತ್ತು ಜನಪರ ಆಡಳಿತದ ಮೂಲಕ. ಆದರೆ ಇಂದು, ಸ್ವತಃ ನಿತೀಶ್ ಕುಮಾರ್ ಅವರು ಮೋದಿಯನ್ನು ಮುಂದಿಟ್ಟು ಮತಯಾಚನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗೆಂದು ಪ್ರಧಾನಿ ಮೋದಿಯವರು ಕಡೆದು ಕಟ್ಟೆ ಹಾಕಿರುವುದಾದರೂ ಏನು? ಪ್ರಧಾನಿ ಮೋದಿಯವರ ಯಾವ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂಬ ಪ್ರಶ್ನೆಗೂ ಯಾರಲ್ಲೂ ಉತ್ತರವಿಲ್ಲ. ನೋಟು ನಿಷೇಧ ಮತ್ತು ಅದರ ವೈಫಲ್ಯ, ಜಿಎಸ್‌ಟಿ ತೆರಿಗೆ ವ್ಯವಸ್ಥೆಯ ಸೋಲು, ಲಾಕ್‌ಡೌನ್‌ನ ವೈಫಲ್ಯಗಳನ್ನೇ ಇವರೆಲ್ಲರೂ ತಮ್ಮ ಸಾಧನೆಯೆಂದು ಬಿಂಬಿಸಲು ಹೊರಟಿದ್ದಾರೆಯೇ? ಅಥವಾ ನಿತೀಶ್ ಮತ್ತು ಚಿರಾಗ್ ಪಾಸ್ವಾನ್ ಮೊದಲಾದವರು ರಾಮಮಂದಿರ, ಪಟೇಲ್ ಪ್ರತಿಮೆ ಇತ್ಯಾದಿಗಳ ಜೊತೆಗೆ ಪಾಲುದಾರರಾಗಲು ಮುಂದಾಗಿದ್ದಾರೆಯೇ? ಸದ್ಯಕ್ಕೆ ಬಿಹಾರದಲ್ಲಿ ಎನ್‌ಡಿಎಯ ಪರವಾಗಿರುವ ಒಂದೇ ಒಂದು ಧನಾತ್ಮಕ ಅಂಶವೆಂದರೆ ಪ್ರಬಲ ಸ್ಪರ್ಧಿಯಿಲ್ಲದೇ ಇರುವುದು. ಕೇಂದ್ರ ಮತ್ತು ರಾಜ್ಯದಲ್ಲಿ ಎನ್‌ಡಿಎಯ ಜನವಿರೋಧಿ ಆಡಳಿತವೇ ಈ ಬಾರಿ ಆ ಪಕ್ಷಕ್ಕೆ ಪ್ರಬಲ ಸ್ಪರ್ಧಿಯಾಗಿದೆ. ಸದ್ಯಕ್ಕೆ ಬಿಜೆಪಿ ಚುನಾವಣೆಯಲ್ಲಿ ‘ಕೊರೋನ’ವನ್ನೇ ತಬ್ಬಿಕೊಂಡಿದೆ. ಕೊರೋನವನ್ನು ಭಾರತಕ್ಕೆ ರಾಜಹಾಸು ಹಾಸಿ ಸ್ವಾಗತಿಸಿದ್ದೇ ಮೋದಿ ನೇತೃತ್ವದ ಸರಕಾರ.

ಫೆಬ್ರವರಿ ತಿಂಗಳಲ್ಲೇ ವಿಮಾನ ನಿಲ್ದಾಣಗಳ ದಿಡ್ಡಿ ಬಾಗಿಲನ್ನು ಮುಚ್ಚಿದ್ದಿದ್ದರೆ, ದೇಶ ಲಾಕ್‌ಡೌನ್‌ನಂತಹ ಸನ್ನಿವೇಶವನ್ನು ಎದುರಿಸುವ ಅಗತ್ಯವಿದ್ದಿರಲಿಲ್ಲ. ಆದುದರಿಂದ ದೇಶಾದ್ಯಂತ ಕೊರೋನವನ್ನು ಹಂಚಿದ ಹೆಗ್ಗಳಿಕೆಯನ್ನೇ ಮೋದಿ ಸರಕಾರ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲು ಮುಂದಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಬಿಹಾರದ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಿದ್ದೇವೆ ಎಂದು ಎನ್‌ಡಿಎ ಘೋಷಿಸಿಕೊಂಡಿದೆ. ಸರಕಾರ ಮೊತ್ತ ಮೊದಲು ಕೊರೋನ ಈ ದೇಶಕ್ಕೆ ಕಾಲಿಡಲು ಕಾರಣವಾದ ತನ್ನ ವೈಫಲ್ಯಗಳಿಗೆ ಸ್ಪಷ್ಟೀಕರಣ ನೀಡಬೇಕು. ಕೊರೋನ ಎದುರಿಸುವ ನೆಪದಲ್ಲಿ ಜನರ ಕೈಯಲ್ಲಿ ಹಣತೆ ತಟ್ಟೆಗಳನ್ನು ಕೊಟ್ಟು ಮಾಡಿದ ಮೋಸಗಳ ಕುರಿತಂತೆ ಸರಕಾರ ಕ್ಷಮೆಯಾಚಿಸಬೇಕು. ಕೊರೋನ ಎದುರಿಸುವ ನೆಪದಲ್ಲಿ ಎರಡು ತಿಂಗಳ ಕಾಲ ಲಾಕ್‌ಡೌನ್ ಘೋಷಿಸಿ ಜನರನ್ನು ಆರ್ಥಿಕ ತುರ್ತುಪರಿಸ್ಥಿತಿಗೆ ತಳ್ಳಿ, ಆರ್ಥಿಕತೆಯನ್ನು ಸರ್ವನಾಶ ಮಾಡಿದ ಬಳಿಕವೂ ಕೊರೋನ ಸೋಂಕಿತರ ಸಂಖ್ಯೆ ಯಾಕೆ ಇಳಿಕೆಯಾಗಲಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಬೇಕು.

ವಲಸೆ ಕಾರ್ಮಿಕರ ಮಹಾ ವಲಸೆ, ಸಾವು ನೋವುಗಳೂ ಉತ್ತರವಿಲ್ಲದೆ ಬಿದ್ದುಕೊಂಡಿವೆ. ಆದರೆ ಅವುಗಳಿಂದ ನುಣುಚಿಕೊಂಡಿರುವ ಸರಕಾರ, ಇನ್ನೂ ಕಂಡು ಹಿಡಿಯದ ಕೊರೋನ ಲಸಿಕೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿ ಬಿಹಾರದ ಮತದಾರರನ್ನು ಮೂರ್ಖನಾಗಿಸಲು ಹೊರಟಿದೆ. ಮುಖ್ಯವಾಗಿ, ಕೊರೋನ ಲಸಿಕೆ ತಯಾರಿಯ ಸಿದ್ಧತೆ ಎಲ್ಲಿಯವರೆಗೆ ತಲುಪಿದೆ? ಎನ್ನುವುದನ್ನಾದರೂ ದೇಶದ ಜನರಿಗೆ ಪ್ರಧಾನಿ ಮೋದಿ ತಿಳಿಸಿ ಅವರ ಆತಂಕಗಳನ್ನು ತಿಳಿಯಾಗಿಸಬೇಕು. ಆದರೆ ಅಂತಹ ಯಾವುದೇ ಮಾಹಿತಿಗಳು ಸರಕಾರದ ಬಳಿಯಿಲ್ಲ. ಹೀಗಿರುವಾಗ, ಯಾವಾಗ ಸಿದ್ಧಗೊಳ್ಳುತ್ತದೆ ಎನ್ನುವ ಮಾಹಿತಿಯೂ ಇಲ್ಲದೆ, ಲಸಿಕೆಯನ್ನು ಉಚಿತವಾಗಿ ನೀಡಲು ಹೊರಟಿರುವ ಸರಕಾರದ ಪ್ರಣಾಳಿಕೆ ಒಂದು ತಮಾಷೆಯಂತಿದೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲರ ಖಾತೆಗಳಿಗೆ ತಲಾ ಹದಿನೈದು ಲಕ್ಷ ರೂಪಾಯಿ ಸುರಿಯುತ್ತೇನೆ ಎಂದು ಮತದಾರರನ್ನು ವಂಚಿಸಿದಂತೆಯೇ ಇದು ಕೂಡ. ಇಷ್ಟಕ್ಕೂ, ಬಿಹಾರಕ್ಕಷ್ಟೇ ಉಚಿತ ಲಸಿಕೆಯನ್ನು ಸರಕಾರ ನೀಡುತ್ತದೆಯೇ? ಉಳಿದ ರಾಜ್ಯಗಳು ಹಾಗಾದರೆ ಭಾರತಕ್ಕೆ ಸೇರಿಲ್ಲವೇ? ಆರೋಗ್ಯದಂತಹ ಉಚಿತ ಸೇವೆಯನ್ನು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಸುವುದು ಎಷ್ಟರಮಟ್ಟಿಗೆ ಸರಿ? ಹಾಗಾದರೆ ಬಿಹಾರ ಹೊರತು ಪಡಿಸಿ ಉಳಿದ ರಾಜ್ಯಗಳ ಜನರು ಲಸಿಕೆಗಾಗಿ ಹಣವನ್ನು ಪಾವತಿಸಬೇಕೇ? ಪ್ರಣಾಳಿಕೆಯ ಪೊಳ್ಳುತನವನ್ನು ಇದು ಹೇಳುತ್ತದೆ. ಇಂದು ಸರಕಾರ ಲಾಕ್‌ಡೌನ್‌ನಿಂದಾಗಿ ತತ್ತರಿಸಿಕೂತಿರುವ ಆರ್ಥಿಕತೆಯ ಕುರಿತಂತೆ ಜನರಿಗೆ ಭರವಸೆ ನೀಡಬೇಕಾಗಿದೆ. ಕೆಲಸವಿಲ್ಲದೆ ಬೀದಿ ಪಾಲಾಗಿರುವ ವಲಸೆ ಕಾರ್ಮಿಕರಿಗೆ ಯೋಜನೆಗಳನ್ನು ಘೋಷಿಸಬೇಕಾಗಿದೆ. ಇನ್ನೂ ಕಂಡು ಹಿಡಿಯದ ಔಷಧಿಯ ಕುರಿತಂತೆ ಮಾತನಾಡುವುದನ್ನು ಬಿಟ್ಟು, ದೇಶಾದ್ಯಂತ ಹೆಚ್ಚಳವಾಗಿರುವ ಕ್ಷಯದಂತಹ ರೋಗಗಳಿಗೆ ಸಂಬಂಧಿಸಿ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡಬೇಕಾಗಿದೆ. ಕೊರೋನ ಔಷಧಿ ಚುನಾವಣೆಯ ವಸ್ತುವಾಗದೆ, ಯಾರಿಗೆ ಹೆಚ್ಚು ಅಗತ್ಯವಿದೆಯೋ ಅವರಿಗೆ ಮೊದಲು ತಲುಪಿಸಬೇಕಾಗಿದೆ. ಕೊರೋನ ಲಸಿಕೆಯ ವಿಷಯದಲ್ಲಿ ಎಲ್ಲ ರಾಜ್ಯಗಳು ಸಮಾನ ಹಕ್ಕುಗಳನ್ನು ಹೊಂದಿವೆ. ತನಗೆ ಇಷ್ಟ ಬಂದ ರಾಜ್ಯಕ್ಕೆ ಉಚಿತವಾಗಿ ಮತ್ತು ಇನ್ನಿತರ ರಾಜ್ಯಗಳಿಗೆ ಶುಲ್ಕದೊಂದಿಗೆ ವಿತರಿಸುವ ಮಾತುಗಳು ಸರಕಾರದ ಸಂವೇದನಾ ಹೀನತೆಗೆ ಸಾಕ್ಷಿಯಾಗಿದೆ.

ವಲಸೆ ಕಾರ್ಮಿಕರಿಗೆ ಸಂಬಂಧಿಸಿ ಬಿಹಾರ ಅತಿ ಹೆಚ್ಚು ನೋವು, ಸಂಕಟಗಳನ್ನು ಅನುಭವಿಸಿದೆ. ಇಂದು ಬಿಹಾರದಲ್ಲಿ ಮೋದಿ ಸರಕಾರ ಮಾತನಾಡಬೇಕಾಗಿರುವುದು ಹಸಿವು ಮತ್ತು ಉದ್ಯೋಗಗಳ ಕುರಿತಂತೆ. ಅದರ ಜೊತೆ ಜೊತೆಗೆ ಲಸಿಕೆಯಿಲ್ಲದ ಈ ದಿನಗಳಲ್ಲಿ ಬಿಹಾರವೂ ಸೇರಿದಂತೆ ದೇಶದ ಜನರಿಗೆ ಯಾವ ರೀತಿಯಲ್ಲಿ ಔಷಧಿ, ಉಪಚಾರಗಳನ್ನು ನೀಡಬಹುದು ಎನ್ನುವುದರ ಕುರಿತಂತೆ ಯೋಚಿಸಬೇಕು. ದೇಶಾದ್ಯಂತ ಕೊರೋನವನ್ನು ಉಚಿತವಾಗಿ ಹಂಚಿರುವ ಸರಕಾರದಿಂದ ಜನರು ಕೊರೋನ ಲಸಿಕೆಯನ್ನು ಉಚಿತವಾಗಿ ನಿರೀಕ್ಷಿಸುವಷ್ಟು ಮೂರ್ಖರಲ್ಲ. ಸದ್ಯಕ್ಕೆ ಉಚಿತವಾಗಿ ಸಿಗಬೇಕಾದ ಆಹಾರ ಧಾನ್ಯಗಳನ್ನು ಗ್ರಾಮಮಟ್ಟದಲ್ಲಿ ವಿತರಿಸಿದರೆ ಸಾಕು ಎನ್ನುವುದು ಜನರ ಕಾಳಜಿಯಾಗಿದೆ. ಹಾಗೆಯೇ ಏರುತ್ತಿರುವ ಪೆಟ್ರೋಲ್ ಬೆಲೆ, ಈರುಳ್ಳಿ ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡರೆ ಬಿಹಾರ ಮಾತ್ರವಲ್ಲ, ಇಡೀ ದೇಶಕ್ಕೆ ಸಣ್ಣದೊಂದು ನಿಟ್ಟುಸಿರು ಬಿಡಲು ಅವಕಾಶ ಮಾಡಿಕೊಟ್ಟಂತಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)