varthabharthi


ಅಂತಾರಾಷ್ಟ್ರೀಯ

ಪ್ರವಾದಿಯವರ ವ್ಯಂಗ್ಯ ಚಿತ್ರಗಳ ಕುರಿತು ಫ್ರಾನ್ಸ್ ಅಧ್ಯಕ್ಷರ ಹೇಳಿಕೆ

ಮಧ್ಯಪ್ರಾಚ್ಯದಲ್ಲಿ ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ

ವಾರ್ತಾ ಭಾರತಿ : 25 Oct, 2020

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ರ ಕಾರ್ಟೂನ್ ಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸುವುದಿಲ್ಲ ಹಾಗೂ ಭವಿಷ್ಯದ ಫ್ರಾನ್ಸ್ ನಲ್ಲಿ ಇಸ್ಲಾಮಿಸ್ಟ್ ಗಳಿಗೆ ಜಾಗವಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಹೇಳಿಕೆ ನೀಡಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಫ್ರೆಂಚ್ ಉತ್ಪನ್ನಗಳ ಬಹಿಷ್ಕರಿಸಬೇಕೆಂಬ ಕರೆ ಬಲವಾಗಿ ಕೇಳಿಬರುತ್ತಿದೆ.

ಅಕ್ಟೋಬರ್ 16 ರಂದು ತನ್ನ ಶಾಲೆಯ ಹೊರಗೆ ಶಿರಚ್ಛೇದಕ್ಕೊಳಗಾದ ಫ್ರೆಂಚ್ ಶಿಕ್ಷಕ ಸ್ಯಾಮುಯೆಲ್ ಪ್ಯಾಟಿಗೆ ಗೌರವ ಸಲ್ಲಿಸುವಾಗ ಮ್ಯಾಕ್ರೋನ್ ಈ ಹೇಳಿಕೆ ನೀಡಿದ್ದಾರೆ.

 47 ವರ್ಷದ ಸ್ಯಾಮುಯೆಲ್ ತರಗತಿಯಲ್ಲಿ ಪ್ರವಾದಿ ಮುಹಮ್ಮದ್ ರ ಕುರಿತ ವಿವಾದಾತ್ಮಕ ವ್ಯಂಗ್ಯಚಿತ್ರಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಆ ಬಳಿಕ ಚೆಚೆನ್ಯಾ ಮೂಲದ 18 ವರ್ಷದ ಯುವಕನೊಬ್ಬ ಶಿಕ್ಷಕ ಮನೆಗೆ ಹೋಗುತ್ತಿದ್ದ ವೇಳೆ ಅವರನ್ನು ಹತ್ಯೆಗೈದಿದ್ದು, ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಶಂಕಿತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

ಶನಿವಾರ ಸುಮಾರು 200 ಜನರು ಇಸ್ರೇಲ್ ನ ಫ್ರಾನ್ಸ್ ರಾಯಭಾರಿಯ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಪ್ರವಾದಿಯನ್ನು ಬೆಂಬಲಿಸಿ ಅರೇಬಿಕ್ ಭಾಷೆಯ ಬ್ಯಾನರ್ ಗಳನ್ನು ಪ್ರದರ್ಶಿಸಿದರು.

ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗನ್ ಅವರು ಮ್ಯಾಕ್ರೊನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫ್ರೆಂಚ್ ಅಧ್ಯಕ್ಷರು ಮುಸ್ಲಿಮರ ಬಗೆಗಿನ ಅವರ ವರ್ತನೆಯ ಬಗ್ಗೆ ಮಾನಸಿಕ ತಪಾಸಣೆಯ ಅಗತ್ಯವಿದೆ ಎಂದು ಹೇಳಿದ್ದರು.

ಅಭಿವ್ಯಕ್ತಿ ಸ್ವಾತಂತ್ರದ ನೆಪದಲ್ಲಿ ಪ್ರವಾದಿಯನ್ನು ಅವಮಾನಿಸುವ ವ್ಯಂಗ್ಯ ಚಿತ್ರಗಳ ಪ್ರಕಟನೆಯನ್ನು ಜೋರ್ಡಾನ್ ವಿದೇಶಾಂಗ ಸಚಿವಾಲಯವೂ ಖಂಡಿಸಿದೆ.

ಏತನ್ಮಧ್ಯೆ ಕುವೈಟ್ ನ ಸೂಪರ್ ಮಾರ್ಕೆಟ್ ಗಳು ಬಹಿಷ್ಕಾರ ಅಭಿಯಾನವನ್ನು ಬೆಂಬಲಿಸಲು ಫ್ರೆಂಚ್ ಉತ್ಪನ್ನಗಳನ್ನು ತಮ್ಮ ಅಂಗಡಿಗಳಿಂದ ತೆಗೆದುಹಾಕಲು ಆರಂಭಿಸಿವೆ. ಫ್ರೆಂಚ್ ಅಧ್ಯಕ್ಷರು ‘ಇಸ್ಲಾಮೋಫೋಬಿಯಾ’ವನ್ನು ಹರಡಿದ್ದಾರೆ ಎಂದು ಆರೋಪಿಸಿ ಅನೇಕ ಟ್ವಿಟರ್ ಬಳಕೆದಾರರು ತಮ್ಮ ಪ್ರೊಫೈಲ್ ಚಿತ್ರಗಳನ್ನು ಬದಲಾಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)