varthabharthi


ಅಂತಾರಾಷ್ಟ್ರೀಯ

ಇ-ವೋಟಿಂಗ್ ಮೂಲಕವೂ ಭಾರೀ ಪ್ರಮಾಣದ ಮತದಾನ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಈಗಾಗಲೇ 5.87 ಕೋಟಿ ಮಂದಿ ಮತದಾನ

ವಾರ್ತಾ ಭಾರತಿ : 26 Oct, 2020

ನ್ಯೂಯಾರ್ಕ್,ಅ.26: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈವರೆಗೆ 5.87 ಕೋಟಿಗೂ ಅಧಿಕ ಮಂದಿ ಅಮೆರಿಕನ್ ಪೌರರು ಮತ ಚಲಾಸಿದ್ದು, ಇದು 2016ರ ಚುನಾವಣೆಯ ಆರಂಭಿಕ ಮತದಾನದಲ್ಲಿ ಚಲಾವಣೆಯಾದ ಮತಪತ್ರಗಳ ಸಂಖ್ಯೆಯನ್ನು ಮೀರಿಸಿದೆ. ಆದರೆ ಇ-ಮೇಯಿಲ್ ಮೂಲಕ ಭಾರೀ ಸಂಖ್ಯೆಯಲ್ಲಿ ನಾಗರಿಕರು ಹಕ್ಕು ಚಲಾಯಿಸಿರುವುದರಿಂದ ಮತಗಳ ಎಣಿಕೆಯು ನವೆಂಬರ್ 3ರ ಆನಂತರವೂ ನಡೆಯುವ ಸಾಧ್ಯತೆಯಿದ್ದು, ಚುನಾವಣಾ ಫಲಿತಾಂಶ ವಿಳಂಬವಾಗಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

 ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನವೆಂಬರ್ 3ರಂದು ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿಯೂ ಮತದಾರರು ಮತಚಲಾಯಿಸಬಹುದಾಗಿದೆ.

 ವಾಶಿಂಗ್ಟನ್ ಡಿಸಿ ಹಾಗೂ ಅಮೆರಿಕದ 50 ರಾಜ್ಯಗಳಲ್ಲಿ ಚುನಾವಣಾಧಿಕಾರಿಗಳು ಆಯೋಜಿಸಿದ ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿರುವುದಾಗಿ ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಅಮೆರಿಕ ಮೂಲದ ಸಮೀಕ್ಷಾ ಸಂಸ್ಥೆ ಎಡಿಸನ್ ರಿಸರ್ಚ್ ಆ್ಯಂಡ್ ಕ್ಯಾಟಾಲಿಸ್ಟ್ ಸಮೀಕ್ಷೆಯನ್ನು ನಡೆಸಿತ್ತು.

ನವೆಂಬರ್ 3ಕ್ಕೆ ಇನ್ನೂ ಒಂಭತ್ತು ದಿನಗಳು ಬಾಕಿಯಿರುವಂತೆಯೇ, ಈವರೆಗೆ ನಡೆದಿರುವ ಮತದಾನವು 2016ರ ಆರಂಭಿಕ ಮತದಾನವನ್ನು ಮೀರಿಸಿದೆಯೆಂದು ವರದಿ ಹೇಳಿದೆ. ಈ ಸಲದ ಆರಂಭಿಕ ಮತದಾನವು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇ.46ರಷ್ಟಾಗಿದೆಯೆಂದು ವರದಿ ಹೇಳಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯ ನಡುವೆಯೂ ದಾಖಲೆ ಸಂಖ್ಯೆಯಲ್ಲಿ ಮತದಾನ ನಡೆಯುತ್ತಿರುವುದು ಗಮನಾರ್ಹವಾಗಿದೆ. ಮತದಾರರು ನವೆಂಬರ್ ತಿಂಗಳಿಗೆ ಮುನ್ನ ಇಮೇಲ್ ಅಥವಾ ಮತಗಟ್ಟೆಗಳಲ್ಲಿ ಮತಚಲಾಯಿಸಲು ಅರ್ಹರಾಗಿರುವುದರಿಂದ ದಾಖಲೆ ಪ್ರಮಾಣದ ಮತದಾನವಾಗುತ್ತಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಅಮೆರಿಕದಲ್ಲಿ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 25.70 ಕೋಟಿ ನಾಗರಿಕರಿದ್ದಾರೆ. ಅವರಲ್ಲಿ 24.00 ಕೋಟಿ ಮಂದಿ ಈ ವರ್ಷ ಮತಚಲಾಯಿಸಲು ಅರ್ಹರಾಗಿದ್ದಾರೆ.

 ಅಭೂತಪೂರ್ವ ಪ್ರಮಾಣದಲ್ಲಿ ಇ-ಮೇಯಿಲ್ ಮತದಾನವಾಗುತ್ತಿರುವ ಹೊರತಾಗಿಯೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಾಟಿಕ್ ಅಭ್ಯರ್ಥಿ ಜೋ ಬೈಡೆನ್ ಇವರ ನಡುವೆ ಗೆಲುವು ಯಾರಿಗೆ ಒಲಿಯಲಿದೆಯೆಂಬುದು ನವೆಂಬರ್ 3ರ ಆನಂತರವೇ ಗೊತ್ತಾಗಲಿದೆ ಎಂದು ಸಿಎನ್‌ಎನ್ ತನ್ನ ವರದಿಯಲ್ಲಿ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಹಾವಳಿಯಿಂದಾಗಿ ಗಣನೀಯ ಸಂಖ್ಯೆಯ ಮತದಾರರು ಇಮೇಲ್ ಮತದಾನದ ವಿಧಾನವನ್ನು ಬಳಸಿಕೊಳ್ಳುತ್ತಿದ್ದಾರೆಂದು ವರದಿ ತಿಳಿಸಿದೆ.

ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ ದುಷ್ಕರ್ಮಿ

 ವಾಶಿಂಗ್ಟನ್,ಅ.26: ಅಮೆರಿಕದ ಬಾಸ್ಟನ್ ನಗರದ ಮತಗಟ್ಟೆಯೊಂದರಲ್ಲಿ ರವಿವಾರ ದುಷ್ಕರ್ಮಿಯೊಬ್ಬ ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದೊಂದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯವೆಂದು ಚುನಾವಣಾಧಿಕಾರಿಗಳು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ ಎಫ್‌ಬಿಐ ತನಿಖೆ ನಡೆಸುತ್ತಿದೆ.

  ಬಾಸ್ಟನ್ ಸಾರ್ವಜನಿಕ ಗ್ರಂಥಾಲಯದ ಹೊರಭಾಗದಲ್ಲಿರುವ ಮತಗಟ್ಟೆಯಲ್ಲಿ ಈ ಘಟನೆ ನಡೆದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

   ಬೆಂಕಿ ಕಾಣಿಸಿಕೊಂಡಿದ್ದ ಮತಪೆಟ್ಟಿಗೆಯಲ್ಲಿದ್ದ ಎಲ್ಲಾ 122 ಮತಪತ್ರಗಳನ್ನು ತೆರವುಗೊಳಿಸಲಾಗಿದ್ದು, ಆ ಪೈಕಿ 35 ಮತಪತ್ರಗಳು ಹಾನಿಗೀಡಾಗಿರುವುದಾಗಿ ಮ್ಯಾಸಚ್ಯೂಸೆಟ್ಸ್‌ನ ಕಾಮನ್‌ವೆಲ್ತ್ ಕಾರ್ಯದರ್ಶಿ ವಿಲಿಯಂ ಗಾಲ್ವಿನ್ ತಿಳಿಸಿದ್ದಾರೆ.

  ‘‘ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ ಘಟನೆಯು ಪ್ರಜಾಪ್ರಭುತ್ವದ ಮೇಲಾದ ಘೋರ ಅಪಚಾರವಾಗಿದೆ ಮತ್ತು ತಮ್ಮ ನಾಗರಿಕ ಕರ್ತವ್ಯವನ್ನು ನಿರ್ವಹಿಸಿದ ಮತದಾರರಿಗೆ ಮಾಡಿದ ಅಪಮಾನವಾಗಿದೆ ಮತ್ತು ಅಪರಾಧವಾಗಿದೆ’’  ಎಂದು ಗಾಲ್ವಿನ್ ಹಾಗೂ ಬಾಸ್ಟನ್ ಮೇಯರ್ ಮಾರ್ಟಿ ವಾಲ್ಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಬೆಂಕಿ ಅವಘಡ ಸಂಭವಿಸಿದ ವೇಳೆ ಮತಪೆಟ್ಟಿಗೆಯ ಸಮೀಪದಲ್ಲಿದ್ದ ವ್ಯಕಿಯೊಬ್ಬನ ಭಾವಚಿತ್ರಗಳನ್ನು ಬಿಡುಗಡೆಗೊಳಿಸಿದ್ದು, ಆತನನ್ನು ಗುರುತಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)