ಡ್ರಗ್ಸ್ ಮಾರಾಟ ಆರೋಪ: ವಿದೇಶಿ ಪ್ರಜೆಗಳಿಬ್ಬರ ಸೆರೆ
ಬೆಂಗಳೂರು, ಅ.27: ಎಂಡಿಎಂಎ ಹಾಗೂ ಕೆಮಿಕಲ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ವಿದೇಶಿ ಪ್ರಜೆಗಳಿಬ್ಬರನ್ನು ಇಲ್ಲಿನ ವೈಟ್ಫೀಲ್ಡ್ ವಿಭಾಗದ ಕಾಡುಗೋಡಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾ ಮೂಲದ ಚಿಕ್ವಾಡ್ ವಿನ್ಸೆಂಟ್ ಒಗಿಬೊ (30) ಹಾಗೂ ನೈಜೀರಿಯಾದ ಅನಂಬ್ರಾ ರಾಜ್ಯದ ಎಮೆಕಾ ಚಿನೆಡು ಮಿಷೆಲ್ (45) ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಾಡುಗೋಡಿಯ ಕೋಡಿಗೇಹಳ್ಳಿ-ಹೂಡಿ ರೈಲ್ವೆ ನಿಲ್ದಾಣದ ಕಡೆ ಹೋಗುವ ರಸ್ತೆ ಬದಿಯ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು, ಬೈಕ್ ನಿಲ್ಲಿಸಿಕೊಂಡು ಬ್ಯಾಗ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಕಾಡಗೋಡಿ ಪೊಲೀಸ್ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಮತ್ತವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 300 ಗ್ರಾಂ ಗಾಂಜಾ, ಎಂಡಿಎಂಎ, ಇತರ ಕೆಮಿಕಲ್ ಡ್ರಗ್, ನಾಲ್ಕು ಮೊಬೈಲ್ ಫೋನ್, ತೂಕ ಮಾಡುವ ಯಂತ್ರ, ಬೈಕ್, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.