ಆಧಾರ್ ಗೆ ಮೊಬೈಲ್ ಸಂಖ್ಯೆ ಜೋಡಣೆ : ಅಂಚೆ ಇಲಾಖೆಯಿಂದ ವಿಶೇಷ ಶಿಬಿರ
ಮಂಗಳೂರು, ಅ. 27: ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಜೋಡಣೆ ಅಥವಾ ಬದಲಾವಣೆಗಾಗಿ ಗ್ರಾಹಕರಿಂದ ಸಾಕಷ್ಟು ಬೇಡಿಕೆಗಳಿದ್ದು, ಈ ಕೋರಿಕೆಯನ್ನು ಪರಿಗಣಿಸಿ ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗವು ವಿಶೇಷವಾಗಿ 'ಮೊಬೈಲ್ ಸಂಖ್ಯೆ ಜೋಡಣೆ ಗೊಳಿಸುವ ಆಧಾರ್ ಕ್ಯಾಂಪ್' ಅನ್ನು ಮಂಗಳೂರು ಪ್ರಧಾನ ಅಂಚೆ ಕಚೇರಿ, ಪಾಂಡೇಶ್ವರ ದಲ್ಲಿ ನ. 1 ರಂದು ಆಯೋಜಿಸಲು ನಿರ್ಧರಿಸಿದೆ.
ಈ ಕ್ಯಾಂಪ್ ನ ಸದುಪಯೋಗವನ್ನು ಪಡೆದುಕೊಳ್ಳಲು ಇಚ್ಛಿಸುವವರು ಅ.31 ರ ಒಳಗಾಗಿ ತಮ್ಮ ಹೆಸರನ್ನು ಮಂಗಳೂರು ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ 0824-2423053 ಗೆ ಕರೆ ಮಾಡಿ ನೋಂದಾವಣಿ ಮಾಡಿಕೊಳ್ಳಬಹುದು.
ಮೊದಲು ನೋಂದಾವಣಿ ಗೊಂಡ 50 ಗ್ರಾಹಕರಿಗೆ ಮೊದಲ ಆಧ್ಯತೆ ನೀಡಲಾಗುವುದು. ಆ ದಿನದಂದು ಮೊಬೈಲ್ ಸಂಖ್ಯೆ ಜೋಡಣೆ/ಬದಲಾವಣೆ ಮಾತ್ರ ಹಮ್ಮಿಕೊಂಡಿದ್ದು, ಉಳಿದ ಆಧಾರ್ ಸೇವೆಗಳಾದ ಹೊಸ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ, ಬಯೋಮೆಟ್ರಿಕ್ ಅಪ್ ಡೇಟ್ ಮಾಡಲಾಗುವುದಿಲ್ಲ.
ನವಂಬರ್ ಒಂದನೇ ತಾರೀಕಿನ 'ಮೊಬೈಲ್ ಸಂಖ್ಯೆ ಜೋಡಣೆ ಗೊಳಿಸುವ ಆಧಾರ್ ಕ್ಯಾಂಪ್'ಗೆ ಸಾರ್ವಜನಿಕರ ಪ್ರತಿಕ್ರಿಯೆ, ಬೇಡಿಕೆಯನ್ನು ಗಮನಿಸಿ, ಬೇಡಿಕೆ ಉತ್ತಮವಾಗಿದ್ದರೆ, ಮುಂದಿನ ರವಿವಾರಗಳಿಗೂ ವಿಸ್ತರಿಸಲಾಗುವುದು ಎಂದು ಹಿರಿಯ ಅಂಚೆ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದ್ದಾರೆ.