varthabharthi


ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಯಾವುದೇ ಭಾರತೀಯ ಭೂಮಿ ಖರೀದಿಸಲು ಅವಕಾಶ ಕಲ್ಪಿಸಿದ ಕೇಂದ್ರ

ವಾರ್ತಾ ಭಾರತಿ : 27 Oct, 2020

ಹೊಸದಿಲ್ಲಿ,ಅ.27: ಕೇಂದ್ರ ಸರಕಾರವು ಮಹತ್ವದ ಕ್ರಮವೊಂದರಲ್ಲಿ ಹಲವಾರು ಕಾನೂನುಗಳನ್ನು ತಿದ್ದುಪಡಿಗೊಳಿಸುವ ಮೂಲಕ ಯಾವುದೇ ಭಾರತೀಯ ಪ್ರಜೆಯು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಅವಕಾಶ ಕಲ್ಪಿಸಿದೆ.

 ‘ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಪುನರ್ಘಟನೆ (ಕೇಂದ್ರ ಕಾನೂನುಗಳ ಅಳವಡಿಕೆ) ಮೂರನೇ ಆದೇಶ,2020 ’ಅನ್ನು ಗೃಹ ಸಚಿವಾಲಯವು ಗೆಝೆಟ್‌ನಲ್ಲಿ ಅಧಿಸೂಚಿಸಿದ್ದು,ಕೇಂದ್ರವು 26 ರಾಜ್ಯ ಕಾನೂನುಗಳನ್ನು ರದ್ದುಗೊಳಿಸಿದೆ ಅಥವಾ ಬದಲಿಸಿದೆ. ತಕ್ಷಣದಿಂದಲೇ ಜಾರಿಗೆ ಬಂದಿರುವ ಅಧಿಸೂಚನೆಯಲ್ಲಿ ಭೂಮಿ ಖರೀದಿಗೆ ಸಂಬಂಧಿಸಿದ ಜಮ್ಮು-ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಕಲಂ 17ರಲ್ಲಿದ್ದ ‘ರಾಜ್ಯದ ಶಾಶ್ವತ ನಿವಾಸಿ ’ಎಂಬ ಶಬ್ದಗಳನ್ನು ಕೈಬಿಡಲಾಗಿದೆ.

ಕಳೆದ ವರ್ಷದ ಆ.5ರಂದು ವಿಧಿ 370 ಮತ್ತು ವಿಧಿ 35-ಎ ರದ್ಧತಿಗೆ ಮುನ್ನ ಅನಿವಾಸಿಗಳು ಅಂದರೆ ಹೊರರಾಜ್ಯಗಳಿಗೆ ಸೇರಿದವರು ಜಮ್ಮು-ಕಾಶ್ಮೀರದಲ್ಲಿ ಯಾವುದೇ ಸ್ಥಿರಾಸ್ತಿಯನ್ನು ಖರೀದಿಸಲು ಅವಕಾಶವಿರಲಿಲ್ಲ.

ತಿದ್ದುಪಡಿಗಳಲ್ಲಿ ಕೃಷಿಭೂಮಿಯನ್ನು ಕೃಷಿಕರಲ್ಲದವರಿಗೆ ವರ್ಗಾಯಿಸಲು ಅವಕಾಶವಿಲ್ಲ ಎಂದು ಲೆ.ಗ.ಮನೋಜ ಸಿನ್ಹಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಆದರೂ ಕಾಯ್ದೆಯಲ್ಲಿ ಹಲವಾರು ವಿನಾಯಿತಿಗಳಿದ್ದು,ಇವುಗಳ ಮೂಲಕ ಶಿಕ್ಷಣ ಸಂಸ್ಥೆ ಅಥವಾ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಕೃಷಿಯೇತರ ಉದ್ದೇಶಗಳಿಗೆ ಕೃಷಿಭೂಮಿಯ ವರ್ಗಾವಣೆ ಸಾಧ್ಯವಾಗಲಿದೆ.

 ತಿದ್ದುಪಡಿಗಳು ಹೊರಗಿನವರು ಜಮ್ಮು-ಕಾಶ್ಮೀರದಲ್ಲಿ ಜಮೀನು ಖರೀದಿಸಲು ಹೆಬ್ಬಾಗಿಲನ್ನು ತೆರೆದಿವೆ. ಈಗ ಇಲ್ಲಿ ಹೊರಗಿನವರು ಜಮೀನು ಖರೀದಿಸಲು ಯಾವುದೇ ಕಾನೂನಿನ ತೊಡಕು ಇಲ್ಲ ಎಂದು ಮಾಜಿ ಅಡ್ವೊಕೇಟ್ ಜನರಲ್ ಮುಹಮ್ಮದ್ ಇಷಾಕ್ ಕಾದ್ರಿ ಅವರು ಹೇಳಿದರು.

ಗೃಹ ಸಚಿವಾಲಯದ ಅಧಿಸೂಚನೆಗೆ ಪ್ರತಿಕ್ರಿಯಿಸಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರು,ಜಮ್ಮು-ಕಾಶ್ಮೀರದ ಭೂ ಮಾಲಕತ್ವ ಕಾನೂನಿಗೆ ತಂದಿರುವ ತಿದ್ದುಪಡಿಗಳು ಒಪ್ಪುವಂಥದ್ದಲ್ಲ. ಜಮ್ಮು-ಕಾಶ್ಮೀರವು ಈಗ ಮಾರಾಟಕ್ಕಿದೆ ಮತ್ತು ಸಣ್ಣಭೂಮಿಯನ್ನು ಹೊಂದಿರುವ ಬಡವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಟ್ವೀಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)