varthabharthi


ರಾಷ್ಟ್ರೀಯ

​ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಆರಂಭ

ವಾರ್ತಾ ಭಾರತಿ : 28 Oct, 2020

ಹೊಸದಿಲ್ಲಿ : ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದ್ದು, 243 ಸದಸ್ಯ ಬಲದ ವಿಧಾನಸಭೆಗೆ ಮೊದಲ ಹಂತದ ಮತದಾನ ಬುಧವಾರ ಮುಂಜಾನೆ ಆರಂಭವಾಗಿದೆ.

ಮೊದಲ ಹಂತದಲ್ಲಿ 71 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 1066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವಿರೋಧ ಪಕ್ಷವಾದ ಆರ್‌ಜೆಡಿಯ ತೇಜಸ್ವಿ ಯಾದವ್ 10 ಲಕ್ಷ ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದ್ದು, ಚುನಾವಣಾ ಕಣದಲ್ಲಿ ರಂಗೇರಿಸಿದೆ. ಲಾಕ್‌ಡೌನ್ ಹಾಗೂ ಉದ್ಯೋಗ ನಷ್ಟ ಹಿನ್ನೆಲೆಯಲ್ಲಿ ಆರ್‌ಜೆಡಿ ಆಶ್ವಾಸನೆಗೆ ವಿಶೇಷ ಮಹತ್ವ ಬಂದಿದೆ.

ಚುನಾವಣೆಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್‌ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಎನ್‌ಡಿಎಯಲ್ಲಿ ಬಂಡಾಯದ ಬಾವುಟ ಬೀಸಿರುವುದು. ನಿತೀಶ್ ವಿರುದ್ಧ ಚಿರಾಗ್ ಕಿಡಿ ಕಾರಿರುವುದರ ಹಿಂದೆ ಬಿಜೆಪಿಯ ಕುಮ್ಮಕ್ಕು ಇದೆ ಎಂಬ ವದಂತಿಗಳು ಕೇಳಿಬಂದಿರುವುದು ಕೂಡಾ ಪ್ರಧಾನ ಅಂಶವಾಗುವ ಸಾಧ್ಯತೆ ಇದೆ.

ಕೊರೋನಾ ವೈರಸ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ನಡೆಯುತ್ತಿರುವ ಪ್ರಮುಖ ಚುನಾವಣೆ ಇದಾಗಿದ್ದು, ಚುನಾವಣಾ ಆಯೋಗ ವಿಸ್ತೃತ ಸುರಕ್ಷಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸಿಆರ್‌ಪಿಎಫ್ ಸಿಬ್ಬಂದಿ ಔರಂಗಾಬಾದ್‌ನ ದಿಬ್ರಾದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನ(ಇಐಡಿ)ಗಳನ್ನು ವಶಪಡಿಸಿಕೊಂಡಿದ್ದು, ನಿಷ್ಕ್ರಿಯಗೊಳಿಸಿದ್ದಾರೆ. ಲಕ್ಷ್ಮಿಸರಾಯ್ ಮತಗಟ್ಟೆ ಸೇರಿದಂತೆ ಹಲವೆಡೆ ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡಿದೆ. ಮತದಾನ ಆರಂಭ ಸಂದರ್ಭದಲ್ಲಿ ಲಕ್ಷ್ಮೀಸರಾಯ್ ದೇವಾಲಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಮತದಾನ ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.

ಇದೇ ಮೊದಲ ಬಾರಿಗೆ ಪ್ರತಿ ಮತಗಟ್ಟೆಯ ಮತದಾರರ ಗರಿಷ್ಠ ಸಂಖ್ಯೆಯನ್ನು 1600ರಿಂದ 1000ಕ್ಕೆ ಇಳಿಸಲಾಗಿದ್ದು, 80 ವರ್ಷ ಮೀರಿದವರು ಮತ್ತು ಕೊರೋನಾ ಸೋಂಕಿತರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಇವಿಎಂಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಬಳಕೆ ಮತ್ತು ಕೈ ತೊಳೆಯಲು ನೀರಿನ ವ್ಯವಸ್ಥೆಯನ್ನು ಮತದಾರರಿಗೆ ಮಾಡಲಾಗಿದೆ.

ಮುಂಜಾನೆ 7ಕ್ಕೆ ಮತದಾನ ಆರಂಭವಾಗಿದ್ದು, ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಜೆಡಿಯು 35 ಹಾಗೂ ಬಿಜೆಪಿ 29 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಎಲ್‌ಜೆಪಿ 35 ಕಡೆಗಳಲ್ಲಿ ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದೆ. ಆರ್‌ಜೆಡಿ 42 ಹಾಗೂ ಕಾಂಗ್ರೆಸ್ 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆರು ಮಂದಿ ಹಾಲಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಜಿತನ್‌ರಾಂ ಮಾಂಜಿಯವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)