varthabharthi


ಕ್ರೀಡೆ

ನವೆಂಬರ್ 27ರಿಂದ ಜನವರಿ 19ರ ತನಕ ಏಕದಿನ,ಟಿ-20, ಟೆಸ್ಟ್ ಸರಣಿ

ಭಾರತ-ಆಸ್ಟ್ರೇಲಿಯ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟ

ವಾರ್ತಾ ಭಾರತಿ : 28 Oct, 2020

ಸಿಡ್ನಿ: ಮುಂದಿನ ತಿಂಗಳು ಭಾರತ ವಿರುದ್ಧ ಆಸ್ಟ್ರೇಲಿಯದಲ್ಲಿ ಆರಂಭವಾಗಲಿರುವ ಮೂರು ಪ್ರಕಾರದ ಕ್ರಿಕೆಟ್  ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯ ಬುಧವಾರ ಪ್ರಕಟಿಸಿದೆ.

ಟೀಮ್ ಇಂಡಿಯಾ ನವೆಂಬರ್ 27ರಿಂದ ಜನವರಿ 19,2021ರ ತನಕ ತಲಾ 3 ಪಂದ್ಯಗಳ ಏಕದಿನ, ಟ್ವೆಂಟಿ-20 ಸರಣಿ ಹಾಗೂ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಭಾರತೀಯ ಕ್ರಿಕೆಟ್ ತಂಡ ನವೆಂಬರ್ 12ರಂದು ಸಹಾಯಕ ಸಿಬ್ಬಂದಿಯ ಜೊತೆಗೆ ಸಿಡ್ನಿ ತಲುಪಲಿದೆ. ಸರಣಿಯ ಮೊದಲ ಪಂದ್ಯಕ್ಕಿಂತ  ಮೊದಲು ಟೀಮ್ ಇಂಡಿಯಾವು ಕಡ್ಡಾಯ ಕ್ವಾರಂಟೈನ್ ಗೆ ಒಳಪಡಲಿದೆ.

ಸುಮಾರು 2 ತಿಂಗಳ ಕ್ರಿಕೆಟ್ ಪ್ರವಾಸದಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಏಕದಿನ ಪಂದ್ಯವು ನ.27 ,29 ಹಾಗೂ ಡಿಸೆಂಬರ್ 2 ರಂದು ನಡೆಯಲಿದೆ.

ಡಿಸೆಂಬರ್ 4ರಿಂದ ಟ್ವೆಂಟಿ-20 ಸರಣಿಯು ಆರಂಭವಾಗಲಿದ್ದು, ಡಿ.6 ಹಾಗೂ 8 ರಂದು ಉಳಿದೆರಡು ಟಿ-20 ಪಂದ್ಯಗಳು ನಡೆಯುತ್ತವೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಡಿ.17 ರಂದು ಅಡಿಲೇಡ್ ಓವಲ್ ನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯವನ್ನು ಪಿಂಕ್ ಬಣ್ಣದ ಚೆಂಡಿನಲ್ಲಿ ಆಡಲಾಗುವುದು. ಇದು ಹಗಲು-ರಾತ್ರಿ ಪಂದ್ಯವಾಗಿರುತ್ತದೆ.

ಎರಡನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ನಲ್ಲಿ ಡಿ.26 ರಂದು ನಡೆಯಲಿದ್ದು, ಇದು ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ ಆಗಿರುತ್ತದೆ. ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 7 ರಿಂದ ಆರಂಭವಾಗುತ್ತದೆ. ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಬ್ರಿಸ್ಬೇನ್ ನಲ್ಲಿ ಜನವರಿ 15 ರಿಂದ ಆರಂಭವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)