ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ: ರಾಗಿಣಿ, ಸಂಜನಾಗೆ ಸದ್ಯಕ್ಕಿಲ್ಲ ಜಾಮೀನು
ಬೆಂಗಳೂರು, ಅ.28: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ನವೆಂಬರ್ 2ರವರೆಗೂ ಕಾರಾಗೃಹದಲ್ಲಿಯೇ ಇರಬೇಕಿದೆ.
ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ, ಸಂಜನಾ ಹಾಗೂ ಇನ್ನಿತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಎನ್ಡಿಪಿಎಸ್ ವಿಚಾರಣಾ ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರೂ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.
ಇನ್ನು ನವೆಂಬರ್ 2ರವರೆಗೂ ಹೈಕೋರ್ಟ್ ಗೆ ದಸರಾ ರಜೆ ಇದೆ. ಇದರ ನಡುವೆ ಅಕ್ಟೋಬರ್ 29ರಂದು ರಜಾ ಕಾಲದ ಪೀಠಗಳು ಕಾರ್ಯ ನಿರ್ವಹಿಸಲಿವೆ. ಆದರೆ, ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿರುವ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ ಆ ದಿನ ಕಾರ್ಯ ನಿರ್ವಹಿಸುವ ಸಾಧ್ಯತೆ ಇಲ್ಲ.
ಇನ್ನು ಕಾಯ್ದಿರಿಸಿರುವ ತೀರ್ಪನ್ನು ನವೆಂಬರ್ 2ರಂದು ನಡೆಯುವ ಕಲಾಪದಂದೇ ನ್ಯಾಯಾಲಯ ಪ್ರಕಟಿಸಲಿದೆ ಎಂಬ ಖಾತರಿಯೂ ಇಲ್ಲ. ಹೀಗಾಗಿ ರಾಗಿಣಿ ಹಾಗೂ ಸಂಜನಾಗೆ ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯತೆಗಳಿಲ್ಲ.