varthabharthi


ರಾಷ್ಟ್ರೀಯ

ಪರವಾನಿಗೆ ಇಲ್ಲದೆ ಮನೆಯಲ್ಲಿ ಆಹಾರ ಪದಾರ್ಥ ತಯಾರಿಸಿದರೆ 5 ಲಕ್ಷ ರೂ. ದಂಡ!

ವಾರ್ತಾ ಭಾರತಿ : 28 Oct, 2020

ಶ್ರೀನಗರ, ಅ. 28: ಕೊರೋನ ಅವಧಿಯಲ್ಲಿ ಜೀವನೋಪಾಯಕ್ಕಾಗಿ ಮನೆಯಲ್ಲೇ ಕೇಕ್ ಹಾಗೂ ಆಹಾರ ಪದಾರ್ಥಗಳನ್ನು ತಯಾರಿಸುವವರು ಹಾಗೂ ಮಾರಾಟ ಮಾಡುವವರು ಎಚ್ಚರಿಕೆ ವಹಿಸಬೇಕಾಗಿದೆ. ಯಾಕೆಂದರೆ, ಪರವಾನಿಗೆ ಅಥವಾ ನೋಂದಣಿ ಇಲ್ಲದೆ ಇಂತಹ ಆಹಾರ ಪದಾರ್ಥಗಳನ್ನು ತಯಾರಿಸುವವರು ಹಾಗೂ ಮಾರಾಟ ಮಾಡುವವರು 5 ಲಕ್ಷ ರೂಪಾಯಿ ಹಾಗೂ 6 ತಿಂಗಳು ಕಾರಾಗೃಹ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಭಾರತದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರದ ನಿರ್ದೇಶನದಂತೆ ಇಂತಹ ಆಹಾರ ತಯಾರಿ ಘಟಕಗಳಿಗೆ ರಾಜ್ಯ ಆಹಾರ ಸುರಕ್ಷಾ ಇಲಾಖೆ ಪರವಾನಿಗೆ ನೀಡುತ್ತಿದೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡವರು ಹಾಗೂ ವಿದೇಶದಿಂದ ಆಗಮಿಸಿದವರು ಜೀವನೋಪಾಯಕ್ಕಾಗಿ ಮನೆಯಲ್ಲಿ ಕೇಕ್ ಹಾಗೂ ಆಹಾರ ಪದಾರ್ಥಗಳನ್ನು ತಯಾರಿಸಲು ಆರಂಭಿಸಿದರು. ಮಾರ್ಚ್‌ನಿಂದ ಇಂತಹ ಸುಮಾರು 2,300 ಗೃಹ ಮೂಲದ ಉದ್ಯಮಗಳು ನೋಂದಣಿ ಮಾಡಿಕೊಂಡಿವೆ. ಆದರೆ, ಈಗಲೂ ಕೆಲವು ಘಟಕಗಳು ಪರವಾನಿಗೆ ಅಥವಾ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಉದ್ಯಮಗಳಿಗೆ ಪರವಾನಿಗೆ ಅಥವಾ ನೋಂದಣಿ ಮಾಡುವುದು ಕಡ್ಡಾಯ ಎಂಬ ಕಾನೂನಿನ ಅರಿವು ಹಲವರಿಗೆ ಇದೆ. 12 ಲಕ್ಷಕ್ಕಿಂತ ಮೇಲೆ ವ್ಯವಹಾರ ಇರುವ ಘಟಕಕ್ಕೆ ಪರವಾನಿಗೆ ಅಗತ್ಯ. ಇದಕ್ಕಿಂತ ಕೆಳಗಿನ ಮೊತ್ತದ ವ್ಯವಹಾರ ಇರುವ ಘಟಕಕ್ಕೆ ನೋಂದಣಿ ಅಗತ್ಯ.

ಭಾರತದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿ ಯನ್ನು ಅಕ್ಷಯ ಕೇಂದ್ರದ ಮೂಲಕ ಮಾಡಿಕೊಳ್ಳಬಹುದು. ನೋಂದಣಿ ಪ್ರಕ್ರಿಯ ತುಂಬಾ ಸರಳ. ಫೊಟೋ ಇರುವ ಗುರುತು ಪತ್ರ ಹಾಗೂ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ನೋಂದಣಿ ಪೂರ್ಣಗೊಳಿಸಬಹುದು. ಆಹಾರ ಪದಾರ್ಥ ತಯಾರಿಕೆಗೆ ಬಳಸುವ ನೀರು ಹಾಗೂ ಉತ್ಪನ್ನಗಳ ಗುಣಮಟ್ಟಕ್ಕೆ ಉತ್ಪಾದಕರು ಜವಾಬ್ದಾರಿ. ಪರವಾನಿಗೆ ಹಾಗೂ ನೋಂದಣಿಯನ್ನು ಆಹಾರ ಸುರಕ್ಷಾ ಇಲಾಖೆಯ ಜಿಲ್ಲಾ ಕಚೇರಿ ನೀಡುತ್ತದೆ. ಯಾವುದೇ ದೂರು ಬಂದಲ್ಲಿ ಸಂಬಂಧಿತ ಪ್ರದೇಶದ ಆಹಾರ ಸುರಕ್ಷಾ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಾರೆ ಹಾಗೂ ದಂಡ ವಿಧಿಸುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)