varthabharthi


ಅನುಗಾಲ

ಅಗೆವ ಬುದ್ಧಿಗವಕಾಶ

ವಾರ್ತಾ ಭಾರತಿ : 29 Oct, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈಚೆಗೆ ನವಕರ್ನಾಟಕ ಪ್ರಕಾಶನ ಕೆ. ಸತ್ಯನಾರಾಯಣ ಅವರ ‘ಕಾರಂತರ ಕಾದಂಬರಿಗಳಲ್ಲಿ ‘ದುಡಿ’ಮೆ’ ಎಂಬ 104 ಪುಟಗಳ ಕೃತಿಯನ್ನು ಪ್ರಕಟಿಸಿದೆ. ಪುಟ್ಟಕನ್ನಡಿಯಲ್ಲಿ ಲೇಖಕರು ಕಾರಂತರ ಚೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಕುಡಿಯರ ಕೂಸು, ಚಿಗುರಿದ ಕನಸು, ಜಾರುವ ದಾರಿಯಲ್ಲಿ ಎಂಬ 6 ಕಾದಂಬರಿಗಳಲ್ಲಿ ದುಡಿಮೆಯ ಆಯಾಮವನ್ನು ದರ್ಶಿಸಿದ್ದಾರೆ.


ಖ್ಯಾತ ಕನ್ನಡ ಕತೆಗಾರರಾದ ಕೆ. ಸತ್ಯನಾರಾಯಣ ಉತ್ತಮ ವಿಮರ್ಶಕರು. ಜನಪ್ರಿಯವಾಗಿ ಅವರು ಕತೆಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಕನ್ನಡ/ಇಂಗ್ಲಿಷ್ ಸಾಹಿತ್ಯದ ಒಳ್ಳೆಯ ಓದಿನ ಸತ್ಯನಾರಾಯಣ ಕತೆ, ಕಾದಂಬರಿ, ಪ್ರವಾಸ ಸಾಹಿತ್ಯದಲ್ಲಿ ಹೇಗೋ ಹಾಗೆಯೇ ವಿಮರ್ಶಾ ಕೃತಿಗಳ ಮೂಲಕವೂ ತಮ್ಮ ಪ್ರತಿಭೆ-ಪಾಂಡಿತ್ಯವನ್ನು ಕನ್ನಡಕ್ಕೆ ನೀಡಿದ್ದಾರೆ. ಈಚೆಗೆ ನವಕರ್ನಾಟಕ ಪ್ರಕಾಶನ ಅವರ ‘ಕಾರಂತರ ಕಾದಂಬರಿಗಳಲ್ಲಿ ‘ದುಡಿ’ಮೆ’ ಎಂಬ 104 ಪುಟಗಳ ಕೃತಿಯನ್ನು ಪ್ರಕಟಿಸಿದೆ. ಪುಟ್ಟಕನ್ನಡಿಯಲ್ಲಿ ಲೇಖಕರು ಕಾರಂತರ ಚೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಕುಡಿಯರ ಕೂಸು, ಚಿಗುರಿದ ಕನಸು, ಜಾರುವ ದಾರಿಯಲ್ಲಿ ಎಂಬ 6 ಕಾದಂಬರಿಗಳಲ್ಲಿ ದುಡಿಮೆಯ ಆಯಾಮವನ್ನು ದರ್ಶಿಸಿದ್ದಾರೆ.

ಕೋಟ ಶಿವರಾಮ ಕಾರಂತರು ಕನ್ನಡದ ಶ್ರೇಷ್ಠ ಕಾದಂಬರಿಕಾರರು ಮಾತ್ರವಲ್ಲ; ಕನ್ನಡದ ಸಾಹಿತ್ಯ, ಕಲೆ, ಜ್ಞಾನ-ವಿಜ್ಞಾನ ಪ್ರಪಂಚದಲ್ಲಿ ಕಡಲಿನಂತೆ; ಅದರಲ್ಲೂ ಕಾರಂತರ ಕಾದಂಬರಿ ಕ್ಷೇತ್ರವು ಬಹುವಿಶಾಲವಾದದ್ದು. ಅವರ ಕಾದಂಬರಿಗಳ ಮಗ್ಗುಲುಗಳನ್ನು ಪ್ರತ್ಯೇಕಿಸಿ ಅಧ್ಯಯನ ನಡೆಸುವುದು ಅಂಧಕಗಜ ನ್ಯಾಯದಂತೆ ಅವರ ಸಾಹಿತ್ಯದ ವಿರಾಟ್ ಸ್ವರೂಪವನ್ನು, ದರ್ಶನವನ್ನು ಹಿಡಿಯಲು ಕೆಲವೊಮ್ಮೆ ತೊಡಕಾಗಬಹುದಾದರೂ ಅಧ್ಯಯನದ ದೃಷ್ಟಿಯಿಂದ ಒಳ್ಳೆಯದು. ಈ ದೃಷ್ಟಿಯಿಂದ ಯಾವುದೇ ವಿಶೇಷ ಅಧ್ಯಯನವು ತನ್ನ ಉದ್ದೇಶಿತ ಗಡಿಗುರುತುಗಳನ್ನು ತಲುಪದಿರುವುದಕ್ಕೂ ಮತ್ತು ಕೆಲವೊಮ್ಮೆ ಮೀರುವುದಕ್ಕೂ ಸಾಧ್ಯ. ಪ್ರಸ್ತಾವನೆಯಂತಿರುವ ‘ಕಾರಂತ ಲೋಕದ ಪ್ರವೇಶಕ್ಕೆ ಮುನ್ನ’ ಎಂಬ ಮೊದಲನೇ ಅಧ್ಯಾಯವೂ, 6 ಕೃತಿಗಳ ಕುರಿತು 6 ಅಧ್ಯಾಯಗಳೂ, ‘ಒಟ್ಟಂದದ ಮಾತುಗಳು’ ಎಂಬ ಕೊನೆಯ ಅಧ್ಯಾಯವೂ ಸೇರಿದಂತೆ ಇಲ್ಲಿ 8 ಅಧ್ಯಾಯಗಳಿವೆ. ಈ ಕೃತಿಯ ಮೂಲಕ ಕಾರಂತರು ನನಗೆ ಇನ್ನಷ್ಟು ಹತ್ತಿರವಾಗಿ ದ್ದಾರೆಂಬ ಕಾರಣಕ್ಕಾಗಿಯೇ ಕೃತಿ ಮತ್ತು ಅಲ್ಲಿ ಕಾಣುವ ಕಾರಂತದರ್ಶನವನ್ನು ವಿವರಿಸುತ್ತಿದ್ದೇನೆ.

ಕೋವಿಡ್ ವೇಳೆ ನಡೆದ ಕಾರ್ಮಿಕ ವಲಸೆ ಲೇಖಕರೊಳಗಿನ ಸೃಜನಶೀಲ ವಿಮರ್ಶಕನನ್ನು ಕಾಡಿದ್ದರಿಂದ ಈ ವಿಚಾರವನ್ನು ತನ್ನ ಕ್ಷೇತ್ರವಾದ ಸಾಹಿತ್ಯದಲ್ಲಿ ಹುಡುಕಿದ್ದು ಸಹಜವೇ. ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗಬಹುದಾದ ಎಲ್ಲವನ್ನೂ ಬಾಚಿಕೊಳ್ಳದೆ ಪ್ರಾತಿನಿಧಿಕವಾದ, ವಿಸ್ತಾರವೇದಿಕೆಯನ್ನು ಹೊಂದಿದ ಕಾರಂತರ ಕಾದಂಬರಿಗಳಲ್ಲಿ ಕಾಣುವ ದುಡಿಮೆ ಮತ್ತು ಆನುಷಂಗಿಕವಾದ ವಲಸೆಯ ಪ್ರಶ್ನೆಯನ್ನು ಅಧ್ಯಯನಮಾಡಿದ್ದಾರೆ. ಕೋವಿಡ್ ವಲಸೆಯು ನಗರ-ಮಹಾನಗರಗಳಿಂದ ಹುಟ್ಟೂರಿಗೆ ಆಗಿದ್ದು ಕಾರಂತರ ಕಾದಂಬರಿಗಳಲ್ಲಿ ದುಡಿಮೆ ಮತ್ತು ವಲಸೆ ಬೇರೆ ಪಾತಳಿಯಲ್ಲಿ ನಡೆಯುತ್ತದೆ. ಕಾರಂತರ ಕಾದಂಬರಿಗಳಲ್ಲಿ ನಡೆಯುವ ವಲಸೆ ಭಿನ್ನ ಕಾರಣಕ್ಕೆ. ವಲಸೆಬರುವುದು ಕಡಿಮೆ; ಊರಿನಿಂದಲೇ ವಲಸೆ-ಬಹುಪಾಲು ಘಟ್ಟಕ್ಕೆ. ಊರಿನಲ್ಲಿಲ್ಲದ ಸೋಂಕು, ಜಾಡ್ಯಗಳು ಅಲ್ಲಿವೆ. ಬಲಾತ್ಕಾರದ ಶೋಷಣೆಯೂ ವಲಸೆಗೆ ಕಾರಣವಾಗುತ್ತದೆ. ಆದ್ದರಿಂದ ವಲಸೆಯನ್ನು ಸಾಮಾನ್ಯೀಕರಿಸಿ ಕಾರಂತರ ಕಾದಂಬರಿಗಳಿಗೆ ಹಚ್ಚುವುದು ಪ್ರಶ್ನಾರ್ಹವೂ ಆಗಬಹುದು.

ಕಾರಂತರ ಈ ಕಾದಂಬರಿಗಳು 20ನೇ ಶತಮಾನದ ಪೂರ್ವಾರ್ಧದವು; ದೇಶಕ್ಕೆ ಸ್ವಾತಂತ್ರ್ಯ ಬರದ ಮತ್ತು ಬಂದ, ಪೇಟೆ, ಪಟ್ಟಣ, ನಗರ, ಮಹಾನಗರಗಳಲ್ಲಿ ಆಧುನಿಕತೆಯ ಪ್ರವೇಶಕಾಲ. ಹಳ್ಳಿಗಳಲ್ಲಿ ಇನ್ನೂ ಜಮೀನ್ದಾರೀ ಪದ್ಧತಿಯು ಮನೆಮಾಡಿತ್ತು. ವರ್ಗ-ಜಾತಿ-ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಮತ್ತು ಪರಿಣಾಮದಲ್ಲಿ ಬದುಕನ್ನು ರೂಪಿಸಿದ್ದವು. ಅಸ್ಪಶ್ಯತೆ, ಅಸಮಾನತೆ ಹಾಡಹಗಲೇ ಹೆದ್ದಾರಿಯಲ್ಲೇ ನಡೆಯುತ್ತಿತ್ತು. ‘‘ಕಾರಂತರೇ ಹೇಳುವ ಹಾಗೆ, ಕುಡಿಯರ ನಂಬಿಕೆಗಳು, ಆಚರಣೆ, ಜೀವನ ಪದ್ಧತಿ ಒಂದು ಭಾಗವಾದರೆ, ಅವರ ಬೇಸಾಯ, ಬೇಟೆ, ದುಡಿಮೆಯ ರೀತಿ ನೀತಿ ಕಾದಂಬರಿಯ ಇನ್ನೊಂದು ಭಾಗ. ಕ್ರಮೇಣವಾಗಿಯಾದರೂ ಕುಡಿಯರು ಧನಿಗಳ ಮೂಲಕ ಮತ್ತು ಧನಿಗಳ ಆಸೆ-ಆಕಾಂಕ್ಷೆಗಳನ್ನು ಪೂರೈಸುವುದಕ್ಕೆ ಕೂಡ ಹೊಸ ಆರ್ಥಿಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗಲೇಬೇಕಾಗುತ್ತದೆ. ಆಗ ಅವರ ದುಡಿಮೆ, ಬೇಸಾಯದ ಶೈಲಿ ಎಲ್ಲವೂ ಬದಲಾಗುತ್ತದೆ.’’ ಎಂಬ ಕಾರಂತರ ಆಶಯದ ಎರಡನೇ ಭಾಗವನ್ನು ಲೇಖಕರು ತಮ್ಮ ‘ವಸ್ತು-ಪರಿಕಲ್ಪನೆ’ಗೆ ಆಯ್ದುಕೊಂಡು ‘‘ಕಾದಂಬರಿ ಚಿತ್ರಿಸುವ ಒಂದು ಆಯಾಮವನ್ನು ಹೀಗೆ ನಮ್ಮ ವಿಶ್ಲೇಷಣೆ, ಬರವಣಿಗೆ ಅಗತ್ಯಕ್ಕೆ ತಕ್ಕಂತೆ ಓದುವ ಕ್ರಮದ ಯಕ್ತಾಯುಕ್ತತೆಯ ಬಗ್ಗೆ ನನಗೆ ಅನುಮಾನಗಳಿದ್ದರೂ, ಈ ಬರವಣಿಗೆಯ ಸಂದರ್ಭದಲ್ಲಿ ಅನಿವಾರ್ಯವಾಗಿ ಈ ಕ್ರಮವನ್ನು ಅನುಸರಿಸಬೇಕಾಗಿದೆ.’’ ಎನ್ನುತ್ತಾರೆ.

 ಲೇಖಕರಿಗೆ ಅಧ್ಯಯನದ ವ್ಯಾಪ್ತಿ-ಮಿತಿ ಎರಡರ ಅರಿವೂ ಇದೆ. ಅದಕ್ಕೇ ಅವರು (ಪುಟ 16, 19, 36, 104ರಲ್ಲಿ) ಕೃತಿಯ ಮಿತಿಯನ್ನು ಹೇಳಿಕೊಳ್ಳು ತ್ತಾರೆ. ಸಹಜವಾಗಿಯೇ ಸಂಕ್ಷಿಪ್ತತೆಯಿದೆ. ವಿಮರ್ಶೆಯ ಕಟ್ಟುನಿಟ್ಟುಗಳಿಂದ ಹೊರಬಂದರೂ ದುಡಿಮೆಯ ಮಣ್ಣಿನ ಗುಣಗಳನ್ನು, ಸಾರವನ್ನು ಹೀರಿಕೊಂಡು ಸೃಜನಶೀಲತೆಯನ್ನು ಕಾಪಾಡಿಕೊಂಡಿದೆ. ಕಾರಂತರ ಮಟ್ಟಿಗೆ ಇಲ್ಲಿನ ಪಾತ್ರಗಳು ವಿವಿಧ ಜಾತಿ-ವರ್ಗಗಳಿಗೆ ಸೇರಿದರೂ ತಾತ್ವಿಕತೆೆ ಒಂದೇ. ಚೋಮನ ಬಾಳ್ವೆ ಬಡವರ ಬಾಳ್ವೆ. ಕಾರಂತರು ‘‘ಚೋಮನ ದುಡಿಯಲ್ಲೊಂದು ವಿಶೇಷವಿಲ್ಲ. ಚೋಮನ ಬಾಳ್ವೆಯಲ್ಲಿ ವಿಶೇಷವಿದ್ದರಲ್ಲವೇ ಅವನ ದುಡಿಯಲ್ಲಿರುವುದು?’’ ‘‘ಶಿವನ ಕೈಯಲ್ಲಿ ಡಮರು ಇದ್ದಂತೆ ಚೋಮನ ಕೈಯಲ್ಲಿ ಈ ದುಡಿ.’’ ‘‘ಚಂದ್ರ ಈ ಬಡವರ ಬಾಳ್ವೆಯನ್ನು ಕಂಡು ನಗುತ್ತಲೇ ಇದ್ದ.’’ ಎನ್ನುತ್ತಾರೆ.
 
ದಲಿತರ, ಶೋಷಿತರ ಕುರಿತು ಯಾರು ಬರೆಯಬೇಕು ಎಂಬ ಆನುಷಂಗಿಕ ಪ್ರಶ್ನೆ ಕಳೆದ ಕೆಲವು ದಶಕಗಳಿಂದ ಮೂಡಿದೆ; ಮೂಡುತ್ತಲೇ ಇದ್ದು ಸಾಹಿತ್ಯ ಚರ್ಚೆಯ ಭಾಗವಾಗಿದೆ. ಇದನ್ನು ಲೇಖಕರು ಎತ್ತಿಕೊಂಡು ‘‘ಈ ಚರ್ಚೆಗೆ ಹಾಜರಿ ಹಾಕಲು ನನಗೆ ಇಷ್ಟವಿಲ್ಲ.’’ ಎಂದು ಉತ್ತರಿಸಿದರೂ ‘‘ಕೃತಿಕಾರ ತನಗೆ ದಕ್ಕಿರುವ ಅನುಭವಕ್ಕೆ ಒಂದು ಪ್ರಾಮಾಣಿಕ ಆಕೃತಿಯನ್ನು ಕೊಟ್ಟಿದ್ದಾನೆಯೇ ಮತ್ತು ಅವನು ಕೊಡಲು ಸಾಧ್ಯವಾಗಿರುವ ಆಕೃತಿ ಎಷ್ಟು ವಿದ್ಯಮಾನಗಳೊಡನೆ ತಳುಕು ಹಾಕಿಕೊಳ್ಳುತ್ತೆ ಎಂಬುದೇ ಮುಖ್ಯ ಪ್ರಶ್ನೆ.’’ ಎಂಬಿತ್ಯಾದಿಯಾಗಿ ಸಾತ್ವಿಕವಾಗಿ ಹೇಳುತ್ತಾರೆ. (ಪುಟ 34) ‘ಮರಳಿಮಣ್ಣಿಗೆ’ಯಲ್ಲಿ ದುಡಿಮೆಯ ವಿನ್ಯಾಸ, ದೃಷ್ಟಿಕೋನ ಬದಲಾಗಿದೆ. ಮನಸ್ಸು ಮತ್ತು ಬುದ್ಧಿಯ ಸಂಘರ್ಷ ಆಧುನಿಕವಾಗಿದೆ. ಬದುಕೇ ಒಂದು ಕಲೆ; ದುಡಿಮೆ ಅದರ ಭಾಗ; ಆದ್ದರಿಂದಲೇ ಅದಕ್ಕೆ ಅರ್ಥ, ಲಯ, ವಿನ್ಯಾಸ ಇವೆಲ್ಲವೂ ಇದೆ.

‘ಬೆಟ್ಟದ ಜೀವ’ದಲ್ಲಿ ಲೇಖಕರು ದುಡಿಮೆಯಲ್ಲಿರುವ ಸಾಹಸ ಮತ್ತು ಸೌಂದರ್ಯದ ಆಯಾಮವನ್ನು ರೀತಿಯನ್ನು ಚರ್ಚಿಸುತ್ತಾರೆ. (‘ಚಿಗುರಿದ ಕನಸು’ ಕಾದಂಬರಿಯಲ್ಲೂ ಈ ಚರ್ಚೆಯಿದೆ.) ಪೂರಕವಾಗಿ ‘‘ಅವರು ಮೊದಲಿನಿಂದಲೂ ತುಂಬಾ ಅನುಕೂಲಸ್ಥರು. ಸ್ವಂತ ದುಡಿಮೆಯವರಾದುದರಿಂದ, ದೇವರ ದಯೆಯಿಂದ ಅವರಿಗೆ ಏನೂ ಕಡಿಮೆಯಿಲ್ಲ.’’ ಎಂಬ ಮಾತುಗಳಿವೆ. ‘ಕುಡಿಯರ ಕೂಸು’ ಕೆಳಜಾತಿ-ವರ್ಗದ ದುಡಿಮೆಯ ಸಮಸ್ಯೆಗಳ ಮಾರ್ಮಿಕವಾದ ಚಿತ್ರ. ಕುಡಿಯರ ಜೀವನಕ್ರಮವನ್ನು ಕಾರಂತರು ಎರಡು ಹಂತಗಳಲ್ಲಿ ವಿವರಿಸುತ್ತಾರೆ. ಮೊದಲನೆಯದು ಮೂರ್ತ. ಎರಡನೆಯದು ಮನುಷ್ಯನ ಜೀವನವಿಧಾನವನ್ನು ಮತ್ತು ಮನಸ್ಥಿತಿಯನ್ನು ಪ್ರಭಾವಿಸುವ ಅಮೂರ್ತ ರೀತಿ. ಆದರೆ ‘‘ರಸಿಕನಾದ ವ್ಯಕ್ತಿಗೆ ಈ ಅರಣ್ಯದ ಸೌಂದರ್ಯವೆಲ್ಲ ಮನಮೋಹಕವಾಗಿ ಕಾಣಿಸಬಹುದಾದರೂ, ಅದರಲ್ಲೇ ಬಾಳಿ, ಬದುಕಿ ಜೀವನ ಸಂಸಾರ ಸಾಗಿಸುವ ಮಲೆ ಕುಡಿಯರಿಗೆ ಯಾವ ಕಾವ್ಯದೃಷ್ಟಿ ಬರಬೇಕು? ಬದಲಿಗೆ ಬೆಟ್ಟದ ಕೋಡುಗಳು, ಬಂಡೆಯ ನಿಲುವುಗಳು ಆಗಾಗ ತಲೆದೋರುವ ಕಾಡ್ಗಿಚ್ಚುಗಳು, ಕುಲೆ, ದೈವ, ಪ್ರೇತ, ಮೊದಲಾದ ಹಲವಾರು ಅಶರೀರ ಪಿಶಾಚಿಗಳ ನೆನಪುಗಳನ್ನು ಮಾತ್ರ ಕೆರಳಿಸುತ್ತವೆ.’’ (ಪುಟ 68) ಎಂಬುದು ಮೇಲ್ವರ್ಗ-ಜಾತಿಯ ಪೂರ್ವಗ್ರಹಗಳನ್ನು ಸೂಚಿಸುತ್ತದಲ್ಲವೇ, ಕಾವ್ಯದೃಷ್ಟಿಗೆ ಜಾತೀಯ ಕಟ್ಟುಗಳಿವೆಯೇ, ಭೂತ-ಪ್ರೇತ ಮುಂತಾದವು ನೇತ್ಯಾತ್ಮಕ ಮೌಲ್ಯಗಳೇ? ಇದಕ್ಕೆ ಯಾರು ಹೊಣೆ? ಇತ್ಯಾದಿ ಪ್ರಶ್ನೆಗಳನ್ನು ಲೇಖಕರು ಎತ್ತಿಲ್ಲ. ‘‘ತಿಮ್ಮನ ಮಟ್ಟಿಗೆ ಏತರ ಬಾಳಿದು, ವರ್ಷ ವರ್ಷವೂ ಇದೇನೆ ಎನಿಸದೆ ಹೋಗಲಿಲ್ಲ.’’ ಎಂಬ ಕಾರಂತರ ಮಾತುಗಳು ಮಹಾಯುದ್ಧಗಳ ಆನಂತರದ ವಿಷಾದಯೋಗಗಳಾದರೂ ಲೇಖಕರು ಕಾರಂತರನ್ನು ಕುವೆಂಪು ಅವರೊಂದಿಗೆ ಹೋಲಿಸುತ್ತ ಪ್ರಸ್ತಾವಿಸುವ ‘‘ಕಾರಂತರಿಗೆ ಆಧ್ಯಾತ್ಮಿಕ ಆಯಾಮ ಮುಖ್ಯವೇ ಅಲ್ಲ.’’ ಎನ್ನುತ್ತಾರೆ. ಕೊನೆಗೆ ಲೇಖಕರು ಹೇಳುವ ‘‘ನಾವು ಮಾಡುವ ಕೆಲಸಕ್ಕೆ ಎಲ್ಲಿ ಸಮುದಾಯದ ಕಲ್ಪನೆಯಿರುತ್ತದೋ, ಸಮುದಾಯಕ್ಕೆ ಸಲ್ಲಿಸಬೇಕಾದ ಋಣದ ಕಲ್ಪನೆಯಿರುತ್ತದೋ ಅಲ್ಲಿ ಶ್ರಮವು ಕೇವಲ ದೈಹಿಕ ಸ್ತರಗಳನ್ನು ಮೀರಿ, ಸಾಮಾಜಿಕ, ಆಧ್ಯಾತ್ಮಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ.’’ ಎಂಬಲ್ಲಿ ಕಾರಂತರಿಗೆ ಆಧ್ಯಾತ್ಮಿಕ ಆಯಾಮ ಮುಖ್ಯವಲ್ಲವೆಂಬ ವಿಶ್ಲೇಷಣೆ ಬದಲಾಗುತ್ತದೆ.

‘ಚಿಗುರಿದ ಕನಸು’ ಪಟ್ಟಣದಿಂದ ಗ್ರಾಮಕ್ಕೆ ಬರುವ ಸ್ವಯಿಚ್ಛೆಯ ವಲಸೆಯ ವಾಸ್ತವ ಚಿತ್ರಣ. ಇಲ್ಲಿನ ನಾಯಕ ಅಧ್ಯಾತ್ಮ ಸ್ವರೂಪಿಯೇ. ‘‘ಒಂಟಿಯಾಗಿ ಕುಳಿತಿರುವಾಗಲೆಲ್ಲ ಅಂತರ್ಮುಖಿಯಾಗಲೆಳಸುತ್ತದೆ’’ ‘‘ಬೆಟ್ಟದ ಬಣ್ಣ, ಬಾನಿನ ಬಣ್ಣ, ಮುಗಿಲಿನ ಬಣ್ಣ-ಹೊಟ್ಟೆಗೂ ಬಟ್ಟೆಗೂ ಕೊಡದ ಬಣ್ಣಗಳಿವು... ಅಂಥ ಹಳ್ಳಿಯ ಜೀವನ ಅನುಭವಿಸಿದರೆ ಬಾಳಿನ ಬಣ್ಣಗಳೆಲ್ಲ ಕಳಚಿ ನಮಗೆ ಇದಿರಾಗುವುದು ರೈತನ ಬಡ ಅಸ್ಥಿಪಂಜರ ಮಾತ್ರ!’’ ಎಂಬ ಮಾತುಗಳು ಕೃತಿಯ ವಿವಿಧ ಸ್ತರಗಳನ್ನು ದುಡಿಮೆಯ ಸೂತ್ರಕ್ಕೆ ಪೋಣಿಸುತ್ತವೆ. ‘ಚೋಮನ ದುಡಿ’/‘ಕುಡಿಯರ ಕೂಸು’ಗಳ ಪಾತ್ರಗಳು ದುಡಿದೂ ಒಪ್ಪೊತ್ತಿನ ಕೂಳು ಸಿಗದವರಾದರೆ ಇಲ್ಲಿ ಸಂಬಳ ಕೊಡುತ್ತೇವೆಂದರೂ ಕೂಲಿಗಳು ಸಿಗದ ಒದ್ದಾಟ. ದೃಷ್ಟಿಕೋನ ಹೇಗೆ ಬದಲಾಗುತ್ತದೆಂಬುದನ್ನು ಲೇಖಕರು ‘‘ಘಟ್ಟದಲ್ಲಿ ಚಳಿಜ್ವರ ಕಡಿಮೆಯೇ? ಪ್ರಾಯಶಃ ಅವರಿಗೆ ಬೇಕಾದ ಕಾಫಿ ಹೊಟೇಲು, ಜುಗಾರಿಮಂಡ, ಹೆಂಡದಂಗಡಿಗಳು ಯಾವುವೂ ನಮ್ಮೂರಲ್ಲಿಲ್ಲ.

ಇಲ್ಲೊಂದು ಹೆಂಡದಂಗಡಿಯನ್ನು ಖಾಯಂ ಆಗಿ ತೆಗೆದರೆ, ಒಂದಿಷ್ಟು ಅಳುಗಳು ಬಂದು ನಿಂತಾರು.’’ ಎಂಬ ಮೂಲಕ ಒಂದೇ ವಿಚಾರವನ್ನು ಭಿನ್ನದೃಷ್ಟಿಕೋನದಿಂದ ನೋಡಿದ ಸಂದರ್ಭವನ್ನು ವಿವರಿಸುತ್ತಾರೆ. ಕೊನೆಗೆ ‘‘ಆದರ್ಶ, ಕನಸುಗಾರಿಕೆ, ಸಾಮಾಜಿಕ ಬದ್ಧತೆ, ಇವುಗಳನ್ನು ನಿಜಮಾಡಿಕೊಳ್ಳುವಲ್ಲಿ, ದುಡಿಮೆಯ ಯಾವ ಯಾವ ಸ್ತರದ ನೆಲೆಗಳು ಮನುಷ್ಯನಿಗೆ ಅಗತ್ಯವಾಗಬಲ್ಲವು ಎಂಬುದನ್ನು ಪ್ರಸ್ತುತಪಡಿಸುವಲ್ಲಿ ಈ ಕಾದಂಬರಿಯ ವಿಶಿಷ್ಟತೆಯಿದೆ. ಇದೆಲ್ಲವು ಕಾದಂಬರಿಯ ನಿರೂಪಣೆಯ ಗತಿ ಮತ್ತು ವಿವರಗಳ ಮೆಲೂ ಪರಿಣಾಮ ಬೀರುತ್ತದೆ. ಆದರೆ ಅಂತಹ ಅಂಶಗಳ ಚರ್ಚೆ ಈ ಅಧ್ಯಯನದ ವ್ಯಾಪ್ತಿಗೆ ಮೀರಿದ್ದು.’’ ಎಂದು ಹೇಳುವ ಮೂಲಕ ಇನ್ನಷ್ಟು ಸಾಧ್ಯತೆಗಳನ್ನು ಹೇಳುತ್ತಾರೆ. ‘ಜಾರುವ ದಾರಿಯಲ್ಲಿ’ ಕುಟುಂಬ ಸಂಬಂಧಗಳ ಕತೆಯೊಂದಿಗೆ ಕೃಷಿಯೇತರ ದುಡಿಮೆಯ ಸ್ಥಿತಿಗತಿಗಳನ್ನು ಚಿತ್ರಿಸುತ್ತದೆ. ದುಡಿಮೆಯೆಂಬುದು ಕೆಲವರಿಗೆ ಅನಿವಾರ್ಯ; ಇತರರಿಗೆ ಆಯ್ಕೆ. ಮೊಗೇರರ ಉದಾಹರಣೆಯಿದೆ. ದೇಶಪ್ರೇಮವೂ ದುಡಿಮೆಯೇ ಆಗುತ್ತದೆ. ಆದರೆ ಕೆಲವರಿಗೆ ಹಣ ಕೂಡಿಡುವ ದುಡಿಮೆಯು ಮಾತ್ರ ನಿಜದುಡಿಮೆ. ‘‘ಯಾವ ವೃತ್ತಿಪರತೆಯಲ್ಲಿ ಸಮಾಜದ ಋಣವನ್ನು ತೀರಿಸುವ ಆಯಾಮವಿರುವುದಿಲ್ಲವೋ, ಅಂತಹ ದುಡಿಮೆ, ಅಂತಹ ದುಡಿಮೆಯಿಂದ ಬೇರೆ ಸಂಪಾದನೆಗೆ ಯಾವ ರೀತಿಯ ಮೌಲ್ಯವೂ ಇಲ್ಲ’’ ಎಂದು ಲೇಖಕರು ಉಲ್ಲೇಖಿಸುವ, ಕಾದಂಬರಿ ತೋರುವ ಇತ್ಯಾತ್ಮಕ ಮೌಲ್ಯಗಳ ಈಡೇರಿಕೆಗೆ ವಾಸ್ತವದಲ್ಲೇ ಅವಕಾಶವಿದೆಯೆಂಬುದನ್ನು ಕಾದಂಬರಿ ಕಾಣಿಸುತ್ತದೆ.

ದುಡಿಮೆ ಹೇಗೆ ವೈಯಕ್ತಿಕ ಬದುಕಿನ, ಶ್ರಮದ ಸಾರ್ಥಕತೆಯೋ ಹಾಗೆಯೇ ಲೋಕಋಣದ ತೀರಿಸುವಿಕೆಯೂ ಹೌದು. ಲೇಖಕರು ಕೃತಿಯ ಕೊನೆಯ ಅಧ್ಯಾಯದಲ್ಲಿ ಅದುವರೆಗಿನ ಚಿಂತನೆಗಳನ್ನು ಸಂಗ್ರಹಿಸಿದ್ದಾರೆ. ಕೊನೆಗೆ ಲೇಖಕರು ವ್ಯಕ್ತಪಡಿಸುವ ಅನುಮಾನಗಳು ಕೃತಿಯ ಕುರಿತ ಹೊಸಶೋಧಕ್ಕೆ ಕಿಟಿಕಿಗಳಾಗಿವೆ. ‘ಚೋಮನ ದುಡಿ’ ಮತ್ತು ‘ಕುಡಿಯರ ಕೂಸು’ಗಳ ಹೊರತಾಗಿ ಇತರ ಕೃತಿಗಳಲ್ಲಿ ಮೇಲ್ಜಾತಿಯ, ಮಧ್ಯಮವರ್ಗದ ದುಡಿಮೆಯೇ ಕೇಂದ್ರ. ಮೇಲಿನ 2 ಕೃತಿಗಳಲ್ಲಿ ಕಂಡುಬರುವ ಶೋಷಣೆ ಮತ್ತು ಆರ್ಥಿಕ ದುಸ್ಥಿತಿಯ ಮಜಲು ಉಳಿದ ಕೃತಿಗಳಲ್ಲಿ ಇನ್ನೊಂದು ರೀತಿಯ ಶ್ರಮಿಕರ ಕಥನವಾಗಿದೆ; ದುಡಿಮೆಯ ಸ್ವರೂಪವು ಭಿನ್ನವಾಗಿದೆ. ಆದರೆ ಅವುಗಳ ಮೂಲವೊಂದೇ. ಲೇಖಕರು ಗುರುತಿಸುವ ದುಡಿಮೆ, ಹೋರಾಟ, ಸಾಹಸ, ಪ್ರಕೃತಿ ಆರಾಧನೆ, ಏಕಾಂತಜೀವನಗಳು ವೈಯಕ್ತಿಕ ತೃಪ್ತಿ-ಅತೃಪ್ತಿಗೆ ಸಂಬಂಧಿಸಿದವು. ಆದ್ದರಿಂದಲೇ ದುಡಿಮೆಯವರೂ ಸಂತೋಷಪ್ರಿಯರು. ‘ಬೆಟ್ಟದ ಜೀವ’ದ ಸಂದರ್ಭದಲ್ಲಿ ಅವರನ್ನು ‘‘ಸಂತೋಷಪ್ರಿಯರಾದ ಎಣೆವಕ್ಕಿಗಳು’’ ಎನ್ನಲಾಗಿದೆ. ಆದಾಯಕ್ಕಿಂತ ಆದಾಯ ತರುವ ದುಡಿಮೆಯನ್ನು ಪ್ರೀತಿಸುವ ಪಾತ್ರಗಳಿವೆ. ಚೋಮ ತನ್ನ ಸಂಕಟವನ್ನು ದುಡಿಯಲ್ಲಿ ಮರೆತಂತೆ ಗೋಪಾಲಯ್ಯ ಮಗ ದೂರವಾಗಿದ್ದಾನೆ ಎಂಬ ಕೊರಗನ್ನು ಕೃಷಿದುಡಿಮೆಯಲ್ಲಿ ಮರೆತವರು. ಮಾತು-ಕೃತಿ ಎರಡೂ ದುಡಿಮೆಗಳೇ.

ತಲೆಮಾರುಗಳ ಚಲನೆಯಲ್ಲಿ ಶ್ರಮದ ನಿಲುವುಗಳು ಬದಲಾದವೇಕೆ ಎಂಬುದು ಪ್ರತ್ಯೇಕ ಅಧ್ಯಯನವನ್ನು ಬಯಸುತ್ತದೆ. ‘‘ಮುಂದಿನ ತಲೆಮಾರಿನ ಸಂಸ್ಕೃತಿ ಚಿಂತಕರಿಗೆ ಬರವಣಿಗೆಯ ದೃಷ್ಟಿಯಿಂದ ಇದೊಂದು ಫಲವತ್ತಾದ ಕ್ಷೇತ್ರ. ಸಾಂಸ್ಕೃತಿಕ ಅಧ್ಯಯನಗಳಿಗೆ ಕಾರಂತರ ಕಾದಂಬರಿ ಲೋಕ ಚಿನ್ನದ ಗಣಿ ಇದ್ದ ಹಾಗೆ.’’ ಎಂಬ ಮಾತುಗಳು ತನ್ನ ಪ್ರಯತ್ನದ ಮಿತಿಗಳನ್ನು ಹೇಳಿ ಅಗೆವ ಬುದ್ಧಿಗೆ ಅವಕಾಶಗಳನ್ನು ನೀಡಿ ದಿಗಂತವ್ಯಾಪ್ತಿಯನ್ನು ಪಾರದರ್ಶಿಸುತ್ತದೆ. ಹತ್ತು ಹಲವು ಕಾರಣಗಳಿಗಾಗಿ ಇದೊಂದು ಮಹತ್ವದ ಕೃತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)