varthabharthi


ಕರ್ನಾಟಕ

ಮನೆಗಳ್ಳತನಕ್ಕೆ ಹೊಂಚು ಆರೋಪ: ಇಬ್ಬರ ಬಂಧನ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

ವಾರ್ತಾ ಭಾರತಿ : 29 Oct, 2020

ಶಿವಮೊಗ್ಗ (ಅ.29): ಮನೆಗಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಒಡವೆಗಳನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಪ್ರಕರಣ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಭದ್ರಾವತಿ ಗ್ರಾಮಾಂತರ ವೃತ್ತ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಹಾಗೂ ಆರೋಪಿಗಳ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ನಿರ್ದೇಶನದಂತೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ತನಿಖೆ ಕೈಗೊಂಡ ವಿಶೇಷ ತನಿಖಾ ತಂಡ, ಭದ್ರಾವತಿಯ ಹೊಳೆಹೊನ್ನುರು ರಸ್ತೆಯ ಜಯನಗರ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾಣದ ಬಳಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಈ ಸಂಬಂಧ ಇಬ್ಬರು ಅಂತರ್ ಜಿಲ್ಲಾ  ಆರೋಪಿಗಳ್ನು ಬಂಧಿಸಲಾಗಿದೆ ಎಂದರು.

ಚಿತ್ರದುರ್ಗ ಜಿಲ್ಲೆಯ ಗಂಜಿಗೆರೆ ಗ್ರಾಮದವಾರದ ಈರಪ್ಪ (61), ತಿಮ್ಮ (53) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ ಪಟ್ಟಣಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ ಎಂದರು.

2018ನೇ ಸಾಲಿನ ತೀರ್ಥಹಳ್ಳಿ ಠಾಣೆಯ 1 ಪ್ರಕರಣ, 2019ನೇ ಸಾಲಿನ ಶಿವಮೊಗ್ಗದ ತುಂಗಾನಗರ ಠಾಣೆಯ 1 ಪ್ರಕರಣ ಹಾಗೂ 2020ನೇ ಸಾಲಿನ ಭದ್ರಾವತಿ ಪೇಪರ್ ಟೌನ್ ಠಾಣೆಯ 1 ಪ್ರಕರಣ, ಭದ್ರಾವತಿ ಗ್ರಾಮಾಂತರ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬಂಧಿತರಿಂದ ರೂ.10,51,200 ಬೆಲೆಬಾಳುವ 219 ಗ್ರಾಂ ಬಂಗಾರದ ಒಡವೆ ಹಾಗೂ 25,000 ರೂ ಮೌಲ್ಯದ 425 ಗ್ರಾಂ ತೂಕದ ಬೆಳ್ಳಿ ಒಡವೆ ಹಾಗೂ 5000 ರೂ. ನಗದು ಸೇರಿ 10,81,200 ರೂ ಬೆಲೆಬಾಳುವ ಮಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ ಮತ್ತು ಭದ್ರಾವತಿ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ ಅವರ ಮಾರ್ಗದರ್ಶಶನದಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್, ಭದ್ರಾವತಿ ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ದೇವರಾಜ್, ಪೇಪರ್ ಟೌನ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಭಾರತಿ, ಎಎಸ್‌ಐ ದಿವಾಕರ್ ರಾವ್ ಹಾಗೂ ಗ್ರಾಮಾಂತರ ವೃತ್ತ ಠಾಣೆ ಸಿಬ್ಬಂದಿಗಳಾದ ಚನ್ನಕೇಶವ, ನಾಗರಾಜ್, ಆದರ್ಶ ಶೆಟ್ಟಿ, ಚಿನ್ನನಾಯ್ಕ, ಹನುಮಂತ ಅವಟಿ, ಉದಯ್‌ ಕುಮಾರ್, ಮೋಹನ್, ನಾಗೇಶ್, ಗಿರೀಶ್‌ನಾಯ್ಕ, ಎ.ಹೆಚ್.ಸಿ ರಾಜಣ್ಣ, ಪ್ರಭು ಪಾಲ್ಗೊಂಡಿದ್ದರು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ, ಭದ್ರಾವತಿ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ, ಭದ್ರಾವತಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ಇದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)