varthabharthi


ಕರ್ನಾಟಕ

ಯುದ್ಧಕ್ಕೆ ಮುನ್ನವೇ ಕಾಂಗ್ರೆಸ್- ಜೆಡಿಎಸ್ ಶಸ್ತ್ರತ್ಯಾಗ: ಆರ್.ಅಶೋಕ್ ಲೇವಡಿ

ವಾರ್ತಾ ಭಾರತಿ : 29 Oct, 2020

ತುಮಕೂರು,ಅ.29: ಹೈವೋಲ್ಟೇಜ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೋಲು ಒಪ್ಪಿಕೊಂಡು ಈಗಿನಿಂದಲೇ ವೇದಿಕೆ ಸೃಷ್ಟಿಸಿಕೊಂಡು ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶ್‍ಗೌಡ ಪರ ಪ್ರಚಾರದಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿರಾ ಮತ್ತು ಆರ್.ಆರ್.ನಗರ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಟ್ರಬಲ್ ಶೂಟರ್ ಎಂದು ಕರೆಯಿಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೋಲಿನ ರುಚಿ ಏನೆಂಬುದು ಈ ಉಪಚುನಾವಣೆ ಫಲಿತಾಂಶದ ಮೂಲಕ ಗೊತ್ತಾಗಲಿದೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಹೊಂದಾಣಿಕೆ ಇದ್ದಿದ್ದರೆ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಇಲ್ಲದ ಕುರ್ಚಿಗೆ ಟವಲ್ ಹಾಕುವುದರಲ್ಲಿ ಫೇಮಸ್ ಆಗಿರುವ ಡಿ.ಕೆ.ಶಿವಕುಮಾರ್ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇನ್ನು 15 ವರ್ಷ ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂದರು.

ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಜನರು ಭಯಭೀತರಾದಾಗ ಕಾಂಗ್ರೆಸ್ ಪಕ್ಷ ಎಲ್ಲಿಗೆ ಹೋಗಿತ್ತು. ದಲಿತ ಶಾಸಕನ ಮನೆ ಸುಟ್ಟಾಗ ಕಾಂಗ್ರೆಸ್ ಎಲ್ಲಿ ಪ್ರತಿಭಟಿಸಿತ್ತು. ಈಗ ಚುನಾವಣೆಗಾಗಿ ಪ್ರತಿಭಟನೆ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರವಧಿಯಲ್ಲಿ ಏಕೆ ಮದಲೂರಿಗೆ ನೀರು ಹರಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜಯಚಂದ್ರ ಅವರಿಗೆ ಏಕೆ ಟಿಕೆಟ್ ಕೊಟ್ರಿ ಎಂದು ಪ್ರಶ್ನಿಸಿದ್ದಾರೆ. ಡಿ.ಕೆ.ಶಿವಕುಮಾರ್ ಗೂ ಜಯಚಂದ್ರ ಅವರು ಚುನಾವಣೆಗೆ ಸ್ಪರ್ಧಿಸುವುದು ಬೇಕಿರಲಿಲ್ಲ. ಡಿ.ಕೆ.ಶಿವಕುಮಾರ್ ಟೆಸ್ಟ್ ಡ್ರೈವ್ ಕಾರು ಇದ್ದ ಹಾಗೆ. ಕಾಂಗ್ರೆಸ್‍ನವರು ಬಳಸಿ ಬಿಸಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಗೆ ಧಮ್ ಇರುವುದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವುದು. 372ನೇ ವಿಧಿಯನ್ನು ರದ್ದು ಮಾಡಿರುವುದು, ತ್ರಿವಳಿ ತಲಾಖ್ ರದ್ದುಗೊಳಿಸಿರುವುದು ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಹಾಗೆ ಜೆಡಿಎಸ್ ಈಗ ಪ್ರಚಾರ ಶುರು ಮಾಡಿದೆ. ಜೆಡಿಎಸ್ ಮುಖಂಡರು ಖಾಲಿಯಾಗಿದ್ದಾರೆ. ಇತಿಹಾಸಲ್ಲಿ ಮೊದಲ ಬಾರಿಗೆ ಶಿರಾದಲ್ಲಿ ಕೇಸರಿ ಬಾವುಟ ಹಾರಿಸಲಿದ್ದೇವೆ. ಬಿಜೆಪಿ ಗೆದ್ದರೆ ಆಡಳಿತ ಪಕ್ಷದ ಶಾಸಕರಿಂದ ಹಲವು ಜ್ವಲಂತ ಸಮಸ್ಯೆಗಳು ಬಗೆಹರಿಯಲಿವೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಕೊರೋನ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತಮ್ಮ ಮನೆ ಮುಂದೆ ನೋ ಎಂಟ್ರಿ ಬೋರ್ಡ್ ಹಾಕಿಕೊಂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಏಳೆಂಟು ಸಭೆ ನಡೆಸಿ, ದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಗಳನ್ನು ಮಾಡಿಸಿದರು. ಆಗ ಮನೆಯಿಂದ ಹೊರಗೆ ಬರದ ಕಾಂಗ್ರೆಸ್ ನಾಯಕರು ಈಗ ಚುನಾವಣೆ ಸಮಯದಲ್ಲಿ ಬೀದಿಗೆ ಬಂದಿದ್ದಾರೆ. ರಮೇಶ್‍ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಖರೀದಿಸಿದ್ದ ವೆಂಟಿಲೇಟರ್ 21 ಲಕ್ಷಕ್ಕೆ ಖರೀಸಿದ್ದು ಚಿನ್ನದ್ದೇ ಎಂದು ಅವರು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರಿಂದ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿದ್ದಾರೆ. ದೇಶ, ರಾಜ್ಯ ಸಂಕಷ್ಟದಲ್ಲಿದೆ, ಪ್ರವಾಹ ಎದುರಾಗಿದೆ. ಹೀಗಾಗಿ ಸಾಲ ಮಾಡಿದ್ದೇವೆಯೇ ಹೊರತು ಏನು ಇಲ್ಲದಾಗ ಲಕ್ಷಾಂತರ ಕೋಟಿ ಸಾಲ ಮಾಡಿದ್ದು ಏಕೆ, ಆ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದಲ್ಲಿರುವುದು ರಾಜಾಹುಲಿ ಯಡಿಯೂರಪ್ಪನವರ ಸರಕಾರ. ಯಾವ ನೌಕರರ ಸಂಬಳವನ್ನು ಕಡಿತಗೊಳಿಸಿಲ್ಲ. ಪ್ರತಿದಿನ ಕೋವಿಡ್ ಟೆಸ್ಟ್‍ಗಾಗಿ 5 ಕೋಟಿ ಖರ್ಚು ಮಾಡುತ್ತಿದ್ದು, ರಾಜ್ಯ ಸರಕಾರ ದಿವಾಳಿಯಾಗಿಲ್ಲ. ಯಡಿಯೂರಪ್ಪ ಅವರದ್ದು ಕೊಟ್ಟ ಮಾತಿಗೆ ತಪ್ಪದ ಸರಕಾರ. ಹಾಗಾಗಿ ಶಿರಾ ಮತದಾರರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ವಿಫಲವಾಗಿವೆ. ಬಿಜೆಪಿ ದೇಶದಲ್ಲಿ ನಂಬರ್ ಒನ್ ಪಕ್ಷವಾಗಿದ್ದು, ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆಯೂ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಮದಲೂರಿನಲ್ಲಿ ಮತಯಾಚಿಸಲಿದ್ದಾರೆ. ನಂತರ ಶಿರಾ ನಗರದಲ್ಲಿ ಬಹಿರಂಗ ಪ್ರಚಾರ ಮಾಡಲಿದ್ದಾರೆ. ಅ.31 ರಂದು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸುವರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡ, ಅಬಕಾರಿ ಸಚಿವ ನಾಗೇಶ್, ಶಾಸಕ ಜ್ಯೋತಿಗಣೇಶ್, ಮುಖಂಡರಾದ ಎಸ್.ಆರ್.ಗೌಡ, ಲಕ್ಷ್ಮೀಶ್ ಮತ್ತಿತರರು ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)