varthabharthi


ನಿಮ್ಮ ಅಂಕಣ

ಹಲ್ಲಾ ಬೋಲ್-ಸಫ್ದರ್ ಹಾಶ್ಮಿ ಸಾವು ಮತ್ತು ಬದುಕಿನ ಸುತ್ತ...

ವಾರ್ತಾ ಭಾರತಿ : 30 Oct, 2020
ವಿಮಲಾ ಕೆ. ಎಸ್.

ಸಫ್ದರ್ ಹಾಶ್ಮಿ ಎನ್ನುವ ಹೆಸರೇ ಒಂದು ಚೈತನ್ಯ ನೀಡುವ ಅನುಭವ. ‘‘ರಂಗಭೂಮಿ ತಾನೇ ಏನೂ ಸಾಧಿಸಲಾರದು, ಅದು ಪ್ರಜಾಪ್ರಭುತ್ವವಾದಿ ಆಂದೋಲನದ ಅವಿಭಾಜ್ಯ ಅಂಗವಾಗಿರಬೇಕು. ಹೊಸ ಜಾಗತಿಕ ದೃಷ್ಟಿಕೋನ ಬೆಳೆಸಲು..ಸಮಕಾಲೀನ ಸಮಸ್ಯೆಗಳ ಕುರಿತು ವಾಗ್ವಾದ ಎಬ್ಬಿಸಲು...ಜನರನ್ನು ಕಾರ್ಯೋನುಖರಾಗುವಂತೆ ಪ್ರಚೋದಿಸಲು ರಂಗಭೂಮಿಯೊಂದೇ ಪ್ರಬಲ ಮಾಧ್ಯಮ, ನಾನು ಬದುಕಬಹುದಾದ ಮಾರ್ಗ ಇದೊಂದೇ’’ ಎಂದು ನಂಬಿದ ಸಫ್ದರ್ ಹಾಶ್ಮಿ ಸರಕಾರಿ ನೌಕರಿ ತೊರೆದು ಪೂರ್ಣ ಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡವರು. ಕಲೆಗಾಗಿ ಕಲೆ ಅಲ್ಲ ಬದುಕಿಗಾಗಿ ಕಲೆ ಎನ್ನುವ ಚಿಂತನೆಯೊಂದಿಗೆ ದುಡಿದು ಬದುಕುವ ಶ್ರಮಜೀವಿಗಳ ಧ್ವನಿಯಾಗಿ ನಿಂತವರು ಹಾಗೆಯೇ ಮಡಿದವರು.

ಬಹುತೇಕ ಸಫ್ದರ್ ಹಾಶ್ಮಿಯವರು ಬೀದಿ ನಾಟಕದ ಮೂಲಕವೇ ತಮ್ಮ ಸಾಂಸ್ಕೃತಿಕ ಪ್ರತಿರೋಧವನ್ನು ಸಶಕ್ತವಾಗಿ ಒಡ್ಡಿದವರು. ಅದರಿಂದ ತಲ್ಲಣಿಸಿದ ಆಳುವವರ್ಗ ಪ್ರಬಲ ರಂಗಭೂಮಿಯ ಧ್ವನಿ ಅಡಗಿಸಲು ಬಳಸಿದ್ದು ಹಿಂಸಾ ಮಾರ್ಗವನ್ನು. ಪ್ರಭುತ್ವದ ವಿರುದ್ಧ ನೀನು ದನಿ ಎತ್ತುವೆಯಾದರೆ ಅದು ಯಾವುದೇ ಮಾದರಿಯ ಪ್ರತಿಭಟನೆಯಾಗಲಿ ನಿನ್ನ ಸೊಲ್ಲಡಗಿಸಿಬಿಡುತ್ತೇವೆ ಎನ್ನುವುದಕ್ಕೆ ಸಾಕ್ಷಿಯಾಗಿ ಜನವರಿ 1, 1989ರಂದು ಕ್ರೌರ್ಯದ ಅಟ್ಟಹಾಸ ದಿಲ್ಲಿಯ ಹೊರವಲಯದ ಝಂಡಾಪುರದಲ್ಲಿ ಸಫ್ದರ್ ಹಾಶ್ಮಿ ಮತ್ತವರ ಸಂಗಡಿಗರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಸಾವಿನ ಮೂಲಕ ಮೆರೆಯಿತು. ಸಾವು ಬದುಕಿನ ಮಧ್ಯೆ ಹೋರಾಡಿದ ಸಫ್ದರ್ ಜನವರಿ 2, 1989ರಂದು ಭೌತಿಕವಾಗಿ ನಮ್ಮನ್ನಗಲಿದರು. ಆದರೆ ರಂಗಭೂಮಿಯ, ಸಾಂಸ್ಕೃತಿಕ ಪ್ರತಿರೋಧದ ಗಟ್ಟಿ ದನಿಯಾಗಿ ಶಾಶ್ವತವಾಗಿ ನಿಂತುಬಿಟ್ಟರು.

ಬೀದಿ ನಾಟಕ ಎನ್ನುವುದೊಂದು ಸಮರಶೀಲ ರಾಜಕೀಯದ ‘ಪ್ರತಿಭಟನಾ ರಂಗಭೂಮಿ’. ರಾಜಕೀಯ ಅಥವಾ ಪ್ರತಿಭಟನೆ ಎಂದ ಕೂಡಲೇ ಮೂಗು ಮುರಿಯ ಬೇಕಾಗಿಲ್ಲ. ಪ್ರಜಾಪ್ರಭುತ್ವ ಉಳಿಯುವುದು ಮತ್ತು ಬೆಳೆಯುವುದು ಪ್ರಜೆಗಳ ಪರವಾಗಿರುವ ರಾಜಕೀಯ ಪ್ರತಿಭಟನೆಗಳಿಂದಲೇ. ಅವು ಸೃಷ್ಟಿಸಬಹುದಾದ ನೇರ ಪ್ರಭಾವಗಳ ಫಲಶ್ರುತಿಯ ಕುರಿತು ಆಳುವ ವರ್ಗಗಳಿಗಿದ್ದ ಭಯವೇ ಸಫ್ದರ್ ನಂತಹ ಜೀವ ಚೈತನ್ಯವನ್ನು ಬಲಿತೆಗೆದುಕೊಂಡಿತು. ತನ್ನ ಪಾ ್ರಣದ ಹಂಗು ತೊರೆದು ಸಫ್ದರ್ ಗೂಂಡಾಗಳ ಸಶಸ್ತ್ರ ಹಲ್ಲೆಯಿಂದ ತನ್ನ ಸಹ ಕಲಾವಿದರನ್ನು ರಕ್ಷಿಸುತ್ತಲೇ ಹಲ್ಲೆಗೊಳಗಾಗಿ ಪ್ರಾಣತೆತ್ತವರು.

ಸಫ್ದರ್ ಕಟ್ಟಿದ ‘ಜನ ನಾಟ್ಯ ಮಂಚ್’ ಈಗಲೂ ತನ್ನ ಜನಪರ ಬದ್ಧತೆಯ ಬೀದಿ ರಂಗ ಪ್ರಯೋಗಗಳನ್ನು ಎದೆಗುಂದದೆ ಮುಂದುವರಿಸಿಕೊಂಡು ಹೋಗುತ್ತಿದೆ. ಸಫ್ದರ್‌ನ ಒಡನಾಡಿಯಾಗಿ, ಬಾಳಸಂಗಾತಿಯಾಗಿ ಜೊತೆ ಜೊತೆಗೆ ಜನಮ್‌ನ್ನು ಕಟ್ಟಲು ಶ್ರಮಿಸಿದ ಮುಲೊಯ್ ಶ್ರೀ ಹಾಶ್ಮಿ ಇಂದಿಗೂ ಅದರ ಜೀವನಾಡಿಯಾಗಿ, ಹೊಸ ತಲೆಮಾರಿಗೆ ಅನುಭವದ ಮೂಟೆಯಾಗಿ, ನಟಿಯೂ ಆಗಿ ಜನಮ್ ಮುಂದುವರಿಯಲು ತಮ್ಮ ಅವಿರತ ಕಾಣಿಕೆ ನೀಡುತ್ತಿದ್ದಾರೆ. ಜನಮ್‌ನ ನಟರಾಗಿ ಸಫ್ದರ್‌ನ ನಂತರ ಅದರ ಮುಂಚೂಣಿ ನೇತೃತ್ವ ವಹಿಸಿದ ಸುಧನ್ವ ದೇಶಪಾಂಡೆ ಮತ್ತು ಹಲವಾರು ಯುವ ನಟರು, ಕಾರ್ಯಕರ್ತರು ಅದರ ಜೀವನಾಡಿಗಳು.

ಸಫ್ದರ್ ಮತ್ತು ಜನಮ್‌ನ ಪಯಣದ ಅನುಭವ ಕಟ್ಟಿಕೊಡುವ ‘ಹಲ್ಲಾ ಬೋಲ್’ ಹೆಸರಿನ ಪುಸ್ತಕವನ್ನು ಸುಧನ್ವ ದೇಶಪಾಂಡೆಯವರು ಬರೆದು ಮರೆಯಲಾರದ, ಮರೆಯಬಾರದ ನೆನಪುಗಳಿಗೆ ಅಕ್ಷರದ ಒತ್ತು ನೀಡಿದ್ದಾರೆ. ಈಗಾಗಲೇ ಮರಾಠಿ, ಹಿಂದಿ, ತಮಿಳು ಭಾಷೆಗಳಿಗೆ ಭಾಷಾಂತರಗೊಂಡಿರುವ ಕೃತಿಯಿದು. ಒಬ್ಬ ಉತ್ತಮ ನಟ, ಸಮರ್ಥ ನಿರ್ದೇಶಕ, ಪ್ರಗತಿಪರ ಪ್ರಕಟನೆಗಳಿಗೆ ಹೆಸರಾಗಿರುವ ‘ಲೆಫ್ಟ್‌ವರ್ಡ್ ಬುಕ್ಸ್’ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸುಧನ್ವರ ಬರಹದಲ್ಲಿ ಇದು ಕೇವಲ ಸಫ್ದರ್ ಅವರ ಜೀವನ ವೃತ್ತಾಂತ ಮಾತ್ರ ಆಗಿರದೆ, ಆತ ಪ್ರತಿನಿಧಿಸಿದ ಸಾಂಸ್ಕೃತಿಕ ಪ್ರತಿರೋಧದ ಕಥನವೂ ಆಗಿದೆ. ಹಾಗೆಯೇ ಆತನೇ ಕಟ್ಟಿ ಬೆಳೆಸಿದ ‘ಜನ ನಾಟ್ಯ ಮಂಚ್’ ಬಗ್ಗೆ ಹೇಳುತ್ತಲೇ ಅದರ ಸುತ್ತ ಸುತ್ತಿಕೊಂಡಿರುವ ಸಮಾಜ ಮತ್ತು ಸಂಸ್ಕೃತಿಯ ಸಂಬಂಧಗಳು ಮತ್ತು ಅವು ಎದುರಿಸುವ ಸವಾಲುಗಳ ಸಮೀಕ್ಷೆಯೂ ಆಗಿದೆ.

ಈ ಕೃತಿ ಈಗ ಕನ್ನಡದಲ್ಲಿ ಕ್ರಿಯಾ ಮಾಧ್ಯಮ ಹೊರತಂದಿದೆ. ಹೊಸದಿಲ್ಲಿಯ ಜನ ನಾಟ್ಯ ಮಂಚ್ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಬೀದಿ ಮತ್ತು ಪ್ರೊಸೀನಿಯಮ್ ರಂಗಭೂಮಿಗೆ ಹಲವು ಹೊಸತನ್ನು ಕೊಟ್ಟ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯ ಎಂ.ಜಿ.ವೆಂಕಟೇಶ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದರ ಆನ್‌ಲೈನ್ ಲೋಕಾರ್ಪಣೆ ಶುಕ್ರವಾರ ಅಕ್ಟೋಬರ್ 30-2020ರಂದು ಸಂಜೆ 5ಕ್ಕೆ ನಡೆಯಲಿದೆ. ಖ್ಯಾತ ರಂಗಭೂಮಿ, ಸಿನೆಮಾ ನಟ, ನಿರ್ದೇಶಕರೂ ಆಗಿರುವ ನಾಸಿರುದ್ದೀನ್ ಶಾ ಲೋಕಾರ್ಪಣೆ ಮಾಡುವ ಈ ಕಾರ್ಯಕ್ರಮವು ‘ಸಮುದಾಯ ಕರ್ನಾಟಕ’ದ ಸಹಯೋಗದಲ್ಲಿ ನಡೆಯಲಿದೆ.

ಕೃತಿಯ ಮೂಲ ಲೇಖಕ ಸುಧನ್ವಾ ದೇಶಪಾಂಡೆ, ಕನ್ನಡದ ಸಿನೆಮಾ ಮತ್ತು ರಂಗಭೂಮಿ ಕಲಾವಿದ ಅಚ್ಯುತ್ ಕುಮಾರ್, ಕನ್ನಡ ಅನುವಾದಕ ಎಂ.ಜಿ.ವೆಂಕಟೇಶ್, ಜನ್ ನಾಟ್ಯ ಮಂಚ್‌ನ ಮುಖ್ಯಸ್ಥರಾದ ಮುಲೊಯ್ ಶ್ರೀ ಹಾಶ್ಮಿ ಪಾಲ್ಗೊಳ್ಳುತ್ತಾರೆ. ಸಮುದಾಯ ಕರ್ನಾಟಕದ ಗೌರವಾಧ್ಯಕ್ಷರು, ಕೃತಿಗೆ ಮುನ್ನುಡಿಯನ್ನು ಬರೆದ ಬೋಳುವಾರು ಮಹಮ್ಮದ್ ಕುಂಞಿ ಸಮಾರೋಪ ಮಾತುಗಳನ್ನಾಡಲಿದ್ದಾರೆ.

ನಮ್ಮ ಸುತ್ತಲಿನ ಸ್ಥಿತಿ ಅಂದಿಗಿಂತ ಈಗ ವಿಷಮವಾಗಿರುವ ಹೊತ್ತಿನಲ್ಲಿ ಕನ್ನಡದ ಮನಸ್ಸುಗಳು ಈ ಪುಸ್ತಕವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಶ್ರಮಜೀವಿಗಳ ಬದುಕಿಗೆ ಬಲ ನೀಡಲು ತಮ್ಮ ಪ್ರಾಣತೆತ್ತ ಸಫ್ದರ್‌ನನ್ನು ಅಮರವಾಗಿಸಬೇಕಿದೆ.

ನಡುಬೀದಿಯಲ್ಲಿ ಮಾತನಾಡುತ್ತ ಬೀದಿಪ್ರಜ್ಞೆಗೆ ಜನರನ್ನು ಒಡ್ಡುತ್ತ ಮುಂದೆ ಸಾಗಲೇಬೇಕು. ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಬಹುತ್ವ ಭಾರತದ ಸೆಲೆ ಬತ್ತದಂತೆ ಕಾಪಾಡಿಕೊಳ್ಳಲು ಒಂದಾಗಿ ನಡೆಯೋಣ.

ಪ್ರತಿಗಾಗಿ ಸಂಪರ್ಕಿಸಲು:
9036082005, 080-23494488

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)