varthabharthi


ಕರ್ನಾಟಕ

ಶಿರಾದಲ್ಲಿ ಜೆಡಿಎಸ್-ಕಾಂಗ್ರೆಸ್‍ನ ಭದ್ರಕೋಟೆ ನುಚ್ಚು ನೂರಾಗಲಿದೆ: ಸಿಎಂ ಯಡಿಯೂರಪ್ಪ

ವಾರ್ತಾ ಭಾರತಿ : 30 Oct, 2020

ತುಮಕೂರು,ಅ.30: ಕಾಂಗ್ರೆಸ್- ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿ ಶಿರಾದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶಿರಾ ತಾಲೂಕಿನ ಮದಲೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮದಲೂರು ಕೆರೆಗೆ ಕೆನಾಲ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು ನಾನು. ಮುಂದಿನ ಆರು ತಿಂಗಳಲ್ಲಿ ಕೆರೆಗೆ ನೀರು ತುಂಬಿಸಿ, ಅದರ ಉದ್ಘಾಟನೆಯನ್ನು ನಾನೇ ಮಾಡಲಿದ್ದೇನೆ. ನುಡಿದಂತೆ ನಡೆಯುತ್ತೇನೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು.

ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇ ಆದಲ್ಲಿ, ಹೇಮಾವತಿಯಿಂದ ಮದಲೂರು ಕೆರೆಗೆ ನೀರು, ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ, ಕುಂಚಿಟಿಗ ಸಮಾಜವನ್ನು 2ಎಗೆ ಸೇರಿಸುವ ಕೆಲಸವನ್ನು ಮಾಡುತ್ತೇನೆ. ಈಗಾಗಲೇ ಎಲ್ಲಾ ಪ್ರಯತ್ನಗಳು ನಡೆದಿವೆ. ಭದ್ರ ಮೇಲ್ದಂಡೆ ಯೋಜನೆಯಿಂದ ಶಿರಾ ತಾಲೂಕಿನ 60 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ಮಾಡಲಾಗುವುದು. ರಾಜ್ಯದಲ್ಲಿರುವ ಬಡವರಿಗೆ ಮನೆ, ನಿವೇಶನ ನೀಡಬೇಕೆಂಬುದು ಸರಕಾರದ ಆಶಯವಾಗಿದೆ. ಚುನಾವಣೆ ಮುಗಿದ ನಂತರ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಸುರೇಶಗೌಡರ ಬಳಿ ನಿಮ್ಮ ಹೆಸರು ನೊಂದಾಯಿಸಿ, ಎಲ್ಲಾ ಆರ್ಹರಿಗೆ ನಿವೇಶನದ ಜೊತೆಗೆ, 5 ಲಕ್ಷ ರೂ ಅನುದಾನ ನೀಡಿ, ಪಕ್ಕ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮ ಸರಕಾರದ್ದು. ಅದೇ ರೀತಿ ಮದ್ದನಕ್ಕಹಳ್ಳಿಯಲ್ಲಿ ಭೋವಿ ಸಮುದಾಯದ ಕಲ್ಲುಗಣಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದು, ತಕ್ಷಣವೇ ಕ್ರಮ ವಹಿಸುವುದಾಗಿ ಯಡಿಯೂರಪ್ಪ ತಿಳಿಸಿದರು. 

ಮುಂದಿನ ಎರಡೂವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ. ಹಾಗೆಯೇ ಶಿರಾ ತಾಲೂಕನ್ನು ಶಿಕಾರಿಪುರದಂತೆ ಮಾದರಿ ತಾಲೂಕು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಬಿಎಸ್.ವೈ, ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವಂತೆ ಮಾಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಮತದಾರರು ತೆಗೆದುಕೊಳ್ಳಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವ ಹಾಗೂ ವಿಶ್ವ ಗುರುವಾಗುವ ನಿಟ್ಟಿನಲ್ಲಿ ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಲು ಪ್ರಧಾನಿ ಮೋದಿ ಅವರು ಚಿಂತನೆ ನಡೆಸಿದ್ದಾರೆ. ರೈತರ ಬೆಳೆಯನ್ನು ರೈತನೇ ಸ್ವಾತಂತ್ರ್ಯವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವ ಅವಕಾಶವನ್ನು ನೀಡಲಾಗಿದೆ. ಯಡಿಯೂರಪ್ಪ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ರಾಜೇಶ್ ಗೌಡ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಚಿವ ಶ್ರೀರಾಮುಲು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶಿರಾ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಗೆಲುವು ಸಾಧಿಸುವುದು ಬಿಜೆಪಿ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ವಿಜಯೇಂದ್ರ ಅವರು ಹೋಗುತ್ತಿದ್ದಾರೆ. ಹಿಂದೂ ಸಾಮ್ರಾಟ ಶಿವಾಜಿ ಅವರಂತೆ ವಿಜಯೇಂದ್ರ ಅವರು ಉಪಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದು ಕೊಡುತ್ತಿದ್ದಾರೆ. ಶಿರಾ ಉಪಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಸ್ಥಾನ ಮ್ಯೂಸಿಕಲ್ ಚೇರ್ ಆಟ ಅಲ್ಲ ಎಂದು ವ್ಯಂಗ್ಯವಾಡಿದರು. 

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕೆ.ಆರ್.ಪೇಟೆ ಮಾದರಿ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತವೆ. ಬಹಿರಂಗವಾಗಿ ಸವಾಲು ಹಾಕುತ್ತೇನೆ. ಕೆ.ಆರ್.ಪೇಟೆಗೆ ಬರಲಿ ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ತೋರಿಸುತ್ತೇನೆ. ಶಿರಾ ಕ್ಷೇತ್ರದಲ್ಲಿರುವ ಬಡವರು, ಹಿಂದುಳಿದವರ ಕಣ್ಣೀರು ಒರೆಸುವ ಕೆಲಸವನ್ನು ಬಿಜೆಪಿ ಮಾಡಲಿದೆ. ಬಿಜೆಪಿಯ ಎಲ್ಲ ಮುಖಂಡರು ಒಗ್ಗಟ್ಟಾಗಿ ಕಾಂಗ್ರೆಸ್ ಸವಾಲು ಸ್ವೀಕರಿಸಿದ್ದೇವೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‍ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ನಾರಾಯಣಗೌಡ, ಸಂಸದರಾದ ನಾರಾಯಣಸ್ವಾಮಿ, ಪ್ರತಾಪ್ ಸಿಂಹ, ಮುನಿಸ್ವಾಮಿ, ಪಿ.ಸಿ.ಮೋಹನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕರಾದ ಜ್ಯೋತಿಗಣೇಶ್, ಬಿ.ಸಿ.ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ತಿಪ್ಪಾರೆಡ್ಡಿ, ಬಸವರಾಜ ಬಂಡಿಮಠ, ಎಂಟಿಬಿ ನಾಗರಾಜ್, ಚಂದ್ರಪ್ಪ, ಸತೀಶ್ ರೆಡ್ಡಿ, ರಾಜುಗೌಡ, ಪ್ರೀತಂಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)