varthabharthi


ಕರ್ನಾಟಕ

ಉಪ ಚುನಾವಣೆ

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ದಲಿತ ಸಂಘಟನೆಗಳ ಒಕ್ಕೂಟ ಮನವಿ

ವಾರ್ತಾ ಭಾರತಿ : 30 Oct, 2020

ಬೆಂಗಳೂರು, ಅ. 30: `ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಜಾತ್ಯತೀತ ವ್ಯವಸ್ಥೆಯನ್ನು ಉಳಿಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಂವಿಧಾನ ಮತ್ತು ಮೀಸಲಾತಿ ವಿರುದ್ಧ ಇರುವವರಿಗೆ ತಕ್ಕ ಪಾಠ ಕಲಿಸಬೇಕು' ಎಂದು ದಲಿತ ಸಂಘಟನೆಗಳ ಒಕ್ಕೂಟದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು ಹಾಗೂ ಲಕ್ಷ್ಮಿ ನಾರಾಯಣ ನಾಗವಾರ ಮನವಿ ಮಾಡಿದ್ದಾರೆ.

ಕೋಟಿ ಕೋಟಿ ಉದ್ಯೋಗ ಸೃಷ್ಟಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಏಳು ವರ್ಷ ಕಳೆದರೂ ಒಂದು ಕೋಟಿ ಉದ್ಯೋಗ ಸೃಷ್ಟಿಸದೆ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಅಲ್ಲದೆ, ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಸಾರ್ವಜನಿಕ ಸಂಸ್ಥೆಗಳ ಖಾಸಗಿಕರಣ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ವಂಚಿಸುತ್ತಿದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಮತದಾರರಿಗೆ ಅವಮಾನ ಮಾಡಿ ರಾಜೀನಾಮೆ ನೀಡುವ ಮೂಲಕ ಉಪಚುನಾವಣೆಗೆ ಕಾರಣರಾಗಿದ್ದಾರೆಂದು ಅವರುಗಳು ಆರೋಪಿಸಿದ್ದಾರೆ.

ಕೇಂದ್ರ, ರಾಜ್ಯಕ್ಕೆ ಜಿಎಸ್ಟಿ ಬಾಕಿ ಮೊತ್ತ ನೀಡದೆ ವಂಚಿಸುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹಿತ 25 ಮಂದಿ ಬಿಜೆಪಿ ಸಂಸದರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆಡಳಿತ ನಿರ್ವಹಣೆಯಲ್ಲಿ ಎರಡೂ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಪ್ರಗತಿಪರ ಚಿಂತಕರು, ಸಾಮಾಜಿಕ ನ್ಯಾಯದ ಪರ ಇರುವವರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು, ಮೇಲ್ವರ್ಗದ ವಿಚಾರವಂತರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಬೇಕೆಂದು ಮುಖಂಡರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)