varthabharthi


ಕರ್ನಾಟಕ

ಸದಾಶಿವ ಆಯೋಗದ ವರದಿ ಜಾರಿ ವಿಚಾರ

ನಳೀನ್ ಕುಮಾರ್ ತಮ್ಮ ಹೇಳಿಕೆ ವಾಪಾಸ್ ಪಡೆಯದಿದ್ದರೆ ಉಗ್ರ ಹೋರಾಟ: ಸರ್ದಾರ್ ಸೇವಾಲಾಲ್ ಸ್ವಾಮೀಜಿ

ವಾರ್ತಾ ಭಾರತಿ : 30 Oct, 2020

ದಾವಣಗೆರೆ: ಸದಾಶಿವ ಆಯೋಗದ ವರದಿ ಜಾರಿಗೆ ಬದ್ದವಾಗಿರುವುದಾಗಿ ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮ ಹೇಳಿಕೆ ವಾಪಾಸ್ ಪಡೆಯದಿದ್ದರೆ ರಾಜ್ಯದಲ್ಲೆಡೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ನಮ್ಮ ಸರ್ಕಾರ ಬದ್ಧ ಎಂಬುದಾಗಿ ಹೇಳಿದ್ದಾರೆ. ಇದು ಸರಿಯಲ್ಲ. ಕರಾವಳಿ ಮೂಲದ ನಳೀನ್ ಕುಮಾರ್ ಕಟೀಲ್ ಅವರಿಗೆ ಶೋಷಿತರ ಸಮಸ್ಯೆಗಳ ಅರಿವಿಲ್ಲ. ಅದ್ದರಿಂದ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.  

ಪ.ಜಾತಿಯಲ್ಲಿರುವ 101 ಸಮುದಾಯಗಳ ಜನರು ಒಂದೇ ಮನೆಯವರಂತೆ ಇದ್ದೇವೆ. ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಧ್ಯೆಯೇ ವಿಷಬೀಜ ಬಿತ್ತುವುದು ಸರಿಯಲ್ಲ. ಬಂಜಾರ ಸಮದಾಯದಲ್ಲಿ ಅನಕ್ಷರತೆ, ನಿರುದ್ಯೋಗ, ಬಡತನ, ಮಕ್ಕಳ ಮಾರಾಟ, ಗುಳೇ ಹೋಗುವಂತಹ ಪರಿಸ್ಥಿತಿ ಇದೆ. ಯಾರೇ ಆದರೂ ಜನರ ಸ್ಥಿತಿಗತಿ ಅರಿತು ಮಾತನಾಡಬೇಕು. ಬೇಜವಾಬ್ದಾರಿ ಹೇಳಿಕೆ ನೀಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

ನ್ಯಾಯಮೂರ್ತಿ ಸದಾಶಿವ ಆಯೋಗವು ಅವೈಜ್ಞಾನಿಕ ವರದಿ ತಯಾರಿಸಿದೆ. ಅಂತಹ ವರದಿ ಜಾರಿಯಾದರೆ ನಮ್ಮ ಸೌಲಭ್ಯಕ್ಕೆ ಕತ್ತರಿ ಬೀಳುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಡಿ.ನಾಯ್ಕ, ಬಸವರಾಜ ನಾಯ್ಕ, ಆರ್.ವೆಂಕಟೇಶ ನಾಯ್ಕ, ಎನ್.ಅರುಣ್  ಇದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)