varthabharthi


ಕರ್ನಾಟಕ

ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ

ಉಪ ಚುನಾವಣೆ: 'ಶಿರಾ' ಗೆಲುವಿಗಾಗಿ ಮೂರೂ ಪಕ್ಷಗಳಿಂದ ಜಿದ್ದಾಜಿದ್ದಿನ ಹೋರಾಟ

ವಾರ್ತಾ ಭಾರತಿ : 30 Oct, 2020
ರಂಗರಾಜು ಎನ್.ಡಿ. ತುಮಕೂರು

ಕೋಟೆ ನಾಡು, ದರ್ಗಾ ಬೀಡು ಶಿರಾ ವಿಧಾನಸಭಾ ಉಪ ಚುನಾವಣೆಗೆ ನವೆಂಬರ್3 ರಂದು ಮತದಾನ ನಡೆಯಲಿದ್ದು, ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗೆಲುವಿಗಾಗಿ ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿವೆ.

ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಜೆಡಿಎಸ್‍ನ ಬಿ.ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮೂರು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಜೆಡಿಎಸ್ ನಿಂದ ಸ್ಪರ್ಧಿಸಿರುವ ಬಿ.ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅನುಕಂಪದ ಆಧಾರದಲ್ಲಿ ಮತಯಾಚಿಸಿದರೆ, ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ರಾಜೇಶ್‍ಗೌಡ ಹಿಂದುತ್ವ ಮತ್ತು ನೀರಿನ ರಾಜಕಾರಣವನ್ನು ಮುಂದಿಟ್ಟು ಮತದಾರರನ್ನು ಒಲಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ತಾನು ಇದುವರೆಗೂ ಮಾಡಿರುವ ಅಭಿವೃದ್ದಿ ಮತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ವೈಫಲ್ಯವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಕಾಂಗ್ರೆಸ್‍ಗೆ ಅವಕಾಶವನ್ನು ಕೇಳುತ್ತಿದ್ದಾರೆ. ಇದರ ಮದ್ಯೆ ಕಳೆದ ಬಾರಿ 10 ಸಾವಿಕ್ಕೂ ಅಧಿಕ ಮತ ಪಡೆದಿದ್ದ ಸಿಪಿಐನ ಗಿರೀಶ್ ಸಹ ಕಣದಲ್ಲಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ 3 ಬಾರಿ ಮತ್ತು ಜೆಡಿಎಸ್ ನಾಲ್ಕು ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಇದುವರೆಗೂ ಖಾತೆ ತೆರೆದಿಲ್ಲ. ಆದರೆ ಈ ಬಾರಿ ಶಿರಾದಲ್ಲಿ ಗೆಲುವು ಸಾಧಿಸಲೇಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಘಟಾನುಘಟಿಗಳ ದಂಡೇ ಶಿರಾದಲ್ಲಿ ಕಳೆದ ಸೆಪ್ಟಂಬರ್ 2 ರಿಂದ ಬೀಡು ಬಿಟ್ಟಿದ್ದು, ಅಭ್ಯರ್ಥಿ ಘೋಷಣೆಯಾಗುವುದಕ್ಕೆ ಮುಂಚಿನಿಂದಲೂ ಒಂದೊಂದು ಸಮುದಾಯದ ನಾಯಕರು, ಆ ಸಮುದಾಯದ ಜನರನ್ನು ಭೇಟಿಯಾಗಿ ಬಿಜೆಪಿ ಪರ ಮತಯಾಚನೆಯಲ್ಲಿ ತೊಡಗಿದ್ದು, ಕಾರ್ಯಕರ್ತರನ್ನು ಹುರಿದುಂಬಿಸಿ, ಮತದಾರರ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್‍ನ ಸತ್ಯನಾರಾಯಣ 74 ಸಾವಿರ ಮತ ಪಡೆದರೆ, ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ 63 ಸಾವಿರ, ಬಿಜೆಪಿಯ ಎಸ್.ಆರ್.ಗೌಡ 16 ಸಾವಿರ ಮತಗಳನ್ನು ಪಡೆದಿದ್ದರು. ಇದರ ಜೊತೆಗೆ, ಸಿಪಿಐನ ಗಿರೀಶ್ 10 ಸಾವಿರಕ್ಕೂ ಹೆಚ್ಚು ಹಾಗೂ ಪಕ್ಷೇತರ ಅಭ್ಯರ್ಥಿ ಸಿ.ಎಂ.ನಾಗರಾಜು 12 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.

ಆದರೆ ಈ ಬಾರಿ ಕ್ಷೇತ್ರದ ಚಿತ್ರಣ ಬದಲಾಗಿದ್ದು, ಬಿಜೆಪಿ ಈ ಹಿಂದಿಗಿಂತಲೂ ತನ್ನ ಶಕ್ತಿಯನ್ನು ವೃದ್ದಿಕೊಂಡಿದೆ. ಪಕ್ಷದ ಘಟಾನುಘಟಿ ಮುಖಂಡರೆಲ್ಲಾ ಕ್ಷೇತ್ರದಲ್ಲಿ ಬೀಡು ಬಿಟ್ಟು, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಚುನಾವಣೆಯಲ್ಲಿ ಬಳಸಿದ ತಂತ್ರವನ್ನೇ ಈ ಚುನಾವಣೆಯಲ್ಲಿ ಬಳಕೆ ಮಾಡುವ ಮೂಲಕ ಪ್ರತಿ ಮತದಾರರನ್ನು ತಲುಪುವ ಕೆಲಸ ಮಾಡಿದ್ದು, ಇದು ಶಿರಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಸೇರಿದಂತೆ ಹಲವು ಮುಖಂಡರು ಶಿರಾ ಮತ್ತು ಆರ್.ಆರ್.ನಗರದಲ್ಲಿ ದಿನ ಬಿಟ್ಟು ದಿನ ಪ್ರಚಾರ ನಡೆಸುತ್ತಿದ್ದು, ಬೈಕ್ ರ‍್ಯಾಲಿ, ರೋಡ್ ಶೋ ಪ್ರಚಾರ ಸಭೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಶಾಸಕ ಡಿ.ಸಿ.ಗೌರಿಶಂಕರ್ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ರೋಡ್ ಶೋ ಮತ್ತು ಬೈಕ್ ರ‍್ಯಾಲಿಗಳ ಮೂಲಕ ಕ್ಷೇತ್ರದ ಪ್ರತಿ ಹಳ್ಳಿ ತಲುಪಿ ಮತಯಾಚನೆ ಮಾಡುತ್ತಿದ್ದಾರೆ.

ಆದರೆ ಬಿಜೆಪಿಯ ಪ್ರತಿ ಮತದಾರರನ್ನು ತಲುಪಿದ ರೀತಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಂದ ಸಾಧ್ಯವಾಗಿಲ್ಲ. ಇದು ಮತದಾರರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಮೇಲೆ ಬಿಜೆಪಿಯ ಗೆಲುವು, ಸೋಲು ನಿರ್ಧಾರವಾಗಲಿದೆ. ಈ ಎಲ್ಲಾ ಅಂಶಗಳಿಗೆ ನವೆಂಬರ್ 03 ರ ಚುನಾವಣೆಯಲ್ಲಿ ಮತದಾರ ನೀಡುವ ನಿರ್ಣಯ, ನವೆಂಬರ್ 10ರ ಮತ ಎಣಿಕೆಯಲ್ಲಿ ಕೊನೆಗೊಳ್ಳಲಿದೆ.

ಅಂದಾಜು ಜಾತಿವಾರು ಮತದಾರರು
ಒಕ್ಕಲಿಗರು -49,000
ಹಳ್ಳಿಕಾರರು -8000
ಪರಿಶಿಷ್ಟ ಜಾತಿ ( ಅದಿ ಕರ್ನಾಟಕ) 31,000
ಪರಿಶಿಷ್ಟ ಜಾತಿ (ಅದಿ ದ್ರಾವಿಡ) 6500
ಪರಿಶಿಷ್ಟ ಜಾತಿ (ಭೋವಿ) 4,500
ಪರಿಶಿಷ್ಟ ಜಾತಿ (ಲಂಬಾಣಿ) 2000
ಗೊಲ್ಲರು- 26,000
ನಾಯಕರು (ಎಸ್ ಟಿ) 16,000,
ಮುಸ್ಲಿಂ- 22,000
ಕುರುಬರು-13,000
ಬಲಿಜ ಜನಾಂಗ- 7000 
ಲಿಂಗಾಯತರು- 4000.
ಆರ್ಯವೈಶ್ಯರು- 2,500
ಇತರೆಯವರು- 20,000

ಒಟ್ಟು ಮತದಾರರು, 2,15,104

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)