varthabharthi


ರಾಷ್ಟ್ರೀಯ

ಮಕ್ಕಳ ಸಹಾಯವಾಣಿಗೆ ಶೇ.40ರಷ್ಟು ಮೌನ ಕರೆಗಳು : ವರದಿ

ವಾರ್ತಾ ಭಾರತಿ : 30 Oct, 2020

ಹೊಸದಿಲ್ಲಿ, ಅ.30: ತೊಂದರೆಯಲ್ಲಿ ಸಿಕ್ಕಿಕೊಂಡ ಮಕ್ಕಳಿಗೆ ನೆರವು ಒದಗಿಸಲು ಇರುವ ಚೈಲ್ಡ್‌ಲೈನ್ ಹೆಲ್ಪ್‌ಲೈನ್ ನಂಬರ್ 1098ಕ್ಕೆ 2018ರ ಜನವರಿಯಿಂದ 2020ರ ಸೆಪ್ಟಂಬರ್‌ವರೆಗೆ ಒಟ್ಟು 2.15 ಕೋಟಿ ಕರೆಗಳು ಬಂದಿದ್ದು ಇದರಲ್ಲಿ ಶೇ.40ರಷ್ಟು ಮೌನ ಕರೆಗಳಾಗಿವೆ ಎಂದು ಚೈಲ್ಡ್‌ಲೈನ್‌ನ ವರದಿ ತಿಳಿಸಿದೆ. ಮೌನಕರೆಗಳನ್ನು ಸದ್ದಡಗಿಸಿದ ಅಳಲು ಎಂದು ಕರೆಯಬಹುದು. ಕರೆ ಮಾಡಿದ ವ್ಯಕ್ತಿಗಳು ನೆರವು ಪಡೆಯಲು ಪ್ರಯತ್ನಿಸುತ್ತಿದ್ದರೂ, ಆ ಸಮಯದಲ್ಲಿ ತಮಗಾದ ದೌರ್ಜನ್ಯ ಅಥವಾ ಸಮಸ್ಯೆಯ ಬಗ್ಗೆ ಮಾತನಾಡುವ ಧೈರ್ಯ ಮಾಡುವುದಿಲ್ಲ. ಕರೆ ಮಾಡಿದಾಗ ಮಾತು ಕೇಳುವುದಿಲ್ಲ, ಆದರೆ ಹಿನ್ನೆಲೆಯ ಶಬ್ದ ಕೇಳಿಬರುತ್ತದೆ. ಅಂತಹ ಸಂದರ್ಭದಲ್ಲಿ ನಾವು ಕರೆಯನ್ನು ಡಿಸ್‌ಕನೆಕ್ಟ್ ಮಾಡುವುದಿಲ್ಲ. ಸಂಸ್ಥೆಯ ಉದ್ಯೋಗಿಗಳು ಅವರೊಂದಿಗೆ ಆಪ್ತವಾಗಿ ಸಮಾಲೋಚಿಸಿದ ಬಳಿಕ ಕರೆ ಮಾಡಿದ ವ್ಯಕ್ತಿ ಮಾತನಾಡಿದ ಸಂದರ್ಭವೂ ಇದೆ . ಕಳೆದ 3 ವರ್ಷದಲ್ಲಿ ಮೌನ ಕರೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವೊಮ್ಮೆ ಒಂದೇ ನಂಬರ್‌ನಿಂದ ಹಲವು ಬಾರಿ ಕರೆ ಬಂದರೂ ಕರೆ ಮಾಡಿದಾತ ಮಾತಾಡುವುದಿಲ್ಲ. 100 ಕರೆಯಲ್ಲಿ ಮಾತನಾಡದ ವ್ಯಕ್ತಿ 101ನೇ ಕರೆಯಲ್ಲಿ ಮಾತನಾಡಿದ್ದೂ ಇದೆ. 2018ರಲ್ಲಿ ಚೈಲ್ಡ್‌ಲೈನ್ ಹೆಲ್ಪ್‌ಲೈನ್‌ಗೆ ಬಂದಿದ್ದ 1.01 ಕೋಟಿ ಒಟ್ಟು ಕರೆಗಳಲ್ಲಿ 42 ಲಕ್ಷ ಅಥವಾ 42ಶೇ. ಮೌನಕರೆಗಳು. 2019ರಲ್ಲಿ ಒಟ್ಟು 69 ಲಕ್ಷ ಕರೆಗಳು ಬಂದಿದ್ದು ಇದರಲ್ಲಿ 27 ಲಕ್ಷ ಅಥವಾ 39ಶೇ. ಮೌನ ಕರೆಗಳಾಗಿವೆ. 2020ರ ಸೆಪ್ಟಂಬರ್‌ವರೆಗೆ 43 ಲಕ್ಷ ಕರೆಗಳು ಬಂದಿದ್ದು ಇದರಲ್ಲಿ 16 ಲಕ್ಷ ಅಥವಾ 36ಶೇ. ಮೌನ ಕರೆಗಳಾಗಿವೆ. ಚೈಲ್ಡ್‌ಲೈನ್‌ನ ಸೇವೆ ಮತ್ತು ಕಾರ್ಯದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಉಂಟಾಗಿರುವುದು ಮೌನ ಕರೆಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ತಾವು ಕಷ್ಟಕ್ಕೆ ಸಿಲುಕಿದಾಗ ಚೈಲ್ಡ್‌ಲೈನ್ ಹೆಲ್ಪ್‌ಲೈನ್‌ನ ಸಂಖ್ಯೆಗೆ ಕರೆ ಮಾಡಿದರೆ ನೆರವು ದೊರಕುತ್ತದೆ. ಸಮಸ್ಯೆ ದೂರವಾಗುತ್ತದೆ ಎಂಬ ಅರಿವು ಜನರಲ್ಲಿ ಮೂಡಿರುವುದರಿಂದ ಅವರು ಈಗ ಮಾತನಾಡಲು ಹಿಂಜರಿಯುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)