varthabharthi


ನಿಮ್ಮ ಅಂಕಣ

ಪೊಲೀಸ್ ಸುಧಾರಣೆ ಯಾವಾಗ?

ವಾರ್ತಾ ಭಾರತಿ : 31 Oct, 2020
ಎಂ. ಪಿ. ನಥಾನೇಲ್ ನಿವೃತ್ತ ಸಿಆರ್‌ಪಿಎಫ್ ಪೊಲೀಸ್ ಮಹಾನಿರ್ದೇಶಕ

ಇತ್ತೀಚಿನ ತಿಂಗಳುಗಳಲ್ಲಿ ಪೊಲೀಸ್ ದೌರ್ಜನ್ಯ ಮಾಮೂಲಾಗಿದೆ. ಜುಲೈ 14ರಂದು ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಪೊಲೀಸರು ದಲಿತ ಅಹಿರ್‌ವಾರ್ ದಂಪತಿಯನ್ನು ಥಳಿಸಿದ್ದು ತೀರಾ ಭಯಾನಕ ಘಟನೆ. ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗದೆ ಇರುತ್ತಿದ್ದಲ್ಲಿ ಅದು ಯಾರ ಗಮನಕ್ಕೂ ಬರದೆ ಹೋಗಬಹುದಾಗಿತ್ತು. ಘಟನೆಯ ಬಳಿಕ ಜಿಲ್ಲಾಧಿಕಾರಿಗಳು ಹಾಗೂ ಎಸ್‌ಪಿಯವರನ್ನು ವರ್ಗಾವಣೆ ಮಾಡಲಾಗಿದೆ ಮತ್ತು 6 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸ್ವಲ್ಪವೇ ಸಮಯದಲ್ಲಿ ಜನರು ಘಟನೆಯನ್ನು ಮರೆತು ಬಿಡುತ್ತಾರೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸತ್ತನಾಕುಲಂ ಪಟ್ಟಣದಲ್ಲಿ ಪೊಲೀಸರು ಜೆ. ಬೆನಿಕ್ಸ್ ಮತ್ತು ಆತನ ತಂದೆ ಟಿ. ಜಯರಾಜ್‌ರನ್ನು ಚಿತ್ರಹಿಂಸೆ ನೀಡಿ ಕೊಂದ ಘಟನೆ ಇನ್ನೂ ಹಸಿಯಾಗಿದ್ದಾಗಲೇ ಉತ್ತರಪ್ರದೇಶದ ಪೊಲೀಸರು ಕಾನ್ಪುರದಲ್ಲಿ ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯನ್ನು ಗುಂಡಿಟ್ಟು ಕೊಂದ ಸುದ್ದಿ ಬಂತು. ದುಬೆ ಹತ್ಯೆಯ ಕುರಿತು ಪೊಲೀಸರು ಹೇಳಿದ್ದನ್ನು ನಂಬುವಂತಿರಲಿಲ್ಲ. ಈ ಘಟನೆಗಳು ಮತ್ತು ಇತರ ಹಲವು ಘಟನೆಗಳು ನಮ್ಮ ದೇಶಕ್ಕೆ ತುರ್ತಾಗಿ ಪೊಲೀಸ್ ಸುಧಾರಣಾ ಕ್ರಮಗಳ ಅವಶ್ಯಕತೆ ಇದೆ ಎಂಬುದನ್ನು ತೋರಿಸುತ್ತದೆ. ಪೊಲೀಸ್ ದೌರ್ಜನ್ಯವನ್ನು ತಡೆಯುವ ತುರ್ತು ಸುಧಾರಣೆಗಳು ಆಗದಿದ್ದಲ್ಲಿ ಅಮೆರಿಕದಲ್ಲಿ ಕರಿಯ ಜಾರ್ಜ್ ಫ್ಲಾಯ್ಡಾನ ಹತ್ಯೆಯ ಬಳಿಕ ಪೊಲೀಸ್‌ದೌರ್ಜನ್ಯ ಖಂಡಿಸಿ ಅಲ್ಲಿ ನಡೆದಂತಹ ಉತ್ಪಾತ, ಹಿಂಸಾಚಾರ ಇಲ್ಲಿಯೂ ಭುಗಿಲೇಳಬಹುದು.
ಪೊಲೀಸ್ ದೌರ್ಜನ್ಯದ ಒಂದು ದೊಡ್ಡ ಘಟನೆ ನಡೆದ ಬಳಿಕ ಪ್ರತಿ ಬಾರಿ ಸಮಿತಿಗಳನ್ನು ಹಾಗೂ ಆಯೋಗಗಳನ್ನು ರಚಿಸಲಾಗುತ್ತದೆ. ಆಮೇಲೆ ಆ ಆಯೋಗಗಳು ಹಾಗೂ ಸಮಿತಿಗಳು ಮಾಡುವ ಶಿಫಾರಸುಗಳು, ನೀಡುವ ವರದಿಗಳು ಪತ್ರಾಗಾರಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿರುತ್ತವೆ.
 
ಪೊಲೀಸ್ ಆಡಳಿತ ಯಂತ್ರವನ್ನು ಸುಧಾರಿಸುವ ಮೊದಲ ಗಂಭೀರ ಪ್ರಯತ್ನ 1977ರಲ್ಲಿ ರಾಷ್ಟ್ರೀಯ ಪೊಲೀಸ್ ಆಯೋಗದ (ಎನ್‌ಸಿಪಿ) ರಚನೆಯೊಂದಿಗೆ ನಡೆಯಿತು. ಆ ಆಯೋಗವು 1979 ಮತ್ತು 1981ರ ನಡುವೆ ಗೃಹ ಸಚಿವಾಲಯಕ್ಕೆ ಎಂಟು ವರದಿಗಳನ್ನು ಸಲ್ಲಿಸಿತ್ತು. ರಾಜಕೀಯ ವ್ಯವಸ್ಥೆಯನ್ನು ಅಥವಾ ಪೊಲೀಸ್ ಪಡೆಯ ಕಾರ್ಯ ವಿಧಾನವನ್ನು ಆಯೋಗವು ಟೀಕಿಸಿದೆ ಎಂಬ ಷರಾದೊಂದಿಗೆ ಇವುಗಳಲ್ಲಿ ಏಳು ವರದಿಗಳನ್ನು 1983ರಲ್ಲಿ ರಾಜ್ಯಗಳಿಗೆ ಕಳುಹಿಸಲಾಯಿತು. ಎನ್‌ಸಿಪಿಯ ಶಿಫಾರಸುಗಳನ್ನು ಅನುಷ್ಠಾನ ಗೊಳಿಸಬೇಕೆಂದು ಹಕ್ಕೊತ್ತಾಯ ಸಲ್ಲಿಸಿ ಓರ್ವ ನಿವೃತ್ತ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ 1966ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವವರಿಗೆ ವರದಿಯನ್ನು ಹಾಗೆಯೇ ಇಡಲಾಗಿತ್ತು. 2006ರಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಕುರಿತು ಹಲವಾರು ನಿರ್ದೇಶಗಳನ್ನು ನೀಡಿತ್ತು. ರಾಜ್ಯಗಳು ಹಾಗೂ ಕೇಂದ್ರ ಸರಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಹಲವು ಅತ್ಯುತ್ತಮ ಸುಧಾರಣೆಗಳು ಆಗುತ್ತಿತ್ತು. ಆದರೆ ಅದರಿಂದ ನಮ್ಮ ರಾಜಕಾರಣಿಗಳಿಗೆ ಹಾಗೂ ಭ್ರಷ್ಟಾಚಾರ ಮತ್ತು ಅಪರಾಧದ ಕಳಂಕ ಹೊತ್ತಿರುವ ಕೆಲವರು ಸೇರಿದಂತೆ ಅಧಿಕಾರಿಗಳ ಹಿತಾಸಕ್ತಿಗೆ ತೊಂದರೆಯಾಗುತ್ತಿತ್ತು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ಫಾರ್ಮ್ಸ್‌ನ (2018ರ) ಒಂದು ವರದಿಯಂತೆ 1,580 ಸಂಸದರು ಮತ್ತು ಶಾಸಕರು ಆಗ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದರು. ಯಾವುದೇ ಆಯೋಗದ ಶಿಫಾರಸುಗಳು ಯಾಕೆ ಅನುಷ್ಠಾನಗೊಳ್ಳುವುದಿಲ್ಲ ಎಂಬುದಕ್ಕೆ ಉತ್ತರ ಇಲ್ಲಿದೆ.

ಇಂತಹ ವ್ಯಕ್ತಿಗಳಿಗೆ ಅತ್ಯಂತ ತೊಂದರೆಯುಂಟು ಮಾಡುವ ಒಂದು ಸಂಗತಿಯೆಂದರೆ ಈಗ ರಾಜಕೀಯ ನಾಯಕರಿಗಿರುವ ಅನಿಯಂತ್ರಿತ ಅಧಿಕಾರವನ್ನು ಮೊಟಕುಗೊಳಿಸಿ ಬಲ್ಲ ರಾಜ್ಯ ಭದ್ರತಾ ಆಯೋಗ (ಸ್ಟೇಟ್ ಸೆಕ್ಯುರಿಟಿ ಕಮಿಷನ್-ಎಸ್‌ಎಸ್‌ಸಿ) ಒಂದನ್ನು ಸ್ಥಾಪಿಸುವಂತೆ ಮಾಡಲಾಗಿರುವ ಶಿಫಾರಸು. ಈ ಶಿಫಾರಸಿನಂತೆ ಎಸ್‌ಎಸ್‌ಸಿಯನ್ನು ಸ್ಥಾಪಿಸಿರುವ ರಾಜ್ಯಗಳಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮಾತ್ರ ಎಸ್‌ಎಸ್‌ಸಿ ಶಿಫಾರಸುಗಳನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸುವುದನ್ನು ಕಡ್ಡಾಯ ಮಾಡಿದೆ. ಹಲವು ರಾಜ್ಯಗಳು ಸುಪ್ರೀಂಕೋರ್ಟ್‌ನ ಒಂದೇ ಒಂದು ನಿರ್ದೇಶವನ್ನು ಕೂಡ ಅನುಷ್ಠಾನಗೊಳಿಸಿಲ್ಲ.
 ಪೊಲೀಸ್ ಸುಧಾರಣೆಗಳನ್ನು ರಾಜಕೀಯ ನಾಯಕರು ಅವರ ಸರಕಾರ ಅನುಷ್ಠಾನಗೊಳಿಸುತ್ತದೆಂದು ನಿರೀಕ್ಷಿಸುವುದು ತುಂಬಾ ದೂರದ ಮಾತಾಗಿರುವುದರಿಂದ ಸ್ವತಃ ನ್ಯಾಯಾಂಗವೇ ಮುಂದಿನ ಹೆಜ್ಜೆ ಇಟ್ಟು ಅದು ನೀಡಿದ್ದ ನಿರ್ದೇಶಗಳನ್ನು ಬಲವಂತವಾಗಿ ಅನುಷ್ಠಾನಗೊಳಿಸಬೇಕು. ರಾಷ್ಟ್ರೀಯ ಪೊಲೀಸ್ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ 14 ವರ್ಷ ಕಾದಿದ್ದೇವೆ. ಸುಪ್ರಿಂಕೋರ್ಟ್, ತನ್ನ ನಿರ್ದೇಶಗಳನ್ನು ಹಗುರವಾಗಿ ತಳ್ಳಿಹಾಕದಂತೆ ರಾಜ್ಯಗಳು ಹಾಗೂ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜಕಾರಣಿಗಳು, ಅಪರಾಧಿಗಳು ಮತ್ತು ಪೊಲೀಸರ ದುಷ್ಟಕೂಟವನ್ನು ಹತ್ತಿಕ್ಕಿದಾಗ ಮಾತ್ರ ಅಪರಾಧಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಧೈರ್ಯದ ಒಂದು ಹೆಜ್ಜೆಯಿಡುವುದು ಸಾಧ್ಯ.

ಕೃಪೆ:  thehindu        

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)