varthabharthi


ಸಂಪಾದಕೀಯ

ಖಾಸಗಿ ಆಸ್ಪತ್ರೆಗಳಿಗೆ ಬೇಕಾಗಿದೆ ತುರ್ತು ಚಿಕಿತ್ಸೆ

ವಾರ್ತಾ ಭಾರತಿ : 31 Oct, 2020

ಕೊರೋನ ಕಾಲದಲ್ಲಿ ನಮ್ಮ ನಡುವೆ ಅತಿ ಹೆಚ್ಚು ಚರ್ಚೆಯಲ್ಲಿರುವುದು ಹಸಿವು ಮತ್ತು ಅನಾರೋಗ್ಯ. ಇವೆರಡೂ ಭಾರತಕ್ಕೆ ಅಪರಿಚಿತ ಪದಗಳೇನೂ ಅಲ್ಲ. ಆದರೆ ಕೊರೋನ ಕಾಲದಲ್ಲಿ ಹಸಿವು ಮತ್ತು ಅನಾರೋಗ್ಯ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗವನ್ನೂ ತೀವ್ರವಾಗಿ ಕಂಗೆಡಿಸಿವೆ. ಹಸಿವು, ಅನಾರೋಗ್ಯ ಬಡವರ ವಿಧಿ ಎಂದು ಭಾವಿಸಿ ವೌನವಾಗಿದ್ದವರೆಲ್ಲ ಈ ಬಗ್ಗೆ ಆತಂಕ ಪಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೋನ ಎದುರಿಸುವುದಕ್ಕಾಗಿ ಘೋಷಿಸಲ್ಪಟ್ಟ ಲಾಕ್‌ಡೌನ್ ದೇಶದ ಆರ್ಥಿಕತೆಯನ್ನು ಜರ್ಜರಿತಗೊಳಿಸಿ ಹಸಿವನ್ನು ಇನ್ನಷ್ಟು ಭೀಕರಗೊಳಿಸಿದೆ.

ಹಸಿವು ಮತ್ತು ಅನಾರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಇಂತಹ ಸಂದರ್ಭದಲ್ಲಿ ಭಾರತದ ಬಡವರನ್ನು ಕೈ ಹಿಡಿಯಬಹುದಾದದ್ದು ಸರಕಾರಿ ಆಸ್ಪತ್ರೆಗಳು. ಆದರೆ ಸರಕಾರಿ ಆಸ್ಪತ್ರೆಗಳೇ ದೇಶದಲ್ಲಿ ಪೋಷಣೆಯಿಲ್ಲದೆ ಭೀಕರ ಕಾಯಿಲೆಗಳಿಗೆ ಈಡಾಗಿರುವಾಗ, ಕಾಯಿಲೆ ಪೀಡಿತರು ಅದರ ಆಶ್ರಯವನ್ನು ಪಡೆಯುವುದಾದರೂ ಹೇಗೆ? ಈ ಸಂದರ್ಭವನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಗಳು ಕೊರೋನ ಕಾಲವೆನ್ನುವುದು ‘ದರೋಡೆಗಳಿಗೆ ಮುಕ್ತವಾಗಿರುವ ಕಾಲ’ ಎಂದು ಬಗೆದು ಜನರನ್ನು ಲೂಟಿ ಮಾಡುತ್ತಿವೆ. ಜಗತ್ತಿನಲ್ಲೇ ಆರೋಗ್ಯ ಪಾಲನಾ ವ್ಯವಸ್ಥೆಯು ಅತ್ಯಧಿಕವಾಗಿ ಖಾಸಗೀಕರಣಗೊಂಡಿರುವುದು ಭಾರತದಲ್ಲೇ ಆಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಮ್ಮ ಆರೋಗ್ಯ ಪಾಲನಾ ವ್ಯವಸ್ಥೆಗೆ ಒಟ್ಟು ಆಂತರಿಕ ಉತ್ಪನ್ನದ ಶೇ.1.15ಕ್ಕಿಂತ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿಲ್ಲ. ಇದು ಕಡಿಮೆ ಆದಾಯದ ದೇಶಗಳು ತಮ್ಮ ಪ್ರಜೆಗಳ ಆರೋಗ್ಯ ಪಾಲನೆಗೆ ಖರ್ಚು ಮಾಡುತ್ತಿರುವುದಕ್ಕಿಂತಲೂ ಕಡಿಮೆ ಮೊತ್ತದ ಹಣವಾಗಿದೆ.ಕೋವಿಡ್-19ನಂತಹ ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಆರೋಗ್ಯ ನೀತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಪ್ರಯತ್ನವನ್ನು ಆರಂಭಿಸಲಿದೆಯೆಂಬ ನಂಬಿಕೆಯೊಂದಿತ್ತು. 2022ರೊಳಗೆ ಜಿಡಿಪಿಯ 2.5 ಶೇಕಡ ಹಣವನ್ನು ಸಾರ್ವಜನಿಕ ಆರೋಗ್ಯ ವೆಚ್ಚಕ್ಕಾಗಿ ವಿನಿಯೋಗಿಸುವ ಬದ್ಧತೆಯನ್ನು ಅದು ಪ್ರದರ್ಶಿಸಲಿದೆಯೆಂಬ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಅದು ನಿರೀಕ್ಷೆಯಾಗಿಯೇ ಉಳಿದಿದೆ. ಈವರೆಗೆ ಕೊರೋನ ಸೋಂಕಿನ ಹರಡುವಿಕೆಯನ್ನು ತಡೆಯಲು ಪಿಪಿಇ ಕಿಟ್‌ಗಳು, ತಪಾಸಣೆ ಇತ್ಯಾದಿಗಳಿಗೆ 15 ಸಾವಿರ ಕೋಟಿ ರೂ.ಗಳ ಅನುದಾನವನ್ನು ಹೊರತುಪಡಿಸಿ, ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಉತ್ತೇಜನಕಾರಿಯಾದ ಪ್ಯಾಕೇಜ್ ಲಭ್ಯವಾಗಿಲ್ಲ.

ಸರಕಾರಿ ಆಸ್ಪತ್ರೆಗಳು ಕೊರೋನ ಸಹಿತ ದೇಶದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಿವೆಯಾದರೂ, ಸರಕಾರ ನೀಡಿರುವ ಸಂಪನ್ಮೂಲಗಳ ಕೊರತೆಗಳಿಂದಾಗಿ ಸಾಧ್ಯವಾಗುತ್ತಿಲ್ಲ. ಆದುದರಿಂದ ದೇಶದ ತಳಸ್ತರದ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಬೇಕಾಗಿದೆ. ಈ ದೇಶದ ಆರೋಗ್ಯ ವ್ಯವಸ್ಥೆಯ ಖಾಸಗೀಕರಣದ ಹಿಂದೆ ಸರಕಾರವಿರುವುದರಿಂದ, ಖಾಸಗಿ ಆಸ್ಪತ್ರೆಗಳ ಲೂಟಿಯನ್ನು ತಡೆಯುವ ಹೊಣೆಯೂ ಸರಕಾರದ್ದೇ ಆಗಿದೆ. ಕನಿಷ್ಠ ಸರಕಾರದ ಯೋಜನೆಗಳನ್ನು ಈ ಆಸ್ಪತ್ರೆಗಳು ದುರುಪಯೋಗ ಪಡಿಸಿಕೊಳ್ಳದಂತೆ ಹಾಗೆಯೇ, ರೋಗಿಗಳನ್ನು ಅನಗತ್ಯವಾಗಿ ದೋಚದಂತೆ ಕಡಿವಾಣ ಹಾಕುವುದು ಸರಕಾರದ ಕರ್ತವ್ಯವಾಗಿದೆ. ಆದರೆ ಅತ್ತ ಸರಕಾರಿ ಆಸ್ಪತ್ರೆಗಳನ್ನು ನಾಶ ಮಾಡಿ, ಇತ್ತ ಖಾಸಗಿ ಆಸ್ಪತ್ರೆಗಳಿಗೆ ಲೂಟಿ ಹೊಡೆಯಲು ವ್ಯಾಪಕ ಅವಕಾಶಗಳನ್ನು ಮಾಡಿಕೊಡುತ್ತಿದೆ. ಈ ಲೂಟಿಯನ್ನು ಪ್ರಶ್ನಿಸಿದ ಜನಸಾಮಾನ್ಯರ ಮೇಲೆ ಗೂಂಡಾಕಾಯ್ದೆ ಬಳಸಿ ಅವರನ್ನು ಜೈಲಿಗೆ ತಳ್ಳುವ ಅಧಿಕಾರವನ್ನೂ ಖಾಸಗಿ ವೈದ್ಯರಿಗೆ ನೀಡಲಾಗಿದೆ. ಸಾರ್ವಜನಿಕ ಆರೋಗ್ಯ ಪಾಲನೆಯನ್ನು ನಮ್ಮ ಸಂವಿಧಾನವು ರಾಜ್ಯ ಸರಕಾರಗಳ ಸುಪರ್ದಿಗೆ ನೀಡಿದೆ.

ಭಾರತದಾದ್ಯಂತ ಕೇವಲ 11 ರಾಜ್ಯಗಳು ಕ್ಲಿನಿಕಲ್ ಸಂಸ್ಥಾಪನೆಗಳ ಕಾಯ್ದೆ (ನೋಂದಣಿ ಹಾಗೂ ನಿಯಂತ್ರಣ)-2010ನ್ನು ಜಾರಿಗೆ ತಂದಿವೆ.ಕ್ಲಿನಿಕಲ್ ಸಂಸ್ಥಾಪನೆಗಳ ಕಾಯ್ದೆಯಡಿ ಕೇಂದ್ರ ಸರಕಾರವು 2012ರಲ್ಲಿ ಜಾರಿಗೊಳಿಸಲಾದ ನಿಯಮಾವಳಿಗಳ ಪ್ರಕಾರ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತಿತರ ವೈದ್ಯಕೀಯ ಸಂಸ್ಥಾಪನೆಗಳು ತಮ್ಮಲ್ಲಿ ದೊರೆಯುವ ಪ್ರತಿಯೊಂದು ವಿಧದ ಸೇವೆಗಳು ಹಾಗೂ ಸೌಲಭ್ಯಗಳಿಗೆ ತಾವು ವಿಧಿಸುವ ದರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕಾಗುತ್ತದೆ. ಹೊಟೇಲ್‌ನಲ್ಲಿ ತಿಂಡಿಯ ದರವನ್ನು ಮೊದಲೇ ಬರೆದಿಟ್ಟಂತೆ. ಆದರೆ ಮಹಾನಗರಗಳಲ್ಲಿ ಯಾವ ಆಸ್ಪತ್ರೆ ಅಥವಾ ವೈದ್ಯಕೀಯ ಸ್ಥಾಪನೆಗಳು ಹಾಗೆ ಮಾಡುತ್ತಿಲ್ಲ. ಒಂದು ಫ್ರಿಜ್ ಖರೀದಿಸುವಾಗಲೂ ಅದರ ದರವನ್ನು ನಾವು ಮುಂಗಡವಾಗಿ ತಿಳಿದುಕೊಳ್ಳುತ್ತೇವೆ. ವಿಪರ್ಯಾಸವೆಂದರೆ ಚಿಕಿತ್ಸೆಗೆ ಸಾವಿರಾರು ರೂ.ವಸೂಲಿ ಮಾಡುವ ಆಸ್ಪತ್ರೆಗಳು ಮುಂಗಡವಾಗಿ ವೈದ್ಯಕೀಯ ವೆಚ್ಚದ ವಿವರಗಳನ್ನು ರೋಗಿಗಳಿಗಾಗಲಿ ಅಥವಾ ಅವರ ಬಂಧುಗಳಿಗಾಗಲಿ ನೀಡುವುದಿಲ್ಲ.ಅನಗತ್ಯವಾಗಿ ಶಸ್ತ್ರಕ್ರಿಯೆಗಳನ್ನು ನಡೆಸುವುದನ್ನು ತಪ್ಪಿಸಲು ಶಸ್ತ್ರಕ್ರಿಯೆಗಳಿಗೂ ನಿಗದಿತ ಮಾನದಂಡಗಳನ್ನು ವಿಧಿಸಬೇಕಾಗಿದೆ. ಆದರೆ ಬಹುತೇಕ ಖಾಸಗಿ ಆಸ್ಪತ್ರೆಗಳು ತಮಗಿಷ್ಟ ಬಂದಂತೆ ಶುಲ್ಕವನ್ನು ವಿಧಿಸುತ್ತಿವೆ.ಆಸ್ಪತ್ರೆಯ ನೋಂದಣಿಯ ಕುರಿತಾದ ಈ ಶರತ್ತುಗಳನ್ನು ಈಡೇರಿಸದೆ ಇದ್ದಲ್ಲಿ ಯಾವುದೇ ಸಮಯದಲ್ಲಿಯೂ ನೋಂದಣಿಯು ರದ್ದುಗೊಳ್ಳಲೂ ಬಹುದು. ಆದರೆ ಅನೇಕ ರಾಜ್ಯಗಳಲ್ಲಿ ಕ್ಲಿನಿಕಲ್ ಸಂಸ್ಥಾಪನೆಗಳ ಕಾಯ್ದೆಯು ಜಾರಿಗೊಳ್ಳದೆ ಇರುವುದರಿಂದ ನೋಂದಣಿ ರದ್ದತಿಯ ಭಯವೂ ಇಲ್ಲವಾಗಿದೆ.

ಭಾರತದಲ್ಲಿ ಖಾಸಗಿ ಆರೋಗ್ಯಪಾಲನಾ ವ್ಯವಸ್ಥೆಯು ವ್ಯಕ್ತಿಗಳನ್ನು ಹಾಗೂ ವಿಮಾ ಸಂಸ್ಥೆಗಳನ್ನು ಸುಲಿಯುವಂತಹ ರೀತಿಯಲ್ಲಿಯೇ ರಚನೆಯಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಜನಸಾಮಾನ್ಯರ ಶೋಷಣೆಯನ್ನು ತಡೆಗಟ್ಟಲು ಉತ್ತರದಾಯಿತ್ವದ ಕೊರತೆಯಿದೆ. ಇದರಿಂದ ಇನ್ನಷ್ಟು ಕುಮ್ಮಕ್ಕು ಪಡೆದಿರುವ ಅನೇಕ ಖಾಸಗಿ ಆಸ್ಪತ್ರೆಗಳು ನಿರ್ಭೀತವಾಗಿ ಜನರ ಸುಲಿಗೆಗಳಲ್ಲಿ ತೊಡಗಿವೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಕೇವಲ 11 ರಾಜ್ಯಗಳು ಮಾತ್ರವೇ ಯಾಕೆ ವೈದ್ಯಕೀಯ ಸಂಸ್ಥಾಪನೆಗಳ ಕಾಯ್ದೆಯನ್ನು ಅನುಷ್ಠಾನಗೊಳಿಸಿವೆ, ಉಳಿದ ರಾಜ್ಯಗಳಿಗೆ ಯಾಕೆ ವಿನಾಯಿತಿ ನೀಡಲಾಗಿದೆ ಎಂಬ ಪ್ರಶ್ನೆಯೂ ಬಿಡಿಸಲಾರದ ಒಗಟಾಗಿದೆ. ಕ್ಯಾನ್ಸರ್‌ನಂತಹ ಭೀಕರ ರೋಗಗಳು ಬಂದರೆ ಬಡವರಿಗೆ ಸಾವೇ ಗತಿ.

ಮಧ್ಯಮವರ್ಗದ ಜನರ ಸ್ಥಿತಿ ಅದಕ್ಕಿಂತಲೂ ಭೀಕರ. ಅವರಿಗೆ ಒದಗುವುದು ನಿಧಾನಗತಿಯ ಸಾವು. ಜೊತೆಗೆ, ರೋಗಿಯ ಕುಟುಂಬ ಆರ್ಥಿಕವಾಗಿ ದಿವಾಳಿಯಾಗಬೇಕಾಗುತ್ತದೆ. ಶಾಶ್ವತವಾಗಿ ಆರ್ಥಿಕ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಕೊರೋನ ದಿನಗಳಲ್ಲಿ, ಬರೇ ಕ್ವಾರಂಟೈನ್ ಹೆಸರಿನಲ್ಲೇ ಲಕ್ಷಗಟ್ಟಲೆ ಲೂಟಿ ಹೊಡೆದಿರುವ ಪ್ರಕರಣಗಳು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಿವೆ. ಕೊರೋನ ಎನ್ನುವ ಗುಮ್ಮನನ್ನು ಮುಂದಿಟ್ಟು ಖಾಸಗಿ ಆಸ್ಪತ್ರೆಗಳು ರೋಗಿಗಳ ಬದುಕಲ್ಲಿ ಚೆಲ್ಲಾಟವಾಡುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಕೊರೋನ ಈ ದೇಶದ ಖಾಸಗಿ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆ ನೀಡಬೇಕಾದ ಅಗತ್ಯವನ್ನು ಹೇಳುತ್ತಿದೆ. ಸರಕಾರ ಎಚ್ಚೆತ್ತುಕೊಳ್ಳದೇ ಇದ್ದರೆ ಕೊರೋನವನ್ನು ಗೆಲ್ಲುವುದು ಪಕ್ಕಕ್ಕಿರಲಿ, ಮುಂದಿನ ದಿನಗಳಲ್ಲಿ ಕ್ಷಯವೂ ಸೇರಿದಂತೆ ಹಲವು ರೋಗಗಳನ್ನು ಇನ್ನಷ್ಟು ಭೀಕರ ರೂಪದಲ್ಲಿ ದೇಶವನ್ನು ಕಾಡಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)