varthabharthi


ಸಿನಿಮಾ

‘ಜೇಮ್ಸ್ ಬಾಂಡ್’ ಖ್ಯಾತಿಯ ಪ್ರಸಿದ್ಧ ನಟ ಶಾನ್ ಕಾನರಿ ನಿಧನ

ವಾರ್ತಾ ಭಾರತಿ : 31 Oct, 2020

ಲಂಡನ್,ಅ.31: ಜೇಮ್ಸ್‌ಬಾಂಡ್ ಪಾತ್ರದ ಮೂಲಕ ಜಗತ್ತಿನಾದ್ಯಂತ ಸಿನೆಮಾರಸಿಕರಿಗೆ ಚಿರಪರಿಚಿತರಾಗಿದ್ದ ಹಾಲಿವುಡ್ ನಟ ಶಾನ್ ಕಾನರಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದ ಶಾನ್ ಕಾನರಿ, ಅಮೆರಿಕದ ಬಹಾಮದಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದರು ಎಂದು ಅವರ ಪುತ್ರ ಜೇಸನ್ ತಿಳಿಸಿದ್ದಾರೆ.

ಶಾನ್ ಕಾನರಿ 1930ರಲ್ಲಿ ಎಡಿನ್‌ಬರ್ಗ್‌ನಲ್ಲಿ ಜನಿಸಿದರು. ತನ್ನ ಮೂರು ದಶಕಗಳ ತನ್ನ ಸಿನೆಮಾ ಬದುಕಿನಲ್ಲಿ 67 ಸಿನೆಮಾಗಳಲ್ಲಿ ನಟಿಸಿದ್ದರು.

ಗೋಲ್ಡ್‌ಫಿಂಗರ್,ಥಂಡರ್‌ಬಾಲ್, ಡಾ. ನೋ, ನೆವರ್‌ಸೇ ನೆವರ್ ಎಗೇನ್ ಸೇರಿದಂತೆ ಒಟ್ಟು 7 ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ನಟಿಸಿದ್ದು, ಎಲ್ಲಾ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಜೇಮ್ಸ್ ಬಾಂಡ್ ಸರಣಿಯ ಚಿತ್ರಗಳಲ್ಲದೆ ಇತರ ಹಾಲಿವುಡ್ ಚಿತ್ರಗಳಲ್ಲಿಯೂ ಶಾನ್ ಕಾನರಿ ಹೆಸರು ಮಾಡಿದ್ದರು.

   1988ರಲ್ಲಿ ದಿ ಅನ್‌ಟಚೇಬಲ್ಸ್ ಚಿತ್ರದಲ್ಲಿ ಐರಿಶ್ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ಅವರಿಗೆ ಆಸ್ಕರ್‌ನ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ದೊರೆತಿತ್ತು. ದಿ ಹಂಟ್ ಫಾರ್ ಆಕ್ಟೋಬರ್, ದಿ ಲಾಸ್ಟ್ ಕ್ರುಸೇಡ್ ಹಾಗೂ ದಿ ರಾಕ್ ಚಿತ್ರಗಳಲ್ಲಿ ಅವರು ಗಮನಸೆಳೆಯುವ ಅಭಿನಯ ನೀಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)