90 ವರ್ಷದ ವೃದ್ಧೆಯ ಸಾಮೂಹಿಕ ಅತ್ಯಾಚಾರ
ಅಗರ್ತಲಾ (ತ್ರಿಪುರಾ), ಅ. 31: ತೊಂಬತ್ತು ವರ್ಷದ ವೃದ್ಧೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಘಟನೆ ತ್ರಿಪುರಾದಲ್ಲಿ ನಡೆದಿದೆ. ಉತ್ತರ ತ್ರಿಪುರಾ ಜಿಲ್ಲೆಯ ಕಾಂಚನಪುರ ಉಪ ವಿಭಾಗದ ಬರ್ಹಾಲ್ದಿ ಗ್ರಾಮದಲ್ಲಿ ಅಕ್ಟೋಬರ್ 24ರಂದು ಈ ಘಟನೆ ನಡೆದಿದೆ. ಆದರೆ, ವೃದ್ಧೆಯ ಸಂಬಂಧಿಕರು ಅಕ್ಟೋಬರ್ 29ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಭಾನುಪಾಡ ಚಕ್ರವರ್ತಿ ಹೇಳಿದ್ದಾರೆ. ‘‘ತನ್ನ ಮನೆಯಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ವೃದ್ದೆಯನ್ನು ಆರೋಪಿಗಳಲ್ಲಿ ಓರ್ವ ಅಜ್ಜಿ ಎಂದು ಕರೆಯುತ್ತಿದ್ದ. ಘಟನೆ ನಡೆದ ರಾತ್ರಿ ಆತ ಹಾಗೂ ಇನ್ನೋರ್ವ ಬಾಗಿಲು ಒಡೆದು ಮನೆಯ ಒಳಗೆ ಪ್ರವೇಶಿಸಿ ವೃದ್ಧೆಯ ಅತ್ಯಾಚಾರ ಎಸಗಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ಘಟನೆ ಬಳಿಕ ವೃದ್ಧೆ ಅಸ್ವಸ್ಥರಾಗಿದ್ದರು.
ಆದರೆ, ಅವರು ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಈ ಘಟನೆ 5 ದಿನಗಳ ಬಳಿಕ ಸಂಬಂಧಿಕರ ಅರಿವಿಗೆ ಬಂದಿದ್ದು, ಅವರು ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲದೆ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಆಧಾರದಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.