varthabharthi


ವಿಶೇಷ-ವರದಿಗಳು

ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಪ್ರಮುಖ ಕಾರಣ ಇದು!

ವಾರ್ತಾ ಭಾರತಿ : 3 Nov, 2020

ಸಾಂದರ್ಭಿಕ ಚಿತ್ರ

ಬೆಂಗಳೂರು,ನ.3: ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಏಕೆ ಹೆಚ್ಚುತ್ತಿವೆ? ಈ ಬಗ್ಗೆ ಸಮೀಕ್ಷೆಯನ್ನು ನಡೆಸಿರುವ ಬೆಂಗಳೂರಿನ ಮಾನಸಿಕ ಆರೋಗ್ಯ ಸಂಸ್ಥೆ ‘ದಿ ಮೈಂಡ್ ರೀಸರ್ಚ್ ಫೌಂಡೇಷನ್’ (ಟಿಎಂಆರ್‌ಎಫ್) ಇಂತಹ ಅಪರಾಧಗಳನ್ನು ಎಸಗಲು ಪ್ರಚೋದಿಸುವ ಕೆಲವು ಮಾನಸಿಕ ಸ್ವಭಾವಗಳನ್ನು ಪತ್ತೆ ಹಚ್ಚಿದೆ. ಪುರುಷ ಪ್ರಧಾನ ಸಮಾಜದಲ್ಲಿ ಅಧಿಕಾರದ ಅಸಮಾನ ಹಂಚಿಕೆಯಿಂದಾಗಿ ಮಹಿಳೆಯರು ಶೋಷಣೆಗೊಳಗಾಗುತ್ತಾರೆ. ಮಹಿಳೆಯರನ್ನು ಅವರ ಸ್ಥಾನದಲ್ಲಿರಿಸಲು ಪುರುಷರು ಹಿಂಸೆಯನ್ನು ಬಳಸುತ್ತಾರೆ ಮತ್ತು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಾರೆ ಎಂದು ಟಿಎಂಆರ್‌ಎಫ್ ತನ್ನ ವರದಿಯಲ್ಲಿ ಹೇಳಿದೆ. ಈ ಬಗ್ಗೆ 101reporters.com ವೆಬ್ ಸೈಟ್ ನಲ್ಲಿ ಕಪಿಲ್ ಕಾಜಲ್ ವರದಿ ಮಾಡಿದ್ದಾರೆ.

2018ರಲ್ಲಿ ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್‌ನ ವರದಿಯು ಭಾರತವು ಮಹಿಳೆಯರು ವಾಸವಾಗಿರಲು ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಬೆಟ್ಟು ಮಾಡಿತ್ತು. ವರದಿಯು ಸಮಸ್ಯೆಗಳ ಆರು ಮುಖ್ಯ ಕ್ಷೇತ್ರಗಳನ್ನು ಗುರುತಿಸಿತ್ತು. ಸಂಸ್ಕೃತಿ ಮತ್ತು ಧರ್ಮ,ಲೈಂಗಿಕ ಹಿಂಸೆ,ಲೈಂಗಿಕೇತರ ಹಿಂಸೆ,ತಾರತಮ್ಯ,ಮಾನವ ಕಳ್ಳಸಾಗಾಣಿಕೆ ಮತ್ತು ಆರೋಗ್ಯ ಇವುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿತ್ತು. ಬಾಲ್ಯದಲ್ಲಿ ಅನುಭವಿಸಿದ್ದ ಕಿರುಕುಳ,ಸೀಮಿತ ಶಿಕ್ಷಣ,ತಮ್ಮ ತಾಯಂದಿರ ವಿರುದ್ಧದ ಕೌಟುಂಬಿಕ ಹಿಂಸೆಗಳಿಗೆ ಒಡ್ಡಿಕೊಂಡಿದ್ದು, ಮದ್ಯ ಸೇವನೆಯ ಚಟ, ಕುಟುಂಬದಲ್ಲಿಯ ಇತರ ಪುರುಷರನ್ನು ನೋಡಿ ಕಲಿತುಕೊಂಡ ವರ್ತನೆ,ಜೊತೆಗೆ ಹಿಂಸೆಯನ್ನು ಸಾಮಾನ್ಯವಾಗಿ ಪರಿಗಣಿಸುವ ಧೋರಣೆ ಮತ್ತು ಮಹಿಳೆಯ ಮೇಲೆ ಹಕ್ಕು ಇದೆಯೆಂಬ ಭಾವನೆ ಸೇರಿದಂತೆ ಅಸಮಾನ ಲಿಂಗ ನಿಯಮಗಳು ಪುರುಷರು ಮಹಿಳೆಯರನ್ನು ಹಿಂಸಿಸಲು ಪ್ರಮುಖ ಕಾರಣಗಳಾಗಿವೆ ಎನ್ನುತ್ತಾರೆ ಟಿಎಂಆರ್‌ಎಫ್‌ನ ಸಹಸ್ಥಾಪಕ ಡಾ.ವಿ.ಬಿ.ಛಾಬ್ರಾ.

ಸಾಮಾನ್ಯವಾಗಿ ಪುರುಷರು ಮಹಿಳೆಯರ ಸಹಮತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ ಎನ್ನುವುದನ್ನು ಟಿಎಂಆರ್‌ಎಫ್ ತನ್ನ ವಿಶ್ಲೇಷಣೆಯಲ್ಲಿ ಕಂಡುಕೊಂಡಿದೆ. ಮಹಿಳೆಯರ ಮೇಲೆ ತಮ್ಮ ಅಧಿಕಾರ ಚಲಾಯಿಸಲು ಮತ್ತು ಅವರ ಮೇಲೆ ಪ್ರಾಬಲ್ಯ ಹೊಂದಿರಲು ಪುರುಷರು ಹಿಂಜರಿಯದಿರಲು ಇದು ಒಂದು ಪ್ರಮುಖ ಕಾರಣವಾಗಿದೆ ಎಂದು ಟಿಎಂಆರ್‌ಎಫ್ ತನ್ನ ವರದಿಯಲ್ಲಿ ತಿಳಿಸಿದೆ. ಮಹಿಳೆಯರ ಸಹಮತಿಯ ವಿರುದ್ಧ ಹೋಗುವುದನ್ನು ಸಮರ್ಥಿಸಿಕೊಳ್ಳಲು ಪುರುಷರು ತಮ್ಮದೇ ಆದ ಕಾರಣಗಳನ್ನು ಹೊಂದಿರುತ್ತಾರೆ. ಇವು ಹುಡುಗರು ಹುಡುಗಿಯರನ್ನು ಚುಡಾಯಿಸುವುದು ಅಥವಾ ಹಿಂಬಾಲಿಸುವುದು,ದೈಹಿಕ ಸುಖ ತಮ್ಮ ವೈವಾಹಿಕ ಹಕ್ಕು ಎಂದು ಭಾವಿಸಿ ಪುರುಷರು ಬಲವಂತದಿಂದ ತಮ್ಮ ಪತ್ನಿಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನು ದೂರುವುದು ಇತ್ಯಾದಿಗಳಲ್ಲಿ ಪ್ರತಿಫಲಿಸುತ್ತವೆ ಎಂದು ವರದಿಯು ತಿಳಿಸಿದೆ.

‘ಆತ ಗಂಡಸು,ಏನು ಬೇಕಾದರೂ ಮಾಡುತ್ತಾನೆ’ ಎಂಬಂತಹ ಹೇಳಿಕೆಗಳು ಮತ್ತು ಕೌಟುಂಬಿಕ ಹಿಂಸೆಯನ್ನು ಕುಟುಂಬದ ಆಂತರಿಕ ವಿಷಯ ಎಂದು ತಳ್ಳಿಹಾಕುವ ಸಮಾಜದ ಧೋರಣೆ ಇವು ಪುರುಷರು ತಾವು ಮಾಡಿದ್ದೇ ಸರಿ ಎಂದು ಭಾವಿಸಲು ಮತ್ತು ಇನ್ನಷ್ಟು ಉತ್ತೇಜಿತಗೊಳ್ಳಲು ಕಾರಣವಾಗುತ್ತವೆ ಎಂದು ವರದಿಯು ಹೇಳಿದೆ. ಕೊಲೆ ಅಥವಾ ಹಲ್ಲೆಯಂತಹ ಅಪರಾಧಗಳಿಗೆ ಸಮಾಜದ ಇಂತಹ ಪ್ರವೃತ್ತಿಗಳು ಕಾರಣಗಳಾಗಿವೆ ಎಂದಿದೆ.

ಹಲವರು ತಮ್ಮ ಲೈಂಗಿಕ ಸಂತೃಪ್ತಿಗಾಗಿ ಹೆಣ್ಣುಗಳನ್ನು ಬಲಿಪಶುಗಳಾಗಿಸಲು ಬಯಸಬಹುದು ಮತ್ತು ಇದೇ ವೇಳೆ ತಮ್ಮನ್ನು ಪ್ರಮುಖವಾಗಿ ಬಿಂಬಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿರುತ್ತಾರೆ. ಪುರುಷತ್ವ ಮತ್ತು ಅದರ ಗುಣಸ್ವಭಾವಗಳು ಇಂತಹ ಅಪರಾಧಗಳು ಏಕೆ ನಡೆಯುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಮುಖವಾಗಬಹುದು ಎನ್ನುತ್ತಾರೆ ಡಾ.ಛಾಬ್ರಾ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)