varthabharthi


ಅನುಗಾಲ

ಮಾಸ್ತಿ ಸ್ವೀಕರಿಸಿದ ಭಾರತ ತೀರ್ಥ

ವಾರ್ತಾ ಭಾರತಿ : 5 Nov, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೃತಿಯ ವಿನ್ಯಾಸ, ಬರಹದ ಶಿಸ್ತು ಮತ್ತು ಭಾಷೆ ಹೆಚ್ಚುಕಡಿಮೆ ‘ಆದಿಕವಿ ವಾಲ್ಮೀಕಿ’ ಕೃತಿಯಂತೆಯೇ ಇದೆ. ಹಾಗೆಯೇ ರಾಮಾಯಣ ಹೇಗೆ ಮಾಸ್ತಿ ಅವರ ಪಾಲಿಗೆ ಪುರಾಣವಲ್ಲವೋ ಮತ್ತು ಕಾವ್ಯವಾಗಿದೆಯೋ ಹಾಗೆಯೇ ಮಹಾಭಾರತವೂ ಅವರ ಪಾಲಿಗೆ ಕಾವ್ಯ; ಪುರಾಣವಲ್ಲ. ಹೀಗೆ ದೃಷ್ಟಿಸಿದರೆ ಮಾತ್ರ ಯಾವುದೇ ಸಾಹಿತ್ಯದ ಸಾವಯವಶಿಲ್ಪ ಸೃಷ್ಟಿಯಾದೀತು. ರಾಮಾಯಣವನ್ನು ನೆನಪಿಸುತ್ತ ಅವರು ‘‘ಗ್ರಂಥ ಕಾವ್ಯತ್ವದಿಂದ ಒಂದು ಮತಗ್ರಂಥದ ಸ್ಥಾನಕ್ಕೆ ಏರಿತು; ಅಥವಾ ಇಳಿಯಿತು’’ ಎಂದು ವಿಷಾದ-ವ್ಯಂಗ್ಯವಾಡುವ ಮೂಲಕ ಇಂದಿನ ಸ್ಥಿತಿಗತಿಗಳಿಗೆ ಮಾಸ್ತಿ ಅಂದೇ ಕನ್ನಡಿ ಹಿಡಿದಿದ್ದರು.


ರಾಮಾಯಣವು ಕಾವ್ಯವಾಗಿ ಕಲಾಸಕ್ತರನ್ನು ಕಾಡಿದ್ದಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಅನುಭೂತಿಯುಳ್ಳವರನ್ನು, ಭಕ್ತರನ್ನು ಮತ್ತು ಆಸ್ತಿಕರನ್ನು ಕಾಡಿದ್ದರೆ, ಮಹಾಭಾರತ ತನ್ನ ಲೌಕಿಕ ಮುಖದಿಂದಾಗಿ ಕಾವ್ಯಾಸಕ್ತರನ್ನು ಕಾಡಿದಂತೆಯೇ ಆಸ್ತಿಕರನ್ನು, ನಾಸ್ತಿಕರನ್ನು, ಭಾವುಕರನ್ನು, ವಿಚಾರಿಗಳನ್ನು, ಕಾಡಿದ ಪುರಾಣ. ಮಹಾಭಾರತವು ರಾಮಾಯಣದಂತೆ ಸರಳರೇಖಾ ಪ್ರವಾಹದ ಕಾವ್ಯವಲ್ಲ. ಅದು ಎಲ್ಲರ ಗುಣದೋಷಗಳನ್ನು ಒಳಗೊಂಡ ಕಾವ್ಯ. ಒಂದು ರೀತಿಯಲ್ಲಿ ಚಿಂತನೆಗೆ ಹೆಚ್ಚು ಸಾಮಗ್ರಿಗಳನ್ನು ನೀಡುವ ಸಾಹಿತ್ಯ. ರಾಮಭಕ್ತರಿಗೆ ರಾಮಾಯಣ, ಕೃಷ್ಣಭಕ್ತರಿಗೆ ಭಾಗವತ, ಈ ಕಾವ್ಯಗಳು ಒದಗಿಸಿದ ತಲ್ಲೀನತೆಯನ್ನು ಮಹಾಭಾರತ ಒದಗಿಸದು. ಹೇಗಿದ್ದರೂ ರಾಮಾಯಣ ಮಹಾಭಾರತ ಈ ದೇಶದ ಮತ್ತು ಜನಜೀವನವನ್ನು ತಕ್ಕಮಟ್ಟಿಗೆ ಪ್ರಭಾವಿಸಿದ ಎರಡು ಬೃಹತ್ ಪುರಾಣಗಳು ಮಾತ್ರವಲ್ಲ, ನಂಬಿಕೆಗಳೂ ಹೌದು. ಮಾಸ್ತಿ ತಮ್ಮ ‘ಆದಿಕವಿ ವಾಲ್ಮೀಕಿ’ ಕೃತಿಯ ಮುಖಾಂತರ ವಾಲ್ಮೀಕಿ ಮತ್ತು ಆತನ ರಾಮಾಯಣ ಮಹಾಕಾವ್ಯವನ್ನು ಸ್ಪರ್ಶಿಸಿದರು; ದರ್ಶಿಸಿದರು.

ಬೆರಳತುದಿ ನೋಡಿ ಸುಮ್ಮನಾಗುವ ಸ್ವಭಾವ ಅವರದಲ್ಲ. ಅದು ಸೂಚಿಸುವ ದಿಕ್ಕನ್ನು ಹಿಡಿದು ಹೋಗಿ ದಿಗಂತದವರೆಗೂ ಅರಸುವವರು. ಕೃತಿಯೊಂದಿಗೆ ತಲ್ಲೀನತೆ ಮಾತ್ರವಲ್ಲ, ಅನನ್ಯತೆಯನ್ನು ಸಾಧಿಸುವವರೆಗೂ ಸುಮ್ಮನಾಗದವರು. ಹೀಗಾಗಿ ಅವರಿಗೆ ಕೃತಿ ದಕ್ಕುತ್ತದೆ ಮಾತ್ರವಲ್ಲ, ಇನ್ನೊಬ್ಬರಿಗೂ ದಕ್ಕುವಂತೆ ಮಾಡುವ ಸಿದ್ಧಿಯನ್ನು ನೀಡುತ್ತದೆ. ಬಹುಪಾಲು ಆಧುನಿಕ ವಿಮರ್ಶೆಯನ್ನು ಗಮನಿಸಿದರೆ ಸರಳವಾದದ್ದನ್ನು ಸಂಕೀರ್ಣಗೊಳಿಸುವ, ವ್ಯಾಖ್ಯಾನಿಸಿ ಓದುಗನಿಗೆ ಕೃತಿ ಸಮೀಪವಾಗುವಂತೆ ಮಾಡುವುದಕ್ಕಿಂತಲೂ ಬೆರಗನ್ನು ಸೃಷ್ಟಿಸುವ ಮತ್ತು ವಿಮರ್ಶೆಯನ್ನು ಅರ್ಥಮಾಡಬೇಕಾದರೆ ಅಷ್ಟೇ ವಿದ್ವತ್ತನ್ನು ಪಡೆಯಬೇಕಾದ ಅನಿವಾರ್ಯತೆ ಯನ್ನು ಸೃಷ್ಟಿಸುವ, ಗುಪ್ತಕಾರ್ಯಾಚರಣೆಯಂತೆ ಕಾಣುತ್ತದೆ. ಚಿಂತನೆಯ ಭಾರೀ ಪರಿಭಾಷೆಯನ್ನು ತಿಳಿಯದೆ ತನ್ನ ಪಾಡಿಗೆ ತಾನು ಓದಿ ಅನುಭವಿಸುವ ಸಾಮಾನ್ಯ ಓದುಗನಿಗೆ ಈ ಕಾರಣಕ್ಕೆ ವಿಮರ್ಶೆಯೆಂದರೆ ಸಾಹಿತ್ಯದ ಕಾರ್ಖಾನೆಯೊಳಗೆ ನಡೆಯುವ ವಿದ್ಯಮಾನವೆನ್ನಿಸಿ ತನ್ನ ಓದಿಗೂ ಅದಕ್ಕೂ ಸಂಬಂಧವಿಲ್ಲವೆನಿಸುತ್ತದೆ. ಇಂತಹವರನ್ನು ವಿಮರ್ಶಕರು ಮತ್ತು ಅವರ ಸಾಲಿನ ವಿದ್ವಾಂಸರು ‘ಮೂರನೇ ದರ್ಜೆಯ ಪ್ರಯಾಣಿಕರು’ ಎಂಬಂತೆ ತಾರಾಮೌಲ್ಯದ ವಿಮರ್ಶಕರು ಪರಿಗಣಿಸುತ್ತಾರೆಂಬ ಅಭಿಪ್ರಾಯವನ್ನು ಮಾಸ್ತಿ ಸೂಚಿಸುತ್ತಾರೆ. ಇದನ್ನು ಚಿಗುರಿನಲ್ಲೇ ಚಿವುಟಿಹಾಕಲು ಅವರು ತಮ್ಮ ಬರಹಗಳಲ್ಲಿ ಸರಳವಾದ ಭಾಷೆ ಮತ್ತು ಅಭಿವ್ಯಕ್ತಿಯನ್ನು ಪ್ರಯೋಗಿಸುತ್ತಾರೆ.

ವಿಷಾದವೆಂದರೆ ಮಾಸ್ತಿಯವರ ಮುಖ್ಯವಾಗಿ ಕಥೆ-ಕಾದಂಬರಿಗಳನ್ನು, ಉಳಿದಂತೆ ನಾಟಕ-ಕಾವ್ಯಗಳನ್ನು ಮೆಚ್ಚಿ ಬರೆಯುವವರು ವಿಮರ್ಶೆಯ ಮಟ್ಟಿಗೆ ಅವರ ಪರಂಪರೆಯನ್ನು, ಅವರು ಹಾಕಿಕೊಟ್ಟ ಸೂತ್ರಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವೋ ಅಥವಾ ಅರ್ಥಮಾಡಿಕೊಳ್ಳಲಿಲ್ಲವೋ ಗೊತ್ತಾಗುವುದಿಲ್ಲ. ಇದರಿಂದಾಗಿ ಮಾಸ್ತಿಯವರ ಕುರಿತು ಬಂದ ಅನೇಕ ವಿಮರ್ಶೆಗಳಲ್ಲಿ ಅವರು ತಮ್ಮ ಬರಹಗಳಲ್ಲಿ ಊಹಿಸದಿದ್ದ ಮೌಲ್ಯ, ಚಿಂತನೆ, ಸಂಕೇತ, ರೂಪಕ ಮತ್ತು ಪ್ರತಿಮೆಗಳನ್ನು ಹೇರುವ ಪ್ರಯತ್ನ ನಡೆದಿದೆ. ಮಾಸ್ತಿಯವರು ಇದನ್ನು ಗಮನಿಸಲಿಲ್ಲವೆಂದು ತಿಳಿಯುವುದು ತಪ್ಪಾಗುತ್ತದೆ. ಅವರ ಸೌಜನ್ಯ, ಸರಳಶೀಲತೆ ಮತ್ತು ವಿನಯ ವಿಮರ್ಶೆ ಈ ಕುರಿತು ಜಗಳ ಕಾಯುವಂಥದ್ದಲ್ಲ. ಮಾಸ್ತಿಯವರ ಕುರಿತು ನಾವು ಗಮನಿಸಬೇಕಾದ್ದೆಂದರೆ ಅವರ ಬದುಕು ಮತ್ತು ಬರಹ ಎರಡೂ ಸರಳ ಮತ್ತು ನೇರವೇ ಹೊರತು ಸಂಕೀರ್ಣವಲ್ಲ. ಮಾಸ್ತಿಯವರ ಆನಂತರದ ತಲೆಮಾರಿನಲ್ಲಿ ಪ್ರಾಯಃ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಈ ಬಗೆಯ-ಆದರೆ ಕಾಲೋಚಿತವಾದ ಆಧುನಿಕ ಮಾರ್ಪಾಡಿನೊಂದಿಗೆ-ಸ್ವಂತ ಮತ್ತು ಸ್ವತಂತ್ರ ಬದುಕಿನ ಬರಹಗಾರರಾಗಿದ್ದರು; ಎಲ್ಲೂ ಮಾಸ್ತಿಯವರ ಅಥವಾ ತನ್ನ ಇತರ ಪೂರ್ವಸೂರಿಗಳ ಪ್ರಭಾವ ಬೀಳದ ಅಥವಾ ಅನುಕರಣೆಯಂತೆ ಕಾಣದ ಭಾಷೆ, ವಿನ್ಯಾಸ, ಅಭಿವ್ಯಕ್ತಿಗಳ ಎಚ್ಚರವನ್ನು ವಹಿಸಿದ್ದರು. ತಮ್ಮ ಕೃತಿಯೊಂದರ ಮುನ್ನುಡಿಯಲ್ಲಿ ಅವರು ‘‘ಕಾದಂಬರಿ ಓದಿದಾಗ ಏನನ್ನಿಸುತ್ತದೆಯೋ ಅದಷ್ಟೇ ಮುಖ್ಯ’’ ಎನ್ನುತ್ತಾರೆ. (ಇಂತಹ ಇತರ ಲೇಖಕರೂ ಇರಬಹುದು; ನಾನು ಗಮನಿಸಿಲ್ಲ.) ಆದ್ದರಿಂದ ಮಾಸ್ತಿಯವರನ್ನು ಓದುವವರು ಅವರೊಂದಿಗೆ ನೇರ ಸಂವಾದವನ್ನು ಮಾಡುವುದು ಮತ್ತು ಬಾಹ್ಯ ಒತ್ತಡಗಳನ್ನು ಅಲಕ್ಷಿಸುವುದು ಮುಖ್ಯ.

ರಾಮಾಯಣದ ಕುರಿತು ಮಾಸ್ತಿ ಬರೆದದ್ದನ್ನು ಓದಿದಾಗ ಭಾರತೀಯ ಸಂಸ್ಕೃತಿ-ಸಾಹಿತ್ಯಗಳಲ್ಲಿ ಅಷ್ಟೇ ಪ್ರಭಾವಲಯದ ಇನ್ನೊಂದು ಕಾವ್ಯವಾದ ಮಹಾಭಾರತದ ಕುರಿತು ಮಾಸ್ತಿ ಏನು ಹೇಳುತ್ತಾರೆ ಎಂಬುದೂ ಸಾರಸ್ವತ-ಸಾಂಸ್ಕೃತಿಕ ವಲಯದಲ್ಲಿ ಕುತೂಹಲದ ಅಂಶವಾಗುತ್ತದೆ. ಇಂದು ಎಲ್ಲದಕ್ಕೂ ಒಂದು ‘ಉತ್ತರಾರ್ಧ’ (ಛಿಟ್ಠಿಛ್ಝಿ)ವನ್ನು ಜನರು ಅಪೇಕ್ಷಿಸುತ್ತಾರೆ. ಒಂದರ್ಥದಲ್ಲಿ ರಾಮಾಯಣದೊಂದಿಗೆ ಮಹಾಭಾರತವು ತೌಲನಿಕ ಅಧ್ಯಯನಕ್ಕೆ ಯಥಾಯೋಗ್ಯವಾಗಿದೆ. (ಕೆಲವು ಸಮಯದ ಹಿಂದೆ ನಾನು ಮಾಸ್ತಿಯವರ ‘ಆದಿಕವಿ ವಾಲ್ಮೀಕಿ’ ಕೃತಿಯ ಕುರಿತು ಬರೆದಾಗ ಮಾಸ್ತಿಯವರು ಬರೆದ ಮಹಾಭಾರತದ ವಿಮರ್ಶೆಯ ಕುರಿತು ಬರೆಯುವುದಿಲ್ಲವೇ ಎಂಬ ಪ್ರಶ್ನೆಗಳನ್ನೆದುರಿಸಿದ್ದೇನೆ!)

ಇದನ್ನರಿತೇ ಎಂಬಂತೆ ಮಾಸ್ತಿ 1952ರಲ್ಲಿ (ಅಂದರೆ 1938ರಲ್ಲಿ ಆದಿಕವಿ ವಾಲ್ಮೀಕಿ ಬರೆದ 14 ವರ್ಷಗಳ ಆನಂತರ) ‘ಭಾರತ ತೀರ್ಥ’ವನ್ನು ಬರೆದರು. ಅವರೇ ಹೇಳುವಂತೆ ‘‘ಆದಿಕವಿ ವಾಲ್ಮೀಕಿಯಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಮಾಡಿದ ಯತ್ನವನ್ನು ಈ ಪುಸ್ತಕದಲ್ಲಿ ಭಾರತವನ್ನು ಕುರಿತು ಮಾಡಿದೆ.’’ ಎನ್ನುತ್ತಾರೆ. ಅವರು ಎಂದಿನ ವಿನಯಶೀಲತೆಯಿಂದ ತಮ್ಮ ಆದಿಕವಿ ವಾಲ್ಮೀಕಿ ಕೃತಿಯನ್ನು ‘‘ರಾಮಾಯಣದ ಸಾರವನ್ನು ಸಂಗ್ರಹಿಸಲು ಮಾಡಿದ ಯತ್ನ’’ ಎಂದರೂ ಅವರ ಕೃತಿಸೂಚಿಯಲ್ಲಿಯೂ ಇದನ್ನು ‘ಆದಿಕವಿ ವಾಲ್ಮೀಕಿ’ (ರಾಮಾಯಣದ ಸಮೀಕ್ಷೆ) ಎಂದೇ ಇದ್ದರೂ ಅದು ಅಷ್ಟೇ ಅಲ್ಲ ಬದಲಾಗಿ ರಾಮಾಯಣವೆಂಬ ಕಾವ್ಯದ ದರ್ಶನ ಅಥವಾ ಆಪ್ತನೋಟ ಎಂದು ಮೇಲ್ನೋಟಕ್ಕೇ ಅನ್ನಿಸುತ್ತದೆ. (ಇದನ್ನು ಇಂದು ಬರುವ ಕಥಾಸಾರಾಂಶ ರೂಪದ ವಿಮರ್ಶೆಗಳೊಂದಿಗೆ ಹೋಲಿಸಬಹುದು!)

‘ಭಾರತ ತೀರ್ಥ’ ಎರಡು ಪ್ರತ್ಯೇಕ ಪದಗಳ ಜೋಡಣೆ. ಮುನ್ನುಡಿ ಯಲ್ಲಾಗಲೀ ಪ್ರಸ್ತಾವನೆಯಲ್ಲಾಗಲೀ ಈ ಪದಪುಂಜದ ಕುರಿತು ಸೂಚನೆಗಳಿಲ್ಲ. (2011ರ ಆವೃತ್ತಿಯ) 256 ಪುಟಗಳ ಈ ಕೃತಿಯ ಕೊನೆಯ ಭಾಗದಲ್ಲಿ ಮಾಸ್ತಿ ತಮ್ಮ ಆಸ್ತಿಕ ಮನೋಭಾವವನ್ನು ಈ ಕೃತಿಯ ಶೀರ್ಷಿಕೆಗೆ ಧಾರೆಯೆರೆದಿದ್ದಾರೆ: ‘‘ಅಸಂಖ್ಯಾತ ಮಹಾಪುರುಷ, ತಪಸ್ವಿ, ಋಷಿಗಳ ಶಾಸನ ಆಶೀರ್ವಚನ ಶುಭಾಶಯವನ್ನು ಒಳಗೊಂಡ ಭಾರತ ಗ್ರಂಥ ಅವರ ತಪಸ್ಸು ಜ್ಞಾನ ಧರ್ಮನಿಷ್ಠೆ ಸತ್ಯಸಂಕಲ್ಪಮಡುಗೂಡಿ ನಿಂತಿರುವ ಮಾನಸ ಸರೋವರ, ಪಾವನ ತೀರ್ಥ.’’ ಎಂದು ಹೇಳಿ ‘ಭಾರತೇ ತೀರ್ಥೇ’ ಎಂಬ ಉಲ್ಲೇಖವಿರುವ ಶ್ಲೋಕವೊಂದನ್ನು ಉದಾಹರಿಸಿ ಈ ಕೃತಿಗೆ ‘ಭಾರತ ತೀರ್ಥ’ ಎಂದು ನಾಮಕರಣಮಾಡಿದ್ದಾರೆ. ಆದರೆ ಈ ಕಾರಣಕ್ಕೆ ಕೃತಿಯಲ್ಲಿನ ಒಳಶೋಧದ ಮೌಲ್ಯಗಳು ಎಳ್ಳಷ್ಟೂ ವಂಚಿತವಾಗುವುದಿಲ್ಲ. ಮಾಸ್ತಿಯವರು ರಾಮಾಯಣ ಮತ್ತು ಮಹಾಭಾರತದ ‘‘ಎರಡು ಸಂದರ್ಭದಲ್ಲೂ ನನ್ನ ಮನೋಧರ್ಮ ಒಂದೇ. ವಿಚಾರಯುಕ್ತವಾದ ಶ್ರದ್ಧೆ, ವಿಚಾರದಿಂದ ಹುಟ್ಟಿದ ಭಕ್ತಿ. ಇದೊಂದು ಮಧ್ಯಮಾರ್ಗ: ಅತಿ ಹಳಬರಿಗೆ ಅಶ್ರದ್ಧೆಯಂತೆ, ಅತಿಹೊಸಬರಿಗೆ ಅಂಧಶ್ರದ್ಧೆಯಂತೆ, ಕಾಣುವ ಒಂದು ನಿಲುವು. ಆದರೆ ನನಗೆ ತೋರುವ ಮಟ್ಟಿಗೆ ನಮ್ಮ ಜನಾಂಗದ ಮುಂಬರಿವಿಗೆ ಇದು ಹೊರತು ಬೇರೆ ಮಾರ್ಗವಿಲ್ಲ. ಬೇರೆ ಯಾವ ನಿಲುವೂ ಇದರಷ್ಟು ಸಾಧಕವಲ್ಲ.’’ ಎನ್ನುತ್ತಾರೆ.

ಇಲ್ಲಿ ‘ವಿಚಾರಯುಕ್ತವಾದ ಶ್ರದ್ಧೆ, ವಿಚಾರದಿಂದ ಹುಟ್ಟುವ ಭಕ್ತಿ’ ಎಂಬುದು ಅರ್ಥಪೂರ್ಣ. ಶ್ರದ್ಧೆಯಾಗಲಿ, ಭಕ್ತಿಯಾಗಲಿ, ವಿಚಾರದಿಂದ ಹುಟ್ಟಿದರೆ ಮಾತ್ರ ಜಾಗೃತವಾಗಿರುತ್ತದೆ. ವಿಚಾರಹೀನತೆಯಿಂದ ಅಥವಾ ಭಾವಮಾತ್ರದಿಂದಷ್ಟೇ ಹುಟ್ಟಿದರೆ ಅದು ಕುರುಡಾಗಿರುತ್ತದೆ. ಮಾಸ್ತಿ ಬಳಸುವ ‘ಜನಾಂಗ’, ‘ಧರ್ಮ’ ಮುಂತಾದ ಪದಗಳು ಅನೇಕ ಬಾರಿ ತಪ್ಪುಕಲ್ಪನೆಗೆ ಎಡೆಮಾಡಿಕೊಟ್ಟದ್ದಿದೆ. ಅವರ ವೈಯಕ್ತಿಕ ನಂಬಿಕೆ, ಶ್ರದ್ಧೆ, ಭಕ್ತಿ, ನಿಲುವು ಇವನ್ನು ಅವರು ಯಾವತ್ತೂ ಯಾರ ಮೇಲೂ ಹೇರಿಲ್ಲ. ಅವರು ಜೀವಪರ. ಈ ದೃಷ್ಟಿಯಿಂದಲೇ ಮಾಸ್ತಿಯನ್ನು ಕಾಣಬೇಕು. ಪರಸ್ಪರ ದ್ವೇಷಪೂರಿತ ವಾತಾವರಣವಿರುವ ಇಂದಿನ ಸಂಕುಚಿತ ಸಮಾಜದಲ್ಲಿ ಪದಗಳನ್ನು ಸಂದರ್ಭದಿಂದ ಹೊರಗೆಳೆದು ಕೂದಲನ್ನು ಸೀಳಿದಂತೆ ಸೀಳಿ ತಮ್ಮ ಮೂಗಿನ ನೇರಕ್ಕೆ ಅರ್ಥವಿಸಿದರೆ ಅದು ಮಾಸ್ತಿಯವರ ಬದುಕಿನ, ಮತ್ತು ಬರಹದ ಮೌಲ್ಯಗಳಿಗೆ ಅಪಚಾರವೆಸಗಿದಂತೆ. (1982-83ರ ಅವಧಿಯಲ್ಲಿ ಪ್ರಕಟವಾದ ಮತ್ತು ಸಾಹಿತ್ಯದಿಂದ ಹೊರತಾದ ವ್ಯಾಪ್ತಿಯಿರುವ ಅವರ ‘ಅಂತರಗಂಗೆ’ ಹಾಗೂ ‘ಧರ್ಮ ಸಂರಕ್ಷಣೆ’ ಈ ಕೃತಿಗಳಲ್ಲಿ ಇಂತಹ ತಪ್ಪುಕಲ್ಪನೆಗಳಿಗೆ ಮತ್ತು ಅವರನ್ನು ಟೀಕಿಸುವವರಿಗೆ ಅವಕಾಶಗಳಿರುವುದು ಗೋಚರವಾಗುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ಚರ್ಚಿಸಬಹುದು.)

ಕೃತಿಯ ವಿನ್ಯಾಸ, ಬರಹದ ಶಿಸ್ತು ಮತ್ತು ಭಾಷೆ ಹೆಚ್ಚುಕಡಿಮೆ ‘ಆದಿಕವಿ ವಾಲ್ಮೀಕಿ’ ಕೃತಿಯಂತೆಯೇ ಇದೆ. ಹಾಗೆಯೇ ರಾಮಾಯಣ ಹೇಗೆ ಅವರ ಪಾಲಿಗೆ ಪುರಾಣವಲ್ಲವೋ ಮತ್ತು ಕಾವ್ಯವಾಗಿದೆಯೋ ಹಾಗೆಯೇ ಮಹಾಭಾರತವೂ ಅವರ ಪಾಲಿಗೆ ಕಾವ್ಯ; ಪುರಾಣವಲ್ಲ. ಹೀಗೆ ದೃಷ್ಟಿಸಿದರೆ ಮಾತ್ರ ಯಾವುದೇ ಸಾಹಿತ್ಯದ ಸಾವಯವಶಿಲ್ಪ ಸೃಷ್ಟಿಯಾದೀತು. ರಾಮಾಯಣವನ್ನು ನೆನಪಿಸುತ್ತ ಅವರು ‘‘ಗ್ರಂಥ ಕಾವ್ಯತ್ವದಿಂದ ಒಂದು ಮತಗ್ರಂಥದ ಸ್ಥಾನಕ್ಕೆ ಏರಿತು; ಅಥವಾ ಇಳಿಯಿತು’’ ಎಂದು ವಿಷಾದ-ವ್ಯಂಗ್ಯವಾಡುವ ಮೂಲಕ ಇಂದಿನ ಸ್ಥಿತಿಗತಿಗಳಿಗೆ ಮಾಸ್ತಿ ಅಂದೇ ಕನ್ನಡಿ ಹಿಡಿದಿದ್ದರು. ಧರ್ಮಗ್ರಂಥಗಳಲ್ಲದ ಸಾಹಿತ್ಯಕೃತಿಗಳು ಧರ್ಮಗ್ರಂಥಗಳಾಗುವುದು ಭಾರತದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಮಾತ್ರವೇ ಸಾಧ್ಯವಾಗಿದೆ. ಮಾಸ್ತಿ ಗುರುತಿಸಿದ ಮಹಾಭಾರತವು ವ್ಯಾವಹಾರಿಕ ಅಥವಾ ಲೌಕಿಕ ಕತೆ. ರಾಮಾಯಣವು ರಾಮನ ಕಥೆಯನ್ನು ಹೊರತು ತೆಂಗಿನ ಮರದಂತೆ ಎತ್ತರಕ್ಕೆ ಬೆಳೆದರೆ ಮಹಾಭಾರತವು ರಾಮನಂತೆಯೇ ಅವತಾರಪುರುಷನೆನಿಸಿದ ಕೃಷ್ಣನ ಕಥೆಯನ್ನೊಳಗೊಂಡರೂ ಎತ್ತರದೊಂದಿಗೆ ವಿಸ್ತಾರವನ್ನೂ ತಳೆಯಿತು. ಮನುಷ್ಯನ ರೀತಿ-ನೀತಿ ಪ್ರವೃತ್ತಿಗಳನ್ನು ಶೋಧಿಸುವ ಮೂಲಕ ಬಿಳಲುಗಳನ್ನು ಬಿಡುವ ಮೂಲಕ ಮತ್ತೆ ನೆಲಕ್ಕೇ ಮರಳಿತು. ರಾಮಾಯಣದ ಯಾವ ಭಾಗವನ್ನೂ ನಿತ್ಯ ಧ್ಯಾನಕ್ಕಾಗಲೀ ಸ್ತೋತ್ರಕ್ಕಾಗಲೀ ಪ್ರತ್ಯೇಕಿಸಿದ್ದು ಕಂಡು ಬರುವುದಿಲ್ಲ. ಆದರೆ ಮಹಾಭಾರತದ ‘ಭಗವದ್ಗೀತೆ’ ಮತ್ತು ‘ವಿಷ್ಣುಸಹಸ್ರನಾಮ’ ಎಂಬ ಕಾವ್ಯಕಾಲೀನ ಭಾಗಗಳು ಪ್ರತ್ಯೇಕವಾಗಿ ಭಕ್ತಿಯ ಸಂಕೇತವಾದ ಭಗವನ್ನಾಮಸ್ಮರಣೆಯೆಂಬಂತೆ ಸ್ತೋತ್ರಗೊಳ್ಳುತ್ತಿವೆ. ಮಾಸ್ತಿ ಹೇಳುವಂತೆ ‘‘ಈ ಕೃತಿ ಎಷ್ಟೇ ಧರ್ಮವನ್ನು ಉಪದೇಶಿಸಿದರೂ ಈಗಲೂ ಒಂದು ಲೌಕಿಕ ಗ್ರಂಥವೆಂಬಂತೆ ಬಹು ರೀತಿಯ ಜನಕ್ಕೆ ಪ್ರಿಯವಾಗಿದೆ.’’

ಮಾಸ್ತಿಯವರು ಈ ಕಾವ್ಯದಲ್ಲಿ ಚಿತ್ರಿಸಲಾದ ಪಾಂಡವರು, ದ್ರೌಪದಿ, ದುರ್ಯೋಧನ, ದುಶ್ಶಾಸನ, ಕರ್ಣ, ಕೃಷ್ಣ, ಬಲರಾಮ ಹೀಗೆ ಇಲ್ಲಿನ ಒಂದೊಂದು ಮುಖ್ಯಪಾತ್ರದ ಕುರಿತೂ ಅಭ್ಯಸಿಸಿ ತಮ್ಮ ವಿವೇಕಯುತ ದೃಷ್ಟಿಕೋನವನ್ನು ವಿವರವಾಗಿ ನೀಡಿದ್ದಾರೆ. ಮಹಾಭಾರತದಲ್ಲಿ ಬರುವ ಮೌಲ್ಯಗರ್ಭಿತವಾದ ವಿದುಲೋಪಖ್ಯಾನ, ನಳ ಹರಿಶ್ಚಂದ್ರ ಸಾವಿತ್ರಿ, ಧರ್ಮವ್ಯಾಧ, ಸೋಮಕ ಹೀಗೆ ಉಪಖ್ಯಾನ/ಉಪಕಥೆಗಳ ಕುರಿತೂ ಬೆಳಕು ತೋರಿದ್ದಾರೆ. ಯಕ್ಷಪ್ರಶ್ನೆಯಂತಹ ಸಂಕೀರ್ಣ ಸಂದರ್ಭವನ್ನು ಕಾವ್ಯಾಸಕ್ತಿಯಿಂದ ವಿಶ್ಲೇಷಿಸಿದ್ದಾರೆ. ಮಹಾಭಾರತವು ಬೋಧಿಸುವ ನೀತಿ, ಧರ್ಮ ಮುಂತಾದ ವಿಚಾರಗಳನ್ನು ಸಾರ್ವಕಾಲಿಕ ಪ್ರಸ್ತುತವಾಗಿ ಸ್ವಲ್ಪ ಗುಮಾನಿಯಿಂದಲೇ ಶೋಧಿಸಿದ್ದಾರೆಯೇ ವಿನಾ ಅಲ್ಲಿ ಬರೆದದ್ದೆಲ್ಲವೂ ಸರಿಯೆಂಬ ಅಂಧಭಕ್ತಿಯಿಂದಲ್ಲ. ಯಜ್ಞಯಾಗಾದಿಗಳನ್ನು ಉಲ್ಲೇಖಿಸುತ್ತ ಅವು ಧರ್ಮರಕ್ಷಣೆಗಾಗಿಯೇ ಎಂಬ ವಾದವನ್ನು ಸಂಶಯಪಡುತ್ತ ‘‘ಯಜ್ಞದಲ್ಲಿ ಕೊಲ್ಲುವುದು ಮೃಗವನ್ನಲ್ಲ; ಧರ್ಮವನ್ನು’’ ಎಂಬ ಅಭಿಪ್ರಾಯವನ್ನು ಉಲ್ಲೇಖಿಸುತ್ತಾರೆ.

ಇಂತಹ ಅನೇಕ ವಿಚಾರಗಳನ್ನು ಮಾಸ್ತಿ ಚರ್ಚಿಸುತ್ತಾರೆ. ಅವರಿಗೆ ತನಗನ್ನಿಸಿದ್ದನ್ನು ಹೇಳುವುದಕ್ಕೆ ಅಳುಕಿಲ್ಲ. ಅವರ ಮಧ್ಯಮಾರ್ಗಕ್ಕೂ ಇಂದು ವಿಮರ್ಶೆಯಲ್ಲಿ ಎಲ್ಲರನ್ನೂ ಮೆಚ್ಚಿಸುವ ಹವ್ಯಾಸ ಮತ್ತು ಅದರಿಂದಾಗಿ ಸೂಚಿತವಾಗುವ ಅಸ್ಪಷ್ಟತೆ, ಎಡೆಬಿಡಂಗಿತನಕ್ಕೂ ಅಪಾರ ವ್ಯತ್ಯಾಸವಿದೆ. ಮಾಸ್ತಿಯವರ ಈ ಕೃತಿಯ ಬಗ್ಗೆ ವಿಸ್ತಾರವಾಗಿ ಬರೆಯುವಷ್ಟಿದೆ. ಕಣ್ಣುಮುಚ್ಚಿ ಓದುವವರಿಗೆ ಮಹಾಭಾರತ ಕಥೆಯನ್ನಷ್ಟೇ ಹೇಳಬಹುದು. ಮಾಸ್ತಿ ಮತ್ತು ಅಂತಹ ಶ್ರೇಷ್ಠರು ನೋಡುವಂತೆ ನೋಡಿದರೆ ಮಹಾಭಾರತವು ಎಲ್ಲ ಕಾಲಕ್ಕೂ ಸದಾ ಪ್ರಸ್ತುತವೇ. (ಇರಾವತಿ ಕರ್ವೆಯವರ ಯುಗಾಂತ ಒಂದು ಸಮರ್ಥ ಕೃತಿ; ಎ.ಎನ್.ಮೂರ್ತಿರಾಯರೂ ಇಂತಹದೇ ಸಮಸ್ಯೆಗಳ ಕ್ಷ-ಕಿರಣದ ಮಹಾಭಾರತದಲ್ಲಿ ಕೇಡಿನ ಸಮಸ್ಯೆ ಎಂಬ ಒಂದು ಕೃತಿಯನ್ನು ಬರೆದಿದ್ದಾರೆ.) ಬರಹ ಕಾಲಾತೀತ ಪ್ರಸ್ತುತತೆಯನ್ನು ಪಡೆಯುವುದೆಂದರೆ ಇದೇ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)