varthabharthi


ಅನುಗಾಲ

ನಡೆ-ನುಡಿಯ ನಡುವೆ

ವಾರ್ತಾ ಭಾರತಿ : 12 Nov, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮುಖ್ಯ ನಡೆ ಮತ್ತು ನುಡಿಗಳಲ್ಲಿ ತೀವ್ರ ಅಂತರವಾದರೆ ಸಂಸ್ಕೃತಿಯೆಂದು ನಾವಂದುಕೊಳ್ಳುವುದು ಭ್ರಮೆಯಾಗುತ್ತದೆ. ಅದು ಅನುಕೂಲ ಶಾಸ್ತ್ರ ಮತ್ತು ರಾಜಕೀಯವಾಗುತ್ತದೆ. ಒಂದು ದೇಶದ, ಕಾಲದ, ಸಮಾಜದ ಮಾನವನ್ನು ಅದು ಕಳೆಯುತ್ತದೆ. ಭಾರತಕ್ಕೆ ಇಂತಹ ಅನೇಕ ಪ್ರಸಂಗಗಳು ಬಂದೊದಗುತ್ತಿವೆ. ಇವನ್ನು ಅಳೆಯುವ ಮತ್ತು ಬೆಳೆಯದಂತೆ ನೋಡುವ ಹೊಣೆ ಎಲ್ಲ ತಲೆಮಾರುಗಳಿಗೂ ಇದೆ. ಅದಿಲ್ಲವಾದರೆ ಬೇಕೆಂದಾಗ ಕಮಲಾ ಹ್ಯಾರಿಸ್ ಭಾರತೀಯರಾಗುತ್ತಾರೆ; ಸೋನಿಯಾ ಪರಕೀಯರಾಗುತ್ತಾರೆ.


ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಉಪಾಧ್ಯಕ್ಷರ ಆಯ್ಕೆ ಅಮೆರಿಕದ ನಾಗರಿಕತ್ವ ಮತ್ತು ಮಹಿಳಾ ಮನ್ನಣೆಯ ಎರಡು ವಿಚಾರಗಳಿಗೆ ಸಂಬಂಧಿಸಿದಂತಿದೆ. ಅಮೆರಿಕದ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾದಾಗ ಅಮೆರಿಕ ಪಟ್ಟ ಸಂತೋಷಕ್ಕಿಂತಲೂ ಹೆಚ್ಚು ಭಾರತ ಸಂಭ್ರಮಿಸಿದಂತಿತ್ತು. ಮಹಿಳೆಯೊಬ್ಬರು ಅಮೆರಿಕದ ಉಪಾಧ್ಯಕ್ಷೆಯಾದದ್ದು ಇದೇ ಮೊದಲೆಂದು ನನ್ನ ತಿಳಿವಳಿಕೆ. ಅಲ್ಲಿನ ಮತದಾರರಿಗೆ ಆಕೆ ಅಮೆರಿಕನ್ನರು. ಜೋ ಬೈಡನ್ ಅವರ ಜೊತೆಯ ಡೆಮಾಕ್ರಟಿಕ್ ಅಭ್ಯರ್ಥಿ. ಬಹಳ ಸೂಕ್ಷ್ಮವಾಗಿ ಕಾಣುವವರಿಗೆ ಆಕೆ ಬಿಳಿಯರಲ್ಲ. ಹಾಗೆಂದು ಅಮೆರಿಕದ ಕರಿಯರೂ ಅಲ್ಲ. ಏಶ್ಯದ ಕಂದು ಹಿನ್ನೆಲೆಯವಳು. ಆದರೆ ಅಮೆರಿಕದ ಪ್ರಜಾತಂತ್ರ ಮತ್ತು ಜೀವನ ವಿಧಾನದಲ್ಲಿ ಈ ಅಂಶದ ಕುರಿತು ತರತಮವಿಲ್ಲ. ಎಲ್ಲರೂ ಅಮೆರಿಕನ್ನರು. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎಂಬುದೂ ರಾಜಕೀಯ ಅಂಶಗಳೇ ವಿನಾ ನಿತ್ಯದ ಬದುಕನ್ನು ಬಾಧಿಸುವ ಅಂಶಗಳಲ್ಲ. ಡೊನಾಲ್ಡ್ ಟ್ರಂಪ್‌ನಂತಹ ಅಪವಾದಗಳನ್ನುಳಿದರೆ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಗೆದ್ದವನೊಂದಿಗೆ ದೇಶದ ಮುನ್ನಡೆಗೆ ಹೆಜ್ಜೆ ಹಾಕುವುದು ಅಲ್ಲಿನ ಪ್ರವೃತ್ತಿಯಿರಬೇಕೆಂದು ಈ ವರೆಗಿನ ಇತಿಹಾಸ ಹೇಳುತ್ತದೆ. ಅಧ್ಯಕ್ಷರಾಗುವುದೂ ಅಲ್ಲಿ ಸಾಧ್ಯ. ಒಟ್ಟು ತಾತ್ಪರ್ಯವೆಂದರೆ ಅಮೆರಿಕ ದೇಶದ ಆಗುಹೋಗುಗಳಲ್ಲಿ ಪುರುಷ-ಮಹಿಳೆ, ಬಿಳಿ-ಕರಿ, ದೇಶಿ-ವಿದೇಶಿ ಎಂಬ ವ್ಯತ್ಯಾಸವನ್ನು ಅಮೆರಿಕದ ಮುಖ್ಯವಾಹಿನಿ ಅನುಭವಿಸುತ್ತಿಲ್ಲ.

ಎಲ್ಲದಕ್ಕೂ ಎಲ್ಲ ಕಡೆಯಲ್ಲೂ ಷರತ್ತುಗಳು ಮತ್ತು ಅಪವಾದಗಳಿರುತ್ತವೆ. ಅಮೆರಿಕದಲ್ಲೂ ಮನುಷ್ಯನ ಮೂಲ ಪ್ರವೃತ್ತಿಯಾದ ಹಿಂಸೆ ನಡೆಯುತ್ತದೆ. ವ್ಯವಹಾರದಲ್ಲಿ ವಂಚನೆ ನಡೆಯುತ್ತದೆ. ವರ್ಣಭೇದದ ಆಧಾರದಲ್ಲಿ ತರ್ಕಿಸುವವರೂ ಇದ್ದಾರೆ. ಆದರೆ ಒಂದು ದೇಶವಾಗಿ ಅಮೆರಿಕ ಈ ಅತಿಗಳನ್ನು ಸ್ವೀಕರಿಸದು. ಅದನ್ನು ಇತರ ದೇಶಗಳ ಮೇಲೆ ಪ್ರಯೋಗಿಸೀತೇ ಹೊರತು ಈ ಕಾರಣಕ್ಕಾಗಿ ತನ್ನ ಕಠಿಣ ನಿಯಮಗಳ ಪಾಲನೆಯ ಹೊರತಾಗಿ ವಿದೇಶೀಯರನ್ನು ಹೊರಗಿಡದು. ಪ್ರಾಯಃ ಇದೇ ಕಾರಣಕ್ಕೆ ಭಾರತದ ಬಹುಪಾಲು ಪ್ರತಿಭಾವಂತರೂ, ಪಂಡಿತರೂ ಅಮೆರಿಕಕ್ಕೆ ಹೋಗಿದ್ದಾರೆ. ಈ ಪೈಕಿ ಅನೇಕರು ಅಲ್ಲೇ ನೆಲೆಸಿದ್ದಾರೆ; ಈಗಲೂ ಭಾರತೀಯ ಸಂಸ್ಕೃತಿಯೆಂದು ಕರೆಯಲ್ಪಡುವ ಜೀವನವಿಧಾನದ ಪ್ರಣೀತರನೇಕರು ಅಮೆರಿಕಕ್ಕೆ ಪ್ರವೇಶ ಸಿಕ್ಕಿದರೆ ಸಾಕೆಂದು ತವಕಿಸುತ್ತಾರೆ. ಅಮೆರಿಕದಲ್ಲಿರುವ (ಅಲ್ಲಿ ಅಂತಲ್ಲ, ಪಾಶ್ಚಾತ್ಯ ದೇಶಗಳೆಲ್ಲೆಡೆ) ವಿದೇಶೀಯರಲ್ಲಿ ಚೀನಾವನ್ನು ಹೊರತುಪಡಿಸಿದರೆ ಭಾರತೀಯರೇ ಹೆಚ್ಚೆಂದು ಕೇಳಿದ್ದೇನೆ. ವಿದ್ಯುನ್ಮಾನ ಯುಗದಲ್ಲಂತೂ ನಮ್ಮ ತಂತ್ರಜ್ಞಾನಿಗಳು ಮತ್ತು ಕಂಪೆನಿಗಳು ಅಮೆರಿಕದ ವೀಸಾಗಳಿಗೆ ಸಾಲುನಿಲ್ಲುತ್ತಾರೆ. ಈ ಬಗೆಯ ಶ್ರೇಷ್ಠತೆಯ ಆಧುನಿಕ ಭಾರತಕ್ಕೆ ಅಲ್ಲಿನ ಶಿಕ್ಷಣ, ಪದವಿ, ಉದ್ಯೋಗ, ಸರ್ಟಿಫಿಕೇಟ್, ಪ್ರಶಸ್ತಿ, ಪುರಸ್ಕಾರ ಇವೇ ಬದುಕಿನ ಔನ್ನತ್ಯದ ಮಾನದಂಡಗಳು. ಭಾರತೀಯರಿಗೆ ಅಮೆರಿಕದ ಮನ್ನಣೆಯೆಂದರೆ ಜಾಗತಿಕ ಮನ್ನಣೆ. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣ ಭಾರತದಲ್ಲಿ ಮಾಡಿದ್ದರೆ ಈ ಬಗೆಯ ಮನ್ನಣೆ ದೊರೆಯುತ್ತಿರಲಿಲ್ಲವೇನೋ? ಏಕೆಂದರೆ ಆಗ ಅವರು ನಮ್ಮ ಒಬ್ಬ ಗೊಡ್ಡು ಪಂಡಿತರಾಗಿರುತ್ತಿದ್ದರು. ನಾವು ಕೇಳುವ, ನೋಡುವ ಮತ್ತು ಅನುಭವಿಸುವ ವಿಚಾರಗಳನ್ನು, ಘಟನೆಗಳನ್ನು ಆಧರಿಸಿ ಹೇಳುವುದಾದರೆ ನಡೆ ಮತ್ತು ನುಡಿಯ ನಡುವಣ ಅಂತರವು ಭಾರತದಲ್ಲಿರುವಷ್ಟು ಜಗತ್ತಿನ ಇನ್ನೆಲ್ಲೂ ಇರಲಾರದೆಂದು ನನ್ನ ನಂಬಿಕೆ.

ಷರತ್ತುಗಳು ಮತ್ತು ಅಪವಾದಗಳು ಅನ್ವಯವಾಗುತ್ತವೆಂದು ತಿಳಿದೇ ಈ ಪ್ರಮೇಯ. ಭಾರತದಲ್ಲಿ ಮಹಿಳೆಯರಿಗೆ ಅತೀ ಹೆಚ್ಚಿನ ಸ್ಥಾನಮಾನವಿದೆಯೆಂಬುದು ಪ್ರತೀತಿ. ಸಂಸ್ಕೃತದ ಅಲ್ಪಸ್ವಲ್ಪ ಪರಿಚಯವಿರುವವರೂ ‘‘ಯತ್ರ ನಾರ್ಯಸ್ತು ಪೂಜ್ಯಂತೇ..’’ ಎಂದು ಹೇಳುತ್ತಲೇ ಇರುತ್ತಾರೆ. ಇಂತಹ ಪ್ರೋತ್ಸಾಹದಾಯಕ ಮತ್ತು ಕೆಲವೊಮ್ಮೆ ಆವೇಶದಾಯಕ ಮಾತುಗಳು ನಮ್ಮ ನರನಾಡಿಗಳಲ್ಲಿ ಪ್ರವಹಿಸುತ್ತಲೇ ಇರುತ್ತವೆ. ನಮ್ಮ ಮಾತುಗಳು, ಬರಹಗಳು ಇದನ್ನೇ ಹೇಳುತ್ತವೆ. ಧರ್ಮ ಮತ್ತು ರಾಜಕೀಯದಲ್ಲಂತೂ ಇದು ಬಹಳ ಪರಿಣಾಮಕಾರೀ ಅಸ್ತ್ರ. ನಮ್ಮ ಶಕ್ತಿ ದೇವತೆಗಳೆಲ್ಲ ಮಹಿಳೆಯರೇ. ಮೈತ್ರೇಯಿ, ಗಾರ್ಗಿ, ಅರುಂಧತಿ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಭಗಿನಿ ನಿವೇದಿತಾ, ಸಾವಿತ್ರಿಬಾಯಿ ಫುಲೆ, ಹೀಗೆ ಸಾಲುಸಾಲೇ ಶ್ರೇಷ್ಠ ಮಹಿಳೆಯರನ್ನು ಉದಾಹರಿಸುತ್ತೇವೆ. ಇತಿಹಾಸ ಪುರಾಣಗಳಲ್ಲಿ ಮಹಿಳೆಯರು ರಾಜ್ಯವಾಳಿದ್ದು ಬೇಕಷ್ಟಿದೆ. ತೊಟ್ಟಿಲು ತೂಗುವ ಕೈ ರಾಜ್ಯವಾಳೀತು ಎಂಬ ಹೇಳಿಕೆ ಪೊಳ್ಳಲ್ಲ. ಸ್ವಾಮಿ ವಿವೇಕಾನಂದರನ್ನು ಬೇಕಾದಾಗಲೆಲ್ಲ ಉಲ್ಲೇಖಿಸುವ ನಮ್ಮ ಜನರು ಅವರ ಕುರಿತಂತೆ ಹೇಳುವ ಆಖ್ಯಾನವೊಂದರಲ್ಲಿ ಭಾರತೀಯರು ಪತ್ನಿಯೊಬ್ಬಳನ್ನು ಬಿಟ್ಟು ಇನ್ನುಳಿದ ಮಹಿಳೆಯರನ್ನು ತಾಯಿಯಂತೆ ನೋಡುತ್ತಾರೆ; ಆದರೆ ಪಾಶ್ಚಾತ್ಯ ದೇಶಗಳಲ್ಲಿ ತಾಯಿಯೊಬ್ಬಳನ್ನು ಬಿಟ್ಟರೆ ಉಳಿದ ಮಹಿಳೆಯರನ್ನು ಪತ್ನಿಯಂತೆ ನೋಡುತ್ತಾರೆ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಇದೊಂದು ಅತಿಯಾದ ಕಲ್ಪನೆ. ಇದನ್ನು ಅವರು ಹೇಳಿದರೇ? ಹೇಳಿದ್ದರೂ ಅದರ ಸ್ವರೂಪವೇನು ಎಂಬುದು ವಿವೇಕಜಿಜ್ಞಾಸೆಗೆ ಸಂಬಂಧಿಸಿದ್ದು. ಇದರ ಒಳಾರ್ಥವು ಅಸಂಬದ್ಧವಾದದ್ದು. ಇದರ ಸಾಧುತ್ವ, ಸಾಂದರ್ಭಿಕ ಅರ್ಥವಿವರಣೆ ಬದಿಗಿರಲಿ. ಆದರೆ ಭಾರತದಲ್ಲಿ ಇದು ನಿಜವೇ? ನಿಜಕ್ಕೂ ಹೀಗಿದೆಯೇ? ಯಾವ ಕಾಲದಲ್ಲೂ ಹೀಗಿರಲಿಲ್ಲವಾದ್ದರಿಂದ ಆತ್ಮಶ್ಲಾಘನೆಗೆ ಇದನ್ನು ರೂಪಕದಂತೆ ಬಳಸಲಾಗಿದೆಯೇ ಹೊರತು ಇದರ ವಾಸ್ತವತೆಯನ್ನು ನಂಬಬೇಕಾಗಿಲ್ಲ.

ಈಗ ಕೆಲವು ವರ್ಷಗಳಿಂದಂತೂ ಅನೇಕ ನಿರ್ಭಯಾ ಪ್ರಕರಣಗಳು ನಡೆಯುತ್ತಿವೆ; ಇದು ಮಾಧ್ಯಮ, ಚಲನಚಿತ್ರ ಮತ್ತಿತರ ರಂಗಗಳನ್ನು ಎಷ್ಟು ಆಕ್ರಮಿಸಿದೆಯೆಂಬುದು ‘ಮಿಟೂ’ ಆಂದೋಲನದಿಂದ ಬಹಿರಂಗಗೊಂಡಿದೆ. ಜನಸಂಖ್ಯೆಯ ಅಂಕಿ-ಅಂಶಗಳನ್ನು ಪರಿಗಣಿಸಿದರೆ ಮಹಿಳೆಯರು ಸರಿಸಮಾನ ಸಂಖ್ಯೆಯಲ್ಲಿದ್ದಾರೆ. ಜೈವಿಕ ಲಕ್ಷಣಗಳನ್ನುಳಿದು ಇನ್ನೆಲ್ಲ ವಿಚಾರಗಳಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾಗಿದ್ದಾರೆ. (ಭ್ರಷ್ಟಾಚಾರ ಮತ್ತಿತರ ಅಕ್ರಮಗಳಲ್ಲೂ ಈ ಸಮಾನತೆಯ ಕೂಗೆದ್ದಿರುವುದು ಆತಂಕಕಾರಿ!) ರಕ್ಷಣಾಪಡೆಗಳೂ ಸೇರಿದಂತೆ ಉದ್ಯೋಗಾವಕಾಶಗಳಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಆದರೂ ಜನಪ್ರಾತಿನಿಧ್ಯದ ಸಂಸತ್ತು, ಶಾಸನ ಸಭೆ/ಪರಿಷತ್ತುಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಬೇಕೆಂಬ ಕೂಗೆದ್ದು ದಶಕಗಳೇ ಕಳೆದಿವೆಯಾದರೂ ಇಂದಿಗೂ ಅದು ಕಾನೂನಾಗಿಲ್ಲ. ಸಂವಿಧಾನದ ಉದ್ದೇಶವನ್ನು ಸಾರ್ಥಕಗೊಳಿಸುವಲ್ಲಿ ಮಹಿಳೆಯರನ್ನು ಎಲ್ಲರೂ (ಮಹಿಳಾ ರಾಜಕಾರಣಿಗಳೂ ಸೇರಿ) ಕಡೆಗಣಿಸಿದ್ದಾರೆ. ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗೆ ಮಹಿಳೆ ಯಾವುದೇ ಸ್ಥಾನದಲ್ಲಿದ್ದರೂ ಅವರ ಹಕ್ಕನ್ನು ವಂಚಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿದೆ. ಈ ಸಂಪ್ರದಾಯವು ಮುಂದುವರಿದರೆ ರಾಜಾರಾಮ ಮೋಹನರಾಯ್, ಲಾರ್ಡ್ ವಿಲಿಯಂ ಬೆಂಟಿಂಕ್, ಈಶ್ವರಚಂದ್ರ ವಿದ್ಯಾಸಾಗರ್ ಮುಂತಾದವರು ಕೈಗೊಂಡ ಸುಧಾರಣೆಗಳನ್ನು ರದ್ದುಮಾಡಿ ಬಾಲ್ಯವಿವಾಹ, ಸತಿಸಹಗಮನವೇ ಮುಂತಾದ ಪದ್ಧತಿಗಳು ಮತ್ತೆ ಜಾರಿಯಾದರೆ ಅಚ್ಚರಿ-ಆಘಾತವಾಗಬೇಕಾಗಿಲ್ಲ. ಮತ್ತೆ ಕಮಲಾ ಹ್ಯಾರಿಸ್ ಕಡೆಗೆ ಗಮನ ಹರಿಸೋಣ. ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾದದ್ದನ್ನು ಕೇಳಿ, ಓದಿ ಸಂತೋಷಪಡುವ ನಾವು ಆಕೆ ತನ್ನ ಜಾತಿ, ಮತ, ಧರ್ಮ, ನಾಗರಿಕತ್ವ ಇವೆಲ್ಲವನ್ನೂ ಕ್ರೈಸ್ತಮತ ಮತ್ತು ಅಮೆರಿಕದೊಂದಿಗೆ ವಿಲೀನಗೊಳಿಸಿದ್ದಾರೆಂಬುದನ್ನು ಮರೆಯುತ್ತೇವೆ.

ಭಾರತೀಯವೆಂಬ ಸಂಪ್ರದಾಯವನ್ನು ನಂಬುವುದಾದರೆ, ಅನುಸರಿಸುವುದಾದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ಇದು ಸಮ್ಮತಿಯಾಗದಿದ್ದರೂ ಆಕೆಗೆ ಹೊಸದೊಂದು ಸಾಂಸಾರಿಕ ಗುರುತಂತೂ ಅಂಟಿಕೊಳ್ಳುತ್ತದೆ. ಇರಲಿ; ಇದು ಭಾರತೀಯರ ಔದಾರ್ಯವೆಂದು ಪರಿಗಣಿಸೋಣ. ಆದರೆ ಇದೇ ಔದಾರ್ಯವನ್ನು ನಾವು ಭಾರತೀಯರೇ ಆದ ರಾಜೀವ್ ಗಾಂಧಿಯವರನ್ನು ಮದುವೆಯಾಗಿ ಬಂದ ಸೋನಿಯಾ ಗಾಂಧಿ ಕುರಿತು ಪ್ರದರ್ಶಿಸುತ್ತೇವೆಯೇ? ಆಕೆ ನೆಹರೂ ಕುಟುಂಬದ ಪ್ರಭಾವದಿಂದಲೋ ವಾರಸುದಾರಿಕೆಯಿಂದಲೋ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಹಿಡಿದರೆಂದು ಹೇಳುವುದು ನಾವು ನಂಬುವ, ಅನುಸರಿಸುತ್ತೇವೆಂದು ಹೇಳುವ ಪ್ರಜಾತಂತ್ರಕ್ಕೆ, ಜನಾಭಿಪ್ರಾಯಕ್ಕೆ ಮಾಡುವ ಅಪಚಾರ. 2004ರಲ್ಲಿ ಆಕೆ ಇನ್ನೇನು ಪ್ರಧಾನಿಯಾಗುತ್ತಾರೆಂದು ಅನ್ನಿಸಿದಾಗ ಸುಷ್ಮಾಸ್ವರಾಜ್ ಅವರಿಗೆ ವಿದೇಶೀಯತೆಯ ಪರಕೀಯತೆಯನ್ನು ಆರೋಪಿಸಿ ಪ್ರತಿಭಟಿಸಿ ಚಳವಳಿ ಹೂಡುವುದಾಗಿ (ತಲೆಬೋಳಿಸುವುದಾಗಿ ಹೇಳಿದರೆಂದೂ ವರದಿಯಾಗಿದೆ!) ಬೆದರಿಕೆ ಹಾಕಿದ್ದು ಈಗ ಇತಿಹಾಸ. ಇದೆಲ್ಲದರ ಪರಿಣಾಮವಾಗಿ ಸೋನಿಯಾ ಬದಲಿಗೆ ಮನಮೋಹನ್ ಸಿಂಗ್ ಪ್ರಧಾನಿಯಾದರು.

ಇಂತಹ ಸಂದರ್ಭದಲ್ಲಿ ಸೋನಿಯಾ ಈ ದೇಶದ ಸೊಸೆಯೆಂಬುದನ್ನು ಸುಷ್ಮಾ ಅವರ ಹೆಸರಿನ ಮುಂದಿರುವ ಕುಟುಂಬ ಕಲ್ಪನೆಯ ಸ್ವರಾಜ್ ಒಪ್ಪಿಕೊಳ್ಳಲಿಲ್ಲ. ಆಕೆಯ ವಿರೋಧಿ ಭಾರತೀಯರೆಲ್ಲರೂ ಸೋನಿಯಾರನ್ನು ಇಟಾಲಿಯನ್ ಎಂದು ಕಂಡರೇ ಹೊರತು ಭಾರತೀಯಳೆಂದು ಕಾಣಲಿಲ್ಲ. ಕಾನೂನಿನಡಿ ಸೋನಿಯಾ ಪ್ರಧಾನಿಯಾಗುವ ಎಲ್ಲ ಅರ್ಹತೆಯನ್ನೂ ಹೊಂದಿದ್ದರು. (ಪ್ರಜಾತಂತ್ರದಲ್ಲಿ ‘ಅರ್ಹತೆ’ ಮಾತ್ರ ಮುಖ್ಯ. ‘ಯೋಗ್ಯತೆ’ಯಲ್ಲ. ಯೋಗ್ಯತೆಯ ಪ್ರಶ್ನೆ ಬಂದರೆ ಇಂದು ದೇಶದಲ್ಲಿರುವ ಜನಪ್ರತಿನಿಧಿಗಳಲ್ಲಿ ಶೇ. 90 ಅಯೋಗ್ಯರೇ.) ಆದರೆ ಆಗಲಿಲ್ಲ. ಭಾರತೀಯ ಸಂಸ್ಕೃತಿಯು ಹಿರಿಸೊಸೆಯನ್ನು ಕೆರೆಗೆ ಹಾರವಾಗಿಸಿತು. ಹೀಗೆ ನಾವು ನಮ್ಮ ಮನೆಗೊಂದು ನೆರೆಮನೆಗೊಂದು ಕಾನೂನು, ನ್ಯಾಯವನ್ನು ರೂಢಿಮಾಡಿದ್ದೇವೆ. ನಮ್ಮ ಔದಾರ್ಯಗಳೆಲ್ಲವೂ ಸ್ವಾರ್ಥಪರ ಮತ್ತು ರಾಜಕೀಯವಾಗಿ ಅನುಕೂಲವಾಗಬೇಕಾದ ರೀತಿಯವು. ನಮ್ಮ ರಾಮರಾಜ್ಯವು ಸೀತೆಯ ಅಗ್ನಿಪ್ರವೇಶದ ಆನಂತರವೂ ನಡೆದ ಉತ್ತರರಾಮಚರಿತವನ್ನು ರಾಷ್ಟ್ರಕಥೆಯಾಗಿಸಿದೆ. ಮಹಿಳೆಯರಿಗೆ ತಮ್ಮ ಅಭದ್ರತೆಯ ಅರಿವಿಲ್ಲವೆಂದು ತಿಳಿಯುವುದು ತಪ್ಪು. ಹಾಗೆಂದು ಮಹಿಳೆಯರು ತಾವಾಗಿ ಹೋರಾಡಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಳ್ಳುತ್ತಾರೆಂದು ನಂಬುವುದು ಕಷ್ಟ. ಏಕೆಂದರೆ ಸಾಮಾನ್ಯವಾಗಿ ಪ್ರತೀ ಸೊಸೆಗೂ ಒಬ್ಬ ನಾಣ್ಣುಡಿಯ ಅತ್ತೆಯಿರುತ್ತಾಳೆ. ಮಹಿಳೆಯರನ್ನು ಶೋಷಿಸುವುದರಲ್ಲಿ ಮಹಿಳೆಯರ ಪಾತ್ರ ಎಂಬ ವಿಚಾರವೂ ಅಧ್ಯಯನಕ್ಕೆ ಸೂಕ್ತ.

ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಸೂಕ್ಷ್ಮತೆಯಿದೆಯೆಂದು ಮತ್ತು ಅವರು ಜನರ ನೋವಿಗೆ ಪುರುಷರಿಗಿಂತ ಹೆಚ್ಚು ಮಿಡಿಯುತ್ತಾರೆಂದು ತಿಳಿಯಬೇಕಾದರೆ ಈಗಿರುವ ಅವಕಾಶ ಸಾಲದು. ಕಚೇರಿಗಳಲ್ಲಿ, ವೃತ್ತಿಗಳಲ್ಲಿ ದುಡಿಯುವುದು ನಿಜವಾಗಿಯೂ ಪುರುಷಲಕ್ಷಣವೇನಲ್ಲ. ಮೇಜು-ಕುರ್ಚಿಗಳ, ಓದು-ಬರಹಗಳ ಕೆಲಸಕ್ಕೆ ದೈಹಿಕ ಪರಿಶ್ರಮವೇನೂ ಬೇಕಾಗಿಲ್ಲ. ಕ್ಷೇತ್ರದುಡಿಮೆಗಾದರೂ ಒಂದಷ್ಟು ಓಡಾಟ ಬೇಕು. ಕಚೇರಿ ಒಳಾಂಗಣ. ಅವನ್ನು ಹೊರಾಂಗಣ ಕೆಲಸವೆಂದು ಬಗೆದದ್ದರಿಂದಲೇ ಅದು ಪುರುಷರ ಕೆಲಸವೆಂಬಂತಾಗಿದೆ. ಇಂತಹ ಹಲವು ವಿಚಾರಗಳನ್ನು ಚರ್ಚಿಸಬಹುದು; ತಿದ್ದಬಹುದು. ಹಾಗೆಂದು ಇವನ್ನು ಸಾಮಾನ್ಯೀಕರಿಸುವುದು ನನ್ನ ಉದ್ದೇಶವಲ್ಲ. ಮುಖ್ಯ ನಡೆ ಮತ್ತು ನುಡಿಗಳಲ್ಲಿ ತೀವ್ರ ಅಂತರವಾದರೆ ಸಂಸ್ಕೃತಿಯೆಂದು ನಾವಂದುಕೊಳ್ಳುವುದು ಭ್ರಮೆಯಾಗುತ್ತದೆ. ಅದು ಅನುಕೂಲ ಶಾಸ್ತ್ರ ಮತ್ತು ರಾಜಕೀಯವಾಗುತ್ತದೆ. ಒಂದು ದೇಶದ, ಕಾಲದ, ಸಮಾಜದ ಮಾನವನ್ನು ಅದು ಕಳೆಯುತ್ತದೆ. ಭಾರತಕ್ಕೆ ಇಂತಹ ಅನೇಕ ಪ್ರಸಂಗಗಳು ಬಂದೊದಗುತ್ತಿವೆ. ಇವನ್ನು ಅಳೆಯುವ ಮತ್ತು ಬೆಳೆಯದಂತೆ ನೋಡುವ ಹೊಣೆ ಎಲ್ಲ ತಲೆಮಾರುಗಳಿಗೂ ಇದೆ. ಅದಿಲ್ಲವಾದರೆ ಬೇಕೆಂದಾಗ ಕಮಲಾ ಹ್ಯಾರಿಸ್ ಭಾರತೀಯರಾಗುತ್ತಾರೆ; ಸೋನಿಯಾ ಪರಕೀಯರಾಗುತ್ತಾರೆ. ಸಮಸ್ಯೆ ಮಹಿಳೆಯರದ್ದು ಮಾತ್ರವಲ್ಲ. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ರಂಗಗಳಲ್ಲಿ ಎಲ್ಲ ಜನರನ್ನೂ ಬಾಧಿಸುವ ಇಂತಹ ಬೇಕಷ್ಟು ಸಮಸ್ಯೆಗಳಿವೆ. ಮೂಲಭೂತವಾಗಿ ನಮ್ಮ ನಡೆ-ನುಡಿಗಳ ನಡುವೆ ಇರುವ ಅಂತರವನ್ನು ಹೇಳುವುದೇ ನನ್ನ ಉದ್ದೇಶ. ಮಹಿಳೆಯರ ಈ ಉದಾಹರಣೆ ಪ್ರಾಸಂಗಿಕವಷ್ಟೇ ಆಗುತ್ತದೆ. ನದಿ ಎದುರಾದಾಗಲೆಲ್ಲ ದಾಟಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)