ಗಲ್ಫ್ ಸುದ್ದಿ
ಇಲ್ಲಿದೆ ವಿವರ
ಅನಿವಾಸಿ ಕನ್ನಡಿಗ ಉದ್ಯಮಿಯಿಂದ ಯುಎಇನಲ್ಲಿ 'Fidaaa.com' ಇ-ಶಾಪಿಂಗ್ ವೆಬ್ಸೈಟ್ಗೆ ಚಾಲನೆ

ದುಬೈ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಉದ್ಯಮಿ ಅಹ್ಮದ್ ಬಾವಾ ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜನತೆಗೆ ಶಾಪಿಂಗ್ ಸುಲಭಗೊಳಿಸುವ ದೃಷ್ಟಿಯಿಂದ 'Fidaaa.com' ಹೆಸರಿನ ಇ-ಶಾಪಿಂಗ್ ವೆಬ್ಸೈಟ್ ಆರಂಭಿಸಿದ್ದಾರೆ.
2020ರ ಸೆಪ್ಟೆಂಬರ್ನಲ್ಲಿ ಈ ವೆಬ್ಸೈಟ್ ಆರಂಭಿಸಲಾಗಿದ್ದು, ಖರೀದಿದಾರರಿಗೆ ಮುದ ನೀಡುವ ವೈವಿಧ್ಯಮಯ ಬ್ರಾಂಡ್ಗಳ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿವೆ. ವೆಬ್ಸೈಟ್ನಲ್ಲಿ ಲಭ್ಯವಿರುವ ಪ್ರಮುಖ ಬ್ರಾಂಡ್ಗಳಲ್ಲಿ ನಿಕಾನ್, ಗುಸ್ಸಿ, ಮರ್ಸಿಡೆಸ್ ಬೆನ್ಝ್, ಕ್ಯಾನನ್, ಸೋನಿ ಹಾಗೂ ಇತರ ದಿನಸಿ ಉತ್ಪನ್ನಗಳೂ ಇವೆ.
ವಾರ್ತಾಭಾರತಿ ಜತೆ ಮಾತನಾಡಿದ ಬಾವಾ, "ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಮತ್ತು ಉದ್ಯೋಗ ನೀಡುವುದು ಈ ಸಾಹಸದ ಹಿಂದಿನ ಮುಖ್ಯ ಉದ್ದೇಶ" ಎಂದು ಹೇಳಿದರು.
"ಜಗತ್ತು ವೇಗವಾಗಿ ಬದಲಾಗುತ್ತಿದೆ. ಇದೇ ವೇಳೆ ವ್ಯಾಪಾರ ಪ್ರವೃತ್ತಿಗಳೂ ಬದಲಾಗುತ್ತಿವೆ. ವಿಶ್ವದಲ್ಲಿ ಇಂದು ಇಂಟರ್ ನೆಟ್ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರತಿಯೊಂದೂ ಇಂಟರ್ ನೆಟ್ ನೆರವಿನಿಂದಲೇ ನಡೆಯುತ್ತದೆ. ಅದರಲ್ಲೂ ಮುಖ್ಯವಾಗಿ ಕೋವಿಡ್-19 ಸಾಂಕ್ರಾಮಿಕದ ಬಳಿಕ, ಮಾರುಕಟ್ಟೆ ಬಹುತೇಕ ಆನ್ಲೈನ್ ಪ್ಲಾಟ್ಫಾರಂಗಳತ್ತ ತಿರುಗಿದೆ ಎಂದು ಅವರು ಅಭಿಪ್ರಾಯಡುತ್ತಾರೆ.
ಕಳೆದ 15 ವರ್ಷಗಳಿಂದ ಯುಎಇನಲ್ಲಿ ವಾಸವಿರುವ ಅವರು ಈ ಆನ್ಲೈನ್ ಶಾಪಿಂಗ್ ವೆಬ್ಸೈಟ್ ಮೂಲಕ 50 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದ್ದಾರೆ. ಈ ಪ್ರಮುಖ ಉದ್ದೇಶದಿಂದ 'Fidaaa.com' ಆರಂಭಿಸಿದ್ದು, ಸದ್ಯದಲ್ಲೇ ಅದನ್ನು ಸಾಧಿಸುವ ವಿಶ್ವಾಸವಿದೆ ಎಂದರು.
'Fidaaa.com' ಅಲ್ಲದೇ ಅಹ್ಮದ್ ಅವರು ನಿರ್ವಹಣಾ ಕಂಪನಿ, ಆಸ್ತಿ ವ್ಯವಸ್ಥಾಪನಾ ಕಂಪನಿ ಮತ್ತು ಟ್ರೇಡಿಂಗ್ ಕಂಪನಿ ಹೊಂದಿದ್ದಾರೆ. ಹಿದಾಯಹ್ ಫೌಂಡೇಷನ್ನ ಸಂಸ್ಥಾಪಕ ಸದಸ್ಯರೂ ಆಗಿರುವ ಅವರು 2017-18ರಲ್ಲಿ ಇದರ ದುಬೈ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
"ಫಿದಾದ ಮುಖ್ಯ ಉದ್ದೇಶವೆಂದರೆ ಯುಎಇ ಜನತೆಗೆ ಶಾಪಿಂಗ್ ಸುಲಭಗೊಳಿಸುವುದು. ಯುಎಇ ಗ್ರಾಹಕರನ್ನು ತಮ್ಮ ಉತ್ಪನ್ನಗಳ ಮೂಲಕ ತಲುಪಿಸಲು ಬಯಸುವ ಪೂರೈಕೆದಾರರಿಗೆ ಸಾಧನವನ್ನು ನಾವು ಒದಗಿಸಿಕೊಟ್ಟಿದ್ದೇವೆ. ಇದೇ ವೇಳೆ ಉತ್ಪನ್ನಗಳು ಸುಲಭವಾಗಿ ಹಾಗೂ ವೇಗವಾಗಿ ಪತ್ತೆ ಮಾಡಲು ಮತ್ತು ತ್ವರಿತ & ದಕ್ಷವಾಗಿ ಪೂರೈಸುವ ವಿಧಾನವನ್ನು ಕಲ್ಪಿಸಿಕೊಟ್ಟಿದ್ದೇವೆ" ಎಂದು 'Fidaaa.com' ಪ್ರಕಟಣೆ ಹೇಳಿದೆ.
ಯುಎಇ ಮತ್ತು ಇತರ ಸುತ್ತಮುತ್ತಲ ಪ್ರದೇಶಗಳ ಗ್ರಾಹಕರು ಉತ್ಪನ್ನಗಳನ್ನು ಖರೀದಿಸುತ್ತಿದ್ದು, ಸಾವಿರಾರು ಸಂದೇಶಗಳನ್ನು ಪೂರೈಕೆದಾರರ ಜತೆಗೆ ಈ ಪ್ಲಾಟ್ಫಾರಂ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ