varthabharthi


ಸಿನೆಮಾತು

ವ್ಯವಸ್ಥೆಗೆ ಕನ್ನಡಿ ಹಿಡಿಯುವ ಯತ್ನ ‘ಆಕ್ಟ್-1978’ - ಮಂಸೋರೆ

ವಾರ್ತಾ ಭಾರತಿ : 15 Nov, 2020
ಕಳಕೇಶ್ ಗೊರವರ, ರಾಜೂರ

ಮಂಸೋರೆ 

ಸಾಮಾಜಿಕ ಸಂದೇಶವುಳ್ಳ ತಮ್ಮ ಚೊಚ್ಚಲ ಸಿನೆಮಾ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ನಿರ್ದೇಶಕ ಮಂಸೋರೆ ಸಿನೆಮಾವನ್ನೇ ಬದುಕಾಗಿಸಿಕೊಂಡವರು. ಹೆಣ್ಣಿನ ಮುಕ್ತ ಜೀವನ ಹಾಗೂ ಕಾಮದ ಬಗ್ಗೆ ಸೂಕ್ಷ್ಮವಾಗಿ ತೆರೆಯ ಮೇಲೆ ಚರ್ಚಿಸಿ, ಸಮಾಜದ ಎಲ್ಲ ವಲಯಗಳ ಗಮನ ಸೆಳೆದ ಅವರ ಎರಡನೇ ಚಿತ್ರ ‘ನಾತಿಚರಾಮಿ’ ಮೂಲಕ ಕನ್ನಡಕ್ಕೆ ಐದು ರಾಷ್ಟ್ರಪ್ರಶಸ್ತಿಗಳನ್ನು ತಂದಿತ್ತ ಪ್ರತಿಭಾವಂತ ನಿರ್ದೇಶಕ. ಮಂಸೋರೆ ನಿರ್ದೇಶನದ 3ನೇ ಚಿತ್ರ ‘ಆಕ್ಟ್-1978’ರ ಟ್ರೈಲರ್ ನ.3ರಂದು ಬಿಡುಗಡೆಯಾಗಿದೆ. ವ್ಯವಸ್ಥೆಯ ಬಗ್ಗೆ ರೋಸಿಹೋದ ಗರ್ಭಿಣಿಯೊಬ್ಬಳು ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು, ಕೈಯಲ್ಲಿ ಪಿಸ್ತೂಲ್ ಹಿಡಿದು ನ್ಯಾಯಕ್ಕಾಗಿ ಸರಕಾರಿ ಕಚೇರಿಯನ್ನೇ ಹೈಜಾಕ್ ಮಾಡುವ ದೃಶ್ಯ ಟ್ರೈಲರ್‌ನಲ್ಲಿದ್ದು, ಪ್ರೇಕ್ಷಕರ ವಲಯದಲ್ಲಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ. ‘ಆಕ್ಟ್-1978’ ಸಿನೆಮಾ ನ.20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ್ದು, ಸಂದರ್ಶನದ ಆಯ್ದ ಭಾಗ ಇಲ್ಲಿದೆ.

‘ಆಕ್ಟ್-1978’ ಕತೆ ಹುಟ್ಟಿಕೊಂಡ ಬಗೆ ಮತ್ತು ಕತೆಯಲ್ಲಿನ ಯಾವ ಅಂಶ ನಿಮ್ಮನ್ನು ಸಿನೆಮಾ ನಿರ್ದೇಶಿಸಲು ಪ್ರೇರೇಪಿಸಿತು?

ಮಂಸೋರೆ: ಅಧಿಕಾರಶಾಹಿನೇ ನಮ್ಮ ಸಿನೆಮಾ ಕತೆ ಹುಟ್ಟಿಗೆ ಸ್ಫೂರ್ತಿ. ಈ ದೇಶದಲ್ಲಿ ಅಧಿಕಾರಿಗಳು ತಾವು ರಾಜರು, ಜನ ಸಾಮಾನ್ಯರೆಲ್ಲ ತಮ್ಮ ಸೇವಕರು ಎಂದುಕೊಂಡಿದ್ದಾರೆ. ಅದೇ ದುಡ್ಡಿರುವವರು, ರಾಜಕಾರಣಿಗಳು ಸರಕಾರಿ ಕಚೇರಿಗೆ ಬಂದರೆ, ಅಧಿಕಾರಿಗಳ ವರ್ತನೆಯಲ್ಲಿ ಆಗುವ ಬದಲಾವಣೆ ತೀರಾ ಹೇಸಿಗೆ ಹುಟ್ಟಿಸುವಂತಹದ್ದು. ಯಾಕೆ ಹೀಗೆ? ಸಾಮಾನ್ಯ ಜನರು ಏನು ಪಾಪ ಮಾಡಿದ್ದಾರೆ? ಅವರೇನು ವೋಟ್ ಹಾಕುವುದಿಲ್ಲವಾ? ಟ್ಯಾಕ್ಸ್ ಕಟ್ಟಲ್ಲವಾ? ಎನ್ನುವ ಹತ್ತು ಹಲವು ಪ್ರಶ್ನೆಗಳನ್ನು ದಮನಿತರೆದೆಗೆ ದಾಟಿಸುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ವ್ಯವಸ್ಥೆಯ ವಿರುದ್ಧ ಪ್ರತಿರೋಧ ಹಾಗೂ ಕನ್ನಡಿ ಹಿಡಿಯುವ ಪ್ರಯತ್ನವೇ ನಮ್ಮ ಆಕ್ಟ್-1978 ಸಿನೆಮಾ. ಅಧಿಕಾರಶಾಹಿ ನಡೆದುಕೊಳ್ಳುವ ರೀತಿ, ತೋರುವ ನಿರ್ಲಕ್ಷ, ಹೊರಡಿಸುವ ಬೈಗುಳ, ಬಳಸುವ ಭಾಷೆಯಿಂದ ಬೇಸತ್ತ ಸಾಮಾನ್ಯ ಜನರ ಚಿತ್ರಣ ಹಾಗೂ ಅಧಿಕಾರಿಗಳ ಮೇಲಿರುವ ಒತ್ತಡ ಎರಡೂ ಆಯಾಮಗಳು ತೆರೆಯ ಮೇಲೆ ಮುಖಾಮುಖಿಯಾಗುತ್ತವೆ.

ಹಾಗಾದರೆ ಸಿನೆಮಾ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದು ಅಂತೀರಾ?

ಮಂಸೋರೆ: ಬದಲಾವಣೆ ಎನ್ನುವುದು ಹೊರಗಡೆಯಿಂದ ಆಗುವುದಿಲ್ಲ, ಅದು ನಮ್ಮ ಒಳಗಡೆಯೇ ಆಗಬೇಕು. ಹೀಗೆ ನಮ್ಮೆಳಗಿನ ಬದಲಾವಣೆಗೆ ಒಂದು ಸ್ಫೂರ್ತಿ ಬೇಕಾಗುತ್ತೆ. ದಿನನಿತ್ಯ ನೋವು, ಹಿಂಸೆಯನ್ನು ಅನುಭವಿಸುವ ಜನಸಾಮಾನ್ಯರೊಳಗೆ ಅಂತಹ ಒಂದು ಬಗೆಯ ಸ್ಫೂರ್ತಿ ಹುಟ್ಟಿಸುವ, ರಿಯಲೈಜೇಶನ್ ತರುವ ಸಣ್ಣ ಪ್ರಯತ್ನ. ಸಿನೆಮಾ ನೋಡಿದ ಬಳಿಕ ತಾವು ಜನರೊಂದಿಗೆ ನಡೆದುಕೊಳ್ಳುವ ರೀತಿ ಸರಿಯಿಲ್ಲವೆನಿಸಿದರೆ, ಒಂದಷ್ಟು ಅಧಿಕಾರಿವರ್ಗ ತಮ್ಮನ್ನು ತಾವು ತಿದ್ದಿಕೊಂಡರೆ ಅದು ನಮ್ಮ ಸಿನೆಮಾದ ಗೆಲವು.

 ‘ಆಕ್ಟ್-1978’ ಮಹಿಳಾ ಕೇಂದ್ರಿತ ಸಿನೆಮಾವೇ?

 ಮಂಸೋರೆ: ಹೌದು. ಇದು ನಿಜಕ್ಕೂ ಮಹಿಳಾ ಕೇಂದ್ರಿತ ಸಿನೆಮಾ. ಇಲ್ಲಿಯವರೆಗೆ ಬಹುತೇಕ ನಿರ್ದೇಶಕರು ಕತೆಯನ್ನು ಹೀರೋ ಮೂಲಕ ಹೇಳುತ್ತಾ ಬಂದಿದ್ದಾರೆ. ನಾವ್ಯಾಕೆ ಮಹಿಳೆಯರ ಮೂಲಕ ಹೇಳಿಸಬಾರದು ಎನ್ನುವ ನಿಟ್ಟಿನಲ್ಲಿ ಕತೆ ಹೆಣೆಯಲಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರು ಹೇಳುವ ಹಾಗೆ ನಮಗೆ ಒಟ್ಟಿನಲ್ಲಿ ಕ್ರಾಂತಿ ಆಗಬೇಕು. ಸಿನೆಮಾ ಬಗೆಗೆ ವಿಭಿನ್ನ ಅಭಿರುಚಿಯುಳ್ಳ ಟಿ.ಕೆ.ದಯಾನಂದ, ವೀರು ಮತ್ತು ನಾನು ಸಂಭಾಷಣೆ ಬರೆದಿದ್ದು, ಮೂವರಿಗೂ ತೇಜಸ್ವಿಯವರೇ ಸ್ಫೂರ್ತಿ. ನೀವೇ ಒಂದು ಕಡೆ ಹೇಳಿಕೊಂಡ ಹಾಗೆ, ಪ್ರಯೋಗಗಳನ್ನು ಇಷ್ಟಪಡುವಂತಹವರು.

ಆಕ್ಟ್ -1978 ಸಿನೆಮಾ ಅದರ ಮುಂದುವರಿದ ಭಾಗವೇ?

ಮಂಸೋರೆ: ಈ ಮುಂಚಿನ ಎರಡೂ ಸಿನೆಮಾಗಳಿಗೆ ಹೋಲಿಕೆ ಮಾಡಿದರೆ, ಇದು ನನ್ನ ಮಂದುವರಿದ ಭಾಗ ಅನ್ನಬಹುದು. ಮತ್ತೆ ನನ್ನ ಮುಂದಿನ ಸಿನೆಮಾಗೆ ಕೂಡಾ ಹೊಸ ಪ್ರಯೋಗಕ್ಕೆ ನನ್ನನ್ನು ನಾನು ಒಡ್ಡಿಕೊಳ್ಳಬಯಸುತ್ತೇನೆ. ಪ್ರಯೋಗಶೀಲತೆ ಎನ್ನುವುದು ನಮ್ಮಿಳಗಿನ ನಿರ್ದೇಶಕನ ಜೀವಂತಿಕೆಯ ಮೂಲ ಸೆಲೆ. ನಿರ್ದೇಶಕನೊಬ್ಬ ಕಂಫರ್ಟ್ ರೆನ್‌ನಲ್ಲಿ ಕುಳಿತುಕೊಂಡ ದಿನ ಆತನ ಅಂತ್ಯ ಶುರುವಾಗುತ್ತಿದೆ ಎಂದೇ ಅರ್ಥ. ಆಕ್ಟ್-1978 ಸಿನೆಮಾ ನಿರ್ಮಾಣದ ವೇಳೆ ಎದುರಿಸಿದ ಸವಾಲುಗಳ ಬಗ್ಗೆ ಹೇಳಿ? ಮಂಸೋರೆ: ಈ ‘ಆಕ್ಟ್-1978’ ಕತೆಯ ಆಯ್ಕೆ ಮತ್ತು ನಿರ್ಮಾಪಕರನ್ನು ಹುಡುಕಿದ್ದು ಬಹಳ ದೊಡ್ಡ ಸವಾಲುಗಳಲ್ಲಿ ಒಂದು. ಸಿನೆಮಾ ದೊಡ್ಡಮಟ್ಟದ ಜನಸಮೂಹವನ್ನು ತಲುಪಿಸಲು ನನ್ನತನವನ್ನು ಉಳಿಸಿಕೊಳ್ಳುವುದರ ಜೊತೆಗೆ ಪ್ರೇಕ್ಷಕರು ಇಷ್ಟ ಪಡುವ ಮತ್ತು ಜನಪ್ರಿಯ ಕಥಾ ನಿರೂಪಣೆಯ ಶೈಲಿ, ಭಾಷೆಯನ್ನು ಕತೆಯುದ್ದಕ್ಕೂ ಅಳವಡಿಸಿಕೊಳ್ಳಬೇಕಾಗಿತ್ತು. ಹೀಗಿರುವಾಗ ಸಿನೆಮಾ ನಿರ್ಮಾಣಕ್ಕೆ ದೊಡ್ಡ ಬಜೆಟ್ ಕೂಡಾ ಬೇಕಿತ್ತು. ನಿರ್ಮಾಪಕರು ನಮ್ಮ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು, ಹಣ ಹೂಡಿದ ಹಿನ್ನೆಲೆಯಲ್ಲಿ ಇದೀಗ ಸಿನೆಮಾ ಸಿದ್ಧಗೊಂಡಿದೆ.

 ಯಶಸ್ವಿ ಸಿನೆಮಾ ಅಂದರೆ ಹೆಚ್ಚು ಜನರನ್ನು ತಲುಪುವುದೇ, ಹಣ ಗಳಿಕೆ, ಪ್ರಶಸ್ತಿ ಅಥವಾ ಯಾವುದು?

ಮಂಸೋರೆ: ಮೊದಲನೆಯದಾಗಿ ಕೋಟಿ ಲಾಭ ಬರದಿದ್ದರೂ ಸಿನೆಮಾಗೆ ಹಾಕಿದ ಬಂಡವಾಳ ವಾಪಸ್ ಬರಬೇಕು. ಹಾಗೆ ನೋಡಿದರೆ, ಪ್ರಶಸ್ತಿಗಳು ಯಾವ ಕಾರಣಕ್ಕೂ ಯಶಸ್ಸಿನ ಮಾನದಂಡಗಳಲ್ಲ. ಅವು ನಾವು ಹೋಗುತ್ತಿರುವ ದಾರಿ ಸರಿ ಇದೆ, ಮುಂದುವರಿಸು ಎಂದು ಹೇಳುವ ಪ್ರೋತ್ಸಾಹಗಳು ಅಷ್ಟೆ. ಅಂತಿಮವಾಗಿ ಒಂದು ಸಿನೆಮಾ ಯಶಸ್ವಿಯಾಗುವುದೆಂದರೆ ಹೆಚ್ಚು ಜನರನ್ನು ತಲುಪುವುದೇ ಆಗಿದೆ.

ಕೊರೋನದ ವೇಳೆ ಸಿನೆಮಾ ಬಿಡುಗಡೆ ಆಗುತ್ತಾ ಇದೆ. ಈ ಬಗ್ಗೆ ಏನನಿಸುತ್ತಿದೆ?

ಮಂಸೋರೆ: ನನಗೆ, ನಮ್ಮ ತಂಡಕ್ಕೆ ತುಂಬಾ ಖುಷಿ ಮತ್ತು ಒಂದು ಸಣ್ಣ ಆತಂಕವೂ ಇದೆ. ನಿರ್ದೇಶಕರು, ನಿರ್ಮಾಪಕರು ಸೇರಿ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನಮ್ಮ ಸಿನೆಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೋನ ಹರಡದಂತೆ ಥಿಯೇಟರ್‌ಗಳಲ್ಲಿ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ‘ಆಕ್ಟ್-1978’ ಸಿನೆಮಾ ಪ್ರತಿಯೊಬ್ಬರು ವ್ಯವಸ್ಥೆಯಲ್ಲಿ ಎದುರಿಸಿದ ಅನುಭವ ಕಥನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬಂದು ಸಿನೆಮಾ ಗೆಲ್ಲಿಸುವ ಭರವಸೆ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)