varthabharthi


ಸಿನಿಮಾ

ಕನಸಿನ ಪಯಣ; ನನಸಾದ ಚಿತ್ರಣ

ವಾರ್ತಾ ಭಾರತಿ : 15 Nov, 2020
ಶಶಿಕರ ಪಾತೂರು

‘ಸೂರರೈ ಪೊಟ್ರು’ ಎನ್ನುವ ಹೆಸರು ಕೇಳಿದಾಗ ತುಂಬ ಅಪರಿಚಿತ ಪದಗಳಂತೆ ಅನಿಸಬಹುದು. ಅದರ ಅರ್ಥ ‘ಶೂರರಿಗೆ ಜಯವಾಗಲಿ’ ಎನ್ನುವ ಅರಿವಾದಾಗ ಓಹ್ ತುಂಬ ಆಪ್ತವಾದ ವಿಚಾರ ಅನಿಸಬಹುದು. ಅದರಲ್ಲಿಯೂ ಇದು ಕನ್ನಡಿಗ ಶೂರನ ಕುರಿತಾದ ಕತೆ ಎಂದಾಗ ಮತ್ತಷ್ಟು ಆತ್ಮೀಯವಾಗುವುದರಲ್ಲಿ ಸಂದೇಹವಿಲ್ಲ. ಹೌದು; ಇದು ಡೆಕ್ಕನ್ ಏರ್‌ವೇಸ್ ಸಂಸ್ಥಾಪಕ ಜಿ. ಆರ್. ಗೋಪಿನಾಥ್ ಅವರ ಸಾಧನೆಯನ್ನು ಆಧಾರ ಮಾಡಿ ತೆಗೆದಿರುವ ಚಿತ್ರ. ಗೋಪಿನಾಥ್ ಅವರು ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರ.

ಚಿತ್ರದಲ್ಲಿ ಇದು ಮಧುರೈನ ಯುವಕನೊಬ್ಬನ ಸಾಧನೆಯ ಕತೆ. ನಾಯಕನ ಹೆಸರು ನೆಡುಮಾರನ್. ಮಾರನ್ ಬಡತನದ ಹಿನ್ನೆಲೆಯಲ್ಲಿ ಬೆಳೆದ ವ್ಯಕ್ತಿ. ಆತನಿಗೊಂದು ಕನಸು. ಎಲ್ಲ ವರ್ಗದ ಜನರಿಗೂ ವೈಮಾನಿಕ ಪಯಣ ಸಾಧ್ಯವಾಗಬೇಕು ಎನ್ನುವುದು. ಆತನ ತಂದೆ ಶಾಲಾ ಶಿಕ್ಷಕ. ತಂದೆಯೂ ಕೂಡ ಸದಾ ಹೊಸತನದ ಬದಲಾವಣೆಗಾಗಿ ತುಡಿತ ಹೊಂದಿದವರು. ಆದರೆ ಒಂದು ಏರ್‌ಲೈನ್ ಅನ್ನು ಸ್ವಂತವಾಗಿಸುವ ಮಾರನ್ ನದ್ದು ಸಣ್ಣ ಕನಸೇನಲ್ಲ. ಆ ಕನಸನ್ನು ನಿಜವಾಗಿಸಿದ ಸಾಮಾನ್ಯ ವ್ಯಕ್ತಿಯ ಕತೆಯನ್ನು ಚಿತ್ರ ಹೇಳುತ್ತದೆ. ಇದು ನಿಜ ಬದುಕಿನ ಘಟನೆಯಾದ ಕಾರಣ ಇಲ್ಲಿ ನಾಯಕನ ಸಾಧನೆಯ ಮಾರ್ಗ ಸಿನಿಮೀಯವಾಗಿಲ್ಲ. ಆದರೆ ಎಲ್ಲ ಸಾಧಕರ ಕತೆಯಂತೆ ಸೋಲುಗಳ ಮೆಟ್ಟಿಲುಗಳನ್ನು ಏರುವ ಮತ್ತು ಆಮೇಲೆ ಸಿಗುವ ಗೆಲುವಿನ ಸೋಪಾನವನ್ನೇ ಇಲ್ಲಿಯೂ ತೋರಿಸಲಾಗಿದೆ. ಇಲ್ಲಿ ಮಾರನ್ ಜೊತೆಗೆ ಆತನ ಕುಟುಂಬವಿದೆ, ಸ್ನೇಹಿತರಿದ್ದಾರೆ, ಇಡೀ ಊರಿನವರ ಸ್ನೇಹವಿದೆ. ಬದುಕಿನ ಅವಸಾನದ ದಿನಗಣನೆಯಲ್ಲಿರುವ ತಂದೆಯನ್ನು ನೋಡಲು ಅವಸರದಿಂದ ಊರಿಗೆ ಹೊರಡುವ ಮಾರನ್‌ಗೆ ಎಕನಾಮಿ ಕ್ಲಾಸ್‌ನಲ್ಲಿ ಪಯಣಿಸಲು ಸೀಟ್ ದೊರಕುವುದಿಲ್ಲ. ಬಿಝಿನೆಸ್ ಕ್ಲಾಸ್ ಟಿಕೆಟ್‌ಗೆ ದುಡ್ಡಿಲ್ಲದೆ ಆತನಿಗೆ ಆ ವಿಮಾನದಲ್ಲಿ ಪಯಣಿಸಲು ಸಾಧ್ಯವಾಗುವುದಿಲ್ಲ. ತಂದೆಯ ಅಂತಿಮ ದಿನಗಳಲ್ಲಿ ಜೊತೆಗಿರಲು ಸಾಧ್ಯವಾಗದ ಅಸಹಾಯಕತೆ, ನೋವು ಆತನನ್ನು ವಿಮಾನ ಪಯಣ ಸಾಮಾನ್ಯರ ಕೈಗೆಟುಕುವಂತೆ ಮಾಡಲು ಪ್ರೇರೇಪಿಸುತ್ತದೆ.

ನೆಡುಮಾರನ್ ಎನ್ನುವ ನಾಯಕನ ಪಾತ್ರದಲ್ಲಿ ಸೂರ್ಯ ಎಂದಿನ ಅಭಿನಯವನ್ನು ನೀಡಿದ್ದಾರೆ. ಅದರಲ್ಲಿಯೂ ಏರ್‌ಪೋರ್ಟ್‌ನಲ್ಲಿನ ಅಸಹಾಯಕತೆಯನ್ನು ಅವರು ತೋರಿಸಿರುವ ರೀತಿ ಮನಮುಟ್ಟುತ್ತದೆ. ನೆಡುಮಾರನ್‌ಗೆ ಜೋಡಿಯಾಗಿ ಸುಂದರಿ ಎನ್ನುವ ಪಾತ್ರವನ್ನು ನಿಭಾಯಿಸಿದ್ದಾರೆ ಅಪರ್ಣಾ ಬಾಲಮುರಳಿ. ‘ಮಹೇಶೆಂಡೆ ಪ್ರತಿಕಾರಂ’ ಎನ್ನುವ ಮಲಯಾಳಂ ಚಿತ್ರದ ಮೂಲಕ ನಾಯಕಿಯಾಗಿ ರಂಗಪ್ರವೇಶಿಸಿದ ಈ ಹುಡುಗಿ ನಟನೆಯಲ್ಲಿ ಗ್ಲಾಮರ್‌ಗಿಂತ ಗ್ರಾಮರ್ ಎಷ್ಟು ಮುಖ್ಯ ಎನ್ನುವುದನ್ನು ಮನದಟ್ಟು ಮಾಡುತ್ತಾರೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುತ್ತಾರೆ. ಆದರೆ ಇಲ್ಲಿ ಆಕೆ ಬೆಂಬಲವಾಗಿ ಮಾತ್ರವಲ್ಲ, ತನ್ನದೇ ದಾರಿಯಲ್ಲಿ ಸಾಧನೆ ಬಯಸುವವಳಾಗಿ ಜೊತೆಗೆ ಪತಿಗೆ ಒತ್ತಾಸೆಯಾಗಿರುತ್ತಾಳೆ. ಹಾಗೆ ನೋಡಿದರೆ ಸುಂದರಿಯ ‘ಬೊಮ್ಮಿ ಬೇಕರಿ’ಯ ಯಶಸ್ಸೇ ಇನ್ನೊಂದು ಚಿತ್ರಕ್ಕಾಗುವ ಸರಕಿನಂತಿದೆ. ಆದರೆ ಒಬ್ಬ ಸಾಧಕ ಪುರುಷನ ಕತೆಯಲ್ಲಿ ಪತ್ನಿಗೂ ಅಷ್ಟೊಂದು ಜಾಗ ನೀಡಿರುವುದು ಬಹುಶಃ ನಿರ್ದೇಶಕಿ ಸುಧಾ ಕೊಂಗರ ಕೂಡ ಒಬ್ಬ ಮಹಿಳೆಯಾದ ಕಾರಣದಿಂದಲೇ ಸಾಧ್ಯವಾಗಿರಬಹುದು. ಪತ್ನಿಯಿಂದ ನೆಡುಮಾರನ್ ಸಾಲ ಪಡೆಯುವ ದೃಶ್ಯ ಕೂಡ ಹೆಚ್ಚು ಹೃದಯಸ್ಪರ್ಶಿಯಾಗುವಂತೆ ತೆಗೆಯಲಾಗಿದೆ. ನಾಯಕನ ತಂದೆಯ ಪಾತ್ರಧಾರಿ ಪೂ ರಾಮು ಮತ್ತು ತಾಯಿಯಾಗಿ ಊರ್ವಶಿಯವರು ಒಂದೆರಡು ದೃಶ್ಯಗಳಲ್ಲೇ ಮನಸೂರೆ ಮಾಡುತ್ತಾರೆ. ನಾಯಕನ ತಂಡ ಇಷ್ಟು ಸಬಲವಾಗಿರುವಾಗ ವಿರೋಧಿಗಳ ಪಡೆಯೂ ಕಡಿಮೆಯೇನಿಲ್ಲ. ನೆಡುಮಾರನ್‌ನ ಕನಸಿಗೆ ಅಡ್ಡಗಾಲು ಹಾಕುವ ಏರ್‌ಲೈನ್ ಮುಖ್ಯಸ್ಥ ಪರೇಶ್ ಗೋಸ್ವಾಮಿ ಪಾತ್ರದಲ್ಲಿ ಪರೇಶ್ ರಾವಲ್, ಆತನ ತಾಳಕ್ಕೆ ತಕ್ಕಂತೆ ಕುಣಿಯುವ ಸರಕಾರಿ ಅಧಿಕಾರಿಯಾಗಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ಯಾವ ರೀತಿಯ ಪಾತ್ರ ಎಂದು ಗೊಂದಲಪಡಿಸುವ ಮತ್ತು ಅಂಥದೊಂದು ಇಮೇಜ್ ಮೊದಲೇ ಇರುವ ಕಾರಣ ಇನ್ನೇನೋ ಹೊಸ ನಿರೀಕ್ಷೆ ಮೂಡಿಸುವ ಪಾತ್ರಗಳಾಗಿ ಮೋಹನ್ ಬಾಬು ಮತ್ತು ಪ್ರಕಾಶ್ ಬೆಳವಾಡಿ ಪಾತ್ರಗಳಿವೆ. ಮೋಹನ್ ಬಾಬು ಅವರ ಪಾತ್ರ ಕ್ಲೈಮ್ಯಾಕ್ಸ್ ಸಂದರ್ಭದಲ್ಲಿ ನಾಟಕೀಯತೆಗೆ ಪ್ರವೇಶಿಸಿದಂತೆ ಕಾಣುತ್ತದೆ. ಚಿತ್ರದ ಕೊನೆಯ ದೃಶ್ಯವು ಕೂಡ ಒಂದಷ್ಟು ಗೋಜಲಾಗಿ ಕಂಡರೆ ಅಚ್ಚರಿ ಇಲ್ಲ. ಆದರೆ ಒಟ್ಟು ಚಿತ್ರವನ್ನು ಗಮನಿಸಿದಾಗ ಅದು ಯಾವುದು ಕೂಡ ಮುಖ್ಯವಾಗುವುದಿಲ್ಲ. ಮಾತ್ರವಲ್ಲ ಚಿತ್ರಕ್ಕೆ ಸ್ಫೂರ್ತಿಯಾದ ಸಿಂಪ್ಲಿ ಫ್ಲೈ ಎನ್ನುವ ತಮ್ಮ ಕತೆಯನ್ನು ರಚಿಸಿರುವ ಗೋಪಿನಾಥ್ ಅವರೇ ಸ್ವತಃ ನಿರ್ದೇಶಕರ ಪ್ರಯತ್ನವನ್ನು ಪ್ರಶಂಸಿಸಿರುವಾಗ ಚಿತ್ರದ ಆಶಯಕ್ಕೆ ಧಕ್ಕೆಯಾಗಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಜೊತೆಗೆ ಶ್ರೀಮಂತರ ಮೇಲಾಟಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸುವ ಬಡವನ ಪ್ರಯತ್ನ ಬಹುತೇಕ ಭಾರತೀಯರಿಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ. ಉಡುಪಿ ಹೊಟೇಲ್ ಹೇಗೆ ಜನಸಾಮಾನ್ಯರಿಗೆ ಫೈವ್ ಸ್ಟಾರ್‌ಗಿಂತ ಆಪ್ತ ಎನ್ನುವುದನ್ನು ವಿವರಿಸುವ ಸಂಭಾಷಣೆ, ಕತೆ ಮತ್ತು ದೃಶ್ಯದೊಂದಿಗೆ ಬೆರೆತು ಸಾಗುವ ಜಿ.ವಿ. ಪ್ರಕಾಶ್ ಸಂಗೀತ, ಛಾಯಾಗ್ರಹಣ ಎಲ್ಲವೂ ಸೇರಿ ಚಿತ್ರ ಸಾಮಾನ್ಯ ಪ್ರೇಕ್ಷಕರನ್ನು ಕೂಡ ಸೆಳೆಯುವುದರಲ್ಲಿ ಸಂದೇಹ ಬೇಡ. ಅದರಲ್ಲಿಯೂ ಕನ್ನಡಕ್ಕೂ ಡಬ್ ಆಗಿರುವ ಈ ಚಿತ್ರದಲ್ಲಿ ಒಂದಷ್ಟು ದೃಶ್ಯಗಳನ್ನು ಕನ್ನಡತನಕ್ಕೆ ತಕ್ಕಂತೆ ಬದಲಾಯಿಸಿರುವುದರಿಂದ ನಮ್ಮ ಪ್ರೇಕ್ಷಕರಿಗೂ ಖುಷಿ ನೀಡುವುದು ಖಚಿತ.

ತಾರಾಗಣ: ಸೂರ್ಯ, ಅಪರ್ಣಾ ಬಾಲಮುರಳಿ

ನಿರ್ದೇಶನ: ಸುಧಾ ಕೊಂಗರ

 ನಿರ್ಮಾಣ: ಸೂರ್ಯ, ಗುಣೀತ್ ಮೊಂಗ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)