varthabharthi


ಅನುಗಾಲ

ನವರತ್ನ ರಾಮರಾಯರ ‘ಕೆಲವು ನೆನಪುಗಳು’

ವಾರ್ತಾ ಭಾರತಿ : 19 Nov, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕುಟುಂಬ ಗೌರವವನ್ನು ಮತ್ತು ಸಂಸಾರವನ್ನು ಏಕಕಾಲಕ್ಕೆ ನಿಭಾಯಿಸಿ ಸಕಾಲದಲ್ಲಿ ಅದನ್ನು ಅನಿವಾರ್ಯವೆಂಬಂತೆ ಲೋಕಮುಖಕ್ಕೆ ಹಿಡಿದ ಈ ಮಾರ್ಮಿಕ ಘಟನೆಯನ್ನು ತನ್ನ ‘ಕೆಲವು ನೆನಪುಗಳು’ ಎಂಬ ಆತ್ಮಕಥನದ ಸ್ವರೂಪದ ಕೃತಿಯಲ್ಲಿ ನಿರೂಪಿಸಿದವರು ನವರತ್ನ ರಾಮರಾವ್ ಅವರು. 1954ರಲ್ಲಿ ಪ್ರಕಟವಾದ ಸುಮಾರು 450 ಪುಟಗಳ ಈ ಕೃತಿಯಲ್ಲಿ ಇಂತಹ ಹತ್ತಾರು ಮರೆಯಲಾರದ ಮತ್ತು ಮರೆಯಬಾರದ ಘಟನೆ/ಪ್ರಸಂಗಗಳಿವೆ.


ಒಬ್ಬರು ಹಿರಿಯರು. ಅವರ ವೃದ್ಧಾಪ್ಯದಲ್ಲಿ ಮಕ್ಕಳು ಮೊಮ್ಮಕ್ಕಳು ಹೀಗೆ ಸುಮಾರು ಐವತ್ತು ಜನರಿದ್ದರೂ ಅವರ ಸೇವೆಯನ್ನು ಅವರ ಪತ್ನಿಯೇ ಮಾಡುತ್ತಿದ್ದರು. ಬೇಡವೆಂದು ಆ ವೃದ್ಧರೇ ಹೇಳಿದರೂ ಆ ತಾಯಿ ತಾನೇ ಸನಿಹದಲ್ಲಿದ್ದು ಅವರನ್ನು ಆರೈಕೆ ಮಾಡುತ್ತಿದ್ದರು. ಒಂದು ದಿನ ಆ ವೃದ್ಧರು ತನ್ನ ಕುಟುಂಬಸ್ಥರನ್ನೂ ಆತ್ಮೀಯರನ್ನೂ ಪುರೋಹಿತರನ್ನೂ ಕರೆಸಿ ಬಹಿರಂಗವಾಗಿ ತಾನು ಪಾಪಿ-ಅಯೋಗ್ಯನೆಂದೂ ಸದಾಚಾರಸಂಪನ್ನನಲ್ಲವೆಂದೂ ನಿವೇದಿಸಿಕೊಂಡರು. ಆಗ ಅವರ ಪತ್ನಿ ‘‘ನಿಮ್ಮಷ್ಟು ಒಳ್ಳೆಯವರು ಯಾರಿದ್ದಾರೆ? ಯಾಕೆ ಹೀಗೆಲ್ಲ ಹೇಳಿ ನೋಯಿಸುತ್ತೀರಿ?’’ ಎಂದರು. ಆಗ ಆ ಹಿರಿಯರು ಈಕೆ ನನ್ನನ್ನು ಸದ್ಗಹಸ್ಥ, ಸತ್ಯವಂತನೆಂದು ನಂಬಿ ಇಷ್ಟೊಂದು ನಿಷ್ಠೆಯಿಂದ ಸೇವೆ ಮಾಡುತ್ತಿದ್ದಾಳೆ, ತಾನು ಆಕೆಗೆ ದ್ರೋಹಮಾಡಿರುವುದಾಗಿಯೂ ತನ್ನ ವಿವಾಹಿತ ಯೌವನದಲ್ಲಿ ಮನೆಯ ಬಳಿಯಿದ್ದ ಒಬ್ಬಾಕೆಯೊಂದಿಗೆ ಅಕ್ರಮ ಸ್ನೇಹದಿಂದ ಇದ್ದುದಾಗಿಯೂ ಹೇಳಿದರು. ಮುಂದುವರಿಸಿ ಆಕೆಗೆ ಪತಿಯಿರಲಿಲ್ಲ, ಆಕೆಯೇ ತನ್ನನ್ನು ಅರಸಿ ಬಂದು ಮರುಳು ಮಾಡಿದಳು, ಆಕೆಗೆ ತಾನು ಬಹುವಿಧ ಅನುಕೂಲ ಮಾಡಿಕೊಟ್ಟರೂ ಆಕೆಯೇ ಆನಂತರ ತನ್ನನ್ನು ಬಿಟ್ಟು ಹೇಳದೇ ಹೊರಟುಹೋದಳು, ಈ ವಿಚಾರವನ್ನು ತಾನು ಈ ವರೆವಿಗೂ ತನ್ನ ಮಕ್ಕಳ ತಾಯಿಯಿಂದ ಗುಟ್ಟುಮಾಡಿದ್ದಾಗಿಯೂ ಅದಕ್ಕಾಗಿ ಆಕೆಯ ಕ್ಷಮಾಪಣೆ ಕೋರುವುದಾಗಿಯೂ ಹೇಳಿದರು. ಅವರ ಪತ್ನಿ ಇದನ್ನು ಸುತಾರಾಮ್ ಒಪ್ಪಲಿಲ್ಲ. ಆನಂತರ ಪುರೋಹಿತರು ಇಂತಹ ಅಪರಾಧಗಳನ್ನು ಯೌವನಾವಸ್ಥೆಯಲ್ಲಿ ಬಹುಭಾಗ ಜನ ಮಾಡಿರಬಹುದು, ಎಡವಿದ್ದಕ್ಕೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾಲ್ಕು ಜನ ಬ್ರಾಹ್ಮಣರಿಗೆ ಅನ್ನ ಹಾಕಿದರಾಯಿತು ಎಂದು ಹೇಳಿ ಸುಖಾಂತಗೊಳಿಸಿದರು. ಅಷ್ಟರಲ್ಲಿ ಆ ತಾಯಿ ‘‘ದೊಡ್ಡವರೇ ಹೀಗೆ. ಮಗುವಿನ ಹಾಗೆ. ಏನೂ ಗೊತ್ತಾಗೋದಿಲ್ಲ. ನನಗೆ ಈ ವಿಷಯ ತಿಳಿದಿರಲಿಲ್ಲ ಅಂತ ನಂಬಿದ್ದೀರಲ್ಲ! ನನಗೆ ಆಗಲೇ ತಿಳಿಯಿತು. ಆ ಮುಂಡೇನ ನಾನೇ ಪೊರಕೆಯಿಂದ ಹೊಡೆದು ಇನ್ನೂ ಹೆಚ್ಚು ಶಿಕ್ಷೆಯಾದೀತೆಂದು ಹೆದರಿಸಿ ಊರು ಬಿಟ್ಟು ಓಡಿಸಿದ್ದು’’ ಎಂದರು. ಆ ವೃದ್ಧರು ಮುಖದ ಮೇಲೆ ಮುಸುಕನ್ನೆಳೆದುಕೊಂಡು ಸುಮ್ಮನಾದರು.

ಕುಟುಂಬ ಗೌರವವನ್ನು ಮತ್ತು ಸಂಸಾರವನ್ನು ಏಕಕಾಲಕ್ಕೆ ನಿಭಾಯಿಸಿ ಸಕಾಲದಲ್ಲಿ ಅದನ್ನು ಅನಿವಾರ್ಯವೆಂಬಂತೆ ಲೋಕಮುಖಕ್ಕೆ ಹಿಡಿದ ಈ ಮಾರ್ಮಿಕ ಘಟನೆಯನ್ನು ತನ್ನ ‘ಕೆಲವು ನೆನಪುಗಳು’ ಎಂಬ ಆತ್ಮಕಥನದ ಸ್ವರೂಪದ ಕೃತಿಯಲ್ಲಿ ನಿರೂಪಿಸಿದವರು ನವರತ್ನ ರಾಮರಾವ್ ಅವರು. 1954ರಲ್ಲಿ ಪ್ರಕಟವಾದ ಸುಮಾರು 450 ಪುಟಗಳ ಈ ಕೃತಿಯಲ್ಲಿ ಇಂತಹ ಹತ್ತಾರು ಮರೆಯಲಾರದ ಮತ್ತು ಮರೆಯಬಾರದ ಘಟನೆ/ಪ್ರಸಂಗಗಳಿವೆ. ‘ನವರತ್ನ’ ಎಂಬುದು ರಾಮರಾಯರ ಕುಟುಂಬದ ಹಿರಿಯರಿಗೆ ಲಾಗಾಯ್ತಿನಿಂದ ಬಂದ ಗೌರವದ, ಸಂದ ಘನತೆಯ ಬಿರುದು. ದೇವನಹಳ್ಳಿಯಲ್ಲಿ ಮಾಧ್ವ ಕುಟುಂಬದಲ್ಲಿ ಹುಟ್ಟಿದ ನವರತ್ನ ರಾಮರಾವ್ (1877-1960) ಅವರ ಕುಟುಂಬದಲ್ಲಿ ಅನೇಕರು ಸನ್ಯಾಸವನ್ನೊ, ಮಠಾಧಿಪತ್ಯವನ್ನೋ, ವೈದಿಕ ಪೌರೋಹಿತ್ಯವನ್ನೋ ನಿರ್ವಹಿಸಿದವರು. (ಆ ಬಗ್ಗೆ ಹೆಚ್ಚಿನ ಮಾಹಿತಿ ಈ ಕೃತಿಯಲ್ಲಿಲ್ಲ.) ಆದರೆ ರಾಮರಾಯರು ಶಿಕ್ಷಣ ಪಡೆದರು. ಆಗಿನ ಮದರಾಸ್ ವಿಶ್ವವಿದ್ಯಾನಿಲಯದಡಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ., ಮತ್ತು ಮುಂದೆ ಮದರಾಸಿನಲ್ಲಿ ಬಿ.ಎಲ್. ಪದವಿ ಪಡೆದವರು. ಅವರ ಓದಿನಲ್ಲಿ ಅವರು ರಾಜಾಜಿಯವರ ಸಹಪಾಠಿ ಮಾತ್ರವಲ್ಲ, ರೂಂಮೇಟ್ ಕೂಡಾ ಆಗಿದ್ದವರು. (ಮುಂದೆ ಅವರು ಜೀವಮಾನದ ಗೆಳೆಯರಾದರು.) ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದವರು.

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಳ್ವಿಕೆಯ ಮೈಸೂರು ಪ್ರಾಂತದಲ್ಲಿ ಅಮಲ್ದಾರರಾಗಿ ಬಹುಕಾಲ ದುಡಿದು ಆನಂತರ ಪದೋನ್ನತಿ ಪಡೆದು ಸಚಿವಾಲಯದಲ್ಲಿ ರಿಜಿಸ್ಟ್ರಾರ್ ಆಗಿ ಪದೋನ್ನತಿ ಪಡೆದು ಆನಂತರ ಇನ್ನೂ ಉನ್ನತ ಹುದ್ದೆಗಳಿಗೇರಿ ಕೈಗಾರಿಕಾ ಇಲಾಖೆಯ ಮುಖ್ಯಸ್ಥರಾಗಿ ನಿವೃತ್ತರಾದವರು; ರಾಜಸೇವಾ ಪ್ರಸಕ್ತ ಪದವಿಯನ್ನಲಂಕರಿಸಿದವರು. ದಿವಾನ್ ಮಿರ್ಜಾ ಸಾಹೇಬರೊಂದಿಗೆ 1930ರ ರೌಂಡ್ ಟೇಬಲ್ ಕಾನ್ಫರೆನ್ಸ್‌ಗಾಗಿ ಇಂಗ್ಲೆಂಡಿಗೆ ಹೋದವರು. ಸಾವಿರಾರು ಮಂದಿ ಆಡಳಿತದ ಏಣಿಯ ವಿವಿಧ ಮೆಟ್ಟಲುಗಳಲ್ಲಿರುತ್ತಾರೆ. ಅವರಲ್ಲಿ ಜ್ಞಾನ ಮತ್ತು/ಅಥವಾ ಅನುಭವವಿರುವವರು ಬೇಕಷ್ಟಿದ್ದಾರೆ. ಅದನ್ನು ಹೇಳುವ ಮತ್ತು ಬರೆಯುವ ಕಲೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ. ಆದರೆ ರಾಮರಾಯರು ಕನ್ನಡ, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್ ಭಾಷೆಗಳನ್ನು ಕಲಿತವರು. ತಮ್ಮ ಅನುಭವವನ್ನು ಸೊಗಸಾಗಿ ಉನ್ನತವಾದ ಭಾಷಾ ಪ್ರೌಢಿಮೆಯಿಂದ ಹೇಗೋ ಹಾಗೆಯೇ ಹಳ್ಳಿಗರೊಂದಿಗೆ ಸಂವಾದಿಸಿದ ಗ್ರಾಮ್ಯ ಭಾಷೆಯಲ್ಲಿ ಹೇಳಬಲ್ಲರು.

ವ್ಯಾಯಾಮಶಾಲೆಯ ಜಟ್ಟಿತನದ ಪರಿಣತರು; ಒಳ್ಳೆಯ ಕುಸ್ತಿಪಟು; ಕುದುರೆ ಸವಾರಿ ಮತ್ತು ಶಿಕಾರಿಯಲ್ಲಿ ಪರಿಣತ. 80 ಕೆಜಿ ವಜನ್‌ದಾರ. ನಿವೃತ್ತಿಯಾದ ಬಳಿಕ ಶಾಸನ ಸಭೆಗೆ ಒಮ್ಮೆ ಆಯ್ಕೆಯಾದ ಮತ್ತು ಶಾಸನ ಪರಿಷತ್ತಿಗೆ ಒಮ್ಮೆ ನಾಮಕರಣಹೊಂದಿದವರು. ಮಾಸ್ತಿಯವರು ಸಂಪಾದಿಸಿ ಪ್ರಕಟಿಸುತ್ತಿದ್ದ ‘ಜೀವನ’ ನಿಯತಕಾಲಿಕ ಪತ್ರಿಕೆಯಲ್ಲಿ ಈ ಕೃತಿ ಮೊದಲಿಗೆ ಧಾರಾವಾಹಿ ಪ್ರಕಟವಾಯಿತು. ನಿರಂತರವಾಗಿ ಸುಮಾರು ಮೂರು ವರ್ಷಗಳ ಕಾಲ ಹರಿದು ಬಂದ ‘‘ಈ ನೆನಪುಗಳ ಮೊದಲ ಕಂತು ಪ್ರಕಟವಾದ ಒಡನೆಯೇ ಪತ್ರಿಕೆಗೆ ಹತ್ತೂಕಡೆಯಿಂದ ಮೆಚ್ಚುಗೆಯ ಮಾತು ಬಂದವು. ಸಂಪಾದಕರು ಎಲ್ಲಿ ಹೋದರೂ ಯಾರನ್ನು ಕಂಡರೂ ನೆನಪುಗಳನ್ನು ಓದಿದವರೆಲ್ಲ ಅವನ್ನು ಹೊಗಳಿ ಅವುಗಳ ಲೇಖಕರನ್ನು ಬಾಯಿತುಂಬ ಪ್ರಶಂಸಿಸುವವರೆ’’ ಎಂದು ಇದನ್ನು ಆನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮಾಸ್ತಿಯವರು ಬರೆದಿದ್ದಾರೆ. ಇದರ ಪುಸ್ತಕ ರೂಪದ ಪ್ರಕಟಣೆಯ ಅಗತ್ಯದ ಕುರಿತಂತೆ ಮಾಸ್ತಿಯವರ ಸಂದರ್ಭಪ್ರಜ್ಞೆಯು ಹೇಗೆ ಕೆಲಸ ಮಾಡಿತೆಂಬುದು ಪತ್ರಿಕೆಯಲ್ಲಿ ಪ್ರಕಟವಾಗುತ್ತ ಬಂದಂತೆ ‘‘ನಾವು ಈ ಲೇಖನಗಳನ್ನು ಪುಸ್ತಕರೂಪದಲ್ಲಿಯೂ ಸಿದ್ಧಪಡಿಸಿಕೊಂಡು ಬಂದಿದ್ದೇವೆ.’’ ಎಂಬ ಮಾಸ್ತಿಯವರ ‘ಪ್ರಕಾಶಕರ ಮಾತುಗಳು’ ಹೇಳುತ್ತವೆ.

‘‘ಈ ಪುಸ್ತಕವನ್ನು ಇದರ ಏಕಪ್ರೇರಕರೂ ನನ್ನ ಮೆಚ್ಚಿನ ಮಿತ್ರರೂ ಆದ ರಾಜಸೇವಾಪ್ರಸಕ್ತ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಅರ್ಪಿಸಿದ್ದೇನೆ’’ ಎಂದು ಬರೆದಿದ್ದಾರೆ. ಅವರಂತೆಯೇ ರಾಜಸೇವಾ ಪ್ರಸಕ್ತ ಪದವಿಯನ್ನು ಹೊಂದಿದ ಮಾಸ್ತಿಯವರು ತಮಗಿಂತ 14 ವರ್ಷ ಕಿರಿಯರಾದರೂ ಅನುಗಾಲದ ಗೆಳೆಯರು ಎಂಬ ಅಂಶ ವಿಶಿಷ್ಟವಾದದ್ದು. ಮಾಸ್ತಿಯವರು ಚಿಕ್ಕಮಗಳೂರಿನಲ್ಲಿ ಸಬ್ ಡಿವಿಜನ್ ಆಫೀಸರ್ ಆಗಿದ್ದಾಗ ರಾಮರಾಯರು ರೇಷ್ಮೆ ಇಲಾಖೆಯ ಮುಖ್ಯಸ್ಥರಾಗಿ ಇನ್‌ಸ್ಪೆಕ್ಷನ್‌ಗೆ ಬಂದದ್ದನ್ನು ಮಾಸ್ತಿ ತಮ್ಮ ಆತ್ಮಕಥನ ‘ಭಾವ’ದಲ್ಲಿ ವಿವರಿಸಿದ್ದಾರೆ. ಅವರ ಒಡನಾಟ ಆತ್ಮೀಯವಾದದ್ದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಲ್ ಆಗಿ ನಿವೃತ್ತರಾದ ಟೇಟ್ ಸಾಹೇಬರು ಮಾಸ್ತಿಯವರಿಗೂ ರಾಮರಾಯರಿಗೂ ಗುರುಗಳು. ಮಾಸ್ತಿ ಈ ಕುರಿತು ‘‘ಶ್ರೀ ನವರತ್ನ ರಾಮರಾವ್ ಸಾಹೇಬರ ಬಹು ಪ್ರಿಯ ಶಿಷ್ಯರಲ್ಲಿ ಒಬ್ಬರು’’ ಎಂದು ಸ್ಮರಿಸಿದ್ದಾರೆ. ಮಾಸ್ತಿಯವರು ಕತೆ ಬರೆದವರು. ರಾಮರಾಯರು ಕತೆ ಹೇಳುವವರು. ಅವರ ಅಪಾರ ಅನುಭವದ ನಿರೂಪಣೆಯಲ್ಲಿ ಮಾಸ್ತಿಯವರು ಬರೆದಂತಹ ಅನೇಕ ಕತೆಗಳು ಬಿಚ್ಚಿಕೊಳ್ಳುತ್ತವೆ. ಆದರೆ ರಾಮರಾಯರು ತಾವು ಕತೆಗಾರರಾಗಬೇಕೆಂದು ಬಯಸಿದವರೇ ಅಲ್ಲ. ಅವರು ನೂರಕ್ಕೆ ನೂರು ಜನಹಿತದ, ಜನಪ್ರಿಯ ಮತ್ತು ಜನರ ನಡುವೆಯೇ ಬದುಕಿದ ಆಡಳಿತಗಾರರು.

ಪ್ರಾಯಃ ಅವರ ಅನುಭವದ್ರವ್ಯವು ಮಾಸ್ತಿಯವರ ಸಹಿತ ಅನೇಕರ ಸೃಜನಶೀಲತೆಯನ್ನು ಉದ್ದೀಪನಗೊಳಿಸಿದಂತೆ ಕಾಣುತ್ತದೆ. ಒಂದು ಮಹತ್ವದ ಉದಾಹರಣೆಯನ್ನು ಹೇಳುವುದಾದರೆ ರಾಮರಾಯರ ಪಿಟೀಲು ಗುರು ವೀಣೆ ಶಾಮಣ್ಣ ಎಂಬ ಪ್ರತಿಭಾವಂತ ಆದರೆ ವಿಕ್ಷಿಪ್ತ ಕಲಾವಿದರ ಕುರಿತು ಅವರು ಮಾಸ್ತಿಯವರಿಗೆ ನೀಡಿದ ವಿವರಣೆ ಶಾಮಣ್ಣನನ್ನು ‘ಸುಬ್ಬಣ್ಣ’ನಾಗಿಸಿತು. ‘‘ಶಾಮಣ್ಣನವರೇ ನನ್ನ ಮಿತ್ರರು ಮಾಸ್ತಿಯವರ ಸುಬ್ಬಣ್ಣನವರು. ಶ್ಯಾಮಣ್ಣನವರ ಮಿಶ್ರರಸ ಭರಿತವಾದ ಜೀವನದ ಕೆಲವು ಕತೆಗಳನ್ನು ನನ್ನಿಂದ ಕೇಳಿ ಮಾಸ್ತಿಯವರು ತಮ್ಮ ಅದ್ಭುತ ಭಾವನದಿಂದ ಪೃಥಕ್ ತುಕಡಗಳನ್ನು ಜೋಡಿಸಿ ಪೂರ್ತ ಮಾಡಿ, ತಮ್ಮ ಪ್ರತಿಭೆಯ ಸಂಜೀವನ ಮಂತ್ರದಿಂದ ತಮ್ಮ ಕಲ್ಪನ ಪುರುಷ ವ್ಯಕ್ತಿಗೆ ಜೀವ ತುಂಬಿದ್ದಾರೆ. ‘ಸುಬ್ಬಣ್ಣ’ ಶ್ಯಾಮಣ್ಣನವರ ಅಚೇತನ ತಸ್ವೀರಲ್ಲ; ಆ ಪೂಜ್ಯ ವ್ಯಕ್ತಿಯ ನೈಸರ್ಗಿಕ ಬಣ್ಣದ, ಚಲನಚಿತ್ರ’’ ಎಂದು ರಾಮರಾಯರು ಬರೆದಿದ್ದಾರೆ.

ಕಾದಂಬರಿಯ 11ನೇ ಅಧ್ಯಾಯದಲ್ಲಿ ಬರುವ ಸುಬ್ಬಣ್ಣ ಗಾಡಿಯನ್ನು ಹಿಂಬಾಲಿಸಿ ಬಂದು ಆಶೀರ್ವದಿಸಿದ ‘ಲಲಿತಮ’್ಮ ರಾಮರಾಯರ ಎರಡನೆಯ ಮಗಳು ವೆಂಕೂಬಾಯಿ; ವೆಂಕು. ಇದರ ನಿಚ್ಚಳ ವಿವರಣೆ ಈ ಕೃತಿಯ 37ನೇ ಅಧ್ಯಾಯದಲ್ಲಿದೆ. ಅಲ್ಲಿನ ‘‘ನಾನು ನರಸಿಪುರದಿಂದ ವರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ಅವರು ವೆಂಕುವನ್ನು ಮತ್ತೊಂದು ಸಲ ನೋಡಬೇಕೆಂದು ಗಾಡಿ ಹಿಂದೆ ಓಡಿ ಬಂದು ಮಗುವನ್ನು ಎತ್ತಿಕೊಂಡು, ಲಾಲಿಸಿ, ಕಣ್ಣು ಒರೆಸಿಕೊಳ್ಳುತ್ತಾ ವಾಪಸು ಹೋದ ಕತೆ ಮಾಸ್ತಿಯವರು ‘ಸುಬ್ಬಣ್ಣ’ದಲ್ಲಿ ಹೇಳಿದ್ದಾರೆ’’ ಎಂಬ ನಿರೂಪಣೆಯು ಕಣ್ಣುಗಳನ್ನು ಆರ್ದ್ರಗೊಳಿಸಲು ಶಕ್ತವಾಗಿದೆ. ಸರ್ವರೊಳು ಒಂದೊಂದು ನುಡಿ ಕಲಿತು ವಿದ್ಯೆಯಾ ಪರ್ವತವಾದ ಸರ್ವಜ್ಞನಂತೆ ಮಾಸ್ತಿಯವರು ಇಂತಹ ಅನೇಕರಿಂದ ಕತೆಗಳನ್ನು ಕಲೆಹಾಕಿ ಅದಕ್ಕೆ ಸೃಜನಶೀಲತೆಯನ್ನು ಆವಾಹಿಸಿ ಕತೆಗಳ ಪರ್ವತವಾದರು. ‘ಸುಬ್ಬಣ್ಣ’ ಕೃತಿಯ ರಚನೆಯ ಕುರಿತು ಮಾಸ್ತಿ ‘ಭಾವ’ ಆತ್ಮಕಥೆಯ 2ನೇ ಸಂಪುಟ, 116ನೇ ಅಧ್ಯಾಯದಲ್ಲಿ ಉಲ್ಲೇಖಿಸಿದ್ದಾರೆ.

ಬದುಕು ಒಬ್ಬೊಬ್ಬರನ್ನು ಒಂದೊಂದು ದಿಕ್ಕಿನಲ್ಲಿ ಒಯ್ಯುತ್ತದೆ. ರಾಮರಾಯರು ಮೈಸೂರು ಪ್ರಾಂತದ ಎಡತೊರೆ (ಈಗಿನ ಕೆ.ಆರ್.ನಗರ), ಟಿ.ನರಸಿಪುರ ಮುಂತಾದ ತಾಲೂಕುಗಳಲ್ಲಿ ಅಮಲ್ದಾರರಾಗಿ ದುಡಿದ ಅನುಭವಗಳೇ ಇಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಆವರಿಸಿದೆ. ತಾನು ಮಾಧ್ವನಾಗಿದ್ದರೂ ಎಂದೂ ಜಾತಿ-ಮತಗಳಿಗೆ ಪ್ರಾಮುಖ್ಯತೆಯನ್ನು ನೀಡಿಲ್ಲವೆಂಬುದನ್ನು ಆತ್ಮವಿಶ್ವಾಸದೊಂದಿಗೇ ಬರೆದಿದ್ದಾರೆ. ಆ ಕಾಲದಲ್ಲೇ ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಧರ್ಮ/ಸ್ವಮತ ಮೋಹ, ದರ್ಪ, ಅಧಿಕಾರ ಲಾಲಸೆ/ದುರುಪಯೋಗ, ಇವು ಹೇಗೆ ಕೆಲಸಮಾಡುತ್ತಿದ್ದವು ಎಂಬ ಕುರಿತು ಕ್ಷ-ಕಿರಣಗಳು ಇಲ್ಲಿವೆ. ಪೊಲೀಸರು ತಮ್ಮ ಶಕ್ತಿಯನ್ನು ಹೇಗೆ ಸ್ವಂತ ಲಾಭಕ್ಕೆ, ಜನರನ್ನು ಹಿಂಸಿಸಿ ಲಾಭಪಡೆಯುವುದಕ್ಕೆ ಬಳಸುತ್ತಿದ್ದರೆಂಬುದಕ್ಕೆ ಉದಾಹರಣೆ ಸಹಿತ ವಿವರಗಳಿವೆ. ರಾಮರಾಯರ ಸಜ್ಜನಿಕೆ ವ್ಯಕ್ತವಾಗುವುದು ಅವರ ಯಾರಾದರೊಬ್ಬರ ನೇತ್ಯಾತ್ಮಕ ನಿಲುವು, ವರ್ತನೆ, ಕಾರ್ಯಗಳನ್ನು ಹೇಳಬೇಕಾದರೆ ಹೆಸರುಗಳನ್ನು ಬದಲಿಸಿ ಆ ಕುರಿತು ಓದುಗರ ಗಮನವನ್ನು ಸೆಳೆದು ವಿವರಿಸುತ್ತಾರೆ. ಆದರೆ ಹೇಳಬೇಕಾದ್ದನ್ನು ಹೇಳುವುದಕ್ಕೆ ಅವರು ಹಿಂಜರಿಯುತ್ತಿರಲಿಲ್ಲವೆಂಬುದು ಕೃತಿ ಓದಿನಲ್ಲಿ ಗೊತ್ತಾಗುತ್ತದೆ. ಅವರು ಬರೆಯುತ್ತಾರೆ: ‘‘ತಾಟಸ್ತ್ಯವೆಂಬುದು ಸಮಾಜಜೀವಿಯಾದ ಮನುಷ್ಯನಿಗೆ-ಅದರಲ್ಲೂ ಸಂಸ್ಕೃತಿಯುಳ್ಳ ಮನುಷ್ಯನಿಗೆ- ಅಷ್ಟು ಸುಲಭವಾದ ಸಾಧನೆಯಲ್ಲ. ‘ರಮ್ಯಾನಿ ವೀಕ್ಷ್ಯ ಮಧುರಾಂಶ್ಚನಿಶಮ್ಯ ಶಬ್ದಾನ್’ ನಮ್ಮ ಆನಂದವನ್ನು ಇತರರಿಗೂ ಹಂಚಬೇಕೆಂಬುದು ಮನುಷ್ಯ ಸ್ವಭಾವ.’’ ಹಾಗೆಯೇ ದ್ವಂದ್ವಮಯವಾದ ಮನುಷ್ಯಜೀವನವನ್ನು ಕುರಿತು ಫ್ರೆಂಚ್ ಕವಿಯೊಬ್ಬನ ಗೀತೆಯನ್ನು ನೆನಪು ಮಾಡಿಕೊಂಡು ‘‘ನಾನು ಫ್ರೆಂಚ್ ಪಂಡಿತನೂ ಅಲ್ಲ; ಕನ್ನಡ ಕವಿಯೂ ಅಲ್ಲ-ಆದರೆ ನಗು, ಅಳು, ಸಿಹಿ, ಕಹಿ, ತುಷ್ಟಿ, ಆಟ, ನೋಟ, ಗೆಯ್ಮೆ, ಕನಸು, ನಿದ್ರೆ-ಇವುಗಳನ್ನು ಬಲ್ಲ ವೃದ್ಧ’’ ಎಂದು ಬರೆದಿದ್ದಾರೆ.

ಮಾಸ್ತಿಯವರ ಚೆನ್ನಬಸವ ನಾಯಕ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಲ್ಲದೆ ಕೆಲವು ಕತೆಗಳನ್ನೂ ಬರೆದಿದ್ದಾರೆ. ಮಾಸ್ತಿಯವರು ರಾಜಾಜಿಯವರನ್ನು ಭೇಟಿ ಮಾಡಲು ಹೋದಾಗ ತಮ್ಮ ಪರಿಚಯವನ್ನು ‘‘ನಾನು ನವರತ್ನ ರಾಮರಾಯರ ಒಬ್ಬ ಸ್ನೇಹಿತ’’ ಎಂದು ಆರಂಭಿಸಿದರೆಂದರೆ ರಾಮರಾಯರ ವ್ಯಕ್ತಿತ್ವದ ಎತ್ತರದ ಅರಿವಾದೀತು. (ರಾಜಾಜಿಯವರು ರಾಮರಾಯರನ್ನು ಭೇಟಿ ಮಾಡಲೋಸುಗವೇ ಅವರು ಎಡತೊರೆಯಲ್ಲಿ ಅಮಲ್ದಾರರಾಗಿದ್ದಾಗ ಬಂದು ಅವರೊಂದಿಗೆ ತಂಗಿದ್ದರಂತೆ.) ನಾನು ವಿಶೇಷವಾಗಿ ಮಾಸ್ತಿಯವರನ್ನು ಉಲ್ಲೇಖಿಸಿದರೂ ಡಿವಿಜಿ, ಎಂ.ಎಸ್.ಸುಬ್ಬುಲಕ್ಷ್ಮೀಯವರಂತಹ ಅನೇಕ ಮಹಾನುಭಾವರು ನವರತ್ನ ರಾಮರಾಯರ ಗೆಳೆತನ, ಒಡನಾಟ ಹೊಂದಿದ್ದರು. ಮಾಸ್ತಿ ಮತ್ತು ರಾಮರಾಯರ ಸಖ್ಯವು ರಾಜಕಾರಣದಲ್ಲಿ ನೆಹರೂ-ಪಟೇಲ್ ಅವರ ಸಖ್ಯದಂತಿದ್ದಿರಬಹುದು. ಈ ಕೃತಿಯೊಂದಿಗೆ ಮಾಸ್ತಿಯವರು ತಿ.ತಾ.ಶರ್ಮ ಅವರ, 32 ಪುಟಗಳಷ್ಟು ದೀರ್ಘವಾದ, ‘ಮೆಚ್ಚು ನುಡಿ’ಯನ್ನು ಪ್ರಕಟಿಸಿದ್ದಾರೆ. ಓದುಗರ ಆಸಕ್ತಿಗೆ ಬೇಕಾದಂತೆ ಆಯ್ದುಕೊಳ್ಳಲು ಈ ಕೃತಿಯಲ್ಲಿ ವಿವಿಧ ಕ್ಷೇತ್ರಗಳ ಸಮೃದ್ಧ ಅನುಭವದ್ರವ್ಯವಿದೆ. ಪ್ರಾಯಃ ಕೃತಿಯಲ್ಲಿ ದೋಷಗಳನ್ನು ಹುಡುಕಿದರೆ ಲೇಖಕರ ಸಾಂಸಾರಿಕ ಜೀವನದ ಕುರಿತು ವಿವರಗಳಿಲ್ಲವೆಂಬುದು ಗೊತ್ತಾಗುತ್ತದೆ. ಏನು ಬರೆಯಬೇಕಿತ್ತು ಎಂಬುದಕ್ಕಿಂತ ಬರೆದದ್ದು ಹೇಗಿದೆಯೆಂದು ಹೇಳಬೇಕಾದ್ದು ವಿಮರ್ಶೆಯ ಅಗತ್ಯ.

ಒಟ್ಟಿನಲ್ಲಿ ರಾಮರಾಯರಂತಹ ನವರತ್ನ ಬದುಕು ಎಲ್ಲರಿಗೂ ದಕ್ಕುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)