varthabharthi


ಕರಾವಳಿ

ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಕ್ರಮ ವಹಿಸದಿದ್ದರೆ ವಿಎ, ಪಿಡಿಒಗಳ ವಿರುದ್ಧ ಕ್ರಮ: ದ.ಕ ಜಿಲ್ಲಾಧಿಕಾರಿ ಎಚ್ಚರಿಕೆ

ವಾರ್ತಾ ಭಾರತಿ : 21 Nov, 2020

ಮಂಗಳೂರು, ನ.21: ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಗಣಿಗಾರಿಕೆ ನಡೆಸದಂತೆ ಅದನ್ನು ಸಕ್ರಮಗೊಳಿಸುವ ಕಾರ್ಯಕ್ಕೆ ಅಭಿಯಾನ ನಡೆಸಲಾಗುವುದು. ಗ್ರಾಮ ಪಂಚಾಯತ್ ಮಟ್ಟಗಳಲ್ಲಿ ಗ್ರಾಮ ಕರಣಿಕರು (ವಿಎ) ಹಾಗೂ ಪಿಡಿಒಗಳು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಸಿದ್ದಾರೆ.

ದ.ಕ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ನಿಗದಿತ ಸಮಯದೊಳಗೆ ಸಕ್ರಮಗೊಳಿಸದೆ ಗಣಿಗಾರಿಕೆ ಮುಂದುವರಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲು ಗಣಿ ಇಲಾಖೆಯಿಂದ ನೇರವಾಗಿ ಜಿಲ್ಲಾ ಟಾಸ್ಕ್‌ಫೋರ್ಸ್ ಮಾಹಿತಿಯಿಲ್ಲದೆ ಅನುಮತಿ ನೀಡಲಾಗುತ್ತದೆ, ಇದನ್ನು ಬದಲಾಯಿಸುವಂತೆ ಈಗಾಗಲೇ ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ ತಿಳಿಸಲಾಗಿದೆ. ಸರಕಾರಿ ಭೂಮಿಯಲ್ಲಿ ಎಲ್ಲೂ ಕೆಂಪು ಕಲ್ಲು ತೆಗೆಯುವ ಹಾಗಿಲ್ಲ. ಪಟ್ಟಾ ಜಾಗದಲ್ಲಿ ಅನುಮತಿ ಪಡೆದರೂ ಕೆಲವರು ಬೇರೆ ಜಾಗದಲ್ಲಿ ಹೋಗಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಾಳೆಪುಣಿ, ಪಜೀರು ಮುಂತಾದೆಡೆಯಿಂದ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ತಾಂತ್ರಿಕ ವರದಿ ಪಡೆದಿರುವುದಾಗಿ ಡಾ.ರಾಜೇಂದ್ರ ತಿಳಿಸಿದರು.

ಕೋವಿಡ್‌ನಿಂದಾಗಿ ಅನೇಕ ಕೆಲಸಗಳು ಬಾಕಿ ಉಳಿದಿದ್ದು, ಈಗ ಅವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಅದರಂತೆ ಹಂಪನಕಟ್ಟೆ ವೃತ್ತ, ರಸ್ತೆ ಅಭಿವೃದ್ಧಿ ಕಾರ್ಯ ಶುರುವಾಗಿದೆ. ಸದ್ಯ ಜನರಿಗೆ ಇದರಿಂದಾಗಿ ತೊಂದರೆಯಾಗುತ್ತಿದೆ. ಆದಷ್ಟೂ ಶೀಘ್ರ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲದೆ ನಾಗರಿಕರಿಗೆ ಸ್ಮಾರ್ಟ್ ಸಿಟಿಯ ಅನೇಕ ಕೆಲಸಗಳ ಬಗ್ಗೆ ಆಕ್ಷೇಪ ಇದೆ, ಯಾವುದನ್ನು ನಡೆಸಬಹುದಿತ್ತು ಎಂದು ಸಲಹೆ ಇದೆ, ಅವೆಲ್ಲವನ್ನೂ ಸ್ಮಾರ್ಟ್ ಸಿಟಿಯ ನಿರ್ದೇಶಕರಲ್ಲಿ ಒಬ್ಬನಾಗಿ ತಿಳಿದುಕೊಂಡಿದ್ದು, ಮುಂದಿನ ಬಾರಿ ಅವರೆಲ್ಲರ ಅಭಿಪ್ರಾಯ ಪಡೆಯುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಬೀಚ್ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಟಿಯಿಂದ ತಣ್ಣೀರುಬಾವಿ, ಪಣಂಬೂರು, ಸುರತ್ಕಲ್ ಸಹಿತ ಬೀಚ್‌ಗಳನ್ನು ಖಾಸಗಿ ಸಹಯೋಗದೊಂದಿಗೆ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಒಳಪಡಿಸುವುದಕ್ಕೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುವುದು. ಪಣಂಬೂರು ಬಂದರಿಗೆ ಆಗಮಿಸುವ ವಿಲಾಸಿ ಹಡಗುಗಳ ಪ್ರಯಾಣಿಕರನ್ನು ತ್ವರಿತವಾಗಿ ವಿವಿಧ ಜಾಗಗಳಿಗೆ ಕರೆದೊಯ್ಯಲು ಹೆಲಿ ಟೂರಿಸಂ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ, ಅದನ್ನು ಇನ್ನಷ್ಟು ವ್ಯವಸ್ಥಿತಗೊಳಿಸಿ, ಪೂರ್ವ ಬುಕಿಂಗ್ ಮಾಡುವಂತೆ ಸುಧಾರಣೆಪಡಿಸಲಾಗುವುದು ಎಂದರು.
ಮಂಗಳೂರು ಎಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಹಾಜರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.ಕೋವಿಡ್ ಪಾಸಿಟಿವ್ ‌ಪ್ರಮಾಣದಲ್ಲಿ ಭಾರೀ ಇಳಿಕೆ
 ದ.ಕ ಜಿಲ್ಲೆಯಲ್ಲಿ ಸದ್ಯ ಪ್ರತಿದಿನ ಸರಾಸರಿ 3,500 ಕೋವಿಡ್ ಟೆಸ್ಟ್ ನಡೆಯುತ್ತಿದ್ದು, ಪಾಸಿಟಿವ್ ಪ್ರಮಾಣ ಶೇ.1.08ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹರ್ಷ ವ್ಯಕ್ತಪಡಿಸಿದರು.
ಹಿಂದೆ ಸರಾಸರಿ 1,000 ಟೆಸ್ಟ್ ಆಗುತ್ತಿದ್ದರೆ ಶೇ.25ರಷ್ಟು ಪಾಸಿಟಿಟ್ ಪ್ರಮಾಣ ವರದಿಯಾಗುತ್ತಿತ್ತು. ಇದೀಗ ಅಧಿಕಾರಿಗಳ ಮೇಲೆಯೂ ಒತ್ತಡ ಕಡಿಮೆಯಾಗುತ್ತಿದ್ದು, ಕೋವಿಡ್ ಹೊರತು ಪಡಿಸಿ ಇತರ ಅಭಿವೃದ್ಧಿ ಕೆಲಸಗಳಲ್ಲಿ ತೊಡಗುವಂತಾಗಿದೆ, ಹಾಗೆಂದು ಮೈ ಮರೆಯುವ ಹಾಗಿಲ್ಲ. ಜನವರಿ ಬಳಿಕ ಮತ್ತೆ ಕೋವಿಡ್‌ನ ಎರಡನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸುರಕ್ಷಿತ ಅಂತರ, ಮಾಸ್ಕ್ ಅನಿವಾರ್ಯ, ಅದರೊಂದಿಗೆ ಲಸಿಕೆಯೂ ಬರುವ ನಿರೀಕ್ಷೆಯಿದ್ದು, ಅದಕ್ಕಾಗಿ ವ್ಯಾಪಕ ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಾಲೇಜುಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಸದ್ಯ 14,050 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್ ಇದೆ ಎಂದರು.


ದ.ಕ. ಜಿಲ್ಲೆಯಲ್ಲಿ ಈಗಾಗಲೇ 88 ಮಂದಿಗೆ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಅನುಮತಿ ನೀಡಲಾಗಿದೆ. ಅಕ್ರಮ ಮರಳುಗಾರಿಕೆ, ಸಾಗಾಟ ತಡೆಗಟ್ಟುವುದಕ್ಕೆ ದಕ್ಕೆಯಲ್ಲಿ ಲಾಂಗ್ ರೇಂಜ್ ಇರುವ ಹೈಪವರ್ ಕ್ಯಾಮರಾ ಅಳವಡಿಸಲಾಗುವುದು. ಪೊಲೀಸ್ ಜೊತೆ ಜಂಟಿ ಚೆಕ್‌ಪೋಸ್ಟ್ ರಚಿಸಲಾಗುವುದು. ಪೊಲೀಸರು, ಗಣಿ ಇಲಾಖೆ ಮತ್ತು ಕಂದಾಯ ಇಲಾಖೆ ಮಧ್ಯೆ ಸರಿಯಾದ ಹೊಂದಾಣಿಕೆಯಿಲ್ಲದಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಮುಂದಿನ ವಾರ ಮೂರೂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)