varthabharthi


ಕರಾವಳಿ

‘ಅದಾನಿ ಏರ್‌ಪೋರ್ಟ್ಸ್’ ಹೆಸರು ಬದಲಾಯಿಸದಿದ್ದರೆ ಹೋರಾಟ: ದಿಲ್‌ರಾಜ್ ಆಳ್ವ

ವಾರ್ತಾ ಭಾರತಿ : 21 Nov, 2020

ಮಂಗಳೂರು, ನ.21: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ನಿರ್ವಹಣೆಗೆ ಹಸ್ತಾಂತರಿಸಿದ ಬಳಿಕ ನಿಲ್ದಾಣ ಪ್ರಧಾನ ದ್ವಾರದಲ್ಲಿ ‘ಅದಾನಿ ಏರ್‌ಪೋರ್ಟ್ಸ್’ ಬರೆಯಲಾಗಿದೆ. ಇದನ್ನು ಕೂಡಲೇ ತೆರವು ಮಾಡದಿದ್ದಲ್ಲಿ ಹಂತಹಂತವಾಗಿ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾಜಿ ಸಂಸದ ಶ್ರೀನಿವಾಸ್ ಮಲ್ಯರ ಕೊಡುಗೆ, ಕರಾವಳಿ ಜಿಲ್ಲೆಯ ಜನರ ತ್ಯಾಗದ ಸಂಕೇತವಾಗಿರುವ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲಾಗಿದೆ. ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ಮಾರಾಟ ಮಾಡಿಲ್ಲ, ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಖಾಸಗೀಕರಣ ನೆಪದಲ್ಲಿ ಕಂಪನಿ ತುಳುನಾಡ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ಎಚ್ಚರಿಕೆ ನೀಡುವುದರ ಜತೆಗೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಸಮಾನ ಮನಸ್ಕರನ್ನು ಒಂದೇ ವೇದಿಕೆಯಡಿ ತಂದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ತುಳುನಾಡಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ಬರೋಡಾ ಬ್ಯಾಂಕ್ ಆಗಿದೆ, ಕಾರ್ಪೊರೇಶನ್ ಬ್ಯಾಂಕ್ ಯುನಿಯನ್ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದೆ. ಇದೇರೀತಿ ಹಲವು ಸಂಸ್ಥೆಗಳು ಖಾಸಗೀಕರಣಗೊಂಡಿದೆ. ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣ ಹಸ್ತಾಂತರ ವೇಳೆ ಮಂಗಳೂರು ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ನಿರ್ಲಕ್ಷಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳ ವಿರುದ್ಧ ತುಳುನಾಡಿನ ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯೇತರ ಸಂಘಟನೆಗಳು ನಮ್ಮ ಜಿಲ್ಲೆಯ ಹಿತರಕ್ಷಣೆ ಗಮನದಲ್ಲಿಸಿರಿಸಿಕೊಂಡು ಕೆಲವು ಬೇಡಿಕೆಗಳನ್ನು ಅದಾನಿ ಕಂಪೆನಿಗೆ ಸಲ್ಲಿಸುತ್ತೇವೆ. ಖಾಸಗಿ ಸಂಸ್ಥೆಗೆ ನೀಡಿದಂತಹ ಯಾವುದೇ ವಿಮಾನ ನಿಲ್ದಾಣದಲ್ಲಿ ಇಲ್ಲದಂತಹ ಹೆಸರಿನ ಗೊಂದಲ ಅದಾನಿ ಕಂಪೆನಿ ಇಲ್ಲಿ ಹುಟ್ಟುಹಾಕಿದೆ ಎಂದು ಅವರು ಆಕ್ಷೇಪಿಸಿದರು.

ದಿಲ್ಲಿ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಪಡೆದ ಸಂಸ್ಥೆಯು ಹೆಚ್ಚಿನ ವಾಣಿಜ್ಯ ಮಳಿಗೆಗಳನ್ನು ಆರಂಭಿಸಲು ಯೋಜಿಸಿದಾಗ ಸಾರ್ವಜನಿಕ ಹಿತಾಸಕಿ ಅರ್ಜಿಯ ಮೇರೆಗೆ ಹೈಕೋರ್ಟ್ ಇದಕ್ಕೆ ನಕಾರ ಸೂಚಿಸಿದೆ. ಇದೇ ಮಾದರಿಯಲ್ಲಿ ಮಂಗಳೂರಿನಲ್ಲಿ ಹೋರಾಟ ನಡೆಸಲಾಗುವುದು. ರಾಜಕೀಯ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಂಡು ಮುನ್ನಡೆಯಲು ನಿರ್ಣಯಿಸಲಾಗಿದೆ ಎಂದರು.

ಸಾಮಾಜಿಕ ಜಾಲತಾಣ ಮೂಲಕ ಅಭಿಯಾನ ಆರಂಭಿಸಿರುವ ನಾವು ಇದೀಗ ಮಾಧ್ಯಮದ ಮೂಲಕ ಬೇಡಿಕೆ ಸಲ್ಲಿಸುತ್ತಿದ್ದೇವೆ. ಮುಂದೆ ಸಂಸದರು, ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಅದಾನಿ ಸಂಸ್ಥೆಯ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಇದೇ ವೇಳೆ ಕಾನೂನು ರೀತಿಯ ಹೋರಾಟವನ್ನೂ ನಡೆಸಲಾಗುವುದು ಎಂದು ದಿಲ್‌ರಾಜ್ ಆಳ್ವ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಉಮಾನಾಥ್ ಕೋಟೆಕಾರ್, ರಿತೇಶ್ ಡಿಸೋಜ, ಕೌಶಿಕ್ ಶೆಟ್ಟಿ ಉಪಸ್ಥಿತರಿದ್ದರು.


ಪ್ರಮುಖ ಬೇಡಿಕೆಗಳು
* ವಿಮಾನ ನಿಲ್ದಾಣ ದ್ವಾರದಲ್ಲಿ ಹಾಕಿರುವ ಅದಾನಿ ಏರ್‌ಪೋರ್ಟ್ಸ್ ಬರಹವನ್ನು ಕೂಡಲೇ ತೆರವು ಮಾಡಬೇಕು.

* ಅದಾನಿ ಸಂಸ್ಥೆ ಲೋಗೋ ನಿಯಮದಂತೆ ಶೇ.10 ಮೀರಬಾರದು

* ಕೇಂದ್ರ ಸರಕಾರದ ಜತೆಗಿನ ಒಪ್ಪಂದ ಪ್ರತಿಯನ್ನು ಬಹಿರಂಗಪಡಿಸಬೇಕು.

* ವಿಮಾನ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯರನ್ನು ಉದ್ಯೋಗದಿಂದ ತೆಗೆಯಬಾರದು ಮತ್ತು ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಆದ್ಯತೆ ನೀಡಬೆಕು.

* ವಿಮಾನ ನಿಲ್ದಾಣಕ್ಕೆ ತುಳುನಾಡು ಏರ್‌ಪೋರ್ಟ್ ಹೆಸರನ್ನಿಡಬೇಕು.

* ತುಳುನಾಡಿನ ಸಂಸ್ಕೃತಿ ಮೇಲೆ ದಾಳಿ ಸಲ್ಲದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)