varthabharthi


ಬೆಂಗಳೂರು

ಬೆಂಗಳೂರು ಗೋಲಿಬಾರ್: ಮೃತ ಯುವಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಝಮೀರ್ ಅಹ್ಮದ್

ವಾರ್ತಾ ಭಾರತಿ : 21 Nov, 2020

ಬೆಂಗಳೂರು, ನ.21: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಕಳೆದ ಆಗಸ್ಟ್ ನಲ್ಲಿ ನಡೆದ ಗಲಭೆ ಸಂದರ್ಭ ಪೊಲೀಸರ ಗೋಲಿಬಾರ್ ಗೆ ಬಲಿಯಾದ ಮೂವರು ಯುವಕರು ಹಾಗೂ ಆಸ್ಪತ್ರೆಯಲ್ಲಿ ಅಸುನೀಗಿದ ಯುವಕನ ಕುಟುಂಬಕ್ಕೆ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ 20 ಲಕ್ಷ ರೂ.ಗಳ ನೆರವು ನೀಡಿದರು.

ಶನಿವಾರ ನಗರದ ಗೋವಿಂದಪುರದಲ್ಲಿರುವ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಸಮ್ಮುಖದಲ್ಲಿ ಯಾಸೀನ್ ಪಾಷ, ವಾಜಿದ್ ಖಾನ್, ಸಾದಿಕ್ ಶೇಕ್ ಹಾಗೂ ನದೀಮ್ ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ನಗದನ್ನು ಹಸ್ತಾಂತರ ಮಾಡಿದರು.

''ಮೃತಪಟ್ಟ ನಾಲ್ಕು ಮಂದಿ ಯುವಕರು ಅವರ ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದರು. ಅವರ ದುಡಿಮೆಯಿಂದಲೆ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ಆದರೆ, ದುರದೃಷ್ಟವಶಾತ್ ಅಂದು ನಡೆದ ಗೋಲಿಬಾರ್ ನಲ್ಲಿ ಮೂವರು ಯುವಕರು ಸ್ಥಳದಲ್ಲೆ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟ'' ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಗೋಲಿಬಾರ್ ನಲ್ಲಿ ಮೃತಪಟ್ಟ ಯುವಕರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದೆ. ಅದರಂತೆ, ಇಂದು ಅವರಿಗೆ ತಲಾ 5 ಲಕ್ಷ ರೂ.ಗಳಂತೆ 20 ಲಕ್ಷ ರೂ.ಗಳನ್ನು ನೀಡಿದ್ದೇನೆ. ನಾನು ಈ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದಾಗ ಬಿಜೆಪಿಯವರು ನನ್ನ ವಿರುದ್ಧ ಟೀಕಾ ಪ್ರಹಾರಗಳನ್ನು ಮಾಡಿದ್ದರು. ನಾನು ನೆರವು ನೀಡುತ್ತಿರುವುದು ಗಲಭೆಯಲ್ಲಿ ಪಾಲ್ಗೊಂಡಿದ್ದವರಿಗಲ್ಲ, ಬಡತನದಲ್ಲಿ ನಲುಗುತ್ತಿರುವ ಕುಟುಂಬಗಳಿಗೆ. ಇದು ತಪ್ಪು ಎನ್ನುವುದಾದರೆ, ಇಂತಹ ತಪ್ಪನ್ನು ನಾನು ಪದೇ ಪದೇ ಮಾಡುತ್ತೇನೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಗಲಭೆಗೆ ಸಂಬಂಧಿಸಿದಂತೆ ಪೊಲೀಸರು, ಎನ್‍ಐಎ ಅವರು ತನಿಖೆ ನಡೆಸುತ್ತಿದ್ದಾರೆ. ಆದುದರಿಂದ, ಈ ಹಂತದಲ್ಲಿ ನಾನು ಬೇರೆ ಏನು ಹೇಳುವುದಿಲ್ಲ. ಆದರೆ, ಸಾಕಷ್ಟು ಮಂದಿ ಅಮಾಯಕರ ಬಂಧನವಾಗಿರುವುದಂತು ಸತ್ಯ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ, ಸಂತ್ರಸ್ತರಿಗೆ ನ್ಯಾಯ ಹಾಗೂ ಅಮಾಯಕರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮೌಲಾನ ಶಂಶುದ್ದಿನ್ ಬಜ್ಲಿ, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಖಾನ್, ಸಯ್ಯದ್ ಮುಜಾಹಿದ್ ಪಾಷ, ತಾಹೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಪತ್‍ ರಾಜ್ ಉಚ್ಛಾಟನೆಗೆ ಆಗ್ರಹ

ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯವರು ಮಾಜಿ ಮೇಯರ್ ಸಂಪತ್‍ ರಾಜ್ ನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಗಂಭೀರವಾದ ಆರೋಪಗಳು ಕೇಳಿ ಬಂದಿವೆ. ಆದುದರಿಂದ, ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಬಿ.ಝೆಡ್.ಝಮಿರ್ ಅಹ್ಮದ್ ಖಾನ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)