varthabharthi


ಅಂತಾರಾಷ್ಟ್ರೀಯ

ರಾಯಭಾರಿ ಕಚೇರಿ, ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಗುರಿಯಿರಿಸಿ ಆಕ್ರಮಣ

ಕಾಬೂಲ್‌ನಲ್ಲಿ ಉಗ್ರರಿಂದ ರಾಕೆಟ್ ದಾಳಿ: ಕನಿಷ್ಠ ಎಂಟು ಮಂದಿ ಬಲಿ

ವಾರ್ತಾ ಭಾರತಿ : 21 Nov, 2020

ಸಾಂದರ್ಭಿಕ ಚಿತ್ರ

ಕಾಬೂಲ್,ನ.21: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮತ್ತೆ ರಕ್ತದೋಕುಳಿ ಹರಿದಿದ್ದು, ನಗರದ ಜನದಟ್ಟಣೆಯ ಪ್ರದೇಶಗಳಲ್ಲಿ ಶನಿವಾರ ನಡೆದ ಸರಣಿ ರಾಕೆಟ್ ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.

ವಿವಿಧ ರಾಯಭಾರಿ ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಬಿಗಿಭದ್ರತೆಯ ಗ್ರೀನ್‌ರೆನ್ ಪ್ರದೇಶ ಸೇರಿದಂತೆ ಮಧ್ಯ ಹಾಗೂ ಉತ್ತರ ಕಾಬೂಲ್‌ನ ವಿವಿಧ ಭಾಗಗಳ ಮೇಲೆ ಶಂಕಿತ ಬಂಡುಕೋರರು ಬೆಳಗ್ಗೆ 9:00 ಗಂಟೆಯ ಸುಮಾರಿಗೆ ರಾಕೆಟ್ ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ತನ್ನ ಕಾರ್ಯಾಲಯದ ಮುಖ್ಯ ಕಟ್ಟಡಕ್ಕೆ ರಾಕೆಟ್‌ನ ತುಣುಕುಗಳು ಅಪ್ಪಳಿಸಿರುವುದಾಗಿ ಕಾಬೂಲ್‌ನಲ್ಲಿರುವ ಇರಾನ್ ರಾಯಭಾರಿ ಕಚೇರಿ ತಿಳಿಸಿದೆ. ತನ್ನ ಕಟ್ಟಡದ ಆವರಣದಲ್ಲಿ ಕ್ಷಿಪಣಿ ಕೂಡಾ ಬಂದುಬಿದ್ದಿರುವುದಾಗಿ ಅದು ಹೇಳಿದೆ. ಘಟನೆ ನಡೆದ ಸ್ಥಳದಲ್ಲಿ ಯಾರೂ ಕೂಡಾ ಸ್ಥಳದಲ್ಲಿ ಇರಲಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

ಕಾಬೂಲ್ ನಗರದಲ್ಲಿ ಇಂದು ನಡೆದ ಸರಣಿ ರಾಕೆಟ್ ದಾಳಿಗಳು ತಾಲಿಬಾನ್ ಬಂಡುಕೋರರ ಕೃತ್ಯವೆಂದು ಅಫ್ಘಾನ್‌ಗೃಹ ಸಚಿವಾಲಯದ ವಕ್ತಾರ ತಾರೀಖ್ ಆರಿಯಾನ್ ಆಪಾದಿಸಿದ್ದಾರೆ. ‘ಭಯೋತ್ಪಾದಕರು’ ಒಟ್ಟು 23 ರಾಕೆಟ್‌ಗಳನ್ನು ಎಸೆದಿರುವುದಾಗಿ ಅವರು ಹೇಳಿದ್ದಾರೆ.

ರಾಕೆಟ್ ದಾಳಿಯಲ್ಲಿ ಎಂಟು ಮಂದಿ ಹುತಾತ್ಮರಾಗಿದ್ದಾರೆ ಹಾಗೂ ಇತರ 31 ಮಂದಿ ಗಾಯಗೊಂಡಿದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಅರಿಯಾನ್ ತಿಳಿಸಿದ್ದಾರೆ.

ಆಗ ದಾಳಿಯ ಹೊಣೆಯನ್ನು ತಾಲಿಬಾನ್ ನಿರಾಕರಿಸಿದ್ದು, ತಾವು ಸಾರ್ವಜನಿಕ ಸ್ಥಳಗಳಲ್ಲಿ ಮನಬಂದಂತೆ ದಾಳಿಗಳನ್ನು ನಡೆಸುವುದಿಲ್ಲವೆಂದು ಹೇಳಿದೆ. ಹಸಿರು ವಲಯ ಪ್ರದೇಶದಲ್ಲಿ ಕನಿಷ್ಠ ಒಂದು ಕಚೇರಿಯ ಮೇಲೆ ರಾಕೆಟ್ ಅಪ್ಪಳಿಸಿದೆಯಾದರೂ, ಅದು ಸ್ಫೋಟಗೊಂಡಿಲ್ಲವೆಂದು ಮೂಲಗಳು ತಿಳಿಸಿವೆ.

ಸರಣಿ ರಾಕೆಟ್ ದಾಳಿಯಲ್ಲಿ ವೈದ್ಯಕೀಯ ಸಂಕೀರ್ಣ ಸೇರಿದಂತೆ ಹಲವಾರು ಕಟ್ಟಡಗಳ ಗೋಡೆ ಮತ್ತು ಕಿಟಕಿಗಳಿಗೆ ಹಾನಿಯಾಗಿವೆ.

ಬಂಡುಕೋರರು ಕಾಬೂಲ್‌ನಲ್ಲಿ ಹಿಂಸಾಚಾರವನ್ನು ತೀವ್ರಗೊಳಿಸಿದ್ದು, ಕೆಲವು ವಾರಗಳ ಹಿಂದೆ ಎರಡು ಶಿಕ್ಷಣ ಸಂಸ್ಥೆಗಳ ಮೇಲೆ ನಡೆಸಿದ ಭಯಾನಕ ದಾಳಿಗಳಲ್ಲಿ ಸುಮಾರು 50 ಮಂದಿ ಸಾವನ್ನಪ್ಪಿದ್ದರು.

ನವೆಂಬರ್ 2ರಂದು ಕಾಬೂಲ್‌ನ ವಿಶ್ವವಿದ್ಯಾನಿಲಯದ ಮೇಲೆ ನಡೆದ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಆದರೆ ತಾಲಿಬಾನ್ ತೀವ್ರವಾದಿ ಬಣವಾದ ಹಕ್ಕಾನಿ ಜಾಲವು ಈ ಕೃತ್ಯದ ಹಿಂದೆಯೆಂದು ಅಫ್ಘಾನ್ ಸರಕಾರ ಆಪಾದಿಸಿತ್ತು.

ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕದ ಜೊತೆ ಶಾಂತಿ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ತಾಲಿಬಾನ್, ತಾನು ನಗರ ಪ್ರದೇಶಗಳ ಮೇಲೆ ದಾಳಿ ಮಾಡುವುದಿಲ್ಲವೆಂದು ವಾಗ್ದಾನ ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)