varthabharthi


ಕರ್ನಾಟಕ

ಕೋವಿಡ್ ಲಸಿಕೆ ಭ್ರಷ್ಟಾಚಾರದ ಕೂಪ ಆಗಬಾರದು: ಸದ್ಗುರು ಜಗ್ಗಿ ವಾಸುದೇವ್

ವಾರ್ತಾ ಭಾರತಿ : 21 Nov, 2020

ಬೆಂಗಳೂರು, ನ.21: ಕೋವಿಡ್ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಉಚಿತವಾಗಿ ಕೊಡುವ ವ್ಯವಸ್ಥೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.

“ಬೆಂಗಳೂರು ತಂತ್ರಜ್ಞಾನ ಮೇಳ-2020”ದ ಕೊನೆಯ ದಿನವಾದ ಶನಿವಾರ “ಸ್ವಾಸ್ಥ್ಯಕ್ಕಾಗಿ ತಂತ್ರಜ್ಞಾನಗಳಲ್ಲಿ ಹೂಡಿಕೆ” ಕುರಿತ ಸಂವಾದಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ತಿಂಗಳುಗಳಲ್ಲಿ ಕೋವಿಡ್ ಲಸಿಕೆ ಮಾರುಕಟ್ಟೆಗೆ ಬಂದಾಗ ಅದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಯಾರಿಗೆ ಸೋಂಕು ತಗುಲುವ ಅಪಾಯ ಹೆಚ್ಚೋ, ಉದಾಹರಣೆಗೆ ಆರೋಗ್ಯ ಸೇವೆಯಲ್ಲಿರುವವರು, ಪೊಲೀಸರು ಇಂಥವರಿಗೆ ಮೊದಲು ಲಸಿಕೆ ಹಾಕಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ಯಾರು ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು” ಎಂಬುದನ್ನು ಕೋವಿಡ್ ಸೋಂಕು ಸನ್ನಿವೇಶ ದೃಢಪಡಿಸಿದೆ. ಇದನ್ನು ಅರ್ಥಮಾಡಿಕೊಂಡರೆ ಕಂಪನಿಗಳು ಮೂಲ ಸೌಕರ್ಯಕ್ಕಾಗಿ ಮಾಡುವ ಅನಗತ್ಯ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಜೊತೆಗೆ ತಮ್ಮ ನಿರ್ವಹಣಾ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಅನುಸರಿಸಿದರೆ ಅಂತಿಮವಾಗಿ ಅದು ಭೂಗ್ರಹದ ಮೇಲಿನ ಒತ್ತಡವನ್ನು ಕೂಡ ತಗ್ಗಿಸುತ್ತದೆ ಎಂದು ಅವರು ವಿವರಿಸಿದರು.

ಕಂಪನಿಗಳು ಮನುಷ್ಯರನ್ನು ಸಂಪನ್ಮೂಲ ಎಂದು ನೋಡುವ ಧೋರಣೆ ಬದಲಾಗಬೇಕು. ಬದಲಿಗೆ ಮನುಷ್ಯರನ್ನು ಅಂತಃಸತ್ವವುಳ್ಳವರು ಎಂಬ ದೃಷ್ಟಿಯಲ್ಲಿ ನೋಡುವ ಹಾಗೂ ಆ ಅಂತಃಸತ್ವ ಅನಾವರಣಗೊಳ್ಳಲು ಅನುವಾಗುವ ಕಾರ್ಯರೀತಿ ಅನುಷ್ಠಾನಗೊಳಿಸುವ ಕುರಿತು ಆಲೋಚಿಸಲು ಇದು ಸೂಕ್ತ ಸಮಯ. ಈಗ ತಂತ್ರಜ್ಞಾನದ ಬಲದಿಂದ ಜಗತ್ತಿನ ಯಾವುದೇ ಭಾಗದ ಜನರನ್ನು ತಲುಪಬಹುದಾಗಿದೆ. ಮುಂಚೆ ನಾವು ಕೆಲವೇ ಜನರನ್ನು ತಲುಪುವುದು ಕಷ್ಟವಾಗುತ್ತಿತ್ತು. ಈಗ ಅಲ್ಪಾವಧಿಯಲ್ಲಿ ನೂರಾರು ಕೋಟಿ ಜನರನ್ನು ತಲುಪಬಹುದಾಗಿದೆ. ಈ ತಂತ್ರಜ್ಞಾನವು ಸದುದ್ದೇಶಕ್ಕೆ ಹಾಗೂ ಆನಂದದಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಯೋಗ ಎಂದರೆ ಕೇವಲ ದೇಹದ ವ್ಯಾಯಾಮ ಅಲ್ಲ. ಯೋಗ ಎಂದರೆ ಐಕ್ಯತೆ ಎಂದು ಅರ್ಥ. ಅಂದರೆ, ವ್ಯಕ್ತಿಯ ವೈಯಕ್ತಿಕ ಅಸ್ಮಿತೆಯು ಬಾಹ್ಯ ಜಗತ್ತಿನೊಂದಿಗೆ ಐಕ್ಯವಾಗುವುದು ಎಂದರ್ಥ. ಇದನ್ನೇ ಭಾರತೀಯ ಸಂಸ್ಕೃತಿ “ಅಹಂ ಬ್ರಹ್ಮಾಸ್ಮಿ” ಎಂದು ಕರೆಯುತ್ತದೆ. ಈ ಪ್ರಜ್ಞೆ ಬೆಳೆದರೆ ಬೇರೆ ಯಾವ ನೈತಿಕತೆಯೂ ಬೇಕಿಲ್ಲ. ಆಧುನಿಕ ಶಿಕ್ಷಣ ಪದ್ಧತಿ ಇದಕ್ಕೆ ತದ್ವಿರುದ್ಧವಾಗಿ ಸ್ವಕೇಂದ್ರಿತ ಮನೋಭಾವ ಬೆಳೆಸುತ್ತಿದೆ ಎಂದು ವಾಸುದೇವ್ ಹೇಳಿದರು.

ನಮ್ಮ ಮಕ್ಕಳು ಮರ-ಗಿಡ, ಬೆಳಕು, ಬಯಲು, ನದಿ, ತೊರೆಗಳಿಗೆ ತೆರೆದುಕೊಂಡು ಬದುಕಬೇಕು. ಆದರೆ ಈಗ ನಗರಗಳಲ್ಲಿ ಮಕ್ಕಳು ಮನೆಯಿಂದ ಆಚೆ ಕಾಲಿಟ್ಟರೆ ಸಾಕು ವಾಹನಗಳ ಗದ್ದಲದಲ್ಲಿ ಸಿಲುಕುವಂತಾಗಿದೆ. ಇದಕ್ಕೆ ಪರಿಹಾರ ಕಂಡಹಿಡಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ಮಣ್ಣಿನಲ್ಲಿ, ಅದರಲ್ಲೂ ದಕ್ಷಿಣ ಭಾರತದ ಮಣ್ಣಿನ ಒಂದು ಹಿಡಿಯಲ್ಲಿ 50,000 ಪ್ರಭೇದದ ಸೂಕ್ಷ್ಮಾಣುಜೀವಿಗಳಿವೆ. ಇಷ್ಟು ಸತ್ವಯುತವಾದ ಮಣ್ಣು ಬಹುಶಃ ಬೇರೆಲ್ಲೂ ಇಲ್ಲ. ಭಾರತದ ಉತ್ತರದಲ್ಲಿ ಹಿಮಾಚಲ ಪರ್ವತ ನಮ್ಮ ರಕ್ಷಣೆಗೆ ಇತ್ತು, ಇನ್ನೊಂದು ಕಡೆ ಹಿಂದೂ ಮಹಾಸಾಗರದ ರಕ್ಷಣೆ ಇತ್ತು. ಜೊತೆಗೆ ಸಮೃದ್ಧತೆ ಇತ್ತು. ಹೀಗಾಗಿ ಇಲ್ಲಿ ಸಾವಿರಾರು ವರ್ಷಗಳ ಕಾಲ ಯುದ್ಧದ ಭಯ ಎಂಬುದೇ ಇರಲಿಲ್ಲ. ಸಹಜವಾಗಿಯೇ ಜನರು ಸಂಗೀತ, ಕಲೆ, ವಿಜ್ಞಾನ, ಖಗೋಳ ಇತ್ಯಾದಿ ಚರ್ಚೆಗಳಲ್ಲಿ ತೊಡಗಿದ್ದರಿಂದ ಹಿಂದೂಸ್ತಾನದಲ್ಲಿ ಇವೆಲ್ಲವೂ ವಿಕಸನಗೊಂಡವು. ಇದನ್ನು ನಾನು ರಾಷ್ಟ್ರೀಯತಾವಾದಿಯ ನೆಲೆಯಲ್ಲಿ ಹೇಳುತ್ತಿಲ್ಲ. ಇದು ಚಾರಿತ್ರಿಕ ವಾಸ್ತವ ಎಂದು ಅವರು ಹೇಳಿದರು.

ತಮ್ಮ “ಈಶ” ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಿರುವ 49 ಗ್ರಾಮಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಲಿಲ್ಲ (ಹೊರಗಿನಿಂದ ಬಂದ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಹೊರತುಪಡಿಸಿ). ತಜ್ಞರು ಕೂಡ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ನೈರ್ಮಲ್ಯ ಹಾಗೂ ರೋಗ ನಿರೋಧಕ ಶಕ್ತಿ ಬಗ್ಗೆ ನಾವು ಮುಂಚಿನಿಂದಲೂ ಅರಿವು ಮೂಡಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಸದ್ಗುರು ವಿವರಿಸಿದರು. ಇಂಟೆಲ್ ಇಂಡಿಯಾ ಕಂಟ್ರಿ ಹೆಡ್ ನಿವೃತಿ ರಾಯ್ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಗೋಷ್ಠಿ ನಿರ್ವಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)