varthabharthi


ಸಂಪಾದಕೀಯ

ಗೋಶಾಲೆಗಳೆಂಬ ಬೃಹತ್ ಹಗರಣ!

ವಾರ್ತಾ ಭಾರತಿ : 24 Nov, 2020

ಒಂದು ಕಾಲದಲ್ಲಿ ವಿಡಂಬನೆಯೆಂದೆನಿಸಬಹುದಾಗಿದ್ದ ಸಂಗತಿಗಳೆಲ್ಲ ದೇಶದಲ್ಲಿ ವಾಸ್ತವ ರೂಪ ತಾಳುತ್ತಿವೆ. ಜನರ ರಾಜಕೀಯ ಪ್ರಜ್ಞೆ ವಿಸ್ಮತಿಗೊಳಗಾದಾಗ ಸಂಭವಿಸಬಹುದಾದ ಅತಿಶಯಗಳಿಗೆ ನಾವು ಸಾಕ್ಷಿಗಳಾಗುತ್ತಿದ್ದೇವೆ. ತನ್ನ ಕುಟುಂಬ ಸದಸ್ಯನ ಮೃತದೇಹವನ್ನು ಆ್ಯಂಬುಲೆನ್ಸ್ ಲಭ್ಯವಿಲ್ಲದೆ ಹೆಗಲಲ್ಲಿ ಹೊತ್ತುಕೊಂಡು ಹೋಗುವ ನತದೃಷ್ಟರಿರುವ ರಾಜ್ಯದಲ್ಲಿ ಹಸುವಿಗಾಗಿ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗುತ್ತದೆ. ಬೀದಿ ಬದಿಯಲ್ಲಿ ಚಳಿ ಬಿಸಿಲಿನಿಂದ ನಿರ್ಗತಿಕರು ಸಾಯುತ್ತಿರುವಾಗ, ಗೋವುಗಳಿಗಾಗಿ ಮುಖ್ಯಮಂತ್ರಿಯೊಬ್ಬರು ಕಂಬಳಿಗಳನ್ನು ವಿತರಿಸುತ್ತಾರೆ. ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಕಾಲದಲ್ಲಿ, ಸರಕಾರಿ ಗೋಶಾಲೆಗಳು ಗಲ್ಲಿಗಲ್ಲಿಗಳಲ್ಲಿ ತೆರೆಯುತ್ತಿವೆ.

ಕೊರೋನ ಎದುರಿಸಲು ಸರಕಾರ ಸಂಪೂರ್ಣ ವಿಫಲವಾಗಿ ಕೂತಿರುವಾಗ, ಗೋವುಗಳಿಗಾಗಿಯೇ ಒಂದು ರಾಜ್ಯ ಪ್ರತ್ಯೇಕ ಗೋ ಕ್ಯಾಬಿನೆಟ್‌ನ್ನು ರಚಿಸುತ್ತದೆ. ಜನರು ದಿನದ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವ ದಿನಗಳಲ್ಲಿ, ಗೋ ರಕ್ಷಣೆಗಾಗಿ ವಿಶೇಷ ಸುಂಕವನ್ನು ವಿಧಿಸುವ ಮಾತನಾಡುತ್ತಿದೆ ಸರಕಾರ. ಲಕ್ಷಾಂತರ ಜನರು ಬರಗಾಲದಿಂದ ಸಾಯುತ್ತಿರುವಾಗ ಗೋರಕ್ಷಣೆಗಾಗಿ ದೇಣಿಗೆಗಾಗಿ ಬಂದ ಬ್ರಾಹ್ಮಣ ಸಮೂಹಕ್ಕೆ ಛೀಮಾರಿ ಹಾಕಿದ್ದ ಸ್ವಾಮಿ ವಿವೇಕಾನಂದರು ಇಂದೇನಾದರೂ ಬದುಕುಳಿದಿರುತ್ತಿದ್ದರೆ, ಅವರು ನಕಲಿ ಗೋರಕ್ಷಕರಿಂದ ಹಲ್ಲೆಗೊಳಗಾಗುತ್ತಿದ್ದರು. ಗೋವುಗಳನ್ನು ಸಾಕುತ್ತಾ ಬದುಕು ಕಂಡುಕೊಳ್ಳುತ್ತಿದ್ದ ರೈತರೆಲ್ಲ ಇಂದು, ನೆಮ್ಮದಿಯ ಬದುಕಿಗಾಗಿ ಗೋವು ಸಾಕಣೆಯಿಂದ ದೂರ ಸರಿಯುತ್ತಿದ್ದಾರೆ. ಗೋವು ಸಾಕುವ ರೈತರಿಗೆ ಒದಗಬೇಕಾದ ಸರಕಾರಿ ನೆರವುಗಳನ್ನು ಬೀದಿಯಲ್ಲಿ ಕತ್ತಿ ದೊಣ್ಣೆ ಹಿಡಿದು ಓಡಾಡುವ ನಕಲಿ ಗೋರಕ್ಷಕರು ಮತ್ತು ಗೋಶಾಲೆಯ ಹೆಸರಿನಲ್ಲಿ ವಿವಿಧ ಸ್ವಾಮೀಜಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಆದರೂ ಭಾರತ ಗೋಮಾಂಸ ರಫ್ತಿನಲ್ಲಿ ಅಗ್ರ ಸ್ಥಾನದಲ್ಲಿದೆ. ಈ ರಫ್ತಿಗೆ ಬೇಕಾದ ಗೋಮಾಂಸವನ್ನು ಸಂಬಂಧ ಪಟ್ಟ ಸಂಸ್ಕರಣಾ ಘಟಕಗಳಿಗೆ ಒದಗಿಸುತ್ತಿರುವವರು ಯಾರು? ರಫ್ತಿಗೆ ಯಾವ ಮೂಲದಿಂದ ಗೋಮಾಂಸವನ್ನು ಪೂರೈಸಲಾಗುತ್ತಿದೆ ಎನ್ನುವ ಅಂಶ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಭಾರತದಲ್ಲಿ ಗೋಮಾಂಸ ಸೇವನೆ ಮಾಡಬಾರದು ಎನ್ನುವ ಮೂಲಕ, ಗೋಮಾಂಸದಂತಹ ಪೌಷ್ಟಿಕ ಆಹಾರಕ್ಕೆ ವಿದೇಶೀಯರು ಮಾತ್ರ ಅರ್ಹರು ಎಂಬ ಸಂದೇಶವನ್ನು ಹರಡಲಾಗುತ್ತಿದೆ.ಈಗಾಗಲೇ ಅಪೌಷ್ಟಿಕತೆಯಿಂದ ನರಳುತ್ತಿರುವ ಭಾರತ, ಸರಕಾರದ ಆಹಾರ ನೀತಿಯ ದ್ವಂದ್ವಗಳಿಂದ ಇನ್ನಷ್ಟು ಅಪೌಷ್ಟಿಕತೆಗೆ ಜಾರುತ್ತಿದೆ.

    ಭಾರತದ ಇತಿಹಾಸವನ್ನು ಗಮನಿಸಿದರೆ ಇಲ್ಲಿ ರೈತರಿಗೆ ಗೋಸಾಕಣೆ ಆರ್ಥಿಕತೆಯ ಭಾಗವಾಗಿತ್ತೇ ಹೊರತು, ಧಾರ್ಮಿಕತೆಯ ಭಾಗವಲ್ಲ. ತಮ್ಮ ಆರ್ಥಿಕತೆಗೆ ಪೂರಕವಾದ ಎಲ್ಲ ಪ್ರಾಣಿಗಳನ್ನು, ಆಹಾರ ವಸ್ತುಗಳನ್ನು ಗೌರವಿಸುವ ಕ್ರಮ ರೈತರಲ್ಲಿತ್ತು. ಪೂಜಿಸುವುದಕ್ಕಾಗಿಯೇ ಗೋವುಗಳನ್ನು ಸಾಕುವ ಪದ್ಧತಿ ದೇಶದಲ್ಲಿರಲಿಲ್ಲ. ಬದಲಿಗೆ ಯಜ್ಞಯಾಗಾದಿಗಳ ಸಂದರ್ಭದಲ್ಲಿ, ಅತಿಥಿಗಳನ್ನು ಸತ್ಕರಿಸುವ ಸಂದರ್ಭದಲ್ಲಿ ಗೋವುಗಳನ್ನು ಕಡಿಯುವ ಪದ್ಧತಿಗಳು ಇತ್ತೆನ್ನುವುದನ್ನು ವೇದಗಳ ಮೂಲಕವೇ ಕಲಿಯುತ್ತಾ ಬಂದಿದ್ದೇವೆ. ಆರೆಸ್ಸೆಸ್‌ನ ಪರೋಕ್ಷ ಸಂವಿಧಾನವಾಗಿರುವ ಮನುಸ್ಮತಿ ಕೂಡ ಗೋಹತ್ಯೆಗೆ ಸಮ್ಮತಿಸುತ್ತದೆ. ಸಂಘಪರಿವಾರದ ನೇತಾರರಾಗಿರುವ ವಿನಾಯಕ ದಾಮೋದರ ಸಾವರ್ಕರ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೋವುಗಳನ್ನು ಮಾತೆ, ದೇವರು ಎಂದು ಕರೆಯುವವರನ್ನು ತೀವ್ರವಾಗಿ ಖಂಡಿಸುತ್ತಾರೆ. ಎಲ್ಲಿಯವರೆಗೆ ಗೋವುಗಳು ಆರ್ಥಿಕತೆಯ ಭಾಗವಾಗಿತ್ತೋ ಅಲ್ಲಿಯವರೆಗೂ ಈ ದೇಶದಲ್ಲಿ ಗೋಸಾಕಣೆ ರೈತರ ಪಾಲಿಗೆ ಲಾಭದಾಯಕ ಉದ್ಯಮವಾಗಿತ್ತು. ಗೋವುಗಳಿಂದ ಒದಗುವ ಹಾಲಿನಿಂದ ಹಿಡಿದು ಸೆಗಣಿ, ಮೂತ್ರ, ಚರ್ಮ, ಎಲುಬು, ಮಾಂಸ ಇವೆಲ್ಲವೂ ರೈತರ ಪಾಲಿಗೆ ಆರ್ಥಿಕ ವಿಷಯಗಳೇ ಆಗಿದ್ದವು. ಮಾಂಸಾಹಾರಿಗಳೂ ಹೈನೋದ್ಯಮದ ಒಂದು ಪ್ರಮುಖ ಭಾಗವಾಗಿದ್ದರು. ಹಾಲು ನೀಡದ ಹಸುಗಳು ಅಥವಾ ಎತ್ತುಗಳನ್ನು ಮಾರಿ ಅವುಗಳಿಂದ ಗೋಸಾಕಣೆಗೆ ಅವಶ್ಯವಿರುವ ಹುಲ್ಲು ಇನ್ನಿತರ ಸಾಮಗ್ರಿಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.

ಮನೆ ರಿಪೇರಿ, ಮಕ್ಕಳ ಮದುವೆ ಸಮಾರಂಭಗಳಂತಹ ತುರ್ತು ಸಂದರ್ಭಗಳಲ್ಲಿಯೂ ಇಂತಹ ಅನುತ್ಪಾದಕ ಗೋವುಗಳನ್ನು ಮಾರಿ ಆರ್ಥಿಕ ವ್ಯವಹಾರಗಳನ್ನು ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ಸಂಘಪರಿವಾರದ ನಕಲಿ ಗೋರಕ್ಷಕರು ಮತ್ತು ಸರಕಾರದ ದ್ವಂದ್ವ ನೀತಿಗಳಿಂದಾಗಿ ರೈತರು ತಮ್ಮದೇ ಗೋವುಗಳನ್ನು ಮಾರಾಟ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರು ಸಾಕಿದ ಗೋವುಗಳ ಮೇಲೆ ನಕಲಿ ಗೋರಕ್ಷಕರ ವೇಷದಲ್ಲಿರುವ ಬೀದಿ ಪುಂಡರು ಹಕ್ಕು ಸಾಧಿಸ ತೊಡಗಿದ್ದಾರೆ. ತಮ್ಮದೇ ಅನುತ್ಪಾದಕ ಗೋವುಗಳನ್ನು ಅತ್ತ ಮಾರಲೂ ಆಗದೆ, ಇತ್ತ ಸಾಕಲೂ ಆಗದೆ ರೈತರು ಅತಂತ್ರರಾಗಿದ್ದಾರೆ. ಗೋವುಗಳನ್ನು ಸಾಕಿದ ತಪ್ಪಿಗಾಗಿ ಅವರು ಸಂಘಪರಿವಾರದ ಕಾರ್ಯಕರ್ತರ ದೌರ್ಜನ್ಯಗಳಿಗೆ ಬಲಿಯಾಗಬೇಕಾಗಿದೆ. ತಾವು ಸಾಕಿದ ಗೋವುಗಳನ್ನು ಮಾರಲು ಮುಂದಾದರೆ ಅದಕ್ಕೆ ಸಾವಿರ ಅಡ್ಡಿಗಳು. ದೊಡ್ಡಿಯಲ್ಲೇ ಉಳಿಸಿಕೊಂಡರೆ ಗೋಸಾಕಣೆಯ ವೆಚ್ಚ ಹೆಚ್ಚುತ್ತದೆ. ನಷ್ಟವಾಗುತ್ತದೆ. ತಮ್ಮ ಆರ್ಥಿಕ ಕಷ್ಟಗಳ ಸಂದರ್ಭದಲ್ಲೂ ಗೋವುಗಳನ್ನು ಮಾರಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಇದರಿಂದಾಗಿ ರೋಸಿ ಹೋಗಿರುವ ರೈತರು ಗೋ ಸಾಕಣೆಯಿಂದ ಅನಿವಾರ್ಯವಾಗಿ ದೂರ ಸರಿಯುತ್ತಿದ್ದಾರೆ.

ವಿಪರ್ಯಾಸವೆಂದರೆ, ಎಲ್ಲಿಯವರೆಗೆ ಗೋರಕ್ಷಣೆಯ ಹೊಣೆಯನ್ನು ಅದರ ಮಾಲಕರಾದ ರೈತರೇ ಹೊತ್ತಿದ್ದರೋ ಅಲ್ಲಿಯವರೆಗೆ ಯಾವ ಸಮಸ್ಯೆಯೂ ಇರಲಿಲ್ಲ. ಯಾವಾಗ ರೈತರ ಕೈಯಿಂದ ಗೋವುಗಳ ಮೇಲಿನ ಮಾರುವ ಹಕ್ಕನ್ನು ಸರಕಾರ ಕಿತ್ತುಕೊಂಡಿತೋ ಪರಿಸ್ಥಿತಿ ಉಲ್ಬಣಿಸಿದೆ. ಒಂದೆಡೆ ಸರಕಾರದ ನೀತಿಯಿಂದ ಗ್ರಾಮೀಣ ರೈತರು ಸರ್ವ ನಾಶವಾದರು. ಇತ್ತ ಅನುಪಯುಕ್ತ ಗೋವುಗಳನ್ನು ಏನು ಮಾಡುವುದು ಎಂದು ತಿಳಿಯದೆ ಸರಕಾರವೂ ಏದುಸಿರು ಬಿಡುತ್ತಿದೆ. ಜನಸಾಮಾನ್ಯರ ಅಭಿವೃದ್ಧಿಗೆ ಮೀಸಲಿಡಬೇಕಾದ ಹಣವನ್ನು ಅನುಪಯುಕ್ತ ಗೋವುಗಳನ್ನು ಸಾಕಲು ‘ಗೋಶಾಲೆ’ಗಳಿಗಾಗಿ ಸರಕಾರ ವ್ಯಯಿಸುತ್ತಿದೆ. ಕೆಲವು ಹಿತಾಸಕ್ತಿಗಳು ಗೋಶಾಲೆಗಳನ್ನು ತೆರೆದು ಸರಕಾರದ ಹಣವನ್ನು ನುಂಗಿ ನೀರು ಕುಡಿಯುತ್ತಿರುವುದಲ್ಲದೆ, ಬೃಹತ್ ಮಾಂಸ ಸಂಸ್ಕೃರಣಾ ಘಟಕಗಳಿಗೆ ಗುಟ್ಟಾಗಿ ಗೋವುಗಳನ್ನು ಸಾಗಿಸುತ್ತಿವೆ ಎನ್ನುವ ಆರೋಪಗಳು ವ್ಯಾಪಕವಾಗಿವೆ. ಇದೇ ಸಂದರ್ಭದಲ್ಲಿ ಗೋಶಾಲೆಗಳಲ್ಲಿ ನಿಗೂಢವಾಗಿ ಗೋವುಗಳು ಸಾಯುತ್ತಿರುವ ಸಂಖ್ಯೆ ಹೆಚ್ಚುತ್ತಿದೆೆ. ರಾಜಸ್ಥಾನದ ಜೈಪುರದ ಗೋಶಾಲೆಯೊಂದರಲ್ಲಿ ಎರಡು ದಿನಗಳ ಹಿಂದೆ 75 ಹಸುಗಳು ನಿಗೂಢವಾಗಿ ಸತ್ತಿವೆ. ಗೋವುಗಳು ವಿಷಾಹಾರ ಸೇವಿಸಿವೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿ ಹೇಳುತ್ತಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ರಾಜಸ್ಥಾನ ಹಿಂಗೋನಿಯಾ ಗೋಶಾಲೆಯಲ್ಲಿ 75 ಸಾವಿರಕ್ಕೂ ಅಧಿಕ ಹಸುಗಳು ಸತ್ತಿವೆ. ವಿವಿಧ ಗೋಶಾಲೆಗಳಲ್ಲಿ ಅಸಮರ್ಪಕ ವ್ಯವಸ್ಥೆಯಿಂದಾಗಿ, ಹಸಿವಿನಿಂದಾಗಿ ನೂರಾರು ಗೋವುಗಳು ಅತ್ಯಂತ ಬರ್ಬರವಾಗಿ ಸಾಯುತ್ತಿರುವುದು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಿವೆ. ಸರಕಾರ ಗೋಶಾಲೆಗಳಿಗಾಗಿ ಬಿಡುಗಡೆ ಮಾಡುತ್ತಿರುವ ಹಣ ಸಂಪೂರ್ಣ ಗೋವುಗಳಿಗಾಗಿ ವ್ಯಯವಾಗುತ್ತಿಲ್ಲ ಎನ್ನುವ ಆರೋಪಗಳಿವೆ. ಈ ಹಣವನ್ನು ನುಂಗಿ ಹಾಕಿ, ಗೋವುಗಳನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಗೋಶಾಲೆಗಳಲ್ಲಿ ಇಲ್ಲವಾಗಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಂತಹ ಬೃಹತ್ ಗೋಶಾಲೆಗಳಿಂದ ಮಾಂಸ ಸಂಸ್ಕರಣಾ ಘಟಕಗಳಿಗೆ ಗೋವುಗಳು ರವಾನೆಯಾಗಿ ಅಲ್ಲಿಂದ ಅದು ವಿದೇಶಗಳಿಗೆ ರಫ್ತಾಗುತ್ತಿವೆ. ಈ ಮೂಲಕ ಘಟಕಗಳು ಭಾರೀ ಲಾಭವನ್ನು ತನ್ನದಾಗಿಸಿಕೊಳ್ಳುತ್ತಿವೆ. ಇತ್ತ ಗೋಶಾಲೆಯ ಗೋವುಗಳನ್ನು ಮೃತ ಪಟ್ಟಿಗೆ ಸೇರಿಸಿ ಸರಕಾರವನ್ನು ವಂಚಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಕಳೆದ ಹತ್ತು ವರ್ಷಗಳಿಂದೀಚೆಗೆ ಗೋಶಾಲೆಯೆನ್ನುವುದು ದೇಶದ ಬೃಹತ್ ಹಗರಣವಾಗಿ ಪರಿವರ್ತನೆಗೊಂಡಿದೆ. ಸರಕಾರ ಮೊತ್ತ ಮೊದಲಾಗಿ, ಇರುವ ಗೋಶಾಲೆಗಳ ಅಧಿಕೃತ ಸ್ಥಿತಿಗತಿಗಳನ್ನು ಪರಿಶೀಲಿಸುವುದಕ್ಕಾಗಿ ಮತ್ತು ಗೋಶಾಲೆಗಳಿಗೆ ಸಂದಾಯವಾಗಿರುವ ಅನುದಾನಗಳ ದುರ್ಬಳಕೆಯನ್ನು ತನಿಖೆ ಮಾಡುವುದಕ್ಕಾಗಿ ಒಂದು ಸ್ವತಂತ್ರ ತನಿಖಾ ಸಂಸ್ಥೆಯನ್ನು ಸ್ಥಾಪಿಸಬೇಕಾಗಿದೆ. ಹಾಗೆಯೇ ಎಲ್ಲ ಗೋಶಾಲೆಗಳನ್ನು ಮುಚ್ಚಿ, ಅದಕ್ಕೆ ವ್ಯಯವಾಗುತ್ತಿರುವ ಹಣವನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಕೆ ಮಾಡಬೇಕು. ರೈತನೇ ನಿಜವಾದ ಗೋರಕ್ಷಕ. ಅದನ್ನು ಸಾಕುವ, ಮಾರುವ ಸಕಲ ಹಕ್ಕನ್ನು ಅವನಿಗೇ ನೀಡಿ, ಅನುಪಯುಕ್ತ ಗೋವುಗಳನ್ನು ಸಾಕುವ ಹೊಣೆಯಿಂದ ಸರಕಾರ ಮುಕ್ತವಾಗಬೇಕು. ಗೋರಕ್ಷಣೆಗೆ ಸಂಬಂಧಿಸಿದ ಅನುದಾನ ಗೋವುಗಳನ್ನು ಸಾಕುವ ರೈತರಿಗೆ ನೇರವಾಗಿ ತಲುಪುವಂತೆ ನೋಡಿಕೊಂಡು ಗೋಸಾಕಣೆ ಮತ್ತು ಹೈನೋದ್ಯಮಗಳಿಗೆ ಸರಕಾರ ಪುನಃಶ್ಚೇತನ ನೀಡಬೇಕು. ಆ ಮೂಲಕ ದೇಶದಲ್ಲಿ ಗೋವುಗಳನ್ನೂ, ಹೈನುಗಾರಿಕೆಯನ್ನೂ ಉಳಿಸಬೇಕು. ಆರ್ಥಿಕ ಹಿಂಜರಿತದಿಂದ ತತ್ತರಿಸಿ ಕೂತಿರುವ ಗ್ರಾಮೀಣ ಪ್ರದೇಶಗಳಿಗೆ ಈ ಮೂಲಕ ಮತ್ತೆ ಜೀವ ಚೈತನ್ಯವನ್ನು ನೀಡಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)