varthabharthi


ನಿಮ್ಮ ಅಂಕಣ

ಆರೋಗ್ಯ ಕ್ಷೇತ್ರ ಸುಧಾರಿಸಲಿ

ವಾರ್ತಾ ಭಾರತಿ : 24 Nov, 2020
-ಸಂತೋಷ ಜಾಬೀನ್, ಸುಲೇಪೇಟ

ಮಾನ್ಯರೇ,

ರಾಜ್ಯ ಸರಕಾರವು ರಾಜ್ಯದಲ್ಲಿ ವೈದ್ಯಕೀಯ ಸುಧಾರಣೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24್ಡ7 ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೆ ಜನವರಿಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆಗಳು ಸಂಪೂರ್ಣ ಉಚಿತ ಮತ್ತು ಚೀಟಿ ರಹಿತ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸುತ್ತಿರುವುದು ದಿಟ್ಟ ಹೆಜ್ಜೆಯಾಗಬಹುದು. ಇಂತಹ ಕ್ರಮಗಳಿಂದಾಗಿ ಜನರಿಗೆ ಅಗತ್ಯ ಚಿಕಿತ್ಸೆ ಸಿಗಬಹುದು ಮತ್ತು ಹೆಚ್ಚಿನ ಸಮಯ ಪೋಲಾಗುವುದನ್ನು ತಡೆಯಬಹುದಾಗಿದೆ.

ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ನಿರಾಸಕ್ತಿಯಿಂದಾಗಿ ಪರಿಸ್ಥಿತಿ ಕಳವಳಕಾರಿಯಾಗಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಸಂಖ್ಯೆಯ ವೈದ್ಯರಿದ್ದಾರೆ ಎಂದು ವರದಿಗಳು ಬರುತ್ತಿವೆ. ಇನ್ನು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ತಜ್ಞರ ಸಂಖ್ಯೆಯೂ ಕಡಿಮೆಯಾಗಿದೆ. ಕೆಲವು ವರ್ಷದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒಬ್ಬ ತಜ್ಞ ವೈದ್ಯರೂ ನೇಮಕಗೊಂಡಿಲ್ಲ ಎಂಬುದು ನಮ್ಮ ಆರೋಗ್ಯ ವ್ಯವಸ್ಥೆಯ ಶೋಚನೀಯ ಕಥೆಯನ್ನು ಹೇಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ, 1,000 ರೋಗಿಗಳಿಗೆ ಒಬ್ಬರಾದರೂ ವೈದ್ಯರಿರಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಇದು ಮರೀಚಿಕೆಯಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸರಕಾರ ವಿನಿಯೋಗಿಸುತ್ತಿರುವ ಮೊತ್ತ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ. 1ರಷ್ಟು ಮಾತ್ರ. ಸಹಜವಾಗಿಯೇ ಇದು ಮೂಲಸೌಕರ್ಯಗಳ ಕೊರತೆಗೆ ಕಾರಣವಾಗುತ್ತದೆ. ಭೂತಾನ್ (ಶೇ. 2.5), ಶ್ರೀಲಂಕಾ (ಶೇ. 1.6) ಹಾಗೂ ನೇಪಾಳದಂತಹ (ಶೇ. 1.1) ನಮ್ಮ ನೆರೆಯ ರಾಷ್ಟ್ರಗಳಿಗಿಂತ ಕಡಿಮೆ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದೇವೆ. ಆರೋಗ್ಯಕ್ಕಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚು ಮಾಡದೇ ಇರುವುದರಿಂದ ಆರೋಗ್ಯ ಸೇವೆಗಳಿಗಾಗಿ ಖಾಸಗಿ ಕ್ಷೇತ್ರದ ಅವಲಂಬನೆ ಹೆಚ್ಚಾಗುತ್ತದೆ. ಹೀಗಾಗಿಯೇ ಆರೋಗ್ಯ ಸೇವೆಗಳಿಗಾಗಿ ಭಾರತೀಯರು ವಿನಿಯೋಗಿಸಬೇಕಿರುವ ಮೊತ್ತ ಅತ್ಯಂತ ಹೆಚ್ಚು. ತೀವ್ರತರ ಆರೋಗ್ಯ ವೆಚ್ಚಗಳಿಂದಾಗಿ ಪ್ರತಿವರ್ಷ ಲಕ್ಷಾಂತರ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿಳಿಯುವ ದುಃಸ್ಥಿತಿ ನಿರ್ಮಾಣವಾಗುತ್ತಿರುವುನ್ನು ಸಮೀಕ್ಷೆಗಳು ಹೇಳುತ್ತಿವೆ. ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಏರಿಕೆ ಇಲ್ಲದಿದ್ದಲ್ಲಿ ರಾಷ್ಟ್ರೀಯ ಆರೋಗ್ಯ ಗುರಿಗಳ ಸಾಧನೆಯೂ ಕ್ಲಿಷ್ಟಕರ. ಹೆರಿಗೆ ಸಂದರ್ಭದಲ್ಲಿ ತಾಯಂದಿರ ಸಾವು ಹಾಗೂ ನವಜಾತ ಶಿಶುಗಳ ಸಾವುಗಳನ್ನು ತಪ್ಪಿಸುವುದು ಇನ್ನೂ ನಮಗೆ ಸಾಧ್ಯವಾಗಿಲ್ಲ. ನವಜಾತ ಶಿಶುಗಳ ಮರಣ ಪ್ರಮಾಣವಂತೂ ಭಾರತದಲ್ಲಿ ಚೀನಾಕ್ಕಿಂತ ಮೂರು ಪಟ್ಟು ಹೆಚ್ಚಿದೆ ಎಂಬುದು ಆತಂಕಕಾರಿ. ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದಿದ್ದಲ್ಲಿ ನಕಲಿ ವೈದ್ಯರ ಮೊರೆ ಹೋಗುವ ಸ್ಥಿತಿಯೂ ಸೃಷ್ಟಿಯಾಗುತ್ತದೆ. ಹೀಗಾಗಿ ಬೇಡಿಕೆಯನ್ನು ಪೂರೈಸುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತೆ ಮಾಡಲು ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರ ಕೊರತೆ ನೀಗಿಸಲು ಆದ್ಯತೆಯ ಮೇಲೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುವುದೂ ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)