varthabharthi


ಕ್ರೀಡೆ

ಆಸ್ಟ್ರೇಲಿಯ ಪ್ರವಾಸದಲ್ಲಿ ಯಾವುದೇ ವೈಯಕ್ತಿಕ ಗುರಿ ಹೊಂದಿಲ್ಲ: ಶುಭ್ ಮನ್ ಗಿಲ್

ವಾರ್ತಾ ಭಾರತಿ : 25 Nov, 2020

ಮುಂಬೈ, ನ.24: ಮುಂಬರುವ ಆಸ್ಟ್ರೇಲಿಯ ಪ್ರವಾಸದಲ್ಲಿ ಯಾವುದೇ ವೈಯಕ್ತಿಕ ಗುರಿಯನ್ನು ಹೊಂದಿಲ್ಲ. ಆದರೆ ತಮಗೆ ಈ ಪ್ರವಾಸವು ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನೆರವಾಗಬಹುದು ಎಂದು ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ವಿಶ್ವಾಸದಲ್ಲಿದ್ದಾರೆ.

ಗಿಲ್ ಇದುವರೆಗೆ ಭಾರತದ ಪರ ಕೇವಲ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 16ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 9 ರನ್ ಆಗಿದೆ. ಅವರು ಆಸ್ಟ್ರೇಲಿಯ ವಿರುದ್ಧ ಭಾರತದ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶುಕ್ರವಾರ ಮೊದಲ ಏಕದಿನ ಪಂದ್ಯದೊಂದಿಗೆ ಆಸ್ಟ್ರೇಲಿಯ ವಿರುದ್ಧ ಭಾರತದ ಪ್ರವಾಸ ಸರಣಿ ಆರಂಭವಾಗಲಿದೆ. ‘‘ನಾನು ನಿಜವಾಗಿಯೂ ಆಸ್ಟ್ರೇಲಿಯ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಏಕೆಂದರೆ ಇದು ನನ್ನ ಮೊದಲ ಪ್ರವಾಸವಾಗಿದೆ. ಚಿಕ್ಕವನಿದ್ದಾಗ ನಾನು ಯಾವಾಗಲೂ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯಗಳನ್ನು ನೋಡುತ್ತಿದ್ದೆ. ನಾನು ನಿಜವಾಗಿಯೂ ಆಡಲು ಉತ್ಸುಕನಾಗಿದ್ದೇನೆ’’ ಎಂದು ಗಿಲ್ ತನ್ನ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ. 21ರ ಹರೆಯದ ಗಿಲ್ ಯುಎಇಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 440 ರನ್ ಗಳಿಸಿದ್ದರು. ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲ್ಯಾಂಡ್ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ ’ ತಂಡದ ಪರ ಅಜೇಯ 204 ಮತ್ತು ಅರ್ಧಶತಕವನ್ನು ಗಳಿಸಿದ ನಂತರ ಗಿಲ್ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟಿದ್ದರು.

ಭಾರತ ಮತ್ತು ಆಸ್ಟ್ರೇಲಿಯ ಮೂರು ಏಕದಿನ ಪಂದ್ಯಗಳು, ಮೂರು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ. ರೋಹಿತ್ ಶರ್ಮಾ ಅವರ ಬದಲಿಗೆ ತಂಡದಲ್ಲಿ ಗಿಲ್ ಅವಕಾಶ ಪಡೆಯುವುದನ್ನು ನಿರೀಕ್ಷಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)