ಬೆಂಗಳೂರು
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣ
ಹಣ ವಾಪಸ್ ನೀಡಲು ಸಿಬಿಐಗೆ ನಿರ್ದೇಶಿಸಲು ಕೋರಿ ಡಿಕೆಶಿ ಆಪ್ತ ಸಚಿನ್ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು, ನ.25: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ತಮ್ಮ ಕಚೇರಿಯಿಂದ ವಶಪಡಿಸಿಕೊಂಡಿದ್ದ 53 ಲಕ್ಷ ರೂಪಾಯಿ ಹಣವನ್ನು ಹಿಂದಿರುಗಿಸಲು ನಿರ್ದೇಶಿಸುವಂತೆ ಕೋರಿ ಡಿಕೆಶಿ ಆಪ್ತ ಸಚಿನ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಕೋರ್ಟ್ ವಜಾಗೊಳಿಸಿದೆ.
ಡಿಕೆಶಿ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು 2017ರ ಅ.5ರಂದು ಸಚಿನ್ ಒಡೆತನದ ಹಾಸನ ಹಾಗೂ ಬೆಂಗಳೂರಿನ ಕಚೇರಿಗಳನ್ನೂ ತಪಾಸಣೆ ಮಾಡಿದ್ದರು. ಈ ವೇಳೆ ಸಚಿನ್ ಅವರ ವೆಲ್ವರ್ತ್ ಸಾಫ್ಟವೇರ್ ಕಚೇರಿಯಲ್ಲಿದ್ದ 53.46 ಲಕ್ಷ ವಶಪಡಿಸಿಕೊಳ್ಳಲಾಗಿತ್ತು.
ಈ ಹಣವನ್ನು ವಾಪಸ್ಸು ಕೊಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಸಚಿನ್ ತಮ್ಮ ಕಂಪೆನಿ ವಿವಿಧ ಟೆಲಿವಿಷನ್ ಕೇಬಲ್ ನೆಟ್ ವರ್ಕ್ಗಳಿಗೆ ಸಂಪರ್ಕ ಒದಗಿಸುತ್ತದೆ. ಅದಕ್ಕಾಗಿ ಕೇಬಲ್ ಆಪರೇಟರ್ಗಳು ಹಣ ಪಾವತಿಸುತ್ತಾರೆ. ಈ ಹಣವನ್ನು ಸಿಬಿಐ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಹೀಗಾಗಿ, ಈ ಹಣವನ್ನು ಹಿಂದಿರುಗಿಸಲು ಸಿಬಿಐ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸಿಬಿಐ ಪರ ವಕೀಲರು, ಹಣವನ್ನು ಅರ್ಜಿದಾರರ ಸಮ್ಮುಖದಲ್ಲೇ ವಶಪಡಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಜತೆಗೆ ಹಣ ಮೂಲದ ಬಗ್ಗೆ ವಿವರಿಸಲು ಅಥವಾ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದರು. ಡಿಕೆಶಿ ಮತ್ತು ಸಚಿನ್ ನಡುವೆ ಹಣದ ವ್ಯವಹಾರ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಹಣ ಹಿಂದಿರುಗಿಸಲು ನಿರ್ದೇಶಿಸಬಾರದು ಎಂದು ಪೀಠಕ್ಕೆ ಮನವಿ ಮಾಡಿದ್ದರು. ಸಿಬಿಐ ಪರ ವಕೀಲರ ಕೋರಿಕೆ ಪುರಸ್ಕರಿಸಿದ ನ್ಯಾಯಾಲಯ ಸಚಿನ್ ಮನವಿಯನ್ನು ತಿರಸ್ಕರಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ