varthabharthi


ಕರಾವಳಿ

ಕುಂದಾಪುರ ನ್ಯಾಯಾಲಯ ತೀರ್ಪು

ಜಾಗದ ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ : ಆರೋಪಿಗೆ 3 ವರ್ಷ ಶಿಕ್ಷೆ

ವಾರ್ತಾ ಭಾರತಿ : 25 Nov, 2020

ಉಡುಪಿ, ನ. 25: ಹೊಸ ಮನೆ ಕಟ್ಟಲು ಭೂಪರಿವರ್ತನೆಗೆ ಸಲ್ಲಿಸಿದ ಅರ್ಜಿಯನ್ನು ಮಂಜೂರು ಮಾಡಲು 15000 ರೂ. ಲಂಚವನ್ನು ಕೇಳಿ ಪಡೆಯುವಾಗ ಲೋಕಾಯುಕ್ತದ ಬಲೆಗೆ ಬಿದ್ದ ಕುಂದಾಪುರ ತಾಲೂಕು ತೆಕ್ಕಟ್ಟೆಯ ಗ್ರಾಮ ಕರಣಿಕ ಮಂಜುನಾಥ್ ಎಚ್.ಆರ್. ಅವರಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರು ಒಟ್ಟು ಮೂರು ವರ್ಷ ಶಿಕ್ಷೆ ಹಾಗೂ 30,000ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಬಗ್ಗೆ 2011ರ ಮಾ.15ರಂದು ಉಡುಪಿ ಲೋಕಾಯುಕ್ತ ಠಾಣೆಯಲ್ಲಿ ಕುಂದಾಪುರ ತಾಲೂಕು ತೆಕ್ಕಟೆ ಗ್ರಾಮದ ವಿಕ್ರಮ ಕಾಮತ್ ಇವರ ದೂರಿನ ಮೇಲೆ ಲಂಚ ನಿರೋಧ ಕಾಯ್ದೆ 1988ರಂತೆ ಪ್ರಕರಣ ದಾಖಲಾಗಿತ್ತು.

ಕುಂದಾಪುರ ತಾಲೂಕು ತೆಕ್ಕಟೆ ಗ್ರಾಮದ ವಿಕ್ರಮ ಕಾಮತ್ ಎಂಬವರ ತಾಯಿ ಮೋಹಿನಿಯವರ ಹೆಸರಿಗೆ ತೆಕ್ಕಟ್ಟೆ ಗ್ರಾಮದ ಸರ್ವೆ ನಂಬ್ರ 231/2ಸಿ ಯಲ್ಲಿ 10 ಸೆಂಟ್ಸ್ ಸ್ಥಳವಿದ್ದು ಈ ಜಾಗದಲ್ಲಿ ಹೊಸ ಮನೆಯನ್ನು ಕಟ್ಟುವ ಸಲುವಾಗಿ ಜಾಗದ ಭೂ ಪರಿವರ್ತನೆಗಾಗಿ ಅರ್ಜಿದಾರರ ತಾಯಿ ತೆಕ್ಕಟ್ಟೆ ಗ್ರಾಮ ಕರಣಿಕರ ಕಚೇರಿಗೆ ಹೋಗಿ ಗ್ರಾಮ ಕರಣಿಕ ಮಂಜುನಾಥ ಹೆಚ್.ಆರ್ ಅವರಲ್ಲಿ ವಿಚಾರಿಸಿದಾಗ ಜಾಗದ ಭೂ ಪರಿವರ್ತನೆ ಮಾಡಲು 15,000 ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 8,000 ರೂ. ವನ್ನು ಪಡೆದಿದ್ದರು. ನಂತರ ಕನ್ವರ್ಷನ್ ಪೇಪರ್ ರೆಡಿಯಾದಾಗ ಅದನ್ನು ನೀಡಲು ಉಳಿದ 7,000ರೂ. ನೀಡಲು ಬೇಡಿಕೆ ಸಲ್ಲಿಸಿದ್ದರು.

ಆಗ ವಿಕ್ರಮ ಕಾಮತ್, ಕರ್ನಾಟಕ ಲೋಕಾಯುಕ್ತ ಉಡುಪಿ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕ ಸಿ.ಇ ತಿಮ್ಮಯ್ಯರಿಗೆ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡ ತಿಮ್ಮಯ್ಯ, ಬಾಕಿ ಲಂಚದ ಹಣ ಸ್ವೀಕರಿಸುವ ಸಮಯ ಬಲೆ ಬೀಸಿ ಟ್ರಾಪ್ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ತನಿಖೆಯನ್ನು ಸಿ.ಇ.ತಿಮ್ಮಯ್ಯ ಪೂರ್ತಿಗೊಳಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ನಂತರ ಈ ಪ್ರಕರಣವು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಪ್ರಕರಣದ ವಿಚಾರಣೆ ನಡೆದಿತ್ತು.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ ಮರಾಠೆ ಅವರು ಬುಧವಾರ ಪ್ರಕರಣದ ತೀರ್ಪು ನೀಡಿದ್ದು, ಆರೋಪಿ ಮಂಜುನಾಥ ಹೆಚ್.ಆರ್.ಗೆ ಕಲಂ 7ರಲ್ಲಿ 10,000ರೂ. ದಂಡ ಮತ್ತು 1 ವರ್ಷ ಶಿಕ್ಷೆ ಹಾಗೂ ಕಲಂ 13(2)ರಲ್ಲಿ 20,000 ರೂ. ದಂಡ ಮತ್ತು 2 ವರ್ಷ ಶಿಕ್ಷೆ ಸೇರಿ ಒಟ್ಟು 3 ವರ್ಷ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪನ್ನು ನೀಡಿದ್ದಾರೆ. ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ವಿಜಯಕುಮಾರ್ ಶೆಟ್ಟಿ ಇಂದ್ರಾಳಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)