varthabharthi


ಕರಾವಳಿ

ಉಡುಪಿ : 17 ಮಂದಿಗೆ ಕೊರೋನ ಸೋಂಕು ದೃಢ

ವಾರ್ತಾ ಭಾರತಿ : 25 Nov, 2020

ಉಡುಪಿ, ನ. 25: ಜಿಲ್ಲೆಯಲ್ಲಿ ಬುಧವಾರ 17 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೇ 10 ಮಂದಿ ಚಿಕಿತ್ಸೆಯಿಂದ ಗುಣಮುಖ ರಾದರೆ, ಸದ್ಯ 186 ಮಂದಿ ಕೊರೋನ ಪಾಸಿಟಿವ್‌ಗೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ 7 ಮಂದಿ ಪುರುಷರು ಹಾಗೂ 10 ಮಂದಿ ಮಹಿಳೆಯರು. ಇವರಲ್ಲಿ ಇಬ್ಬರು ಪುರುಷರು ಹಾಗೂ ಐವರು ಮಹಿಳೆ ಯರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ. ಉಡುಪಿ ತಾಲೂಕಿನ 10, ಕುಂದಾಪುರ ತಾಲೂಕಿನ 6, ಕಾರ್ಕಳ ತಾಲೂಕಿನ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಡಾ.ಸೂಡ ವಿವರಿಸಿದರು.

10 ಮಂದಿ ಗುಣಮುಖ: ಮಂಗಳವಾರ 10 ಮಂದಿ ಚಿಕಿತ್ಸೆ ಬಳಿಕ ಸೋಂಕಿ ನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಜಿಲ್ಲೆಯಲ್ಲಿ ಸದ್ಯ 22,180 ಆಗಿದೆ. ಜಿಲ್ಲೆಯಲ್ಲಿ ಸದ್ಯ 186 ಮಂದಿ ಈಗಲೂ ಕೋವಿಡ್‌ಗೆ ಚಿಕಿತ್ಸೆಯಲ್ಲಿದ್ದಾರೆ ಎಂದರು.

2578 ನೆಗೆಟಿವ್: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 2597 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 2578 ಮಂದಿ ನೆಗೆಟಿವ್ ಬಂದಿದ್ದಾರೆ. ಉಳಿದ 19(ಐಸಿಎಂಆರ್ ವರದಿ)ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,553 ಕ್ಕೇರಿದೆ.

ಜಿಲ್ಲೆಯಲ್ಲಿ ಮಂಗಳವಾರದವರೆಗೆ ಒಟ್ಟು 2,28,229 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,05,676 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಒಟ್ಟು 22,553 ಮಂದಿ ಪಾಸಿಟಿವ್ ಬಂದಿದ್ದರೆ, ಇವರಲ್ಲಿ 22,180 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿ ದ್ದಾರೆ. ಕೋವಿಡ್‌ಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 187 ಮಾತ್ರ.

ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ. ಹೀಗಾಗಿ ನ.7ರ ನಂತರ ಇದುವರೆಗೆ ಕೋವಿಡ್‌ಗೆ ಜಿಲ್ಲೆಯಲ್ಲಿ ಯಾರೂ ಬಲಿಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ.

ಇನ್ನೂ 10 ವಿದ್ಯಾರ್ಥಿಗಳು ಪಾಸಿಟಿವ್ 

ತರಗತಿಗಳಿಗೆ ಹಾಜರಾಗಲು ಬಯಸುವ ಅಂತಿಮ ವರ್ಷ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿರುವ ಕೋವಿಡ್ ಪರೀಕ್ಷೆಯಲ್ಲಿ ಇಂದು ಇನ್ನೂ 10 ಮಂದಿ ವಿದ್ಯಾರ್ಥಿಗಳು ಪಾಸಿಟಿವ್ ಬಂದಿದ್ದಾರೆ ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 32 ಮಂದಿ ವಿದ್ಯಾರ್ಥಿಗಳು ಹಾಗೂ ಓರ್ವ ಪ್ರಾಧ್ಯಾಪಕರು ಕೋವಿಡ್ ಸೋಂಕು ಹೊಂದಿರುವುದು ಪತ್ತೆಯಾಗಿದೆ. ಈ ಮೊದಲು 22 ಮಂದಿ ವಿದ್ಯಾರ್ಥಿಗಳು ಪಾಸಿಟಿವ್ ಬಂದಿದ್ದರು. ಜಿಲ್ಲೆಯಲ್ಲಿ ಸುಮಾರು 6000 ಕಾಲೇಜು ವಿದ್ಯಾರ್ಥಿಗಳು ಹಾಗೂ ಒಂದು ಸಾವಿರ ಮಂದಿ ಕಾಲೇಜು ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.

ಇಂದು ಪಾಸಿಟಿವ್ ಬಂದವರಲ್ಲಿ ನಾಲ್ವರು ಉಡುಪಿ, ತಲಾ ಇಬ್ಬರು ಕಾಪು, ಬೈಂದೂರು ಹಾಗೂ ಕುಂದಾಪುರ ತಾಲೂಕಿನವರು. ಇವರಲ್ಲಿ ಮೂವರು ಪುರುಷರು ಹಾಗೂ ಏಳು ಮಂದಿ ಮಹಿಳೆಯರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)