varthabharthi


ರಾಷ್ಟ್ರೀಯ

ಕೇಂದ್ರದಿಂದ ರಾಜ್ಯಗಳಿಗೆ ನೂತನ ಕೋವಿಡ್ ಮಾರ್ಗಸೂಚಿ ಬಿಡುಗಡೆ

ವಾರ್ತಾ ಭಾರತಿ : 25 Nov, 2020

ಹೊಸದಿಲ್ಲಿ,ನ.25: ಕೊರೋನ ವೈರಸ್ ಪ್ರಕರಣಗಳನ್ನು, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಸೋಂಕು ಹೆಚ್ಚಳವಾಗಿರುವ ಪ್ರದೇಶಗಳಲ್ಲಿ ನಿಯಂತ್ರಿಸಲು ಪ್ರಯತ್ನಗಳನ್ನು ಹೆಚ್ಚಿಸುವಂತೆ ಕೇಂದ್ರ ಸರಕಾರವು ಬುಧವಾರ ರಾಜ್ಯಗಳಿಗೆ ಸೂಚಿಸಿದೆ. ಡಿ.1ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ರಾತ್ರಿ ಕರ್ಫ್ಯೂ, ಕಂಟೈನ್ಮೆಂಟ್ ವಲಯಗಳ ಕಟ್ಟುನಿಟ್ಟಿನ ಜಾರಿ ಮತ್ತು ಕೋವಿಡ್ ಶಿಷ್ಟಾಚಾರ ಪಾಲನೆಗೆ ಹೆಚ್ಚಿನ ಉತ್ತೇಜನದಂತಹ ಸ್ಥಳೀಯ ನಿರ್ಬಂಧಗಳು ಸೇರಿದಂತೆ ಹಲವಾರು ಕ್ರಮಗಳನ್ನು ಸೂಚಿಸಿದೆ.

ರಾಜ್ಯಗಳು ಜನರ ಸಮಾವೇಶಗಳ ಮೇಲೆ ಹೆಚ್ಚುವರಿ ದಂಡಗಳು ಮತ್ತು ನಿರ್ಬಂಧಗಳನ್ನು ಹೇರಬಹುದು,ಆದರೆ ತನ್ನ ಅನುಮತಿಯಿಲ್ಲದೆ ಕಂಟೈನ್ಮೆಂಟ್ ವಲಯಗಳ ಹೊರಗೆ ಯಾವುದೇ ಲಾಕ್‌ಡೌನ್ ಹೇರುವಂತಿಲ್ಲ ಎಂದು ಸರಕಾರವು ತಿಳಿಸಿದೆ.

ದಿಲ್ಲಿ,ಗುಜರಾತ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುವುದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಕಳೆದ ವಾರ 90 ಲಕ್ಷವನ್ನು ದಾಟಿತ್ತು. ವಿಶ್ವದಲ್ಲಿ ಎರಡನೇ ಅತ್ಯಂತ ಕೋವಿಡ್ ಪೀಡಿತ ದೇಶವಾಗಿರುವ ಭಾರತದಲ್ಲಿ ಸಾವುಗಳ ಸಂಖ್ಯೆ 1.34 ಲಕ್ಷವನ್ನು ದಾಟಿದೆ. ಕಳೆದೊಂದು ತಿಂಗಳಿನಿಂದ ದೈನಂದಿನ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ,ಈಗಲೂ ಪ್ರತಿದಿನ ಸರಾಸರಿ ಸುಮಾರು 45,000 ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಚಳಿಗಾಲದ ವಾಯುಮಾಲಿನ್ಯ ಮತ್ತು ಕೋವಿಡ್ ಹೀಗೆ ಜೋಡಿ ಪಿಡುಗುಗಳನ್ನು ಎದುರಿಸುತ್ತಿರುವ ದಿಲ್ಲಿಯಲ್ಲಿ ಪ್ರಕರಣಗಳ ಸಂಖ್ಯೆ 5.5 ಲಕ್ಷದ ಸಮೀಪಕ್ಕೆ ತಲುಪಿದ್ದು,ದೈನಂದಿನ ಹೊಸ ಪ್ರಕರಣಗಳಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ದಿಲ್ಲಿ ಸರಕಾರವು ಮಾಸ್ಕ್ ಮತ್ತು ಇತರ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸದವರಿಗೆ ದಂಡದ ಪ್ರಮಾಣವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಪಂಜಾಬ್, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳಂತಹ ಇತರ ಹಲವಾರು ರಾಜ್ಯಗಳು ರಾತ್ರಿ ಕರ್ಫ್ಯೂವನ್ನು ವಿಧಿಸಿವೆ.

ಹೊಸ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗುವ ನಿಟ್ಟಿನಲ್ಲಿ ಕೇಂದ್ರವು ಹಲವಾರು ರಾಜ್ಯಗಳಿಗೆ ವಿಶೇಷ ತಂಡಗಳನ್ನು ರವಾನಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)