varthabharthi


ಅನುಗಾಲ

ತಕ್ಕಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ

ವಾರ್ತಾ ಭಾರತಿ : 26 Nov, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗೌರವ ಬೇರೆ; ನಂಬಿಕೆ ಬೇರೆ. ಸರ್ವೋಚ್ಚ ನ್ಯಾಯಾಲಯಕ್ಕೆ ಘನತೆ-ಗೌರವವಿದೆ. ಅದು ತನ್ನ ಮೇಲೆ ಜನರಿಟ್ಟ ನಂಬಿಕೆಯನ್ನು ತಿರಸ್ಕರಿಸಬಾರದು; ಕಳೆದುಕೊಳ್ಳಬಾರದು. ಎಲ್ಲರನ್ನೂ ತೂಗುವ ತಕ್ಕಡಿ ತಾನೇ ಅಳತೆಗೆ, ತೂಕಕ್ಕೆ ಸಿಗಬಾರದು.

ಇತ್ತೀಚೆಗಿನ ದಿನ, ವಾರ, ತಿಂಗಳುಗಳಲ್ಲಿ, ಮೂಲಭೂತ ಸ್ವಾತಂತ್ರ್ಯದ ಕುರಿತು ಘನ ಸರ್ವೋಚ್ಚ ನ್ಯಾಯಾಲಯವು ನಡೆದುಕೊಂಡ ಮತ್ತು ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವದ ಏಳಿಗೆಗೆ ಸಹಕಾರಿಯಾಗಿದೆಯೆಂದು ಅನ್ನಿಸುವುದಿಲ್ಲ. ಎಲ್ಲೆಡೆ ಅಸಮಾನತೆಯಿದ್ದರೆ ಅದಿಲ್ಲದಿರುವುದು ನ್ಯಾಯಾಲಯಗಳಲ್ಲಿ ಎಂಬ ಸರ್ವತ್ರ ನಂಬಿಕೆಯನ್ನು ಲೇವಡಿ ಮಾಡುವಂತೆ ಕೆಲವು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಧೋರಣೆಯಿದೆ. ಇದು ಸಮಾಜದ ಎಚ್ಚರವನ್ನು ಹದಗೆಡಿಸಿದೆ ಮತ್ತು ಕೆಲವರನ್ನು ಅತಂತ್ರರನ್ನಾಗಿಯೂ ಇನ್ನು ಕೆಲವರನ್ನು ರೊಚ್ಚಿಗೇಳುವಂತೆಯೂ ಮಾಡಿದೆ.

ಕಳೆದ ಕೆಲವಾರು ವರ್ಷಗಳಿಂದ ಒಂದಲ್ಲ ಒಂದು ಪ್ರಕರಣದ ನೆಪದಲ್ಲಿ ಅಕ್ರಮ ಬಂಧನದಲ್ಲಿರುವ ಅಮಾಯಕರ ಪಟ್ಟಿ ಬಹಳ ದೊಡ್ಡದಿದೆ. 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸುಧಾ ಭಾರದ್ವಾಜ್, ರೋನಾ ವಿಲ್ಸನ್, ಸುಧೀರ್ ಧಾವಳೆ, ಮಹೇಶ್ ರಾವತ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ವೇಮನ್ ಗೊನ್ಸಾಲ್ವೆಸ್ ಕೋವಿಡ್-19ರ ಸೋಂಕಿನ ಹೊರತಾಗಿಯೂ ಬಂಧನದಲ್ಲಿದ್ದಾರೆ; ಈ ಪಟ್ಟಿಗೆ ಇತ್ತೀಚೆಗಿನ ಸೇರ್ಪಡೆಯೆಂದರೆ ಸ್ಟಾನ್‌ಸ್ವಾಮಿಯೆಂಬ ವೃದ್ಧಪಾದ್ರಿ. ಇದಲ್ಲದೆ ಆಡಳಿತವು ನಡೆಸುವ ವಿವಿಧ ಸಾಮಾಜಿಕ ಮತ್ತು ರಾಜಕೀಯ ಅಕ್ರಮಗಳನ್ನು ವಿರೋಧಿಸಿ ಚಳವಳಿ ನಡೆಸುತ್ತಿರುವ ಇತರ ನಾಯಕರು- ಮುಖ್ಯವಾಗಿ ವರವರರಾವ್, ಆನಂದ್ ತೇಲ್ತುಂಬ್ಡೆ, ವಿನಾಯಕ ಸೇನ್, ತಿರುಮುರುಗನ್ ಗಾಂಧಿ, ಗೌರ್‌ಚಕ್ರವರ್ತಿ, ಉಮರ್ ಖಾಲಿದ್, ಅಖಿಲ್ ಗೊಗೊಯಿ, ಮಸ್ರತ್ ಜಹ್ರಾ ಹೀಗೆ ಈ ಬಂಧಿತ ಪಟ್ಟಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ. ಇವರಲ್ಲಿ ಉನ್ನತ ಶಿಕ್ಷಣ ಪಡೆದವರು, ವೈದ್ಯರು, ವಕೀಲರು, ಚಿಂತಕರು, ಲೇಖಕರು, ಹೀಗೆ ಸಮಾಜದ ಮುಖ್ಯವಾಹಿನಿಯ ಉನ್ನತ ಸ್ಥಾನಮಾನಗಳನ್ನು ಹೊಂದಿದವರೇ ಹೆಚ್ಚು. ಇವರೆಲ್ಲ ಬಂಧಿತರಾಗಿರುವುದು ಮತ್ತು ಜಾಮೀನೂ ಸಿಗದೆ ಜೈಲುಗಳಲ್ಲಿ ಕೊಳೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಥವಾ ಯಾವ ಸುಶಿಕ್ಷಿತ, ಆರೋಗ್ಯವಂತ ಸಮಾಜಕ್ಕೂ ಗೌರವವಲ್ಲ. ಜ್ಞಾನಕ್ಕೆ ಸಮನಾದ್ದು ಯಾವುದು ಇಲ್ಲ (ನಹಿ ಜ್ಞಾನೇನ ಸದೃಶಂ) ಅಥವಾ ಅರಿವೇ ಗುರು, ಅರಿವು ಎಲ್ಲದಕ್ಕಿಂತ ಶಕ್ತಿಶಾಲಿ (knowledge is power) ಎನ್ನುವುದನ್ನು ತನ್ನ ಸಂಸ್ಕೃತಿಯ ಮೂಲಕ ಸಾಕಾರಗೊಳಿಸಿದೆಯೆಂಬ ಖ್ಯಾತಿವೆತ್ತ ಭಾರತದಲ್ಲಿ ಇವರಂತಹ ನೂರಾರು ಮಂದಿ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಈಚೆಗೆ ಸಿದ್ದೀಕಿ ಕಪ್ಪನ್ ಎಂಬ ಪತ್ರಕರ್ತ ಉತ್ತರಪ್ರದೇಶದ ಕುಖ್ಯಾತ ಹಾಥರಸ್ ಪ್ರಕರಣದ ಕುರಿತು ವರದಿ ಮಾಡಲು ಹೋಗುತ್ತಿರುವಾಗ ಅಲ್ಲಿನ ಪೋಲೀಸರು ಆತನ ವಿರುದ್ಧ ದೇಶದ್ರೋಹ ಮತ್ತು ಅಕ್ರಮ ಚಟುವಟಿಕೆಗಳ ತಡೆ ತಿದ್ದುಪಡಿ ಕಾಯ್ದೆ, 2019ರನ್ವಯ ಬಂಧಿಸಿದರು. ಆತನಿಗಿನ್ನೂ ಜಾಮೀನು ಬಿಡುಗಡೆಯ ಭಾಗ್ಯವೂ ಒದಗಿಲ್ಲ.

ಇವೆಲ್ಲವುಗಳ ನಡುವೆ ಅರ್ನಬ್ ಗೋಸ್ವಾಮಿ ಎಂಬ ಆಡಳಿತದ ನೀಲಿಗಣ್ಣಿನ ವ್ಯಕ್ತಿ ಮಹಾರಾಷ್ಟ್ರ ಸರಕಾರದಿಂದ ಬಂಧಿತನಾದಾಗ ಆಕಾಶವೇ ಕಳಚಿ ಬಿದ್ದಂತೆ ಕೇಂದ್ರ ಅಧಿಕಾರಸ್ಥ ರಾಜಕಾರಣಿಗಳು ಮತ್ತವರ ಸಮೂಹ ಗಾಯಕರು ಕೂಗಾಡಿದರು. ಆತ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಕೇಳಿದಾಗ ಅದು ಆತನ ಅರ್ಜಿಯನ್ನು ತಿರಸ್ಕರಿಸಿ ಆತನು ಮೊದಲಿಗೆ ದಂಡ ಪ್ರಕ್ರಿಯಾ ಸಂಹಿತೆಯ 439ನೇ ಕಲಮಿನನ್ವಯ ಸತ್ರನ್ಯಾಯಾಲಯದಲ್ಲಿ ಜಾಮೀನು ಕೇಳಿ ಆನಂತರ ತನ್ನನ್ನು ಆಶ್ರಯಿಸಬೇಕೆಂದು ತೀರ್ಪಿತ್ತಿತು. ಇದರ ವಿರುದ್ಧ ಆತನು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆಹೋದಾಗ ಇನ್ನೆಲ್ಲ ಪ್ರಕರಣಗಳನ್ನು ಹಿಂದಿಕ್ಕಿ ಎಲ್ಲ ಪೂರ್ವ ನಿರ್ಧರಿತ ಕೆಲಸಗಳನ್ನು ಬದಿಗೊತ್ತಿ ಅದನ್ನು ವಿಚಾರಣೆಗೆ ಸ್ವೀಕರಿಸಿದ ಸರ್ವೋಚ್ಚ ನ್ಯಾಯಾಲಯವು ಒಂದೇ ದಿನದಲ್ಲಿ ಆತನ ಬಿಡುಗಡೆಗೆ ಆದೇಶಿಸಿತು. ನ್ಯಾಯಾಲಯವು ವ್ಯಕ್ತಿಸ್ವಾತಂತ್ರ್ಯದ ಮಹತ್ವವನ್ನೂ ವಿಕಾಸವನ್ನೂ ಪುನರುಚ್ಛರಿಸಿ ತಾನು ಪ್ರಜಾತಂತ್ರದ ರಕ್ಷಕನೆಂದು ಒತ್ತಿಹೇಳಿತು. ಆದರೆ ಸತ್ರನ್ಯಾಯಾಲಯವನ್ನು ಅತಿಕ್ರಮಿಸಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳನ್ನು ಅಶ್ರಯಿಸುವಂತಿಲ್ಲವೆಂದು ಅದು ಹಿಂದೆ ನೀಡಿದ ತೀರ್ಪುಗಳನ್ನೇ ಅಲಕ್ಷಿಸಿ ಹೀಗೆ ಹೇಳಿದೆನೆಂಬ ಲಜ್ಜೆಯನ್ನೂ ಅದು ವ್ಯಕ್ತಪಡಿಸಿಲ್ಲ.

ಆದರೆ ಈ ಒತ್ತಿನ ಭಾಗ್ಯ ಎಲ್ಲರಿಗಿಲ್ಲವೆಂಬುದನ್ನು ನ್ಯಾಯಾಲಯದ ಕಾರ್ಯಕ್ಷಮತೆ ಸಾರಿ ಹೇಳಿದೆ. ಇದಕ್ಕೆ ಪುರಾವೆಗಳು ಬೇಕಿಲ್ಲ. ಆನಂತರದ ದಿನಗಳಲ್ಲಿ ಸಿದ್ದೀಕಿ ಕಪ್ಪನ್ ಮತ್ತಿತರ ಪ್ರಕರಣಗಳನ್ನು ಉಲ್ಲೇಖಿಸಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 32ನೇ ವಿಧಿಯನ್ವಯ ಅದನ್ನು ಪದೇಪದೇ ಆಶ್ರಯಿಸುವುದನ್ನು ತಾನು ಇಷ್ಟಪಡುವುದಿಲ್ಲವೆಂದು ಹೇಳಿತು. ತಮಾಷೆ, ವಿಷಾದ ಮತ್ತು ವ್ಯಂಗ್ಯವೆಂದರೆ ಇದನ್ನು ಹೇಳಿದ್ದು ಅರ್ನಬ್ ಗೋಸ್ವಾಮಿಯ ಇಂತಹ ಅರ್ಜಿಯನ್ನು ಇತ್ಯರ್ಥಗೊಳಿಸಿದ ಬಳಿಕ. ಸಮಾಜದ ಅಂತಃಸಾಕ್ಷಿಗಳು ಮತ್ತು ಅಂತರ್ಜಲವು ಇಂತಹ ದ್ವಿಮುಖ ನೀತಿಯನ್ನು ಮತ್ತು ಕೆಲವರು ಹೆಚ್ಚು ಸಮಾನರು ಎಂಬುದನ್ನು ನ್ಯಾಯಾಲಯವೇ ಸೂಚಿಸುವುದು ಎಷ್ಟು ಸಮಂಜಸವೆಂದು ಚಿಂತಿಸುವಂತೆ ಮಾಡಿದೆ.

ಕಾಶ್ಮೀರದ ಸಮಸ್ಯೆಗಳ ಕುರಿತು ಇರುವ ಯಾವ ಪ್ರಕರಣಗಳೂ ವಿಚಾರಣೆಗೆ ಬರುತ್ತಿಲ್ಲ. ಮೆಹಬೂಬ ಮುಫ್ತಿಯ ಅಕ್ರಮ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಎಳೆದದ್ದೂ ಎಳೆದದ್ದೇ. ಆಗಾಗ ಏನೋ ನೆನಪಾದವರಂತೆ ಕೇಂದ್ರ ಸರಕಾರವನ್ನು ‘‘ಏನು ಮಾಡುತ್ತೀರಿ?’’ ಎಂದು ಪ್ರಶ್ನಿಸಿ ಕೊನೆಗೆ ಕೇಂದ್ರವು ಮೆಹಬೂಬ ಮುಫ್ತಿಯವರ ಬಂಧನವನ್ನು ವಿಸ್ತರಿಸಲು ಅಶಕ್ತವಾಗಿ ಬಿಡುಗಡೆ ಮಾಡಿದಾಗ ಅದನ್ನೇ ಆಧರಿಸಿ ಅರ್ಜಿಯನ್ನು ವಿಲೆಮಾಡಿತಲ್ಲದೆ ಆಕೆಯ ಬಂಧನದ ಕಾನೂನು ಬದ್ಧತೆಯ ಕುರಿತು ಸೊಲ್ಲೆತ್ತಲಿಲ್ಲ. ಇನ್ನೂ ಅಲ್ಲಿನ ಪ್ರಜೆಗಳಿಗೆ ಅಗತ್ಯ ಅಂತರ್ಜಾಲ ವ್ಯವಸ್ಥೆ ಒದಗಿಲ್ಲ. ಸಂವಿಧಾನದ 370ನೇ ವಿಧಿಯ ರದ್ದತಿಯ ವಿರುದ್ಧ ಸಲ್ಲಿಸಿದ ಅರ್ಜಿಗಳು ಇನ್ನೂ ವಿಚಾರಣೆಗೆ ಬಂದಿಲ್ಲ. ವಿಶೇಷವೆಂದರೆ ಇದ್ದಕ್ಕಿದ್ದಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಧಾನಿ ಮೋದಿಯವರ ವಿರುದ್ಧ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ‘‘ಇದನ್ನು ಇನ್ನೆಷ್ಟು ಕಾಲ ಕಾದಿರಿಸುವುದು’’ ಎಂಬ ಸೂಚನೆಯೊಂದಿಗೆ ವಿಚಾರಣೆಗೆ ಎತ್ತಿಕೊಂಡು ನಿರೀಕ್ಷಿಸಿದಂತೆ ತಕ್ಷಣವೇ ವಜಾಮಾಡಿದೆ. ಇಂತಹ ಅನೇಕ ಪ್ರಕರಣಗಳು ನ್ಯಾಯವೇತ್ತರ ಗಮನಕ್ಕೆ ಬಂದಿದೆಯೆಂಬುದು ದೇಶದ ಪ್ರತಿಷ್ಠಿತ ಪತ್ರಿಕೆ ಮತ್ತಿತರ ಮಾಧ್ಯಮಗಳಲ್ಲಿ, ಟ್ವಿಟರ್‌ನಂತಹ ಜಾಲತಾಣಗಳಲ್ಲಿ ಪ್ರಕಟವಾಗುವ ಅಭಿಪ್ರಾಯಗಳಲ್ಲಿ ವ್ಯಕ್ತವಾಗುತ್ತಿದೆ. ಇದನ್ನು ಪುಷ್ಟೀಕರಿಸುವಂತೆ ಭೀಮಾ ಕೋರೆಗಾಂವ್ ಮತ್ತಿತರ ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ದೇಶದ ಜ್ಞಾನ ಸಂಪತ್ತು ಜೈಲೊಳಗಿದೆಯೆಂಬ ಅರಿವು ಇಡೀ ಜಗತ್ತಿಗೇ ಗೊತ್ತಾದರೂ ಬಂಧಿತರ ವೃತ್ತಿ, ಗೌರವ, ಹೋಗಲಿ ಕೊನೆಗೆ ವಯಸ್ಸನ್ನೂ, ಆರೋಗ್ಯವನ್ನೂ ಗಮನಿಸುವಲ್ಲಿ ತನ್ನ ಕಣ್ಣಿಗೆ ಬಟ್ಟೆಕಟ್ಟಿಕೊಂಡಿದೆಯೆಂಬುದನ್ನು ಸರ್ವೋಚ್ಚ ನ್ಯಾಯಾಲಯವು ಜಗತ್ತಿಗೇ ಸಾರಿ ಹೇಳುತ್ತಿದೆ. ಈ ಬಂಧನಗಳನ್ನು ಗೌರವಾನ್ವಿತ ಪ್ರಜೆಗಳು, ನಿವೃತ್ತ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಧೀಶರು ಮತ್ತಿತರ ಸಾರ್ವಜನಿಕರು ಪ್ರತಿಭಟಿಸಿ ಬಿಡುಗಡೆಗೆ ಕೋರಿದರೂ ಸರ್ವೋಚ್ಚ ನ್ಯಾಯಾಲಯವು ಮೀನ-ಮೇಷ ಎಣಿಸುತ್ತಿದೆಯೇ ಹೊರತು ತನ್ನ ಅಸ್ತಿತ್ವವನ್ನೂ ಭವಿಷ್ಯವನ್ನೂ ಕತ್ತಲ ದಾರಿಯಲ್ಲಿ ದೂರಕ್ಕೊಯ್ಯುತ್ತಿದ್ದೇನೆಂಬ ಯೋಚನೆ ಮಾಡುತ್ತಿಲ್ಲ. ಪ್ರಾಯಃ ಸ್ವತಂತ್ರ ಭಾರತದ ನ್ಯಾಯಾಂಗದ ಬದ್ಧತೆ ಮತ್ತು ಶರಣಾಗತಿಯು 1975ಕ್ಕಿಂತಲೂ ಕೆಳಹಂತಕ್ಕಿಳಿದಿದೆ.

ಇಲ್ಲೇ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಬಹುಕಾಲ ಬಂಧನದಲ್ಲಿರುವ ಮತ್ತು ಆನಂತರ ಅಮಾಯಕರೆಂದು, ನಿರಪರಾಧಿಗಳೆಂದು ಬಿಡುಗಡೆಯಾಗುವ ಗೌರವಸ್ಥರಿಗೆ, ಬಡವರಿಗೆ, ಅವರ ಆಯುಷ್ಯವನ್ನು ಮರಳಿಸಲಾಗದ ನ್ಯಾಯಾಲಯವು ಏನು ಪರಿಹಾರ ನೀಡುತ್ತದೆಯೆಂಬ ಪ್ರಶ್ನೆ. ಈ ವರೆಗೂ ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿದರೆ ಇದಕ್ಕೆ ಉತ್ತರ ಸಿಕ್ಕಿಲ್ಲ. ಈಗ ಡೋಲಾಯಮಾನವಾಗಿರುವ ನ್ಯಾಯಾಲಯದ ತಕ್ಕಡಿಯಲ್ಲಿ, ಗಾಂಧಾರಿಯ ಕುರುಡುತನದಲ್ಲಿ, ಪ್ರಾಯಃ ಸದ್ಯ ಉತ್ತರ ಸಿಗಲಾರದು. ಸಮಾಜದ ಮತ್ತು ಆಡಳಿತದ ಇನ್ಯಾವುದೇ ಅಂಗ ಊನವಾದರೆ, ಕುಂಠಿತವಾದರೆ, ಅದನ್ನು ತಹಬಂದಿಗೆ ತರುವ ಕೆಲಸವಿರುವುದು ನ್ಯಾಯಾಂಗದಲ್ಲಿ. ಅಧೀನ ನ್ಯಾಯಾಲಯಗಳು ತಮ್ಮಲ್ಲಿಗೆ ಬಂದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಹೊಣೆಯನ್ನು ಹೊತ್ತರೆ, ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಅಧೀನ ನ್ಯಾಯಾಲಯಗಳ ತೀರ್ಪಿನ ಮೇಲ್ಮನವಿ ಮತ್ತು ಪುನರ್ವಿಮರ್ಶೆ ಮಾತ್ರವಲ್ಲ, ಮೂಲಭೂತ ಹಕ್ಕುಗಳಂತಹ ಸಾಂವಿಧಾನಿಕ ಪ್ರಕರಣಗಳಲ್ಲಿ ತಾವೇ ಸ್ವತಃ ರಂಗಕ್ಕಿಳಿದು ನ್ಯಾಯನೀಡುವ ಹೊಣೆಯೂ ಇದೆ. ಇದರಿಂದಾಗಿ ಅಧೀನ ನ್ಯಾಯಾಲಯಗಳ ಪ್ರಕರಣಗಳು ವರದಿಯಾಗುತ್ತವೆಯೇ ಹೊರತು ಚರ್ಚೆಯಾಗುವುದಿಲ್ಲ; ಆದರೆ ಮೇಲ್‌ಸ್ತರದ ನ್ಯಾಯಾಲಯಗಳ ಅಂದರೆ ಅವು ನೀಡುವ ತೀರ್ಪುಗಳ, ಅವು ಸಮಾಜದ ಆಗುಹೋಗುಗಳ ಕುರಿತಂತೆ ಇಟ್ಟುಕೊಳ್ಳುವ ದೃಷ್ಟಿಕೋನ, ಇವುಗಳ ಕುರಿತು ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಸದಾ ದೂರಗಾಮೀ ಚರ್ಚೆಯಾಗುತ್ತದೆ. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ತಾಯಿ ಮಕ್ಕಳಿಗೆ ನೀಡುವಂತೆ, ಪ್ರಜೆಗಳಿಗೆ ರಕ್ಷಣೆ ನಿಡಬೇಕು. ಮಗು ಅಳುವುದನ್ನು ತಾಯಿ ಕಾಯುವುದಿಲ್ಲ. ಆ ವಿಶ್ವಾಸ ಮಗುವಿಗಿರುತ್ತದೆ. ಒಳ್ಳೆಯ ಆಡಳಿತ, ಉತ್ತರದಾಯಿತ್ವವಿರುವ ಅಧಿಕಾರಶಾಹಿ ಇದ್ದರೆ ನ್ಯಾಯಾಲಯಗಳಿಗೆ ಕೆಲಸ ಕಡಿಮೆ. ಆದರೆ ಪ್ರಕೃತ ಭಾರತದ ಪರಿಸ್ಥಿತಿ 1975ರ ತುರ್ತುಸ್ಥಿತಿಗಿಂತಲೂ ಹೀನಾಯವಾಗಿದೆ. ಆಗ ಕೊನೇಪಕ್ಷ ಸರ್ವಾಧಿಕಾರವೆಂಬ ಆರೋಪವನ್ನು ಹೊರಿಸಬಹುದಾದಂತಹ ವಿಶೇಷಾಜ್ಞೆಯಿತ್ತು. ಈಗ ಎಲ್ಲವೂ ಪ್ರಜಾಪ್ರಭುತ್ವದ, ದೇಶರಕ್ಷಣೆಯ ಹೆಸರಿನಲ್ಲಿಯೇ ನಡೆಯುತ್ತಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯವು ಯೋಗಿಯೆಂಬ ವ್ಯಂಗ್ಯಾಭಿದಾನದ ಮುಖ್ಯಮಂತ್ರಿಯಡಿ ಅಸಹನೆಯ, ಕೋಮು ಧ್ರುವೀಕರಣದ, ಬಹುಸಂಖ್ಯಾತರ ತುಷ್ಟೀಕರಣದ ಮತ್ತು ಪೊಲೀಸು ದೌರ್ಜನ್ಯದ ಆಡುಂಬೊಲವಾಗಿದೆ. ದಿಲ್ಲಿಯ ಗಲಾಟೆಗಳ ಕುರಿತು ಅಷ್ಟುದ್ದ ಮೂಗು ತೂರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ನಡೆಯುತ್ತಿರುವ ಅತ್ಯಾಚಾರ, ಸಮೂಹ ದೌರ್ಜನ್ಯಗಳ ಕುರಿತು ಲೋಕಾಭಿರಾಮದ ಹೊರತಾಗಿ ಮೌನಕ್ಕೆ ಶರಣಾಗಿದೆ.

ಇದರೊಂದಿಗೇ ಸರ್ವೋಚ್ಚ ನ್ಯಾಯಾಲಯವು ‘ನ್ಯಾಯಾಲಯಗಳ ನಿಂದನೆ ಕಾಯ್ದೆ’ಯನ್ನು ಮತ್ತೆ ಬಳಕೆಗೆ, ಬೆಳಕಿಗೆ ತಂದಿದೆ. ಖ್ಯಾತ ಮಾನವತಾವಾದಿ ಕಾರ್ಯಕರ್ತ ಮತ್ತು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧ ಹಳೆಯ ಪ್ರಕರಣವೊಂದರಲ್ಲಿ ನ್ಯಾಯಾಲಯ ನಿಂದನೆಗೆ ಗುರಿಪಡಿಸಲಾಯಿತು. ಈ ಪ್ರಕರಣದಲ್ಲಿ ದೇಶದೆಲ್ಲೆಡೆ ಕುತೂಹಲ ಮಾತ್ರವಲ್ಲ ಅವಹೇಳನಕ್ಕೆ ಗುರಿಯಾದ ನ್ಯಾಯಾಲಯವು ಕೊನೆಗೆ ‘ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ’ ಎಂಬ ಹಾಗೆ ಒಂದು ರೂಪಾಯಿಯ ದಂಡ ವಿಧಿಸಿ ಸೇಡು ತೀರಿಸಿಕೊಂಡಿತು. ಅವರ ವಿರುದ್ಧ ಇನ್ನೂ ಬೇರೆ ಪ್ರಕರಣ (ಗಳು) ಬಾಕಿಯಿವೆ. ಈ ನ್ಯಾಯಾಲಯ ನಿಂದನೆ ಈಗ ಗಂಭೀರ ಟೀಕೆಗಳಿಗಷ್ಟೇ ಸೀಮಿತವಾಗದೆ ಸಮಾಜದ ಹಾಸ್ಯಪ್ರಜ್ಞೆಯನ್ನೇ ನಿಂದಿಸಿ ಹೊಸಕಿಹಾಕುವಂತಿದೆ. ಕುನಾಲ್ ಕಾಮ್ರಾ ಎಂಬ ಪ್ರಸಿದ್ಧ ಹಾಸ್ಯಕರ್ಮಿಯ ಟೀಕೆಗಳನ್ನು ಈಗ ನ್ಯಾಯಾಲಯ ನಿಂದನೆಗೆ ಒಳಪಡಿಸಲಾಗಿದೆ. ದೇಶದ ಅಟಾರ್ನಿ ಜನರಲ್ ಕೆ.ಕೆ.ವೇಣುಗೊಪಾಲ್ ಈ ನಿಂದನಾ ಪ್ರಕರಣಗಳಿಗೆ ಅನುಮತಿಯನ್ನು ನೀಡಿದ್ದಾರೆ. ಕುನಾಲ್ ಕಾಮ್ರಾನಂತೂ ಸೆಡ್ಡು ಹೊಡೆದು ನಿಂತಿದ್ದಾನೆ. ಮುಂದೇನೋ? ಗೊತ್ತಿಲ್ಲ.

 ಅಕ್ಬರ್‌ನ ದರ್ಬಾರಿನಲ್ಲಿದ್ದ ಬೀರ್‌ಬಲ್, ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮಕೃಷ್ಣ ಇವರೆಲ್ಲ ದೊರೆಯನ್ನು ಟೀಕೆ ಮಾಡಿಯೂ ದಂಡನೆಗೊಳಗಾಗದೆ ಬದುಕಿದವರು; ದೊರೆಯ ಮತ್ತು ಪ್ರಜೆಗಳ ಆರೋಗ್ಯವನ್ನು ನಗುವಿನ ಮೂಲಕ ಹೆಚ್ಚಿಸಿದವರು. ಅವರ ಹಾಸ್ಯಕತೆಗಳು ಜನಜನಿತ. ಅಂದಿನ ಬದಲು ಇಂದು ಅವರೇನಾದರೂ ಇದ್ದಿದ್ದರೆ ಇವರೆಲ್ಲ ನ್ಯಾಯಾಲಯ ನಿಂದನೆಯನ್ನು ಅನುಭವಿಸಬೇಕಾಗುತ್ತಿತ್ತು. ನೆಹರೂ ಕಾಲದಲ್ಲಿದ್ದ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್, ತಮಿಳಿನ ಚೋ. ರಾಮಸ್ವಾಮಿ, ಮತ್ತು ಇನ್ನೂ ಅನೇಕ ವ್ಯಂಗ್ಯ ಚಿತ್ರಕಾರರು ರಾಜಕಾರಣಿಗಳನ್ನು ಸದಾ ವ್ಯಂಗ್ಯವಾಗಿ ಚಿತ್ರಿಸುತ್ತಿದ್ದರು. ಇಂದು ವ್ಯಂಗ್ಯಚಿತ್ರಗಳು ನಮ್ಮನ್ನಾಳುವವರ, ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಇನ್ನೂ ಯಾಕೆ ಬರಲಿಲ್ಲವೋ ಗೊತ್ತಿಲ್ಲ. ಬದುಕನ್ನಾಗಲೀ, ನ್ಯಾಯವನ್ನಾಗಲೀ ಪರಿಪಾಲಿಸುವವರು ದಪ್ಪಚರ್ಮವನ್ನು ಹೊಂದಿದರೆ ಪ್ರಜೆಗಳ ಸ್ಥಿತಿಯು ಹಾವಿನಹೆಡೆಯಡಿಯ ಬದುಕಾಗುತ್ತದೆ. ನಗುತ್ತಲೋ ಗಂಭೀರವಾಗಿಯೋ ಸತ್ಯ ಹೇಳುವುದೇ ಅಪರಾಧ ಮಾತ್ರವಲ್ಲ, ದೇಶದ್ರೋಹವೆಂದಾದರೆ ಅದು ದೇಶವಾಗಲು, ಬದುಕಿಗೆ ಯೋಗ್ಯವಾದ ನಾಗರಿಕ ಸಮಾಜವಾಗಲು ಅನರ್ಹವಾಗುತ್ತದೆ.

ಸರ್ವೋಚ್ಚ ನ್ಯಾಯಾಲಯವು ಈಗಲೂ ತಡಮಾಡದೆ ತನ್ನ ವ್ಯಾಪ್ತಿಯಲ್ಲಿ ಇಂತಹ ಎಲ್ಲ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ವಿಚಾರಣೆ ನಡೆಸಲಿ. ನಿಜಕ್ಕೂ ಅವರ ಬಂಧನವು ಸಕ್ರಮವಾಗಿದೆಯೇ ಎಂಬ ಅಂಶವನ್ನು ನಿರ್ಧರಿಸಲಿ. ಹಾಗೂ ನ್ಯಾಯಾಲಯವು ಅವರ ಬಂಧನವು ಸಮರ್ಥನೀಯವೆಂದು ಹೇಳಿದರೆ ಕಾನೂನಿನ ಸಮಗ್ರತೆಯ, ಘನತೆಯ ದೃಷ್ಟಿಯಿಂದ ಗೌರವಿಸಬೇಕು; ಈಗಿರುವ ಅತಂತ್ರ ಸ್ಥಿತಿ ಹಾಗಾದರೂ ತೊಲಗಲಿ.

ಗೌರವ ಬೇರೆ; ನಂಬಿಕೆ ಬೇರೆ. ಸರ್ವೋಚ್ಚ ನ್ಯಾಯಾಲಯಕ್ಕೆ ಘನತೆ-ಗೌರವ ವಿದೆ. ಅದು ತನ್ನ ಮೇಲೆ ಜನರಿಟ್ಟ ನಂಬಿಕೆಯನ್ನು ತಿರಸ್ಕರಿಸಬಾರದು; ಕಳೆದುಕೊಳ್ಳಬಾರದು. ಎಲ್ಲರನ್ನೂ ತೂಗುವ ತಕ್ಕಡಿ ತಾನೇ ಅಳತೆಗೆ, ತೂಕಕ್ಕೆ ಸಿಗಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)