varthabharthi


ಸಂಪಾದಕೀಯ

‘ಲವ್ ಜಿಹಾದ್’ ವಿರುದ್ಧ ಕಾನೂನು: ಕತ್ತಲಲ್ಲಿ ಬೀಸುತ್ತಿರುವ ದೊಣ್ಣೆ

ವಾರ್ತಾ ಭಾರತಿ : 26 Nov, 2020

‘ಬಲವಂತ’ ಎನ್ನುವುದೇ ಅಪರಾಧವಾಗಿರುವಾಗ ‘ಬಲವಂತದ ಮತಾಂತರ’ ಅಪರಾಧವಾಗದೇ ಇರುವುದಾದರೂ ಹೇಗೆ? ಬಲವಂತವಾಗಿ ಯಾರ ಮೇಲೆ ಏನನ್ನು ಹೇರಿದರೂ ಅದು ಅಪರಾಧವೇ ಆಗಿದೆ. ಹೀಗಿರುವಾಗ ಧರ್ಮವನ್ನು ಹೇರಿದರೂ ಅದು ಕಾನೂನು ಪ್ರಕಾರ ಅಪರಾಧವೇ. ಇದನ್ನು ಸರಕಾರ ಜನರಿಗೆ ಹೊಸದಾಗಿ ಕಾನೂನನ್ನು ಜಾರಿಗೊಳಿಸಿ ತಿಳಿ ಹೇಳುವ ಅಗತ್ಯವಿದೆಯೇ? ಯಾರಾದರೂ ಜೀವಬೆದರಿಕೆಯೊಡ್ಡಿ ಅಥವಾ ಇನ್ನಾವುದೋ ಒತ್ತಡಗಳ ಮೂಲಕ ಮತಾಂತರ ಮಾಡಿದ ಉದಾಹರಣೆಗಳು ಈ ದೇಶದಲ್ಲಿ ಇದೆಯೇ? ಉತ್ತರ ಪ್ರದೇಶದ ಯೋಗಿ ಸರಕಾರ ‘ಲವ್ ಜಿಹಾದ್’ ಅಥವಾ ಮದುವೆಯ ಮೂಲಕ ಮತಾಂತರ ನಡೆಸಿದ ಶಂಕೆಯುಳ್ಳ 14 ಪ್ರಕರಣಗಳನ್ನು ಇತ್ತೀಚೆಗೆ ಸಿಟ್ ಮೂಲಕ ತನಿಖೆಗೊಳಪಡಿಸಿತ್ತು. ಇದೀಗ ಸಿಟ್ ತಂಡ ತನ್ನ ವರದಿಯನ್ನು ನೀಡಿದ್ದು 14ರಲ್ಲಿ 11 ಪ್ರಕರಣಗಳು ಮತಾಂತರದ ಹಿನ್ನೆಲೆಯಲ್ಲಿ ನಡೆದ ಪ್ರೇಮ ಪ್ರಕರಣವಲ್ಲ ಎಂದು ಸ್ಪಷ್ಟ ಪಡಿಸಿದೆ. ಹಾಗೆಯೇ ಉಳಿದ ಪ್ರಕರಣಗಳಲ್ಲೂ ಯಾವುದೇ ಸಂಘಟನೆಗಳು ವ್ಯವಸ್ಥಿತವಾಗಿ ಕೆಲಸ ಮಾಡಿಲ್ಲ. ಆ ಪ್ರಕರಣಗಳಲ್ಲಿ ವ್ಯವಸ್ಥಿತವಾದ ಧಾರ್ಮಿಕ ಮತಾಂತರಗಳ ಉದ್ದೇಶ ಇದ್ದಿರಲಿಲ್ಲ ಎಂದು ಸಿಟ್ ವರದಿ ಮಾಡಿದೆ. ‘ಲವ್ ಜಿಹಾದ್’ ಮೊತ್ತ ಮೊದಲು ಸುದ್ದಿಯಾಗಿದ್ದು ಕೇರಳದಲ್ಲಿ. ಆದರೆ ಅಲ್ಲಿನ ಪೊಲೀಸ್ ಇಲಾಖೆಯೂ ಇಂತಹದೊಂದು ಜಿಹಾದ್ ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ವಿಪರ್ಯಾಸವೆಂದರೆ, ಈವರೆಗೆ ತನ್ನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಯಾವ ಯಾವ ರಾಜ್ಯಗಳಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಎನ್ನುವ ಪ್ರಶ್ನೆಗಳಿಗೆ ಈವರೆಗೆ ಸರಕಾರದ ಬಳಿ ಯಾವುದೇ ಅಂಕಿಅಂಶಗಳಿಲ್ಲ. ತಾನೇ ಸೃಷ್ಟಿಸಿರುವ ‘ಲವ್ ಜಿಹಾದ್’ ಎಂಬ ಗುಮ್ಮವನ್ನು ತೋರಿಸಿ, ಇದೀಗ ಬಿಜೆಪಿ ಸರಕಾರಗಳು ಅದರ ವಿರುದ್ಧ ಕಾನೂನನ್ನು ತರಲು ಮುಂದಾಗಿವೆ. ಇದೊಂದು ರೀತಿ ‘ಗೋ ರಕ್ಷಕ ದಳ’ದ ಸ್ಥಾಪನೆಯಂತೆಯೇ ಆಗಿದೆ. ಎಲ್ಲೆಡೆ ಗೋವುಗಳನ್ನು ಕದ್ದು ಕಸಾಯಿ ಖಾನೆಗಳಿಗೆ ಸಾಗಿಸಲಾಗುತ್ತಿದೆ ಎಂದು ಮೊದಲು ವದಂತಿಗಳನ್ನು ಹಬ್ಬಿಸಿ, ಬಳಿಕ ಸಂಘಪರಿವಾರದ ಸಂಘಟನೆಗಳು ‘ಗೋ ರಕ್ಷಣೆ’ಗೆ ದಳವನ್ನು ಸ್ಥಾಪಿಸಿದವು. ಅವರ ಮೂಲಕ ಗೋವುಗಳ ವ್ಯಾಪಾರ ನಡೆಸುವ ರೈತರನ್ನು ಶೋಷಿಸತೊಡಗಿದವು. ಪರಿಣಾಮವಾಗಿ ಇಂದು ರೈತರು ತಾವು ಸಾಕುವ ಗೋವುಗಳ ಮೇಲಿನ ಮಾರುವ ಹಕ್ಕನ್ನೇ ಕಳೆದುಕೊಂಡಿದ್ದಾರೆ.

ಒಬ್ಬನನ್ನು ಬಲವಂತವಾಗಿ ಜೀತಕ್ಕಿಡಬಹುದು. ಆದರೆ ಬಲವಂತವಾಗಿ ಮತಾಂತರ ಮಾಡುವುದು ಸಾಧ್ಯವಿಲ್ಲ. ಮತಾಂತರವೆಂದರೆ ಯಾವುದೋ ಲಾಂಛನಗಳನ್ನು ಧರಿಸುವುದೋ ಅಥವಾ ತನ್ನ ಹೆಸರುಗಳನ್ನು ಬದಲಿಸುವುದು ಇಷ್ಟೇ ಅಲ್ಲ. ಮತಾಂತರವೆಂದರೆ ತಾನು ಇದುವರೆಗೆ ನಂಬಿರುವ ನಂಬಿಕೆಗಳನ್ನೇ ಬದಲಾಯಿಸುವುದು. ಒಬ್ಬ ಮನುಷ್ಯನಲ್ಲಿ ಒಂದು ನಂಬಿಕೆಯ ಕುರಿತಂತೆ ವಿಶ್ವಾಸವನ್ನು ಮೂಡಿಸಿ ಆತನನ್ನು ಮತಾಂತರ ಮಾಡಬಹುದೇ ಹೊರತು, ಇನ್ನಿತರ ಆಮಿಷಗಳ ಮೂಲಕ ಮತಾಂತರ ಮಾಡುವುದು, ಪರಕೀಯ ನಂಬಿಕೆಗಳನ್ನು ಬಲವಂತವಾಗಿ ನಂಬುವಂತೆ ಮಾಡುವುದು ಸಾಧ್ಯವಿಲ್ಲ. ಹಣ, ಆಹಾರ ಇತ್ಯಾದಿಗಳಿಗಾಗಿ ಮತಾಂತರವಾಗುತ್ತಾರೆ ಎಂದಾದರೆ, ಮತವೆನ್ನುವುದು ಅವರಿಗೆ ಹಣ ಮತ್ತು ಆಹಾರದಷ್ಟು ಮುಖ್ಯವಲ್ಲ ಎಂದಾಯಿತು. ದೇವರನ್ನು, ಧರ್ಮವನ್ನು ನಂಬದ ನಾಸ್ತಿಕರಿಗೆ ಇಲ್ಲಿ ಅವಕಾಶವಿದೆಯಾದರೆ, ಧರ್ಮಕ್ಕಿಂತ ನನಗೆ ತಕ್ಷಣದ ಅಗತ್ಯ ಹಣ ಮತ್ತು ಆಹಾರ ಎಂದು ನಂಬುವವರಿಗೂ ಇಲ್ಲಿ ಬದುಕುವ ಅವಕಾಶವಿದೆ. ಒಬ್ಬ ರಾಜಕಾರಣಿ ಹಣಕ್ಕಾಗಿ ತಾನಿರುವ ಪಕ್ಷದ ಸಿದ್ಧಾಂತಗಳನ್ನು ಬದಿಗೆಸೆದು ಇನ್ನೊಂದು ಪಕ್ಷಕ್ಕೆ ಮಾರಾಟವಾಗುವ ಅಧಿಕಾರವಿದೆ ಎಂದಾದರೆ, ಒಬ್ಬ ಸಾಮಾನ್ಯ ಮನುಷ್ಯನಿಗೆ ತನ್ನ ವೈಯಕ್ತಿಕ ಧರ್ಮವನ್ನು ಹಣಕ್ಕಾಗಿ ಮಾರಾಟ ಮಾಡುವ ಹಕ್ಕೂ ಇದೆ. ಹಣ ಮತ್ತು ಆಹಾರಕ್ಕಿಂತ ಧರ್ಮ ದೊಡ್ಡದು ಎನ್ನುವುದನ್ನು ಆತನಿಗೆ ಮನವರಿಕೆ ಮಾಡುವ ಜವಾಬ್ದಾರಿ ಆಯಾ ಧರ್ಮದ ಮುಖಂಡರದೇ ಹೊರತು ಸರಕಾರದ್ದಲ್ಲ. ಹಾಗೆಯೇ ಯಾರು ಯಾರನ್ನು ಪ್ರೀತಿಸಬೇಕು ಎನ್ನುವುದನ್ನು ತಿಳಿಸಿಕೊಡುವುದು ಸರಕಾರಕ್ಕೆ ಸಂಬಂಧಿಸಿದ ವಿಷಯವಲ್ಲ. ಸದ್ಯದಲ್ಲಿ ದೇಶ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ, ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಏಕಾಏಕಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ‘ಲವ್‌ಜಿಹಾದ್ ವಿರುದ್ಧ ಕಾನೂನಿನ ಬಗ್ಗೆ’ ಆಸಕ್ತಿ ತೋರಿಸುತ್ತಿವೆ.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಹೈಕೋರ್ಟ್, ಸರಕಾರದ ‘ಲವ್ ಫೋಬಿಯಾ’ಕ್ಕೆ ಸರಿಯಾದ ಚಿಕಿತ್ಸೆಯನ್ನು ಸೂಚಿಸಿದೆ. ‘ಬಾಳ ಸಂಗಾತಿಯ ಆಯ್ಕೆಯ ಸ್ವಾತಂತ್ರದಲ್ಲಿ ಹಸ್ತಕ್ಷೇಪ ಸಲ್ಲದು’ ಎಂದು ಹೈಕೋರ್ಟ್ ಹೇಳಿದೆ. ಪ್ರಾಯ ಪೂರ್ತಿಗೊಂಡ ಯುವತಿಯೊಬ್ಬಳು ತನ್ನ ಬಾಳಸಂಗಾತಿಯ ಆಯ್ಕೆಯನ್ನು ಮಾಡಲು ಸಂಪೂರ್ಣ ಸ್ವತಂತ್ರಳಾಗಿದ್ದಾಳೆ. ಅಷ್ಟೇ ಅಲ್ಲ, ತನಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನೂ ಹೊಂದಿದ್ದಾಳೆ. ಇದು ಯುವತಿಗೆ ಮಾತ್ರವಲ್ಲ, ಪುರುಷನಿಗೂ ಅನ್ವಯಿಸುತ್ತದೆ. ಯುವತಿಯೊಬ್ಬಳು ಒಬ್ಬನನ್ನು ಯಾವ ಕಾರಣಕ್ಕೆ ಪ್ರೀತಿಸಿದಳು, ಯಾವ ಕಾರಣಕ್ಕೆ ಮತಾಂತರ ಆದಳು ಎನ್ನುವುದನ್ನು ಆ ಯುವತಿಯ ಮಾತಿನ ಆಧಾರದಲ್ಲೇ ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆಯೇ ಹೊರತು, ಮೂರನೆಯವರ ಸಾಕ್ಷಾಧಾರಗಳ ಮೂಲಕ ಅಲ್ಲ. ಸರಕಾರ ಅಥವಾ ಸಂಘಪರಿವಾರದ ಸಂಘಟನೆಗಳು ಆಕೆಯ ವೈಯಕ್ತಿಕ ಬದುಕಿನಲ್ಲಿ ಮೂಗು ತೂರಿಸುವುದನ್ನೇ ‘ಬಲವಂತ’ ಎಂದು ಕರೆಯಬೇಕಾಗುತ್ತದೆ. ಒಂದು ವೇಳೆ ಲವ್ ಜಿಹಾದ್ ಹೆಸರಿನಲ್ಲಿ ಸರಕಾರ ಕಾನೂನು ಜಾರಿಗೊಳಿಸಿದರೆ, ಅದು ಮಹಿಳೆಯರ ಬದುಕನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಆದುದರಿಂದಲೇ, ಹೈಕೋರ್ಟ್ ತೀರ್ಪನ್ನು ನಾವು ಹಾರ್ದಿಕವಾಗಿ ಸ್ವಾಗತಿಸಬೇಕಾಗಿದೆ.

ಹಾಗೆಂದು ಈ ದೇಶದಲ್ಲಿ ‘ಮದುವೆ’ಗಾಗಿ ಬಲವಂತದ ಮತಾಂತರ ನಡೆಯುವುದೇ ಇಲ್ಲ ಎನ್ನುವಂತಿಲ್ಲ. ಕೆಲವು ಮೇಲ್‌ಜಾತಿಗಳಲ್ಲಿ ಯುವತಿಯರ ಭಾರೀ ಕೊರತೆಗಳಿವೆ. ಆ ಜಾತಿಯ ಪುರುಷನಿಗೆ ಮದುವೆಯಾಗಲು ಯೋಗ್ಯ ಯುವತಿ ದೊರಕುತ್ತಿಲ್ಲ. ಪರಿಣಾಮವಾಗಿ ಹಣ ಕೊಟ್ಟು ಕೆಲವು ತರುಣಿಯನ್ನು ‘ಶುದ್ಧೀಕರಣ’ ಮಾಡಿ ಮದುವೆಯಾಗುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿದೆ. ಬಡತನದ ಕಾರಣದಿಂದಾಗಿ ಹೆತ್ತವರು ಅನಿವಾರ್ಯವಾಗಿ ಯುವತಿಯನ್ನು ‘ಶುದ್ಧೀಕರಣ’ಗೊಳಿಸಿ ಮೇಲ್‌ಜಾತಿಯ ಪುರುಷರಿಗೆ ಮದುವೆ ಮಾಡಿ ಕೊಡುತ್ತಿದ್ದಾರೆ. ವಿಪರ್ಯಾಸವೆಂದರೆ, ಹೀಗೆ ಮದುವೆಯಾದ ಹೆಣ್ಣು ತನ್ನ ತವರು ಮನೆಯನ್ನು ಶಾಶ್ವತವಾಗಿ ಮರೆತು ಬಿಡಬೇಕಾಗುತ್ತದೆ. ತನ್ನ ಆಹಾರ ಪದ್ಧತಿ, ಸಂಪ್ರದಾಯ, ನಂಬಿಕೆ, ಆಚರಣೆ ಎಲ್ಲವನ್ನು ಮರೆತು ಪತಿಯ ಮನೆಯ ನಂಬಿಕೆಯಂತೆ ಬದುಕಬೇಕಾಗುತ್ತದೆ. ಇದನ್ನು ‘ಜಾತ್ಯತೀತ ಮದುವೆ’ ಎಂದು ಯಾವ ಕಾರಣಕ್ಕೂ ಕರೆಯುವಂತಿಲ್ಲ. ಯಾಕೆಂದರೆ, ಪುರುಷನ ಮನೆಯವರು ಕೇವಲ ಹೆಣ್ಣನ್ನು ಸ್ವೀಕರಿಸುತ್ತಾರೆಯೇ ಹೊರತು, ಹೆಣ್ಣಿನ ಕುಟುಂಬವನ್ನು ಸ್ವೀಕರಿಸುವುದಿಲ್ಲ. ಹಾಗೆ ಮದುವೆಯಾದ ಹೆಣ್ಣು ಆ ಮನೆಯಲ್ಲಿ ಪೂರ್ಣ ಪ್ರಮಾಣದ ಗೌರವವನ್ನೂ ಪಡೆಯುವುದಿಲ್ಲ. ಇಂತಹ ಬರ್ಬರ ಆಚರಣೆಯ ವಿರುದ್ಧ ಸರಕಾರ ತಕ್ಷಣ ಕಾನೂನನ್ನು ಜಾರಿಗೊಳಿಸಿ ಹೆಣ್ಣಿನ ‘ಮಾರಾಟ’ವನ್ನು ತಡೆಯುವ ಅಗತ್ಯವಿದೆ. ದುರ್ಬಲ ಜಾತಿಗಳ ಹೆಣ್ಣುಮಕ್ಕಳನ್ನು ಮೇಲ್‌ಜಾತಿಯ ಪುರುಷರು ತಮ್ಮ ಸ್ವಾರ್ಥಕ್ಕಾಗಿ, ಅನಿವಾರ್ಯತೆಗಾಗಿ ಮಾಡಿಕೊಳ್ಳುವ ಮದುವೆಯ ವಿರುದ್ಧ ದುರ್ಬಲ ಜಾತಿಗಳೂ ಜಾಗೃತಗೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)