varthabharthi


ಸಂಪಾದಕೀಯ

ಬೀದಿಗೆ ಬಿದ್ದಿರುವ ಕಾರ್ಮಿಕರು ಮತ್ತು ಅಸಹಾಯಕ ಕಾರ್ಮಿಕ ಸಂಘಟನೆಗಳು

ವಾರ್ತಾ ಭಾರತಿ : 27 Nov, 2020

ಭಾರತದಲ್ಲಿ ಕಾರ್ಮಿಕ ಸಂಘಟನೆಗಳು ಇನ್ನೇನು ಗಟ್ಟಿಯಾಗಿ ತಳವೂರಬೇಕು ಎನ್ನುವಷ್ಟರಲ್ಲೇ ತೆರೆದುಕೊಂಡ ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಭರಾಟೆಯಲ್ಲಿ ಕಾರ್ಮಿಕರ ಹಕ್ಕುಗಳು ಮೂರಾಬಟ್ಟೆಯಾದವು. 90ರ ದಶಕದಿಂದೀಚೆಗೆ ಕಾರ್ಮಿಕರ ಪರವಾಗಿರುವ ಕಾನೂನುಗಳೆಲ್ಲ ಹಂತ ಹಂತವಾಗಿ ದುರ್ಬಲವಾಗುತ್ತಾ ಬಂದವು. ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳು ಗದ್ದೆಯ ಮಧ್ಯೆ ನಿಲ್ಲಿಸಿದ ‘ಬೆರ್ಚ್ಚಪ್ಪ’ಗಳಾಗಿಯಷ್ಟೇ ಉಳಿದಿವೆ. ಜನರನ್ನು ಧರ್ಮ, ಜಾತಿಯ ಹೆಸರಿನಲ್ಲಿ ವಿಸ್ಮತಿಗೀಡು ಮಾಡುತ್ತಾ ದೇಶವನ್ನು ಹಂತಹಂತವಾಗಿ ಕಾರ್ಪೊರೇಟ್ ಶಕ್ತಿಗಳಿಗೆ ಒಪ್ಪಿಸುತ್ತಿರುವ ಸಂದರ್ಭದಲ್ಲಿ ಅಳಿದುಳಿದ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳು ‘ಅರಣ್ಯ ರೋದನ’ವಾಗಿವೆ. ಈ ಹಿಂದೆ ಕಾರ್ಮಿಕ ಶಕ್ತಿ ರಾಜಕೀಯ ಶಕ್ತಿಯಾಗಿತ್ತು. ಇಂದು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಬಿಡಿಬಿಡಿಯಾಗಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆಯಾದರೂ, ಚುನಾವಣೆಯ ಸಂದರ್ಭದಲ್ಲಿ ಈ ಪ್ರತಿಭಟನೆಗಳು ರಾಜಕೀಯವನ್ನು ನಿಯಂತ್ರಿಸುವಷ್ಟು ಶಕ್ತಿಯನ್ನು ಹೊಂದಿಲ್ಲ. ಆರೆಸ್ಸೆಸ್ ಹಿನ್ನೆಲೆಯನ್ನು ಹೊಂದಿರುವ ಭಾರತೀಯ ಮಜ್ದೂರ್ ಸಂಘ ಕೂಡ ಸರಕಾರದ ಜೀತಕ್ಕಷ್ಟೇ ಸೀಮಿತವಾಗಿ ಉಳಿದಿದೆ.

ಕೊರೋನೋತ್ತರ ದಿನಗಳಲ್ಲಿ ಕಾರ್ಮಿಕರ ಸ್ಥಿತಿ ಇನ್ನಷ್ಟು ಭೀಕರವಾಗಿದೆ. ಬೆನ್ನು ಬೆನ್ನಿಗೆ ಹಲವು ಉದ್ಯಮ ಸಂಸ್ಥೆಗಳು ಮುಚ್ಚುತ್ತಾ ಬಂದ ಪರಿಣಾಮವಾಗಿ ಸಂಘಟಿತ ಕಾರ್ಮಿಕರೇ ಬೀದಿಗೆ ಬಿದ್ದಿದ್ದಾರೆ. ಇಂತಹ ಹೊತ್ತಿನಲ್ಲಿ ಅಸಂಘಟಿತ ವಲಸೆ ಕಾರ್ಮಿಕರ ಹಕ್ಕುಗಳ ಕುರಿತಂತೆ ಮಾತನಾಡಿದರೆ ಅದನ್ನು ಕೇಳುವವರೇ ಇಲ್ಲ. ಸಂಘಟಿತ ಕಾರ್ಮಿಕರು ಉದ್ಯೋಗ ಭದ್ರತೆ ಮತ್ತು ನಿಯಮಿತ ವೇತನದ ಸೌಲಭ್ಯವಿಲ್ಲದೆ ಸಂಕಟದಲ್ಲಿ ಸಿಲುಕಿದ್ದಾರೆ. ಈ ಸನ್ನಿವೇಶ ಕಾರ್ಮಿಕರನ್ನು ಇನ್ನಷ್ಟು ಶೋಷಣೆಗೀಡು ಮಾಡಲು ಉದ್ಯಮಿಗಳಿಗೆ ಅವಕಾಶವನ್ನು ನೀಡಿದೆ. ಕೊರೋನ, ಲಾಕ್‌ಡೌನ್‌ನ ಹೆಸರಲ್ಲಿ ಕಾರ್ಮಿಕರನ್ನು ಯಾವ ಕಾರಣವೂ ನೀಡದೆ ಕಿತ್ತು ಹಾಕುವ ಹಕ್ಕು ಮಾಲಕರಿಗೆ ಸಿಕ್ಕಿ ಬಿಟ್ಟಿದೆ. ಕಾರ್ಮಿಕರ ಬದುಕುವ ಹಕ್ಕಿಗೇ ಧಕ್ಕೆಯಾಗಿದೆ. ಕನಿಷ್ಠ ಮೂಲಭೂತ ಅಗತ್ಯಗಳನ್ನು ಪಡೆಯುವುದಕ್ಕೂ ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, 2020ರ ನವೆಂಬರ್‌ವರೆಗೆ ಕೇಂದ್ರ ಸರಕಾರ ಘೋಷಿಸಿರುವ ಉಚಿತ ಆಹಾರ ಯೋಜನೆಯನ್ನು ಮುಂದುವರಿಸಿ, ಉಚಿತ ಆಹಾರವನ್ನು ಒದಗಿಸುವ ಅಗತ್ಯವಿದೆ. ಬಡವರ ಹಿತರಕ್ಷಣೆ, ಆಹಾರ ಹಕ್ಕಿನ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಹಲವು ಸಂಘಟನೆಗಳು ನಡೆಸಿರುವ ಸಮೀಕ್ಷೆ ಮತ್ತು ಅಧ್ಯಯನದ ವರದಿಯೂ ಈ ಬೇಡಿಕೆಗೆ ಪುಷ್ಟಿ ನೀಡಿದೆ. ಈ ಕಷ್ಟದ ದಿನದಲ್ಲಿ ಬದುಕು ಸಾಗಿಸಲು ಅಸಹಾಯಕ, ಅಸಂಘಟಿತ ವಲಯದ ಕಾರ್ಮಿಕರ ಖಾತೆಗೆ ಸಾಕಷ್ಟು ಪ್ರಮಾಣದ ಹಣವನ್ನು ವರ್ಗಾಯಿಸುವ ಬೇಡಿಕೆಯನ್ನು ಸರಕಾರ ಈಡೇರಿಸಬೇಕಾಗಿದೆ. ಈ ಪ್ರಕ್ರಿಯೆಯ ಪ್ರಾಥಮಿಕ ಜವಾಬ್ದಾರಿ ಸರಕಾರದ್ದಾದರೂ, ಸಮಾಜಸೇವಾ ಸಂಸ್ಥೆಗಳು, ಸ್ವಯಂಸೇವಾ ಸಂಘಗಳು ಮತ್ತು ವ್ಯಕ್ತಿಗಳ ಪ್ರಯತ್ನದ ಬೆಂಬಲವೂ ಬೇಕಿದೆ. ಇಂತಹ ಕೆಲವು ಸ್ಫೂರ್ತಿದಾಯಕ ಉದಾಹರಣೆಗಳು ನಮ್ಮೆದುರು ಇದ್ದರೂ ಇನ್ನಷ್ಟು ಬೆಂಬಲದ ಅಗತ್ಯವಿದೆ.

ಈ ಸಕಾಲಿಕ ನೆರವನ್ನು ಒದಗಿಸುವಲ್ಲಿ ಕಾರ್ಮಿಕ ಸಂಘಟನೆಗಳು ಸಹಾಯಕ ಪಾತ್ರವನ್ನು ನಿರ್ವಹಿಸಬಹುದು. ಕಾರ್ಮಿಕರ ಪ್ರಮುಖ ಹಕ್ಕುಗಳನ್ನು ಬೆಂಬಲಿಸುವ ಅಗತ್ಯ ಹೆಚ್ಚಿದೆ. ಆದರೆ ದುರದೃಷ್ಟವಶಾತ್, ಈ ಅಸಾಧಾರಣ ಕಷ್ಟದ ಸಮಯದಲ್ಲೂ ಕಾರ್ಮಿಕ ಸುಧಾರಣೆಯ ಹೆಸರಿನಲ್ಲಿ ಕಾರ್ಮಿಕರು ಕಠಿಣ ಹೋರಾಟದ ಬಳಿಕ ಪಡೆದುಕೊಂಡ ಕೆಲವು ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಕಾರ್ಮಿಕ ಸುಧಾರಣೆ ಎಂದು ಹೇಳಲಾಗಿರುವ ಈ ಪ್ರಕ್ರಿಯೆ ವ್ಯಾಪಕ ವ್ಯಾಪ್ತಿಯನ್ನು ಹೊಂದಿದ್ದು ಕೆಲವೊಂದು ಉತ್ತಮ ಅಂಶಗಳಿರಬಹುದು. ಆದರೆ ಸಂಪೂರ್ಣ ಪ್ರಕ್ರಿಯೆ ಕಾರ್ಮಿಕರ ಹಿತಾಸಕ್ತಿಗೆ ಅಪಾಯಕಾರಿಯಾಗಿದೆ ಎಂದು ಬಹುತೇಕ ಕಾರ್ಮಿಕ ಸಂಘಟನೆಗಳು, ಇತರ ಕಾರ್ಮಿಕ ಸಂಘಗಳು, ಬಹುತೇಕ ವಿಪಕ್ಷಗಳು ಟೀಕಿಸಿವೆ. ಶೋಷಣೆಯನ್ನು ಪ್ರತಿಭಟಿಸುವ ಶಕ್ತಿಯಿಲ್ಲದೆ ಅದಕ್ಕೆ ಒಗ್ಗಿಕೊಳ್ಳುವುದಕ್ಕೆ ಕಾರ್ಮಿಕರು ಪ್ರಯತ್ನಿಸುತ್ತಿದ್ದಾರೆ. ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು, ಕಾರ್ಮಿಕ ಸಂಘಟನೆಗಳ ವ್ಯಾಪಕ ಪಾತ್ರ ಮತ್ತು ದೂರದೃಷ್ಟಿಯ ಅಗತ್ಯವಿದೆ. ಇತ್ತೀಚೆಗೆ ಕಾನೂನಿನಲ್ಲಿ ಆಗಿರುವ ಬದಲಾವಣೆ ಮತ್ತು ಈಗಿನ ವಾಸ್ತವಿಕತೆಯು ಬಹುತೇಕ ಕಾರ್ಮಿಕ ಸಂಘಟನೆಗಳ ಪಾತ್ರ ಮತ್ತು ಸಬಲೀಕರಣವನ್ನು ನಿರ್ಬಂಧಿಸುವ ಉದ್ದೇಶ ಹೊಂದಿದ್ದರೂ, ಕಾರ್ಮಿಕ ಸಂಘಟನೆಗಳು ಸಂಘಟಿತ ಮತ್ತು ಸೃಜನಾತ್ಮಕವಾಗಿ ಕಾರ್ಯನಿರ್ವಹಿಸುವ ಮೂಲಕ ಬಲಿಷ್ಠವಾಗಬೇಕಿದೆ. ಈ ಮೂಲಕ ಕಾರ್ಮಿಕರ ಕ್ಷೇಮಾಭ್ಯುದಯವನ್ನು ಹೆಚ್ಚಿಸಬಹುದು. ಈಗಿನ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳು(ಟ್ರೇಡ್ ಯೂನಿಯನ್) ಮತ್ತು ಕಾರ್ಮಿಕ ಸಂಘಗಳು (ಶೋಷಕ ವರ್ಗದವರ ಜೊತೆ ಕೈಜೋಡಿಸುವ ಕಾರ್ಮಿಕ ಸಂಘಟನೆಗಳನ್ನು ಹೊರಗಿಟ್ಟು) ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಸಕಲ ಪ್ರಯತ್ನದ ಅಗತ್ಯವಿದೆ. ಒಗ್ಗಟ್ಟು ಸಾಧ್ಯವಾಗಬೇಕಿದ್ದರೆ ಸಂಘಟನೆಗಳು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು, ಸ್ಪರ್ಧಾ ಮನೋಭಾವವನ್ನು ಬದಿಗಿರಿಸಬೇಕು. ಪರಸ್ಪರ ಪೈಪೋಟಿಯ ಸಂದರ್ಭ ಇದಲ್ಲ, ವ್ಯಾಪಕ ತಳಹದಿಯ ಒಗ್ಗಟ್ಟು ಸಾಧಿಸಲು ಇದು ಸಕಾಲವಾಗಿದೆ.

ಹಲವು ಕುಶಲ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ಈ ಕಾರ್ಮಿಕರು ತಮ್ಮದೇ ಸ್ವಂತ ಉದ್ದಿಮೆ ಸ್ಥಾಪಿಸಲು ನೆರವಾಗಲು ವ್ಯಾಪಕ ಸಂಪರ್ಕ ಹೊಂದಿರುವ ಕಾರ್ಮಿಕ ಸಂಘಟನೆಯ ನಾಯಕರಿಗೆ ಸಾಧ್ಯವಾಗದೇ? ಮುಚ್ಚುವ ಸ್ಥಿತಿಯಲ್ಲಿರುವ ಮತ್ತು ಮುಚ್ಚಿದ ಉದ್ದಿಮೆಗಳನ್ನು ಕುಶಲ ಕಾರ್ಮಿಕರು ಮುನ್ನಡೆಸಿಕೊಂಡು ಹೋಗುವಂತಾದರೆ ಈ ಕಾರ್ಮಿಕರ ಕೌಶಲ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆ ದೊರಕಿದಂತಾಗುತ್ತದೆ. ಕಾರ್ಮಿಕರ ಮನೆಯಲ್ಲಿ ಮಹಿಳೆಯರಲ್ಲೂ ಯಾವುದಾದರೊಂದು ಕೌಶಲ್ಯ ಇರಬಹುದು. ಮನೆಯಲ್ಲೇ ಬೇಕರಿ ಉತ್ಪನ್ನ ತಯಾರಿಸುವ ಮಹಿಳೆಯರಿಗೆ ಸಮೀಪದಲ್ಲೇ ಮಾರುಕಟ್ಟೆಯ ವ್ಯವಸ್ಥೆ ಮಾಡಲು ಟ್ರೇಡ್ ಯೂನಿಯನ್‌ಗಳು ಮುಂದಾಗಬಹುದು. ಎರಡನೆಯದಾಗಿ, ಶಾಲೆಯ ಶುಲ್ಕ ಇಂದಿನ ದಿನಗಳಲ್ಲಿ ಕಾರ್ಮಿಕರಿಗೆ ಭಾರೀ ಹೊರೆಯಾಗು ತ್ತಿದೆ. ಕಾರ್ಮಿಕರ ಕಾಲನಿಗೆ ಸಮೀಪದ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಗೊಳಿಸಲು ಕಾರ್ಮಿಕ ಸಂಘಟನೆಗಳು ಮುಂದಾದರೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಅಗತ್ಯವೇ ಬರುವುದಿಲ್ಲ ಅಥವಾ ಕಾರ್ಮಿಕರ ಮನೆಯಲ್ಲಿರುವ ವಿದ್ಯಾವಂತ ಯುವಕರಿಗೆ ಪ್ರೋತ್ಸಾಹ ನೀಡಿ ಅವರು ಸ್ವಂತ ಶಾಲೆ ಆರಂಭಿಸಲು ನೆರವಾಗಬಹುದು. ಕಾರ್ಮಿಕರ ಮನೆಯ ಸದಸ್ಯರಿಗೆ ಶಾಲೆಯಲ್ಲಿ ಕೆಲಸ ನೀಡಿದರೆ ಹೆಚ್ಚಿನ ವೆಚ್ಚವೂ ಬರುವುದಿಲ್ಲ.

ಈ ಶಾಲೆಗಳಲ್ಲಿ ವೌಲ್ಯಾಧಾರಿತ ಶಿಕ್ಷಣದ ಜೊತೆಗೆ ನ್ಯಾಯ, ಸಮಾನತೆ, ಶಾಂತಿ ಮತ್ತು ಪರಿಸರ ಸಂರಕ್ಷಣೆಯ ಶಿಕ್ಷಣವನ್ನೂ ನೀಡಬಹುದು. ಮೂರನೆಯದಾಗಿ, ಸರಕಾರದ ಆರೋಗ್ಯ ಯೋಜನೆೆಗಳ ಹೊರತಾಗಿಯೂ ಕಾರ್ಮಿಕರಿಗೆ ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚವೇ ದೊಡ್ಡ ಹೊರೆಯಾಗಿರುತ್ತದೆ. ಆದ್ದರಿಂದ ಸಾಮಾಜಿಕ ಬದ್ಧತೆಯುಳ್ಳ ವೈದ್ಯರನ್ನು ಕಾರ್ಮಿಕರ ಕಾಲನಿಗಳಲ್ಲಿ ಕ್ಲಿನಿಕ್ ಆರಂಭಿಸುವಂತೆ ಪ್ರೇರೇಪಿಸುವ ಕೆಲಸವನ್ನು ಕಾರ್ಮಿಕ ಸಂಘಟನೆಗಳು ಮಾಡಬಹುದು. ಇದರ ಜೊತೆಗೆ, ಸರಕಾರದ ಆರೋಗ್ಯ ಸೇವೆಗಳಲ್ಲಿ ಸುಧಾರಣೆ ತರುವ ಪ್ರಯತ್ನವನ್ನೂ ಮುಂದುವರಿಸಬೇಕಿದೆ. ಒಟ್ಟಿನಲ್ಲಿ, ಕಾರ್ಮಿಕ ಸಂಘಟನೆಗಳು ಬರೇ ಪ್ರತಿಭಟನೆಗಳಿಗಷ್ಟೇ ಸೀಮಿತವಾಗದೆ ತನ್ನ ಹೊಣೆಗಾರಿಕೆಯನ್ನು ಇನ್ನಷ್ಟು ವಿಸ್ತಾರವಾಗಿ ಹೇಗೆ ನಿರ್ವಹಿಸಬಹುದು? ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ. ಹಾಗೆಯೇ ಅಳಿದುಳಿದ ಕಾರ್ಮಿಕ ಶಕ್ತಿಗಳನ್ನು ಸಂಘಟಿಸಿ ಅವುಗಳನ್ನು ರಾಜಕೀಯ ಶಕ್ತಿಯಾಗಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)