varthabharthi


ಕರ್ನಾಟಕ

ನಿವಾರ್ ಚಂಡಮಾರುತಕ್ಕೆ ಕೋಲಾರ ತತ್ತರ : ಜನ ಜೀವನ ಅಸ್ತವ್ಯಸ್ತ

ವಾರ್ತಾ ಭಾರತಿ : 27 Nov, 2020

ಕೋಲಾರ : ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತ ಬುಧವಾರ ರಾತ್ರಿ ಕೋಲಾರ ಪ್ರವೇಶ ಮಾಡಿದ್ದು, ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿದು ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ, ಕೆ.ಜಿ.ಎಫ್, ಮಾಲೂರು, ಶ್ರೀನಿವಾಸಪುರ ಮತ್ತು ಜಿಲ್ಲಾ ಕೇಂದ್ರ ಕೋಲಾರ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟಕ್ಕೀಡಾಗಿದೆ ಅಲ್ಲದೆ ನಿತ್ಯ ಕೂಲಿ ಕೆಲಸ ಮಾಡುವ ಕಾರ್ಮಿಕರ ಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ಬೆಳಗ್ಗೆಯಿಂದ ನಿರಂತರ 24 ಗಂಟೆಗಳು ಮಳೆ ಬಿಡುವಿಲ್ಲದೆ ಸುರಿದು ಜಿಲ್ಲೆಯಲ್ಲಿ 608.05 ಮಿ.ಮೀ ದಾಖಲೆ ಮಳೆಯಾಗಿದೆ. ಇದರಿಂದ ಜನರು ಮನೆಯಲ್ಲೇ ಕುಳಿತು ಕಾಲಕಳೆಯಬೇಕಾಯಿತು. ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಹಮಾಲಿಗಳು, ಮೊಬೈಲ್ ಹೋಟಲ್ ವ್ಯಾಪಾರಿಗಳು, ಆಟೋ ಸಂಚಾರ ವ್ಯತ್ಯಯದಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಕೊರೋನ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಬಹುತೇಕ ಸಾರ್ವಜನಿಕರು ಮನೆಯಿಂದ ಹೊರ ಬರುವ ಸಾಹಸ ಮಾಡಲಿಲ್ಲ. ಕೋಲಾರ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಹನ ಸಂಚಾರ ಬಹುತೇಕ ವಿರಳವಾಗಿತ್ತು. ರಸ್ತೆಗಳು, ಚರಂಡಿಗಳು ನೀರು ತುಂಬಿ ಹರಿಯುವ ದೃಶ್ಯಗಳು ಸಾಮಾನ್ಯವಾಗಿತ್ತು. ಸರ್ಕಾರಿ ಕಚೇರಿಗಳು ಸಹ ಬಿಕೋ ಎನ್ನುತ್ತಿತ್ತು.

ನಿವಾರ್ ಚಂಡಮಾರುತದಿಂದ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅಪ್ಪೇನಹಳ್ಳಿಯಲ್ಲಿ ಮನೆಯ ಕಟ್ಟಡವೊಂದು ಕುಸಿದು ಬಿದ್ದಿದೆ. ಎನ್.ವಡ್ಡಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆಪಕ್ಕದ ಮರಗಳು ಧರೆಗುರಿಳಿವೆ, ಕೋಲಾರ ಪಟ್ಟಣದ ರೈಲ್ವೆ ಅಂಡರ್ ಪಾಸ್‍ಗಳು ನೀರು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಬಂಗಾರಪೇಟೆಯ ಬೂದಿಕೋಟೆ, ಕಾಮಸಮುದ್ರಂ, ಕೋಲಾರ ಸುತ್ತಮುತ್ತಲ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟಕ್ಕೀಡಾಗಿದೆ. ಇಲಾಖೆಯಿಂದ ಅಂದಾಜು ನಷ್ಟದ ಮಾಹಿತಿ ಇನ್ನೂ ಕ್ರೊಡೀಕರಣದ ಹಂತದಲ್ಲಿದೆ. ಜಿಲ್ಲೆಯಲ್ಲಿ ಈ ಬಾರಿಯೂ ಉತ್ತಮ ಬೆಳೆಯಾಗಿದ್ದು ಅರ್ದಕ್ಕಿಂತಲೂ ಹೆಚ್ಚು ಬೆಳೆ ಕಟಾವು ಹಂತ ತಲುಪಿತ್ತು. ಚಂಡಮಾರುತದಿಂದ ಎಲ್ಲಾ ತೆನೆಗಳು ನೆಲಕ್ಕುರಿಳಿವೆ. ತೋಟಗಾರಿಕೆ ಬೆಳೆಗಳಾದ ಟೊಮೆಟೋ, ಬಾಳೆ, ಇನ್ನಿತರೆ ತರಕಾರಿ ಬೆಳೆಗಳು ಬಹುತೇಕ ನಷ್ಟಕ್ಕೀಡಾಗಿದೆ.

ಮಳೆಯ ಮುನ್ನೆಚ್ಚರಿಕೆ : ನಿವಾರ್ ಚಂಡಮಾರುತ ಕರ್ನಾಟಕದ ಪೂರ್ವ ಗಡಿಭಾಗದಲ್ಲಿ ಹಾದುಹೋಗುತ್ತಿರುವ ಕಾರಣ ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಇನ್ನೂ ಎರಡು ದಿನಗಳು ಮುಂದುವೆರೆಯುವ ಸಾಧ್ಯತೆಗಳಿರುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಇದ್ದು, ಅಲ್ಲಿ ವಾಸ ಮಾಡುವ ಜನರು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ. 

ಇದೇ ವೇಳೆ ಮಳೆ ಹಾನಿ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಈಗಾಗಲೇ 24X7 ಕಾರ್ಯನಿರ್ವಹಣೆ ಮಾಡುತ್ತಿದೆ. ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ ( 1077, 08152-243506), ಅಥವಾ ಕಂಟ್ರೋಲ್ ರೂಂ ಸಿಬ್ಬಂದಿ ಎನ್,ಗೋವಿಂದರಾಜು-9740050061, ವಿ.ಮಂಜುನಾಥ್, 9141577499 ಇವರನ್ನು ಸಂಪರ್ಕಿಸಬಹುದಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)