varthabharthi


ಕರ್ನಾಟಕ

ರೋಹಿಣಿ ಸಿಂಧೂರಿ ಸರ್ವಾಧಿಕಾರಿ, ಹಿಟ್ಲರಿಸಂ ರೀತಿ ನಡೆದುಕೊಳ್ಳುತ್ತಿದ್ದಾರೆ: ಶಾಸಕ ಮಂಜುನಾಥ್

ವಾರ್ತಾ ಭಾರತಿ : 27 Nov, 2020

ಮೈಸೂರು,ನ.27: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರ್ವಾಧಿಕಾರಿ, ಹಿಟ್ಲರಿಸಂ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಜನಪ್ರತಿನಿದಿಗಳಿಗೆ ಮರ್ಯಾದೆ ನೀಡದೆ ಅಪಮಾನಿಸುತ್ತಿದ್ದಾರೆ ಎಂದು ಹರಿಹಾಯ್ದರು.

ನಾನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಪ್ರಗತಿಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಕಾರ್ಯ ವೈಖರಿ ಪ್ರಶ್ನಿಸಿದೆ. ಅದನ್ನೆ ವೈಯಕ್ತಿಕವಾಗಿ ತೆಗೆದುಕೊಂಡು ನನ್ನ ಜಮೀನಿನ ವಿಚಾರ ಮುಂದಿಟ್ಟುಕೊಂಡು ನನ್ನ ಬ್ಲಾಕ್ ಮೇಲ್ ಮಾಡುವ ತಂತ್ರಕ್ಕೆ ಮುಂದಾಗಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಎದರುವುದಿಲ್ಲ ಎಂದು ಹೇಳಿದರು.

ನನ್ನ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾದಿಕಾರಿಗಳು ನನಗೆ ಪತ್ರ ಬರೆದಿದ್ದಾರೆ. ಆದರೆ ಅದು ನನಗೆ ಇದೂವರೆಗೂ ತಲುಪಿಲ್ಲ. ಜಿಲ್ಲಾಧಿಕಾರಿಗಳು ಸಾಮಾಜಿಕ ಜಾಲತಾಣದ ಪ್ರವೀಣೆ. ಹಾಗಾಗಿ ಜಾಲತಾಣದಲ್ಲಿ ಈ ಪತ್ರ ಹರಿದಾಡುತ್ತಿದೆ. ಜೊತೆಗೆ ಪತ್ರಿಕೆಗಳಲ್ಲಿ ಬಂದಿದೆ. ಹಾಗಾಗಿ ಪತ್ರಿಕೆ ಮೂಲಕವೇ ನಾನು ಅವರಿಗೆ ಉತ್ತರ ನೀಡುತ್ತಿದ್ದೇನೆ ಎಂದರು.

ಓರ್ವ ಜನಪ್ರತಿನಿಧಿ ಪ್ರಶ್ನಿಸಿದ್ದಕ್ಕೆ ಜಿಲ್ಲಾಧಿಕಾರಿಗಳು ನೋಟಿಸ್ ರೀತಿ ಪತ್ರ ಬರೆಯುವುದು ಕಾನೂನಿಗೆ ವಿರುದ್ಧವಾದುದು. ಹಾಗಾಗಿ ಇವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನನಗೆ ತಾಯಿ, ಹೆಂಡತಿ, ಅಕ್ಕತಂಗಿಯರು, ಮಗಳು, ನಾದಿನಿ ಸೇರಿತೆ ಎಲ್ಲರೂ ಇದ್ದಾರೆ. ನಾನು ಹೆಣ್ಣಿಗೆ ಗೌರವ ನೀಡುತ್ತೇನೆ. ಇವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ, ಅದರೆ ಇವರ ವೈಯಕ್ತಿಕ ಜೀವನದ ಬಗ್ಗೆ ಈಗಾಗಲೇ ಗೊತ್ತಾಗಿದೆ ಎಂದು ಹೇಳಿರು.

ಯಾವುದೇ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳಿಗೆ ಪತ್ರ ಬರೆಯುವ ಹಾಗಿಲ್ಲ, ಇವರು ಪತ್ರ ಬರೆದಿರುವುದು ಕಾನೂನಿಗೆ ವಿರುದ್ಧವಾದುದು, ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲಾಗುವುದು ಎಂದು ಹೇಳಿದರು.

ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಬೆನ್ನಿಗೆ ಇದ್ದಾರೆ ಎಂಬ ದುರಹಂಕಾರ ಇವರಲ್ಲಿದೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗಿದ್ದಾರೊ ಅಥವಾ ಕಾಲಕೆಳಗಿದ್ದಾರೊ. ಮೊದಲು ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಿರಿ ಎಂದು ಹರಿಹಾಯ್ದರು.

ಅವರು ಪಬ್ಲಿಕ್ ಸರ್ವೇಂಟ್. ಡಿಕ್ಟೇಟರ್ ಅಲ್ಲ, ಜಿಲ್ಲಾಧಿಕಾರಿ ನೇರವಾಗಿ ನನಗೆ ಪತ್ರ ಬರೆದಿದ್ದಾರೆ. ಪತ್ರ ಬರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಪತ್ರ ಎಲ್ಲಿಗೆ ತಲುಪಿಸಿದ್ದಾರೆ ಗೊತ್ತಿಲ್ಲ. ನನಗೆ ಬರೆದ ಪತ್ರವನ್ನು ಮಾಧ್ಯಮ, ಸಾರ್ವಜನಿಕರಿಗೆ ತಲುಪುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಪತ್ರ ಸಿಕ್ಕಿದೆ. ಜನಪ್ರತಿನಿಧಿಗೆ ನೋಟಿಸ್ ರೀತಿ ಪತ್ರ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಗಜಪಯಣ ಕಾರ್ಯಕ್ರಮದಲ್ಲಿ ಆಹ್ವಾನಿಸದ ಬಗ್ಗೆ ಪ್ರತಿಕ್ರಿಯಿಸಿ, ಗಜಪಯಣ ಕಾರ್ಯಕ್ರಮದಲ್ಲಿ ಜನಪ್ರತಿನಿಧಿ ಕರೆಯಬಾರದು ಅಂತ ಯಾರು ಸೂಚನೆ ಕೊಟ್ಟಿದ್ದಾರೆ. ಹುಣಸೂರು ಜನಪ್ರತಿನಿಧಿಗಳಿಗೆ ಆಹ್ವಾನ ಇಲ್ಲ ಅನ್ನೋದಾದರೆ ಅರಮನೆ ಗಜಸ್ವಾಗತ ಕಾರ್ಯಕ್ರಮಕ್ಕೆ ಯಾಕೇ ಆಹ್ವಾನ ನೀಡಿದ್ದೀರಿ. ಅಲ್ಲಿಗೆ ಎಂಎಲ್‍ಎ, ಎಂಎಲ್‍ಸಿ ಸಚಿವರು ಎಲ್ಲ ಬಂದಿದ್ದರು. ಅದು ಹೇಗೆ ಸಾಧ್ಯವಾಯ್ತು. ಅದಕ್ಕೆ ಯಾರು ಅನುಮತಿ ಕೊಟ್ಟರು. ನನ್ನನ್ನ ಕರೆಯಬಾರದು ಅಂತ ನಿಮಗೆ ಯಾರಾದರೂ ಹೇಳಿದ್ದಾರಾ ? ಬಿಜೆಪಿಯವರು ಇದನ್ನ ಹೇಳಿಕೊಟ್ಟಿದ್ದಾರಾ ಎಂದು ಕೇಳಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ರೋಹಿಣಿ ಸಿಂಧೂರಿಯವರು ಎಲ್ಲ ಕಡೆ ಜನಪ್ರತಿನಿಧಿಗಳಿಗೆ ಪರ್ಯಾಯವಾಗಿ ಕಾರ್ಯಕ್ರಮ ಮಾಡ್ತಿದ್ದಾರೆ. ಇದು ಮಂಡ್ಯ, ಹಾಸನದಲ್ಲೂ ನಡೆದಿದೆ. ಮೈಸೂರಿನಲ್ಲಿ ಇದೀಗ ಆ ಸಂಸ್ಕೃತಿ ಉದ್ಭವ ಆಗುತ್ತಿದೆ. ರೋಹಿಣಿ ಸಿಂಧೂರಿಯವರು ಜನಪ್ರತಿನಿಧಿಗಳ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ರಘು ಆಚಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಹೆಡತಲೆ ಮಂಜುನಾತ್, ಮುನಿಯಪ್ಪ, ಶಿವು, ವೆಂಕಟಸುಬ್ಬಯ್ಯ ಸೇರಿದಂತೆ ಹಲವರು ಉಪಸ್ಥಿರಿದ್ದರು.

ರೋಹಿಣಿ ಸಿಂಧೂರಿ ಅವರೇ ಕಾಲ ಒಂದೇ ರೀತಿ ಇರುವುದಿಲ್ಲ, ಇಬ್ಬರು ಮುಖ್ಯಮಂತ್ರಿಗಳು ಬೆನ್ನಿಗಿದ್ದಾರೆ ಎಂದು ನಿಮ್ಮ ತಲೆ ತಿರುಗುತ್ತಿದೆ. ಮೊದಲು ಜನಪ್ರತಿನಿಧಿಗಳು ಸಾರ್ವಜನಿಕರ ನಡುವೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ನಾನು ನನ್ನ ಸಹೋದರಿ ರೀತಿ ನಿಮಗೆ ಸಲಹೆ ನೀಡುತ್ತಿದ್ದೇನೆ. ಅಧಿಕಾರ ಶಾಶ್ವತ ಅಲ್ಲ, ನಾವು ಆ ವೇಳೆ ಮಾಡಿರುವ ಕೆಲಸ ನಮ್ಮನ್ನು ಗುರುತಿಸುತ್ತದೆ. ಕಾಲ ಇದೇ ರೀತಿ ಇರುವುದಿಲ್ಲ, ನೀವು ಇದೇ ರೀತಿ ನಡೆದುಕೊಂಡರೆ ಒಂದಲ್ಲಾ ಒಂದು ದಿನ ಕಾನೂನಾತ್ಮಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ಈ ಹಿಂದೆ ಮಣಿವಣ್ಣನ್, ಹರ್ಷಗುಪ್ತ, ರಣದೀಪ್, ಅಭಿರಾಮ್ ಜಿ.ಶಂಕರ್, ಬಿ.ಶರತ್ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಅವರ ರೀತಿ ನಡೆದುಕೊಳ್ಳುವ ಪ್ರಯತ್ನ ಮಾಡಿ.

-ಎಚ್.ಪಿ.ಮಂಜುನಾಥ್, ಹುಣಸೂರು ಶಾಸಕ 

ಮುಖ್ಯಮಂತ್ರಿ ಯಡಿಯೂರಪ್ಪ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಚುನಾವಣೆಗಾಗಿ  ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿದ್ದಾರೆ. 
-ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ, ವರುಣಾ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಐಎಎಸ್ ಪಾಸೇ ಮಾಡಿಲ್ಲ ಎನ್ನಿಸುತ್ತದೆ. ಏಕೆಂದರೆ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅವರಿಗೆ ಸಾಮಾನ್ಯ ಜ್ಞಾನ ಎಂಬುದೇ ಇಲ್ಲದಂತಾಗಿದೆ. ಇವರ ತಪ್ಪನ್ನು ಒಪ್ಪಿಕೊಂಡು ಶಾಸಕ ಎಚ್.ಪಿ.ಮಂಜುನಾಥ್ ಅವರ ಬಳಿ ಕ್ಷಮೆ ಕೇಳದಿದ್ದರೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇವೆ.
-ರಘು ಆಚಾರ್, ವಿಧಾನಪರಿಷತ್ ಸದಸ್ಯ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)