ಕರ್ನಾಟಕ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ: ಸಾ.ರಾ.ಮಹೇಶ್

ಮೈಸೂರು, ನ.28: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಥಳೀಯ ಶಾಸಕನಾದ ತನ್ನ ಗಮನಕ್ಕೂ ತಾರದೆ ಕೆ.ಆರ್.ನಗರದಲ್ಲಿ ಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಜಿಲ್ಲಾಧಿಕಾರಿ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆ.ಆರ್.ನಗರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಹುಣಸೂರು ಶಾಸಕರಿಗೆ ಬರೆದಿರುವ ಪತ್ರ ಬಹಿರಂಗವಾಗಿದೆ. ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಜೊತೆಗೆ ಡಿಸೆಂಬರ್ 7ರಿಂದ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಇವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದರು.
ಶಾಸಕರುಗಳ ಗಮನಕ್ಕೆ ತಾರದೆ ತಾಲೂಕುಗಳಲ್ಲಿ ಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರಿಗೆ ಪ್ರಚಾರದ ಗೀಳು ಅಂಟಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನಾದರು ತಮ್ಮ ಬದಲಿಗೆ ಜಿಲ್ಲೆಯನ್ನು ನೀವೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ನಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಿದರೆ ಪರಿಣಾಮ ಏನಾಗಲಿದೆ ಎಂಬುದು ನಿಮಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ಜಿಲ್ಲಾಧಿಕಾರಿ ಬೇರೆ ಜಿಲ್ಲೆಯಲ್ಲಿದ್ದಾಗ ವರ್ಗಾವಣೆ ತಡೆ ಕೋರಿ ಸಿಎಟಿ ಮೆಟ್ಟಿಲೇರಿದರೆ ಹತ್ತೇ ದಿನಗಳಲ್ಲಿ ತೀರ್ಪು ಹೊರಬರಲಿದೆ. ಆದರೆ ಇವರ ವಿರುದ್ಧ ಹಿಂದಿನ ಜಿಲ್ಲಾಧಿಕಾರಿ ಶರತ್ ಬಿ. ಅವರು ಸಿಎಟಿ ಮೊರೆ ಹೋದರೆ ಅಡ್ವೊಕೇಟ್ ಜನರಲ್ ಎರಡು ಬಾರಿ ಗೈರಾಗುತ್ತಾರೆ. ವ್ಯವಸ್ಥಿತವಾಗಿ ಹತ್ತು ದಿನಗಳಕಾಲ ರಜೆ ಹಾಕುತ್ತಾರೆ. ಯಾಕೇ ಪದೇ ಪದೇ ಮುಂದೂಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಎಲ್ಲಾ ರೀತಿಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇನೆ. ಸೂಕ್ತ ಸಂದರ್ಭದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಹುಣಸೂರು ಶಾಸಕರಿಗೆ ಬರೆದಿರುವ ಪತ್ರ ಅವರ ಕೈ ಸೇರುವ ಮುನ್ನವೇ ಬಹಿರಂಗಗೊಂಡಿದೆ. ಇದು ಹೇಗೆ ಬಹಿರಂಗವಾಯಿತು ಎಂಬುದರ ಬಗ್ಗೆ ತನಿಖೆಯಾಗಬೇಕು, ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗ ಪಡಿಸಿದರೆ ನಿಮ್ಮ ಕಥೆ ಏನಾಗಲಿದೆ ಗೊತ್ತಾ ಎಂದು ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ