varthabharthi


ಕರ್ನಾಟಕ

ದರೋಡೆ ಪ್ರಕರಣಕ್ಕೆ ತಿರುವು : ದೂರುದಾರನೆ ಪ್ರಕರಣದ ಮಾಸ್ಟರ್ ಮೈಂಡ್

ವಾರ್ತಾ ಭಾರತಿ : 29 Nov, 2020

ಶಿವಮೊಗ್ಗ : ಸೊರಬ ತಾಲೂಕಿನ ತವನಂದಿ- ಕೊರಕೋಡು ಗ್ರಾಮದ ಬಳಿ ಕಾರು ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ದೂರು ನೀಡಿದವನೇ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾರು ಅಡ್ಡಗಟ್ಟಿ ಲಕ್ಷಾಂತರ ರೂ. ದರೋಡೆ ಪ್ರಕರಣ ಸಂಬಂಧ ಕಾರು ಚಾಲಕ ನಫೀಸ್ ಆಲಂ ಹಾಗೂ ಕನ್ನಪ್ಪ ಮತ್ತು ವಿಶ್ವನಾಥ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಕಾರು ಚಾಲಕ ನಫೀಸ್ ಆಲಂ ಪ್ರಕರಣದ  ದೂರು ದಾರನಾಗಿದ್ದ. ಆದರೆ ಆತನನ್ನೇ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ನಾನೇ ಈ ದರೋಡೆ ಕಥೆಯ ಸೃಷ್ಟಿಕರ್ತ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ದರೋಡೆಯೆ ಆಗಿರಲಿಲ್ಲ

ಸಾಗರದ ಅಡಿಕೆ ವ್ಯಾಪಾರಿಯೊಬ್ಬರಿಗೆ ಸೇರಿದ 15 ಲಕ್ಷ ರೂ ಹಣವನ್ನು ಕಾರಿನಲ್ಲಿ ತರಲಾಗುತ್ತಿತ್ತು. ಮಂಗಳವಾರ ರಾತ್ರಿ ಸೊರಬದ ತವನಂದಿ -ಕೊರಕೋಡು ಗ್ರಾಮದ ಬಳಿ ದರೋಡೆಕೋರರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ, ಕಾರು ಮತ್ತು ಹಣದ ಜೊತೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿತ್ತು.

ದರೋಡೆಯ ಮರುದಿನವೇ  ಕಾರು ಮತ್ತು 7.5 ಲಕ್ಷ ರೂ. ಬನವಾಸಿ ಸಮೀಪ ಪತ್ತೆಯಾಗಿತ್ತು. ಮಹಾರಾಷ್ಟ್ರದಿಂದ ಬರುವಾಗ ಚಾಲಕ ನಫೀಸ್ ಜೊತೆಗಿದ್ದ ಅನ್ವರ್ ಅಹ್ಮದ್ ಎಂಬಾತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಅನ್ವರ್ ಅಹ್ಮದ್ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದ. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ನಫೀಸ್ ಆಲಂ ದರೋಡೆ ಕೃತ್ಯ  ಬಯಲಾಗಿದೆ. ಹಣ ಕಬಳಿಸುವ ಉದ್ದೇಶದಿಂದ ನಫೀಸ್ ಆಲಂ ದರೋಡೆಯ ನಾಟಕವಾಡಿದ್ದ ಎಂದು ತಿಳಿದು ಬಂದಿದೆ.

ಮೂರು ತಂಡ ರಚಿಸಲಾಗಿತ್ತು

ದರೋಡೆ ಪ್ರಕರಣದ ತನಿಖೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು ಅವರು ಮೂರು ತಂಡ ರಚಿಸಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎಚ್.ಟಿ‌ ಶೇಖರ್, ಶಿಕಾರಿಪುರ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನ ದಲ್ಲಿ ಸೊರಬ ಸಿಪಿಐ ಆರ್.ಡಿ ಮರುಳಸಿದ್ದಪ್ಪ ನೇತೃತ್ವದಲ್ಲಿ ಸೊರಬ ಪಿಎಸ್ಐ ಟಿ.ಬಿ ಪ್ರಶಾಂತ್ ಕುಮಾರ್, ಆನವಟ್ಟಿ ಪಿಎಸ್ಐ ಪ್ರವೀಣ್ ಕುಮಾರ್, ಶಿಕಾರಿಪುರ ಸಿಪಿಐ ಗುರುರಾಜ್ ಮೈಲಾರ್ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿತ್ತು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿಕಾರಿಪುರ ಠಾಣೆಯ ಪ್ರಶಾಂತ್, ಶಿವಕುಮಾರ್, ಆದರ್ಶ್, ವಿನಯ್, ಸೊರಬ ಠಾಣೆಯ ಸಲ್ಮಾನ್ ಖಾನ್ ಹಾಜಿ, ದಿನೇಶ್, ಜಗದೀಶ್, ಆನವಟ್ಟಿ ಠಾಣೆಯ ಗಿರೀಶ್, ಟೀಕಪ್ಪ, ತಿರುಕಪ್ಪ, ಜಗದೀಶ್ ಉಪ್ಪಾರ್ ಪಾಲ್ಗೊಂಡಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)