varthabharthi


ಕರ್ನಾಟಕ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ನಾಯಿಗಳು ಎಂದ ವಾಟಾಳ್ ನಾಗರಾಜ್

ವಾರ್ತಾ ಭಾರತಿ : 29 Nov, 2020

ಮೈಸೂರು : ಬಿಜೆಪಿ ಶಾಸಕರುಗಳಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರೇಣುಕಾಚಾರ್ಯ ನಾಯಿಗಳು ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ಮೈಸೂರು-ಬೆಂಗಳೂರು ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆ ಸಿಗ್ನಲ್ ನಲ್ಲಿ ರವಿವಾರ ಮರಾಠಿ ಪ್ರಾಧಿಕಾರವನ್ನು ವಿರೋಧಿಸಿ ಹಾಗೂ ಪ್ರಾಧಿಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಅವರು, ಕನ್ನಡದ ಬಗ್ಗೆ ಮತ್ತು ಹೋರಾಟಗಾರರ ಬಗ್ಗೆ ಮಾತನಾಡಲು ಅವರಿಬ್ಬರು ಯಾರು? ಅವರು ಶಾಸಕರುಗಳಲ್ಲ ನಾಯಿಗಳು, ನಾಯಿ ಬೊಗಳಿದರೆ ನಾವು ಉತ್ತರ ಕೊಡಲು ಸಾಧ್ಯವೆ, ಈಗಾಗಲೇ ಆ ನಾಯಿಗಳಿಗೆ ನಮ್ಮ ಬೆಂಬಲಿಗರು ಉತ್ತರ ಕೊಟ್ಟಿದ್ದಾರೆ, ಕೊಡುತ್ತಲೇ ಇದ್ದಾರೆ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಎಷ್ಟು ಮಂದಿ ಎಂಪಿ ಗಳು ಇದ್ದಾರೆ, ಮಂತ್ರಿಗಳು, ಶಾಸಕರುಗಳು ಇದ್ದಾರೆ. ಅವರ್ಯಾರು ನಮ್ಮ ಬಗ್ಗೆ ಮಾತನಾಡುತ್ತಿಲ್ಲ ಆದರೆ ಇವೆರಡು ನಾಯಿಗಳು ಮಾತನಾಡುತ್ತಿವೆ. ಇವುಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.

ಕನ್ನಡ ನಾಡು ನುಡಿ ಉಳಿವಿಗಾಗಿ ನಾವುಗಳು ಎಂತ ಹೋರಾಟಕ್ಕೂ ಸಿದ್ಧ. ಹಾಗಾಗಿ ಯಾವುದೇ ತಡೆದರು ಡಿ.5 ರಂದು ಕರ್ನಾಟಕ ಬಂದ್ ಮಾಡಿ ತೀರಿಯೇ ತೀರುತ್ತೇವೆ. ತಾಕತ್ತಿದ್ದರೆ ನಮ್ಮನ್ನು ತಡೆಯಲಿ ಎಂದು ಸವಾಲು ಹಾಕಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)